ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಿಯರ್ಸ್‌ಗೆ ಚಾಂಪಿಯನ್‌ ಪಟ್ಟ

ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿ ಎದುರಾಳಿಗಳನ್ನು ಸುಲಭವಾಗಿ ಕಟ್ಟಿ ಹಾಕಿದ ಜೀಶನ್ ಅಲಿ ಬಳಗ
Last Updated 16 ಜನವರಿ 2017, 6:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲೀಗ್‌ ಹಂತದಲ್ಲಿ ಕೇವಲ ಒಂದು ಸೋಲು ಮಾತ್ರ ಕಂಡಿದ್ದ ಮಿಲನ್ ವಾರಿಯರ್ಸ್‌ ತಂಡ ಚಾಂಪಿಯನ್ ಆಟ ಪ್ರದರ್ಶಿಸಿತು.  ಎದುರಾಳಿಗಳ ವಿರುದ್ಧ ಆಧಿಪತ್ಯ ಸ್ಥಾಪಿಸಿ ಚಾಂಪಿಯನ್ ಪಟ್ಟವನ್ನೂ ಅಲಂಕರಿಸಿತು.

ಭಾನುವಾರ ಮುಕ್ತಾಯಗೊಂಡ ಬಿ.ಡಿ.ಕೆ ಸ್ಪೋರ್ಟ್ಸ್‌ ಫೌಂಡೇಷನ್ ಆಶ್ರಯದ ಹುಬ್ಬಳ್ಳಿ ಪ್ರೀಮಿಯರ್ ಲೀಗ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಕರಾವಳಿ ಕಿಂಗ್ಸ್ ವಿರುದ್ಧ 89 ರನ್‌ಗಳ ಜಯ ಸಾಧಿಸಿದ ವಾರಿಯರ್ಸ್‌ ಟೂರ್ನಿಯ ಎರಡನೇ ಆವೃತ್ತಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಲೀಗ್‌ ಹಂತದ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಗಳಿಸಿದ್ದ ತಂಡಗಳ ನಡುವೆ ಇಲ್ಲಿನ ರಾಜನಗರದ ಕೆ.ಎಸ್.ಸಿ.ಎ ಮೈದಾನದಲ್ಲಿ ಮಧ್ಯಾಹ್ನ ನಡೆದ ಅಂತಿಮ ಹಣಾಹಣಿ ಕುತೂಹಲ ಮೂಡಿಸಿತ್ತು. ಆದರೆ ಏಕಪಕ್ಷೀಯ ಆಟ ಪ್ರದರ್ಶಿಸಿದ ವಾರಿಯರ್ಸ್‌ ₹ 2.5 ಲಕ್ಷ ಮೊತ್ತದ ನಗದು ಬಹುಮಾನ ಮತ್ತು ಟ್ರೋಫಿ ಗಳಿಸಿತು. ರನ್ನರ್ಸ್‌ ಅಪ್‌ ಕರಾವಳಿ ಕಿಂಗ್ಸ್‌ಗೆ ₹ 1.6 ಲಕ್ಷ ಮೊತ್ತದ ನಗದು ಮತ್ತು ಟ್ರೋಫಿ ನೀಡಲಾಯಿತು.

ಮಿಂಚಿದ ನವೀನ, ರಾಹುಲ್: ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜೀಶನ್ ಅಲಿ ಸೈಯದ್ ನಾಯಕತ್ವದ ವಾರಿಯರ್ಸ್‌ 20 ಓವರ್‌ಗಳಲ್ಲಿ ಗಳಿಸಿದ್ದು 140 ರನ್‌. ಆಫ್ ಸ್ಪಿನ್ನರ್‌ ನವೀನ ಗಡದಿನ್ನಿ ಮತ್ತು ಮಧ್ಯಮ ವೇಗಿ ರಾಹುಲ್ ನಾಯಕ್ ಅವರ ಪರಿಣಾಮಕಾರಿ ದಾಳಿಯಿಂದ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗೆ ಅರ್ಧ ಶತಕದ ಸಮೀಪ ತಲುಪಲು ಸಾಧ್ಯವಾಗಲಿಲ್ಲ.

ಆದರೆ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕಿಂಗ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಸಮರ್ಥವಾಗಿ ಕಟ್ಟಿ ಹಾಕಿದ ವಾರಿಯರ್ಸ್‌ ಬೌಲರ್‌ಗಳು ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ನೀರಸ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ಸ್‌ 10.5 ಓವರ್‌ಗಳಲ್ಲಿ ಕೇವಲ 51 ರನ್‌ಗಳಿಗೆ ಆಲೌಟಾಯಿತು. ಇದು ಎಚ್‌.ಪಿ.ಎಲ್‌.ನಲ್ಲಿ ತಂಡವೊಂದು ಗಳಿಸಿದ ಕನಿಷ್ಠ ಮೊತ್ತ.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹನ್ ಕದಂ ಮತ್ತು ಕಿಶೋರ ಕಾಮತ್‌ ಬೇಗನೇ ವಾಪಸಾದಾಗ ತಂಡ ಆತಂಕಕ್ಕೆ ಒಳಗಾಯಿತು.  
ನಂತರ ಯಾರಿಗೂ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಕಿಶೋರ ಕಾಮತ್ ಹೊರತುಪಡಿಸಿದರೆ ಇತರ ಯಾರಿಗೂ ಎರಡಂಕಿ ಮೊತ್ತ ದಾಟಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌
ಮಿಲನ್ ವಾರಿಯರ್ಸ್‌:
20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 140 (ಜೀಶನ್ ಅಲಿ ಸೈಯದ್ 24, ಸಮರ್ಥ ಊಟಿ 39, ಇಷ್ಫಾಕ್ ನಾಸಿರ್ 29; ನವೀನ ಗಡದಿನ್ನಿ 32ಕ್ಕೆ2, ರಾಹುಲ್ ನಾಯಕ್‌ 24ಕ್ಕೆ2); ಕರಾವಳಿ ಕಿಂಗ್ಸ್‌: 10.5 ಓವರ್‌ಗಳಲ್ಲಿ 51ಕ್ಕೆ ಆಲೌಟ್‌ (ಇಶ್ಫಾಕ್‌ ನಾಸಿರ್‌ 23ಕ್ಕೆ3, ಆನಂದ ಕಮ್ಮಾರ 3ಕ್ಕೆ3).

ಟೂರ್ನಿಯ ಶ್ರೇಷ್ಠ ಆಟಗಾರ ಕಿಶೋರ
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಲ್ಲೂ ಉತ್ತಮ ಪ್ರದರ್ಶನ ನೀಡಿದ ಕರಾವಳಿ ಕಿಂಗ್ಸ್‌ ನಾಯಕ ಕಿಶೋರ ಕಾಮತ್‌ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ (₹ 15 ಸಾವಿರ) ಪ್ರಶಸ್ತಿ ತಮ್ಮದಾಗಿಸಿಕೊಂಡರು. ಫೈನಲ್‌ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಇಷ್ಫಾಕ್ ನಾಸಿರ್‌ (₹ 1500) ಅವರ ಪಾಲಾಯಿತು. ಸಮರ್ಥ ಊಟಿ ಉತ್ತಮ ಬ್ಯಾಟ್ಸ್‌ಮನ್‌ (₹ 10 ಸಾವಿರ), ಇಷ್ಫಾಕ್ ನಾಸಿರ್‌ ಉತ್ತಮ ಬೌಲರ್‌ (₹ 10 ಸಾವಿರ), ಸ್ವಪ್ನಿಲ್ ಯಳವೆ ಭರವಸೆಯ ಆಟಗಾರ (₹ 7500) ಪ್ರಶಸ್ತಿ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT