ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಚ್ಚಿ ಬಿದ್ದ ತುಮಕೂರು ನಗರದ ಜನರು

ಮಾನಸಿಕ ಅಸ್ವಸ್ಥೆ ಮೇಲೆ ಎಎಸ್ಐ ಉಮೇಶ್‌ ಅತ್ಯಾಚಾರ ನಡೆಸಿದ ಪ್ರಕರಣ
Last Updated 16 ಜನವರಿ 2017, 5:00 IST
ಅಕ್ಷರ ಗಾತ್ರ

ತುಮಕೂರು: ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ತುಮಕೂರು ಗ್ರಾಮೀಣ ಠಾಣೆ ಎಎಸ್ಐ ಉಮೇಶ್ ನಡೆಸಿದ ಅತ್ಯಾಚಾರ ಪ್ರಕರಣ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಜನಸಾಮಾನ್ಯರಿರಲಿ. ಕೆಲ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗದವರೇ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಕ್ಷಣೆ ಮಾಡಬೇಕಾದವರೇ ಇಂತಹ ಹೀನ ಕೃತ್ಯಕ್ಕಿಳಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಕಳಂಕ ಈಗ ತುಮಕೂರಿಗೆ ಅಂಟುವಂತಾಗಿದೆ ಎಂದು ದೂರುತ್ತಿದ್ದಾರೆ.

15 ದಿನಗಳ ಹಿಂದಷ್ಟೇ ಚಿಕ್ಕನಾಯಕನಹಳ್ಳಿ ಮೂಲದ ಮಹಿಳೆಯೊಬ್ಬರನ್ನು ಆಟೊದಲ್ಲಿ ಕರೆದೊಯ್ದು  ನೀಲಗಿರಿ ತೋಪಿನಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿತ್ತು.

ಈಗ ತುಮಕೂರು ನಗರದಲ್ಲಿಯೇ ಅದೂ ಎಎಸ್‌ಐನಂತಹ ಹಿರಿಯ ಅಧಿಕಾರಿಯೊಬ್ಬ ತಾವೇನು ಅತ್ಯಾಚಾರಿಗಳಿಗಿಂತ ಕಡಿಮೆ ಏನಿಲ್ಲ ಎಂಬುವ ರೀತಿ ಕರ್ತವ್ಯದ ಮೇಲಿದ್ದಾಗಲೇ ಅದೂ ಚಲಿಸುವ ಗಸ್ತು ವಾಹನದಲ್ಲಿ ಅತ್ಯಾಚಾರ ನಡೆಸಿರುವುದಕ್ಕೆ ಈ ನಗರ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಹೇಳಲು ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ಜನರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ.

ಯಾರಾದರೇನು. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂಥವರೊಬ್ಬರು ರಕ್ಷಕರ ಹೆಸರಲ್ಲಿ ನಡೆಸುವ ರಾಕ್ಷಸಿ ಕೃತ್ಯ ಇಡೀ ಇಲಾಖೆಗೆ ಮಸಿ ಬಳಿಯುತ್ತದೆ ಎಂದು ಮಹಿಳಾ ಠಾಣೆ ಆವರಣದಲ್ಲೇ ಹರಿಹಾಯ್ದರು. ಪ್ರಕರಣ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಠಾಣೆಗೆ ದೌಡಾಯಿಸಿದ ಎಸ್ಪಿ ಇಶಾ ಪಂಥ್ ಒಂದೆರಡು ತಾಸು ವಿಚಾರಣೆ ನಡೆಸಿದರು.

ಅತ್ಯಾಚಾರಕ್ಕೀಡಾದ ಮಹಿಳೆ, ಆಕೆಯ ತಾಯಿಯಿಂದ ವಿವರಣೆ ಪಡೆದರು. ಆರೋಪಿ ವಿಚಾರಣೆ ವೇಳೆ ಬಾಯ್ಬಿಡುತ್ತಿದ್ದಂತೆಯೇ ಮಾಧ್ಯಮಗಳ ಮುಂದೆ ಹಾಜರಾದ ಎಸ್ಪಿ ಆರೋಪಿ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದರು.

ರಾತ್ರಿ ನಗರಕ್ಕೆ ಬಂದ ಐಜಿಪಿ ಸೀಮಂತಕುಮಾರ್ ಸಿಂಗ್, ಮಹಿಳಾ ಠಾಣೆಗೆ ಭೇಟಿ ನೀಡಿ ವಿವರ ಪಡೆದರು. ಅಂತರಸನಹಳ್ಳಿ ಬೈಪಾಸ್ ಸೇತುವೆ ಸ್ಥಳಕ್ಕೆ ಗಸ್ತು ವಾಹನ ಚಾಲಕನನ್ನು ಕರೆದೊಯ್ದು ವಿವರ  ಪಡೆದರು. 

ಸಿಡಿಮಿಡಿ... ಉರಿ ಉರಿ...:  ಮಧ್ಯಾಹ್ನ ಗ್ರಾಮೀಣ ಠಾಣೆಯಲ್ಲಿ ಅತ್ಯಾಚಾರಕ್ಕೀಡಾದ ಮಹಿಳೆ, ಆಕೆಯ ತಾಯಿಯಿಂದ ಮಾಹಿತಿ ಪಡೆದು, ಆರೋಪಿ ಎಎಸ್ಐ ಉಮೇಶ್‌ನನ್ನೂ ವಿಚಾರಣೆ ಮಾಡಿದ ಬಳಿಕ ಸುದ್ದಿಗಾರರಿಗೆ ವಿವರ ನೀಡಲು ನಿಂತ ಎಸ್ಪಿ ಅವರ ಮುಖ ಕೆಂಪಾಗಿ ಉರಿಯುತ್ತಿತ್ತು. ಸುದ್ದಿಗಾರರ ಪ್ರಶ್ನೆಗಳಿಗೆ ಸಿಡಿಮಿಡಿ ಧ್ವನಿಯಲ್ಲೇ ಉತ್ತರಿಸಿದರು. ಠಾಣೆಯ ಹೊರಗಡೆ ಸಾರ್ವಜನಿಕರು ಪೊಲೀಸ್ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕಿಡಿಕಾರಿದರು. 

ಯಾರಾದರೂ ಸಣ್ಣಪುಟ್ಟ ಕಳ್ಳತನ ಮಾಡಿದರೆ ತರಾತುರಿಯಲ್ಲಿ ತಂದು ಕ್ರಮ ಜರುಗಿಸುತ್ತೀರಿ. ಅತ್ಯಾಚಾರ ನಡೆಸಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಠಾಣೆಗೆ ತಡವಾಗಿ ಕರೆಸಿ ಈಗ ವಿಚಾರಣೆ ಮಾಡುತ್ತಿದ್ದೀರಿ ಎಂದು ಠಾಣೆ ಮುಂದೆ ನೆರದಿದ್ದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ನಿರ್ಭಯ ಘೋಷಣೆ ಬೆನ್ನಲ್ಲೇ ಕೃತ್ಯ
ಕಳೆದ ಹತ್ತು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಎಸ್ಪಿ ಇಶಾ ಪಂಥ್, ಜಿಲ್ಲೆಯಲ್ಲಿ ನನ್ನ ಮೊದಲ ಆದ್ಯತೆ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ. ಮಹಿಳೆಯರ ರಕ್ಷಣೆಗಾಗಿ ತುಮಕೂರು ನಗರದಲ್ಲಿ ‘ನಿರ್ಭಯ’ ಗಸ್ತು ವಾಹನ ಸಂಚಾರ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು.

ಅಲ್ಲದೇ ಮಹಿಳೆಯರು ಹೆಚ್ಚು ಸೇರುವ ಮಾರುಕಟ್ಟೆ, ಬಸ್ ನಿಲ್ದಾಣ, ಬಸ್ ನಿಲುಗಡೆ, ಮಾರುಕಟ್ಟೆ ಪ್ರದೇಶದಲ್ಲಿ ಇಂತಹ ವಾಹನ ವ್ಯವಸ್ಥೆ ಮಾಡುವುದಾಗಿ ಹೇಳಿಕೊಂಡಿದ್ದರು.

ಆದರೆ, ಅವರ ‘ನಿರ್ಭಯ’ ಗಸ್ತು ವಾಹನ ಸಂಚಾರ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನವೇ ಅವರದ್ದೇ ಇಲಾಖೆಯ ಎಎಸ್ಐ ಉಮೇಶ್  ಗಸ್ತು ವಾಹನದಲ್ಲಿಯೇ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ನಡೆಸಿರುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ಅವರ ಕನಸಿನ ಯೋಜನೆಯನ್ನೇ ಪ್ರಶ್ನಿಸುವಂತಾಗಿದೆ ಜನರು ಮಾತನಾಡಿಕೊಳ್ಳುತ್ತಿದ್ದರು.

ಜಿಲ್ಲೆಯ ಹಲವೆಡೆ ಕಾರ್ಯ ನಿರ್ವಹಣೆ
ಆರೋಪಿಯು ಎಎಸ್ಐ ಉಮೇಶ್, ಪೊಲೀಸ್ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ಗುಬ್ಬಿ ತಾಲ್ಲೂಕು ಹಾಗೂ ತುಮಕೂರು ಸೇರಿ ವಿವಿಧ ಕಡೆ ಕಾರ್ಯನಿರ್ವಹಿಸಿದ್ದರು. ಹೆಡ್‌ ಕಾನ್‌ಸ್ಟೇಬಲ್ ಆಗಿ ಬಳಿಕ ಎಎಸ್ಐ ಹುದ್ದೆಗೆ ಬಡ್ತಿ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT