ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರು ಅನ್ಯಾಯ ಮರೆಯುತ್ತಿದ್ದಾರೆ

Last Updated 16 ಜನವರಿ 2017, 5:23 IST
ಅಕ್ಷರ ಗಾತ್ರ

ಕೋಲಾರ: ‘ದಲಿತರು ಮೂಢನಂಬಿಕೆಗಳಿಗೆ ದಾಸರಾಗಿ ಇತಿಹಾಸದಲ್ಲಿ ತಮಗೆ ಆಗಿರುವ ಅನ್ಯಾಯ ಮರೆಯುತ್ತಿದ್ದಾರೆ’ ಎಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್ ವಿಷಾದಿಸಿದರು.

ನಗರದಲ್ಲಿ ಭಾನುವಾರ ನಡೆದ ಅಂಬೇಡ್ಕರ್ ಸೇವಾ ಸಮಿತಿಯ ನೂತನ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೌಢ್ಯದ ಬಲೆಯಲ್ಲಿ ಸಿಲುಕಿ ನಲುಗಿದ್ದ ದಲಿತರಿಗೆ ಮೀಸಲಾತಿ ಕಲ್ಪಿಸಿಕೊಟ್ಟ ಅಂಬೇಡ್ಕರ್ ಅವರನ್ನು ದಲಿತ ಸಮುದಾಯ ಮರೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಹಲವು ಕ್ಷೇತ್ರಗಳಲ್ಲಿ ಮೀಸಲಾತಿ ಇದ್ದರೂ ದಲಿತ ಸಮುದಾಯ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಬಹುಪಾಲು ದಲಿತರು ಅವಿದ್ಯಾವಂತರಾಗಿರುವುದು. ಅನೇಕ ಕಾರಣಗಳಿಂದ ದಲಿತರ ಹಕ್ಕುಗಳು ದಮನವಾಗುತ್ತಿವೆ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗೂ ಭೇಟಿ ನೀಡಿ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತೇವೆ ಹಾಗೂ ದಲಿತರ ಹಕ್ಕುಗಳಿಗೆ ಧಕ್ಕೆ ತರುವವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಅಂಬರೀಶ್ ಮಾತನಾಡಿ, ‘ದಲಿತರನ್ನು ತುಳಿಯಲು ಮುಂದಾಗಿರುವ ಜನಪ್ರತಿನಿಧಿಗಳಿಗೆ ಸಮುದಾಯ ತಕ್ಕ ಪಾಠ ಕಲಿಸಬೇಕು. ದಲಿತರು ಸ್ವಾಭಿಮಾನ ಬಿಟ್ಟು ₹ 500 ಅಥವಾ ₹ 1,000 ಮತ ಮಾರಿಕೊಂಡು ಜೀವನ ಮಾಡುವುದಕ್ಕಿಂತ ದಲಿತ ನಾಯಕರನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿ ಸಿಂಹಗಳಂತೆ ಬದುಕಬೇಕು’ ಎಂದು ಕರೆ ನೀಡಿದರು.

ದಲಿತ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಷೇತ್ರದ ಶಾಸಕ ವರ್ತೂರು ಪ್ರಕಾಶ್‌ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಇಂತಹ ಮಾನಗೆಟ್ಟ ಶಾಸಕರಿಗೆ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಕ್ಷೇತ್ರದಿಂದ ಗಡಿಪಾರು ಮಾಡಬೇಕು ಎಂದು ಹೇಳಿದರು.

‘ಯಾವುದೋ ಬೊಂಬೆಗೆ ಪೂಜೆ ಮಾಡಲು ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಆ ಹಣವನ್ನು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಬೇಕು. ಶಿಕ್ಷಣದಿಂದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ದಲಿತರು ವಿದ್ಯಾವಂತರಾದರೆ ಸಮುದಾಯಕ್ಕೆ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಅವಕಾಶಗಳ ಹೆಚ್ಚುತ್ತವೆ’ ಎಂದು ದಲಿತ ಮುಖಂಡ ರಾಜಪ್ಪ ತಿಳಿಸಿದರು.

ಜಿಲ್ಲಾ ದಲಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಬು, ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಘಟಕದ ಅಧ್ಯಕ್ಷ ಕಾಶಿನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT