ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷ ಸಂರಕ್ಷಣಾ ವೇದಿಕೆ ರಚನೆ

ವಂಚಕ ಜ್ಯೋತಿಷಿಗಳ ವಿರುದ್ಧ ದೂರು ದಾಖಲಿಸುವ ಉದ್ದೇಶ: ಗಣೇಶ ಹೆಗಡೆ ಹೇಳಿಕೆ
Last Updated 16 ಜನವರಿ 2017, 6:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಂಚಕ ಜ್ಯೋತಿಷಿಗಳನ್ನು ಗುರುತಿಸಿ ಅವರ ವಿರುದ್ಧ ದೂರು ದಾಖಲಿಸಲು ಜ್ಯೋತಿಷ ಸಂರಕ್ಷಣಾ ವೇದಿಕೆ ಆರಂಭಿಸಲಾಗುತ್ತದೆ’ ಎಂದು ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಗಣೇಶ ಹೆಗಡೆ ತಿಳಿಸಿದರು.

‘ಜ್ಯೋತಿಷ ಸನಾತನ ಆಧ್ಯಾತ್ಮಿಕ ವಿದ್ಯೆ. ಜನರ ಸರ್ವತೋಮುಖ ಕಲ್ಯಾಣವೇ ಈ ಶಾಸ್ತ್ರದ ಪರಮಗುರಿ. ಆದರೆ ಇತ್ತೀಚೆಗೆ ಮಾಧ್ಯಮ ಹಾಗೂ ವಸತಿ ಗೃಹಗಳಲ್ಲಿ ಶಾಸ್ತ್ರದ ಸರಿಯಾದ ಜ್ಞಾನ, ಅರ್ಹತಾ ಪತ್ರ ಇಲ್ಲದೆ, ಮಾಟ, ಮಂತ್ರ, ವಶೀಕರಣ ಪೂಜೆಯ ಹೆಸರಿನಲ್ಲಿ ನೂರಾರು ಮುಗ್ದ ಜನರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ಅರಿವಿದ್ದರೂ ಪೊಲೀಸ್‌  ಇಲಾಖೆ, ಅಧಿಕಾರಿಗಳು, ಮಠಾಧೀಶರು, ಬುದ್ದಜೀವಿಗಳು, ಜನಪರ ಹೋರಾಟಗಾರರು ಸುಮ್ಮನಿದ್ದಾರೆ. ಹೀಗಾಗಿ ನಾವು ಹೋರಾಟ ಆರಂಭಿಸುತ್ತಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ವಂಚನೆ ಮಾಡಿದವರ ವಿರುದ್ಧ ಆಧಾರಸಹಿತ ದೂರು ನೀಡಲು ಪೊಲೀಸರು ಸೂಚಿಸುತ್ತಾರೆ. ಆದರೆ ಕ್ರಮ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಜನರು ವಂಚನೆಗೊಳಗಾಗುತ್ತಿದ್ದಾರೆ. ರಾಜಕಾರಣಿಗಳೂ ಸೇರಿದಂತೆ ಯಾರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜ್ಯೋತಿಷ ಸಂರಕ್ಷಣಾ ವೇದಿಕೆ ಆರಂಭಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ, ವಂಚನೆಗೆ ಒಳಗಾದವರಿಗೆ ರಕ್ಷಣೆ ನೀಡಿ, ವಂಚಕ ಜ್ಯೋತಿಷಿಗಳನ್ನು ಗುರುತಿಸಿ ಅವರಿಗೆ ಎಚ್ಚರಿಕೆ ನೀಡಲಾಗುತ್ತದೆ. ನಂತರವೂ ಅವರು ವ್ಯಾಪಾರ, ವಂಚನೆ ಮುಂದುವರಿಸಿದ್ದಲ್ಲಿ, ಅವರ ವಿರುದ್ಧ ಐಪಿಸಿ ಸೆಕ್ಷನ್‌ 420ಯಲ್ಲಿ ದೂರು ದಾಖಲಿಸಲಾಗುತ್ತದೆ. ಇವರಿಗೆ ಶಿಕ್ಷೆಯಾಗುವಂತೆ ವೇದಿಕೆಯಿಂದಲೇ ಕಾನೂನು ಹೋರಾಟ ನಡೆಸಲಾಗುತ್ತದೆ’ ಎಂದು ಗಣೇಶ ಹೆಗಡೆ ವಿವರಿಸಿದ್ದಾರೆ. ವಿವರಗಳಿಗೆ ಮೊ: 9448103484

ಜ್ಯೋತಿಷಿಗಳ  ದಿನಾಚರಣೆ
ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ವಿದ್ವಾನ್ ಗಣೇಶ ಹೆಗಡೆ ಜನ್ಮದಿನದ ನೆನಪಿನಲ್ಲಿ ‘ಜ್ಯೋತಿಷಿಗಳ ದಿನಾಚರಣೆ’ಯನ್ನು ಇದೇ 22ರಂದು ಆಯೋಜಿಸಲಾಗಿದೆ.

‘ನಿತ್ಯ ಜೀವನದಲ್ಲಿ ಜನಸಾಮಾನ್ಯರಿಗೆ ಆರೋಗ್ಯ, ಆರ್ಥಿಕ, ವಿವಾಹ, ಗೃಹ ನಿರ್ಮಾಣ, ವೃತ್ತಿ ನಿರ್ಣಯ, ಜಲಶೋಧನೆ, ಪಂಚಾಂಗರಚನೆ, ಮುಹೂರ್ತ ನಿರ್ಣಯ, ವರ್ಷ ಫಲನಿರ್ಣಯಗಳಿಗೆ ಉಪಯುಕ್ತವಾದ ಜ್ಯೋತಿಷಶಾಸ್ತ್ರವನ್ನು ಬೆಳೆಸಿ, ಉಳಿಸುವ ಹಾಗೂ ಸಾಧಕರನ್ನು ಗುರುತಿಸಿ ಸತ್ಕರಿಸುವ ದೃಷ್ಟಿಯಿಂದ ಈ ದಿನಾಚರಣೆ ಆಚರಿಸಲಾಗುತ್ತಿದೆ’ ಎಂದು ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಗಣೇಶ್‌ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸುಂದರ ನಗರದಲ್ಲಿರುವ ಜ್ಯೋತಿರ್ವಿಜ್ಞಾನ ಭವನದಲ್ಲಿ 22ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಜ್ಯೋತಿಷ ಲಿಖಿತ ಪರೀಕ್ಷೆ,  ಜ್ಯೋತಿಷ ಸಿದ್ಧ ಭಾಷಣ ಸ್ಪರ್ಧೆ, ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ.

ನಂತರ, ಉದ್ಘಾಟನಾ ಸಮಾರಂಭ ನಡೆಯಲಿದೆ. ಧಾರವಾಡದ ಚಿದಂಬರ ಪಂಚಾಂಗಕರ್ತ ಪ್ರೊ.ಸಿ.ಆರ್‌. ಜೋಶಿ ಅಧ್ಯಕ್ಷತೆ ವಹಿಸಲಿದ್ದು, ಸಮಾರೋಪದಲ್ಲಿ ಸಂಸದ ಪ್ರಹ್ಲಾದ ಜೋಷಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT