ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವಾಸನೆ ನಡುವೆಯೇ ಪಾಠ, ಊಟ

ದೊಡ್ಡ ಮಸೀದಿ ರಸ್ತೆ ಅಂಗನವಾಡಿ ಕೇಂದ್ರಕ್ಕೆ ತ್ಯಾಜ್ಯದ ತಲೆನೋವು
Last Updated 16 ಜನವರಿ 2017, 5:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಊಟ ಮಾಡಿ ಮಿಕ್ಕಿದ ಆಹಾರ, ಮನೆ ಕಸ–ಮುಸುರೆ, ಬಳಸಿ ಬಿಸಾಕಿದ ಸ್ಯಾನಿಟರಿ ಪ್ಯಾಡ್‌ಗಳು, ಯಥೇಚ್ಛವಾಗಿ ತ್ಯಾಜ್ಯವಾಗುವ ಪ್ಲಾಸ್ಟಿಕ್ ಬ್ಯಾಗ್‌ಗಳು... ಹೀಗೆ ನಿತ್ಯ ದಂಡಿಯಾಗಿ ಬೀಳುವ ಕಸದಿಂದ ಸೃಷ್ಟಿಯಾಗುವ ತ್ಯಾಜ್ಯದ ರಾಶಿ ಮುದ್ದು ಕಂದಮ್ಮಗಳು ಓದುವ ಅಂಗನವಾಡಿಗೆ ಮಗ್ಗಲು ಮುಳ್ಳಿನಂತೆ ಕಿರಿಕಿರಿ ಉಂಟು ಮಾಡುತ್ತಿದೆ.

ನಗರದ ನೈರ್ಮಲ್ಯ ಕಾಪಾಡುವ ನಗರಸಭೆಗೆ ಹೊಂದಿಕೊಂಡಂತಿರುವ ದೊಡ್ಡ ಮಸೀದಿ ರಸ್ತೆಯಲ್ಲಿ ಸಾಧು ಮಠದ ರಸ್ತೆಗೆ ಸಂಧಿಸುವ ಜಾಗದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ವರ್ಷ ಗಳಿಂದ ಈ ಕಸದ ‘ಕಸಿವಿಸಿ’ ನಡುವೆಯೇ ಮಕ್ಕಳಿಗೆ ಪಾಠ ಬೋಧಿಸಲಾಗುತ್ತಿದೆ.

ಗಾಳಿ ಜೋರಾಗಿ ಬೀಸಿದರೂ ಇಲ್ಲಿನ ತ್ಯಾಜ್ಯ ರಾಶಿಯೊಳಗಿನ ಕಸಕಡ್ಡಿಗಳು ಕೇಂದ್ರದೊಳಗೆ ಬರುತ್ತವೆ. ಇನ್ನು ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುವುದು ವಿಳಂಬ ಮಾಡಿದರೆ ದುರ್ವಾಸನೆ ನಡುವೆ ಮಕ್ಕಳು ಪಾಠ, ಊಟ ಪೂರೈಸುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂಗನವಾಡಿ ಸಿಬ್ಬಂದಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತಿದೆ.

ಚಿಂದಿ ಆಯುವವರು ಪ್ಲಾಸ್ಟಿಕ್‌ ವಸ್ತುಗಳಿಗೆ ಇಲ್ಲಿನ ತ್ಯಾಜ್ಯದ ರಾಶಿ ತಿರುವಿ ಹಾಕಿದರೆ, ನಾಯಿಗಳು, ಬೀದಿ ಹಸುಗಳು ಆಹಾರಕ್ಕಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹರಡುತ್ತವೆ. ಇದರಿಂದ ಆಗಾಗ ತ್ಯಾಜ್ಯದ ದೂಳು, ವಾಸನೆ ಅಂಗನವಾಡಿ ಸುತ್ತ ಸುಳಿದಾಡುತ್ತದೆ. ಹೀಗಾಗಿ ಪೋಷಕರು ಮಕ್ಕಳನ್ನು ಈ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಈ ಅಂಗನವಾಡಿ ಕೇಂದ್ರದಲ್ಲಿ ಆಟವಾಡಲು ಮೈದಾನವಿಲ್ಲ. ವಿರಾಮದ ವೇಳೆ ಹೊರಗಡೆಯಾದರೂ ಸುತ್ತಾಡಿಸಬೇಕೆಂದರೆ ತ್ಯಾಜ್ಯದ ರಾಶಿ ಭಯ. ಜತೆಗೆ ನಿಯಮಿತವಾಗಿ ಕೇಂದ್ರಕ್ಕೆ ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಆಹಾರ ಧಾನ್ಯ ಪಡೆದುಕೊಳ್ಳಲು ಭೇಟಿ ನೀಡುತ್ತಾರೆ. ಹೀಗಾಗಿ ಈ ತ್ಯಾಜ್ಯ ಸುರಿಯುವ ಸ್ಥಳವನ್ನು ಶಾಶ್ವತ ವಾಗಿ ಸ್ಥಳಾಂತರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

ದೂರು ಹೇಳಿಕೊಂಡರೂ ಪ್ರಯೋಜನವಿಲ್ಲ: ‘ಕಸದಿಂದ ಆಗುವ ತೊಂದರೆ ತಪ್ಪಿಸಿ ಎಂದು ಅನೇಕ ಬಾರಿ ನಗರಸಭೆ ಆರೋಗ್ಯ ವಿಭಾಗದ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದೇನೆ. ಇಲ್ಲಿ ಕಸ ಸುರಿಯುವುದನ್ನು ನಿರ್ಬಂಧಿಸಿ ಇಲ್ಲವೇ ಕಸದ ತೊಟ್ಟಿಯನ್ನಾದರೂ ಇಡಿ ಎಂದು ಕೇಳಿಕೊಂಡಿರುವೆ. ಯಾರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಸ್ಥಳೀಯ ನಗರಸಭೆ ಸದಸ್ಯರು ಇತ್ತ ಸುಳಿಯುವುದೇ ಇಲ್ಲ’ ಎಂದು ಅಂಗನವಾಡಿ ಶಿಕ್ಷಕಿ ಸಲ್ಮಾ ಅಳಲು ತೋಡಿಕೊಂಡರು.

‘ಇಲ್ಲಿ ಕಸ ಸುರಿಯಲು ಬರುವವರಿಗೆ ಅನೇಕ ಬಾರಿ ಮನವಿ ಮಾಡಿಕೊಂಡು, ನಗರಸಭೆ ವಾಹನಕ್ಕೆ ಕಸ ನೀಡಿ ಎಂದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಪೈಪೋಟಿಯಲ್ಲಿ ಕಸ ಸುರಿಯುತ್ತಾರೆ. ನಮಗಂತೂ ಹೇಳಿ ಹೇಳಿ ಸಾಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಾಗಿಲು ತೆರೆದ ನಂತರ ಅರ್ಧಗಂಟೆ ಅಂಗನವಾಡಿ ಸುತ್ತ ಹರಡಿದ ಕಸ ಸ್ವಚ್ಛಗೊಳಿಸುವುದು ನಿತ್ಯಕರ್ಮವಾಗಿದೆ. ಬಾಗಿಲು ತೆರೆದಿಟ್ಟು ಮಕ್ಕಳಿಗೆ ಊಟ ಮಾಡಿಸಲು ಆಗುವುದಿಲ್ಲ. ಮಳೆಗಾಲದಲ್ಲಿ ಕೆಟ್ಟ ವಾಸನೆ ಸಹಿಸಿಕೊಳ್ಳಲು ಆಗುವುದಿಲ್ಲ. ಆದಷ್ಟು ಬೇಗ ಇಲ್ಲಿ ತ್ಯಾಜ್ಯ ಸುರಿಯುವ ಸ್ಥಳವನ್ನು ಸ್ಥಳಾಂತರ ಮಾಡಿದರೆ  ನೆಮ್ಮದಿ ಸಿಗುತ್ತದೆ’ ಎಂದು ಹೇಳಿದರು.

ಅಂಗನವಾಡಿಗೆ ಹೊಂದಿಕೊಂಡಂತೆ ಶಿಥಿಲಗೊಂಡ ಹಳೇ ಕಟ್ಟಡವಿದೆ. ಅದರಿಂದಾಗಿ ಅಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಂಗನವಾಡಿ ಸಿಬ್ಬಂದಿ ಸವಾಲಿನ ಕೆಲಸವಾಗಿದೆ. ಜತೆಗೆ ಮಕ್ಕಳ ಸುರಕ್ಷತೆಯ ಬಗ್ಗೆಯೂ ಆತಂಕವಿದೆ. ಹೀಗಾಗಿ ಆ ಕಟ್ಟಡವನ್ನು ನವೀಕರಿಸಬೇಕು ಇಲ್ಲವೇ ಕೆಡವಿ ಹಾಕಬೇಕು ಎನ್ನುವುದು ಸ್ಥಳೀಯರ ಆಗ್ರಹ.

‘ಇಲ್ಲಿಗೆ 10ನೇ ವಾರ್ಡ್‌ಗಿಂತ 9ನೇ ವಾರ್ಡ್‌ ಜನರು ಕಸ ತಂದು ಸುರಿಯುತ್ತಾರೆ. ಆ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ  ನಗರಸಭೆ ಅಧಿಕಾರಿ ಗಳ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ. ಶೀಘ್ರದಲ್ಲಿಯೇ ಸಮಸ್ಯೆಯನ್ನು ಆದ್ಯತೆ ಮೆರೆಗೆ ಪರಿಹರಿಸಿಕೊಡುತ್ತೇನೆ’ ಎಂದು ವಾರ್ಡ್ ಸದಸ್ಯ ವಿ.ಸುಬ್ರಮಣ್ಯ ಚಾರಿ ತಿಳಿಸಿದರು.

*
ಶೀಘ್ರದಲ್ಲಿಯೇ ಸ್ಥಳೀಯರಿಗೆ ಕಸ ಹಾಕುವ ಬುಟ್ಟಿ ವಿತರಿಸುವ ಜತೆಗೆ ಅಂಗನವಾಡಿ ಬಳಿ ಕಸ ಸುರಿಯುವುದನ್ನು ಶಾಶ್ವತವಾಗಿ ನಿಲ್ಲಿಸಲು ಕ್ರಮಕೈಗೊಳ್ಳುತ್ತೇನೆ.
-ವಿ.ಸುಬ್ರಮಣ್ಯಚಾರಿ,
10ನೇ ವಾರ್ಡ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT