ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಂಗಳದಲ್ಲಿ ಬಾಣ–ಬಿರುಸುಗಳ ಚಿತ್ತಾರ

ಗುಮ್ಮಟನಗರಿಯಲ್ಲಿ ಜರುಗಿದ ಸಿದ್ಧೇಶ್ವರರ ‘ನಮ್ಮೂರ ಜಾತ್ರೆ’ಯಲ್ಲಿ ಮದ್ದಿನ ಬಿರುಸಿನ ಸದ್ದು
Last Updated 16 ಜನವರಿ 2017, 6:04 IST
ಅಕ್ಷರ ಗಾತ್ರ

ವಿಜಯಪುರ: ಪಡುವಣದ ಬಾನಂಚಿನಲ್ಲಿ ದಿನಕರ ಕಣ್ಮರೆಯಾಗುವ ಹೊತ್ತಿಗೆ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣ ಭರ್ತಿ. ಎತ್ತ ನೋಡಿದರೂ ಜನ ಸಾಗರ. ಅತ್ತಿತ್ತ ಹೆಜ್ಜೆ ಕದಲಿಸಲು ಜಾಗವಿಲ್ಲ...

ನಗರದ ಆರಾಧ್ಯ ದೈವ ಸಿದ್ಧೇಶ್ವರರ ‘ನಮ್ಮೂರ ಜಾತ್ರೆ’ ಅಂಗವಾಗಿ ಸಂಕ್ರಮಣದ ಮರು ದಿನ ನಡೆಯುವ ಮದ್ದಿನ ಬಿರುಸಿನ ವೈಭವ ಕಣ್ತುಂಬಿ ಕೊಳ್ಳಲು ಪ್ರತಿ ವರ್ಷವೂ ನಗರವೂ ಸೇರಿದಂತೆ ಆಸುಪಾಸಿನ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಜಮಾಯಿಸುವುದು ತಪ್ಪದ ಸಂಗತಿ.

ಇದಕ್ಕೆ ಪೂರಕವಾಗಿ ಈ ಬಾರಿ ಇನ್ನೂ ಹೆಚ್ಚಿನ ಅಪಾರ ಜನಸ್ತೋಮ ಕ್ರೀಡಾಂಗಣದಲ್ಲಿ ನೆರೆದಿತ್ತು.  ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರಿಗೆ ತವರೂರಿನಲ್ಲಿ ಸಿದ್ಧೇಶ್ವರ ಸಂಸ್ಥೆ ವತಿಯಿಂದ ‘ಆಧುನಿಕ ಭಗೀರಥ’ ಬಿರುದು ಪ್ರದಾನ ಮಾಡುವುದನ್ನು ಕಣ್ತುಂಬಿಕೊಳ್ಳಲು ಎಂ.ಬಿ.ಪಾಟೀಲ  ಬೆಂಬಲಿಗರು ಕ್ರೀಡಾಂಗಣಕ್ಕೆ ಧಾವಿಸಿದ್ದು ಇದಕ್ಕೆ ಕಾರಣವಾಗಿತ್ತು. ಒಳಗೆ ಸ್ಥಳಾವ ಕಾಶ ಸಿಗದೆ ಹೊರ ಭಾಗದಲ್ಲಿ ನಿಂತ ಅಪಾರ ಜನತೆ ಕಾರ್ಯಕ್ರಮ ವೀಕ್ಷಿಸಿತು.

ಬೆಳಕಿನ ಚಿತ್ತಾರ: ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರೆ ಬೀಳುತ್ತಿದ್ದಂತೆ ಬಾನಂಗಳದಲ್ಲಿ ಬೆಳಕಿನ ಚಿತ್ತಾರ... ಬಣ್ಣ-ಬಣ್ಣದ ಬೆಳಕಿನ ಸೊಗಸಾದ ನೋಟ....ಆಗಸದಲ್ಲಿ ಮೂಡಿದ ಚಿತ್ತಾ ಕರ್ಷಕ ಬೆಳಕಿನ ಭವ್ಯ ರಂಗೋಲಿ... ನೆರೆದಿದ್ದ  ಜನಸ್ತೋಮದ ಕಣ್ತುಂಬಿತು.

ಆಗಸದಂಗಳದಲ್ಲಿ ಮದ್ದಿನ ಬಾಣಗಳ ಸುರಿಮಳೆ ಆರಂಭಿಸುತ್ತಿ ದ್ದಂತೆ, ಇಡೀ ಕ್ರೀಡಾಂಗಣ ಮೊಬೈಲ್‌ ಲೈಟ್‌ನ ಬೆಳಕಿನಲ್ಲಿ ಮಿಂದೆದ್ದಿತು. ಎಲ್ಲೆ ಡೆಯೂ ಹರ್ಷೋದ್ಗಾರ ಮೊಳಗಿತು. ಮದ್ದಿನ ಸದ್ದು ತಾಸಿಗೂ ಅಧಿಕ ಸಮಯ ಕಿ.ಮೀ. ದೂರ ಮಾರ್ದನಿಸಿತು.

ಇದರಿಂದಲೇ ಸಿದ್ಧೇಶ್ವರ ಜಾತ್ರೆಯಲ್ಲಿ ಮದ್ದು ಸುಡುವ ಕಾರ್ಯಕ್ರಮ ತನ್ನದೇ ವಿಶೇಷ ಆಕರ್ಷಣೆ ಹೊಂದಿದೆ. ಬಾನಂಗಳದಲ್ಲಿ ಅನಾವರಣಗೊಂಡ ಬಣ್ಣ ಬಣ್ಣದ ಮದ್ದು ಜನಮನಕ್ಕೆ ಮುದ ನೀಡಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನತೆ ಅಪೂರ್ವ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡು ಹರ್ಷೋದ್ಗಾರ ಮಾಡಿತು.

ಸುರೇಶ ಕೆಶೆಟ್ಟಿ, ಆದಿತ್ಯ ಫೈರ್‌ ವರ್ಕ್ಸ್‌ ತಂಡ ಮದ್ದಿನಲ್ಲಿ ವೈವಿಧ್ಯಮಯ ರೂಪ ಗಳನ್ನು ಪ್ರದರ್ಶಿಸುವ ಮೂಲಕ ಆಕಾಶದಲ್ಲಿ ಬೆಳಕಿನ ರಂಗವಲ್ಲಿ ಸೃಷ್ಟಿಸಿತು.

ಸುಂಯ್... ಸುಂಯ್... ಎಂದು ಭುವಿಯಿಂದ ಬಾನಿಗೆ ರಾಕೆಟ್‌ಗಳು ಚಿಮ್ಮಿದಾಗ ಜನರ ಕೇಕೆ ಮುಗಿಲು ಮುಟ್ಟಿತ್ತು. ಬೆಂಕಿಯಲ್ಲೇ ಅರಳಿದ ನಾನಾ ರೀತಿಯ ಚಕ್ರಗಳು, ತ್ರಿಶೂಲ, ಕಣ್ಮನ ಸೆಳೆದ ಕಾರಂಜಿಗಳು, ಜಲಪಾತಗಳು, ಸ್ವಾಗತ ಕಮಾನು... ಹೀಗೆ ನಾನಾ ರೂಪ ಗಳು ಬಾನಂಗಳದ ಹೊಸ ಲೋಕದಲ್ಲಿ ನೆರೆದಿದ್ದವರನ್ನೂ ತೇಲಿಸಿದವು.

ಸನ್ ರೈಸ್, ಸನ್ ವ್ಹೀಲ್, ಓಂ, ನಾಗದೇವ, ಸೂರ್ಯ ಚಕ್ರ, ಮ್ಯಾಜಿಕ್ ವ್ಹೀಲ್, ಸ್ಪೆಶಲ್ ಗೋಲ್ಡನ್ ಫ್ಲಾವರ್, ಕ್ರ್ಯಾಕಲಿಂಗ್ ಶೂಟ್ಸ್‌ಗಳು ಪ್ರೇಕ್ಷಕರ ಗಮನ ಸೆಳೆದವು. ಅಶೋಕ ಚಕ್ರ, ಬೆಳಕಿನ ಗಿಡ (ಲೈಟ್ ಟ್ರೀ...)ದ ಹೂವಿನ ಚಿತ್ತಾರಗಳು ಸಹ ತಮ್ಮತ್ತ ಜನಸ್ತೋಮ ಗಮನ ಕೇಂದ್ರೀಕರಿಸುವಂತೆ ಮಾಡುವಲ್ಲಿ ಯಶಸ್ವಿಯಾದವು.

ಕೆಶೆಟ್ಟಿ ಹಾಗೂ ಕಲಾವಿದರು ಪ್ರಸ್ತುತ ಪಡಿಸಿದ ದಬದಬೆ, ಶ್ರೀಚಕ್ರ, ಸಿಂಗಲ್ ಚಕ್ರ, ಮ್ಯಾಜೀಕ್ ಟ್ರೀ, ವಂಡರ್‌ಫುಲ್ ಟ್ರೀ, ವಿಸಲಿಂಗ್ ಟ್ರೀ, ಬಿಗ್ ಶಾಟ್, ರಾಜ ದರಬಾರ ಕುಳ್ಳಿ, ಕಲರ್ ಮೊದಲಾದ ರೂಪಗಳು ಪಟಾಕಿಯ ವೈಶಿಷ್ಟ್ಯತೆಗಳನ್ನು ಕಣ್ಣಿಗೆ ಕಟ್ಟಿಕೊಟ್ಟವು. ಸ್ಪೆಶಲ್ ಸೆಲ್, ಸುದರ್ಶನ ಚಕ್ರ, ಅಂಬ್ರೇಲಾ ಚಕ್ರ, ಮಲ್ಟಿ ಕಲರ್, ರೆಡ್-ಗ್ರೀನ್ ಟ್ರೀ, ಮಲ್ಟಿ ಕಲರ್ ಫೌಂಟೇನ್ ಮೊದಲಾದ ದೃಶ್ಯಾವಳಿಗಳು ಕಣ್ಮನ ಸೆಳೆದವು.

ಜಲಲ ಜಲಧಾರೆ..!
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಜಲಪಾತವೂ ಹರಿಯಿತು. ಹೌದು... ಮದ್ದಿನಲ್ಲಿ ಸುಂದರವಾದ ಜಲಪಾತವನ್ನೇ ಸೃಷ್ಟಿಸಲಾಗಿತ್ತು. ಬೆಳಕಿನಲ್ಲಿ ಅರಳಿದ ಜಲಪಾತ ಕಂಡ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಇದರ ಜತೆಗೆ ಮದ್ದಿನ ಮಳೆಯೂ ಸುರಿಯಿತು. ತುಂತುರು ಮಳೆ, ಮುಂಗಾರು ಮಳೆಯೂ ಸುರಿಯಿತು. ಈ ಸಂತೋಷದಲ್ಲಿ ಜನರು ಮಿಂದೆದ್ದರು.

ನೋಡುತ್ತಿದ್ದಂತೆ ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇವಾಲಯವೂ ಕಣ್ಮುಂದೆ ಬಂದಿತು. ನಂತರ ಮದ್ದಿನಲ್ಲಿಯೇ ‘ತಮಗೆಲ್ಲರಿಗೂ ಸ್ವಾಗತ... ಸುಸ್ವಾಗತ...’ ‘ಓಂ’ ಎಂಬಿತ್ಯಾದಿ ಅಕ್ಷರಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು. ನಂತರ ಭಾರತ ನಕಾಶೆ ಅರಳಿತು. ಸುಸ್ವಾಗತಂನಿಂದ ಆರಂಭ ಗೊಂಡ ಮದ್ದಿನ ಸದ್ದು, ಬೆಳಕು, ವಂದನೆಗಳೊಂದಿಗೆ ತೆರೆ ಕಂಡಿತು.

ಸಿದ್ದೇಶ್ವರ ಜಾತ್ರೆಯಲ್ಲಿ ಇಂದು
ಸಿದ್ದೇಶ್ವರ ಸಂಕ್ರಮಣ ಜಾತ್ರೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ. ದೇವಸ್ಥಾನದಲ್ಲಿ ವಿವಿಧ ಭಕ್ತರಿಂದ ವಿಶೇಷ ಪೂಜೆ, ಬೆಳಿಗ್ಗೆ 6ಕ್ಕೆ. ಭಾರ ಎತ್ತುವ ಸ್ಪರ್ಧೆ ಬೆಳಿಗ್ಗೆ 11ಕ್ಕೆ.  ಜಾನಪದ ಜಾತ್ರೆ – ಜಾನಪದ ಜಾಣ ಶಬ್ಬಿರ ಡಾಂಗೆ, ಹಾಸ್ಯ ಕಲಾವಿದ ಹನುಮಂತ ಪರೀಟ ಇವರಿಂದ ಜುಗಲ್‌ ಬಂದಿ ಜಾನಪದ ಸಂಗೀತ ಕಾರ್ಯಕ್ರಮ. ಸಂಜೆ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT