ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪ್ರಗತಿಯಿಂದ ಸಮುದಾಯದ ಏಳಿಗೆ

ಸಿದ್ದರಾಮೇಶ್ವರ ಜಯಂತಿಯಲ್ಲಿ ಸಾಧಕರಿಗೆ ಸನ್ಮಾನ
Last Updated 16 ಜನವರಿ 2017, 5:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಶೈಕ್ಷಣಿಕವಾಗಿ ಪ್ರಗತಿ ಸಾಧಿಸದ ಯಾವುದೇ ಸಮುದಾಯ ಏಳಿಗೆಯಾಗಲು ಸಾಧ್ಯವಿಲ್ಲ. ಹೀಗಾಗಿ, ಭೋವಿ ಸಮುದಾಯವರು ಸಿದ್ದ ರಾಮೇಶ್ವರರ ವಾರಸುದಾರರೆಂದು ಹೇಳಿಕೊಳ್ಳುವುದಕ್ಕಿಂತಲೂ ಅವರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸ್ಪೃಶ್ಯತೆ ಹೋಗಲಾಡಿಸಲು ನಿರಂತರ ಶ್ರಮಿಸಿದ ಮಾನವತಾವಾದಿ ಸಿದ್ದರಾಮೇಶ್ವರರು ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆ ಇಟ್ಟು ಸ್ವತಃ ತಾವೇ ಶ್ರಮವಹಿಸಿ ದುಡಿಯುತ್ತಿದ್ದರು. ಭೋವಿ ಸಮುದಾಯವರು  ಅವರ ಆದರ್ಶಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ಜತೆಗೆ ವಿದ್ಯಾವಂತರಾಗಿ ಎಲ್ಲ ರಂಗದಲ್ಲೂ ಮುಂದುವರಿಯಬೇಕು. ಜ್ಞಾನವಂತರಿಗೆ ಜಾತಿ, ಮತ ಯಾವುದೂ ಪ್ರಗತಿಗೆ ಅಡ್ಡಿಯಾಗದು’ ಎಂದರು.

‘ಜಾತಿವಾರು ಜನಗಣತಿ ಮಾಹಿತಿ ಆಧರಿಸಿ ಬಜೆಟ್‌ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ತೀರಾ ಹಿಂದುಳಿದ ಭೋವಿ ಜನಾಂಗಕ್ಕೆ ಕೂಡ ನ್ಯಾಯ ದೊರಕುತ್ತದೆ. ಪ್ರತಿಯೊಂದು ಯೋಜನೆ ಲಾಭ ಅರ್ಹ ಫಲಾನುಭವಿಗಳಿಗೆ ತಲುಪಲಿ ಎನ್ನುವುದೇ ಸರ್ಕಾರದ ಉದ್ದೇಶ’ ಎಂದರು.

ಚಿಂತಾಮಣಿಯ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು ಮಾತನಾಡಿ, ‘ಸಾಮಾಜಿಕವಾಗಿ ತೀರ ಹಿಂದುಳಿದಿದ್ದ ಮಹಿಳೆಯರ ಕುರಿತು ಅಪಾರ ಕಾಳಜಿ ಹೊಂದಿದ್ದ ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸ್ತ್ರೀ ಸಮಾನತೆ ಪ್ರತಿಪಾದಿಸಿದರು. ಬಸವಣ್ಣನವರ ಕಾಯಕ ತತ್ವ ಮೆಚ್ಚಿಕೊಂಡಿದ್ದ ಅವರು ಅದರಂತೆ ಬಾಳಿದರು’ ಎಂದು ತಿಳಿಸಿದರು.

‘ಸಿದ್ದರಾಮೇಶ್ವರರ ಕೆರೆ ಕಟ್ಟುವ ಕಾಯಕಕ್ಕೆ ಮಾರುಹೋದ ಜಿಲ್ಲೆಯ ಭೋವಿ ಜನಾಂಗದವರು ಕೂಡ ಹೆಚ್ಚೆಚ್ಚು ಆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೀಗಾಗಿ ಇಂದು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆರೆ  ಕಾಣಬಹುದು’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಭೋವಿ ಜನಾಂಗದ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸ ಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ಶಿಕ್ಷಣ ತಜ್ಞ ಪ್ರೊ.ಕೋಡಿ ರಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಇಂದ್ರಮ್ಮ ಅಣ್ಣಯ್ಯಪ್ಪ, ಟಿಎಪಿಎಂಸಿ ಸದಸ್ಯ ಗೋವಿಂದಸ್ವಾಮಿ, ಭೋವಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುನಿಯಪ್ಪ, ಗೌರವಾಧ್ಯಕ್ಷ ನಾರಾಯಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

*
ಕೆಲ ವರ್ಷಗಳಿಂದ ಭೋವಿ ಜನಾಂಗದವರು ಸಮುದಾಯ ಭವನ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸುತ್ತಿ ದ್ದಾರೆ. ಮುಂಬರುವ ವರ್ಷ ಗಳಲ್ಲಿ ನಿವೇಶನ ಒದಗಿಸುವ ಜತೆಗೆ ಭವನ ನಿರ್ಮಾಣಕ್ಕೆ ಸಹಾಯ ಮಾಡುತ್ತೇನೆ.
-ಡಾ.ಕೆ.ಸುಧಾಕರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT