ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಯಾದಗಿರಿ ಬಂದ್‌ಗೆ ವಕೀಲರ ಕರೆ

Last Updated 16 ಜನವರಿ 2017, 6:52 IST
ಅಕ್ಷರ ಗಾತ್ರ

ಯಾದಗಿರಿ: ‘ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಜ.9ರಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಮತ್ತು ಸರ್ಕಾರದ ಕಡೆಯಿಂದ ಸಕಾರಾತ್ಮಕ ಸ್ಪಂದನೆ ಸಿಗದೇ ಇರುವುದರಿಂದ ಜ.17ರಂದು ಯಾದಗಿರಿ ಬಂದ್‌ಗೆ ವಕೀಲರ ಸಂಘ ಕರೆಕೊಟ್ಟಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಇಟಿಗಿ ತಿಳಿಸಿದರು.

ವಕೀಲರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ 2010ನೇ ಸಾಲಿನ ಹಣಕಾಸು ವರ್ಷದಲ್ಲಿ ಜಿಲ್ಲಾ ನ್ಯಾಯಾಲಯ ನಿರ್ಮಾಣಕ್ಕೆ ಸರ್ಕಾರ ₹ 15 ಕೋಟಿ ಅನುದಾನ ಮಂಜೂರು ಮಾಡಿದೆ. ಆದರೆ, ನಿವೇಶನ ಕೊರತೆಯಿಂದಾಗಿ ನ್ಯಾಯಾಲಯ ನಿರ್ಮಾಣ ಕಾರ್ಯ ನನಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಕೀಲರಿಗೆ, ಕಕ್ಷಿದಾರರಿಗೆ ಸೌಕರ್ಯ ಸಹಿತ ಸುಸಜ್ಜಿತ ನ್ಯಾಯಾಲಯ ಕಟ್ಟಡ ಸಿಗದಂತಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿದ್ದ ಜಿಲ್ಲಾಧಿಕಾರಿ ಮನೋಜ್‌ಜೈನ್‌ ಚಿತ್ತಾಪುರ ರಸ್ತೆಯಲ್ಲಿರುವ ಮಿನಿ ವಿಧಾನಸೌಧ ಬಳಿ ಇರುವ 20.5 ಎಕರೆ ಜಾಗವನ್ನು ನ್ಯಾಯಾಲಯ ನಿರ್ಮಾಣಕ್ಕೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇಂದು ಅಲ್ಲಿ 5 ಎಕರೆ ಸ್ಮಶಾನ ಇದೆ ಎನ್ನುತ್ತಿದ್ದಾರೆ. ಉಳಿದ 15 ಎಕರೆಯಲ್ಲಿ 5 ಎಕರೆ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಕೋರ್ಟ್ ನಿರ್ಮಾಣಕ್ಕಾಗಿ ಮೀಸಲಿರಿಸಿದ್ದಾರೆ.

ಈಗ ಅಲ್ಲಿರುವುದು ಕೇವಲ 10 ಎಕರೆ. ಆದರೆ, ನ್ಯಾಯಾಲಯ ನಿರ್ಮಾಣಕ್ಕೆ ಕನಿಷ್ಠ 22 ಎಕರೆ ಬೇಕು. ಅಷ್ಟೊಂದು ಭೂಮಿ ಇಲ್ಲ ಅಂದಾಗ ಹೈದರಾಬಾದ್‌ ಸಂಪರ್ಕ ರಸ್ತೆಯಲ್ಲಿರುವ ಭೂಮಿಯಲ್ಲಿ 22 ಎಕರೆ ನೀಡುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದರೆ, ಆ ಜಾಗ ನ್ಯಾಯಾಲಯ ವಿಚಾರಣೆ ಎದುರಿಸುತ್ತಿರುವುದರಿಂದ ಅಲ್ಲಿ ಜಾಗ ಸದ್ಯಕ್ಕೆ ಸಿಗುವುದು ಕಷ್ಟ. ಆದರೂ, ಜಿಲ್ಲಾಡಳಿತ ಅದೇ ಜಾಗವನ್ನು ನೀಡಿದರೂ ವಕೀಲರ ಸಂಘ ಒಪ್ಪಿಕೊಳ್ಳಲಿದೆ. ಆದರೆ, ಯಾವುದೇ ಭರವಸೆ ನೀಡದೇ  ತಕ್ಷಣ ಜಾಗವನ್ನು ನ್ಯಾಯಾಂಗ ಇಲಾಖೆಗೆ ಪರಿವರ್ತಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಜ.17ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌ ಮಾಡಲಾಗುವುದು. ಬಂದ್‌ಗೆ ಒಟ್ಟು 35 ಸಂಘಟನೆಗಳು ಬಂದ್‌ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT