ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಣೆ ಕಳೆದುಕೊಂಡ ರಾಜಾಸೀಟ್‌..!

ಉದ್ಯಾನದಲ್ಲಿ ಚಿಮ್ಮದ ‘ಸಂಗೀತ ಕಾರಂಜಿ’, ಹಾಳಾದ ಮಕ್ಕಳ ಆಟದ ಉದ್ಯಾನ
Last Updated 16 ಜನವರಿ 2017, 6:21 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಪ್ರವಾಸ ಕ್ಕೆಂದು ಬಂದವರು ಸಾಮಾನ್ಯವಾಗಿ ರಾಜಾಸೀಟ್‌ ನೋಡದೆ ಹಾಗೆಯೇ ತೆರಳುವುದಿಲ್ಲ. ಇಲ್ಲಿ ನಿಂತು ಸಂಜೆ ಬೆಟ್ಟಗುಡ್ಡಗಳ ಸಾಲಿನಲ್ಲಿ ಸೂರ್ಯಾಸ್ತದ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಬಗು. ಆದರೆ, ಪ್ರವಾಸಕ್ಕೆ ಬಂದವರು ಮಾತ್ರ ರಾಜಾಸೀಟ್‌ ನೋಡಿದ ಬಳಿಕ ಇಲ್ಲೇನಿದೆ ಎಂಬ ಉದ್ಗಾರದೊಂದಿಗೆ ವಾಪಸ್‌ ಆಗುವುದು ಸಾಮಾನ್ಯವಾಗಿದೆ.

ಹೌದು, ರಾಜಾಸೀಟ್‌ ದಿನದಿಂದ ದಿನಕ್ಕೆ ಸೊರಗುತ್ತಿದೆ. ವೀಕ್ಷಣಾ ಪ್ರದೇಶದಿಂದ ಬೆಟ್ಟಗುಡ್ಡ, ಮಂಜು ಮುಸುಕಿದ ವಾತಾವರಣ ನೋಡಲು ಮಾತ್ರ ಅಂದ. ಇದನ್ನು ಹೊರತು ಪಡಿಸಿದರೆ ಆಕರ್ಷಣೀಯವಾದ ಸೌಲಭ್ಯಗಳಿಲ್ಲ. ಹೀಗಾಗಿ, ದೂರದಿಂದ ಬರುವ ಪ್ರವಾಸಿಗರು ಪ್ರತಿನಿತ್ಯ ನಿರಾಸೆಗೆ ಒಳಗಾಗುತ್ತಿದ್ದಾರೆ. ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಡುವ ಕಾರಣ ಪ್ರವಾಸೋದ್ಯಮ ಇಲಾಖೆ ಸಹ ಅಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ ಎಂಬ ಆರೋಪಗಳೂ ಸಹಜವಾಗಿವೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸಂಗೀತ ಕಾರಂಜಿ ಕೆಟ್ಟುನಿಂತು ಎಷ್ಟೋ ತಿಂಗಳುಗಳು ಕಳೆದಿವೆ. ಸಂಗೀತ ಕಾರಂಜಿ ವೀಕ್ಷಣೆಗೆಂದು ಬಂದವರಿಗೆ ಅಲ್ಲಿಯೂ ನಿರಾಸೆ ಮೂಡಿಸುತ್ತದೆ. 

ಇನ್ನು ಪುಟಾಣಿ ರೈಲು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಒಬ್ಬರಿಗೆ ₹ 20 ಶುಲ್ಕವಿದೆ. ರಾಜಾಸೀಟ್‌ ಪಕ್ಕದ ಕಾಡಿ ನೊಳಗೆ ಒಂದು ಸುತ್ತು ಹಾಕುವುದನ್ನು ಬಿಟ್ಟರೆ ಅದೂ ಆಕರ್ಷಣೆ ಇಲ್ಲ. ಪ್ಲಾಸ್ಟಿಕ್‌ ಶೀಟ್‌ಗಳಿಂದ 30 ಅಡಿಗಳಷ್ಟು ಉದ್ದದ ಸುರಂಗವಿದೆ. ದುಡ್ಡು ಕೊಟ್ಟ ತಪ್ಪಿಗೆ ಪ್ರವಾಸಿಗರು ವಿಧಿಯಿಲ್ಲದೇ ಸುತ್ತುಹಾಕಿ ಬರುತ್ತಾರೆ. ಅದೇ ಆವರಣದಲ್ಲಿ ಮಕ್ಕಳ ಆಟಕ್ಕೆಂದು ನಿರ್ಮಿಸಲಾಗಿದ್ದ ಜಾರು ಬಂಡಿ, ತೂಗುಯ್ಯಾಲೆ ಹಾಳಾಗಿವೆ. ಅದರ ಮೇಲೆ ಕುಳಿತು ಆಟವಾಡಲು ಮುಂದಾದರೆ ಅಪಾಯ ಖಚಿತ!

ಇನ್ನು ರಾಜಾಸೀಟ್‌ನ ಪ್ರವೇಶ ಶುಲ್ಕ ಪಡೆದು, ಪಕ್ಕದ ಕಾಡಿಗೆ ತೆರಳುವ ಪ್ರೇಮಿಗಳೇ ಹೆಚ್ಚು. ಬೆಳಿಗ್ಗೆ ಹೋದವರು ಸಂಜೆಯ ತನಕ ಅಲ್ಲಿಯೇ ಕಾಲಕಳೆ ಯುವ ಮಂದಿಗೇನು ಕೊರತೆಯಿಲ್ಲ. ಪ್ರವೇಶ ದ್ವಾರದಲ್ಲಿ ಪ್ರವೇಶ ಶುಲ್ಕದ ಟಿಕೆಟ್‌ ಮಾತ್ರ ಪರಿಶೀಲನೆ ಮಾಡಲಾಗುತ್ತದೆ. ಹೀಗಾಗಿ, ಪುಡಾರಿಗಳು ಮದ್ಯವನ್ನು ಕಾಡಿನೊಳಗೆ ಕೊಂಡೊಯ್ದು ಸೇವಿಸಿ ಬರುತ್ತಾರೆ. ಹೀಗಾಗಿ, ಅಲ್ಲಲ್ಲಿ ಬಿಯರ್‌ ಬಾಟಲಿಗಳ ದರ್ಶನವಾಗುತ್ತಿದೆ.

ಪುಷ್ಪ ಪ್ರದರ್ಶನ: ರಾಜಾಸೀಟ್‌ ಅನ್ನು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿಸಲು ತೋಟಗಾರಿಕೆ ಇಲಾಖೆಯಿಂದ ಫಲ– ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿತ್ತು. ಆದರೆ, 2016ರಲ್ಲಿ ಪ್ರದರ್ಶನ ಆಯೋಜಿಸಲು ಇಲಾಖೆ ನಿರಾಸಕ್ತಿ ತೋರಿಸಿತು. ಇನ್ನು ಉದ್ಯಾನದಲ್ಲಿ ಬೆರಳೆಣಿಕೆಯಷ್ಟು ಹೂವಿನ ಗಿಡಗಳು ಕಾಣಿಸುತ್ತವೆ. ಇದ ಕ್ಕಿಂತ ನಮ್ಮ ಮನೆಯಲ್ಲೇ ಹೆಚ್ಚು ಹೂವಿನ ಗಿಡಗಳಿವೆ ಎಂದು ರಾಜಾ ಸೀಟ್‌ ನೋಡಿದ ಪ್ರವಾಸಿಗರು ಹೇಳುತ್ತಾರೆ.

‘ಉತ್ತಮ ಪ್ರವಾಸಿ ತಾಣ ಮಾಡಲು ಸಾಕಷ್ಟು ಅವಕಾಶಗಳಿವೆ. ಪಾರ್ಕಿಂಗ್‌ ವ್ಯವಸ್ಥೆ, ಪಕ್ಕದಲ್ಲಿ ಉತ್ತಮ ತಿಂಡಿ, ತಿನಿಸುಗಳ ಅಂಗಡಿ, ಅಪರೂಪದ ಸಸ್ಯ, ಹೂವಿನ ಗಿಡ ಬೆಳೆಸಿದರೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬಹುದು. ಇದೇ ಪರಿಸ್ಥಿತಿ ರಾಜಾಸೀಟ್‌ನಲ್ಲಿ ಮುಂದುವರಿ ದರೆ ಒಮ್ಮೆ ಬಂದವರು ಇತ್ತ ಸುಳಿಯು ವುದಿಲ್ಲ’ ಎಂದು ಪ್ರವಾಸಿಗರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT