ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಶುರುವಾಯ್ತು ನೀರಿನ ಬವಣೆ!

ಜಿಲ್ಲಾ ಕೇಂದ್ರದಲ್ಲೇ ಬಗೆಹರಿಯದ ಸಮಸ್ಯೆ, ಮಂದಗತಿಯಲ್ಲಿ ನೀರು ಸೋರಿಕೆ ತಡೆ ಕ್ರಮ
Last Updated 16 ಜನವರಿ 2017, 6:59 IST
ಅಕ್ಷರ ಗಾತ್ರ

ಹಾವೇರಿ: ‘ಮಕರ ಸಂಕ್ರಾಂತಿ’ಗೆ ನಾಡಿನೆಲ್ಲೆಡೆ ನದಿ ನೀರಿನಲ್ಲಿ ‘ಪುಣ್ಯ ಸ್ನಾನ’ ಮಾಡಿ ಹಬ್ಬ ಆಚರಿಸುತ್ತಾರೆ. ಈ ಬಾರಿ ಬರದ ಪರಿಣಾಮ ಕೆಲವೆಡೆ ಅದಕ್ಕೂ ತತ್ವಾರ ಉಂಟಾಗಿತ್ತು. ಆದರೆ, ಮಕರ ಸಂಕ್ರಾಂತಿ ಸಡಗರದ ಬಳಿಕ ಚಳಿ ದೂರವಾಗಿ ಬೇಸಿಗೆಯ ಅಬ್ಬರ ಶುರುವಾಗುತ್ತದೆ.

ಬೇಸಿಗೆ ಬಂದರೆ ಹಾವೇರಿ ನಗರದ ಜನತೆಗೆ ನೀರಿನದ್ದೇ ಧ್ಯಾನ. ಬರದ ಪರಿಣಾಮ ಈ ಬಾರಿ ನೀರಿನ ಬವಣೆ ಇನ್ನಷ್ಟು ಹೆಚ್ಚುವ ಆತಂಕ. ಜಿಲ್ಲಾ ಕೇಂದ್ರವಾಗಿ 20 ವರ್ಷ ಸಮೀಪಿಸುತ್ತಿದ್ದರೂ ನಗರದ ನೀರಿನ ಬವಣೆ ನೀಗಿಲ್ಲ. ಈ ಬಾರಿ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹೆಚ್ಚಿದೆ. 

ನಗರದ ಕುಡಿಯುವ ನೀರಿನ ಬೇಡಿಕೆಯು ಪ್ರತಿನಿತ್ಯ ಸುಮಾರು 90 ಲಕ್ಷ ಲೀಟರ್ ಇದೆ. ಆದರೆ, ನೀರು ಸಂಗ್ರಹ –ಪೂರೈಕೆ ಸಾಮರ್ಥ್ಯ ಸುಮಾರು 50 ಲಕ್ಷ ಲೀಟರ್ ಮಾತ್ರ. ವರದಾ ಮತ್ತು ತುಂಗಭದ್ರಾ ನದಿಗಳ ಕರ್ಜಗಿ ಮತ್ತು ಕೆಂಚಾರಗಟ್ಟಿಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ಅತ್ತ ವರದೆಯಲ್ಲಿ ನೀರು ಬತ್ತಿದರೆ, ಇತ್ತ ತುಂಗಭದ್ರಾ ನದಿಯಲ್ಲಿ ಮರಳಿನ ಬ್ಯಾರೇಜು ಸಿದ್ಧಪಡಿಸಲಾಗಿದೆ. ಆದರೆ, ಭದ್ರಾ ಜಲಶಯದಿಂದ ತುಂಗಭದ್ರಾ ನದಿಯ ಕೆಂಚಾರಗಟ್ಟಿಗೆ ಸುಮಾರು 219 ಕಿ.ಮೀ. ದೂರವಿದೆ.

ನದಿಯ ಈ ಹರಿವಿನ ಹಾದಿಯಲ್ಲಿ ನಾಲ್ಕು ಜಿಲ್ಲೆಗಳ ವಿವಿಧ ಪಟ್ಟಣ, ಜನವಸತಿಗಳಿಗೆ ಪೂರೈಸಲು ನೀರೆತ್ತಲಾಗುತ್ತದೆ. ಕೆಲವು ಕೈಗಾರಿಕೆಗಳೂ ಇವೆ. ಈ ನಡುವೆ ಪ್ರತಿವರ್ಷ ಸುಮಾರು 60 ಸಾವಿರ ಪಂಪ್‌ಸೆಟ್‌ಗಳು  ಅನಧಿಕೃತವಾಗಿ ನೀರೆತ್ತುತ್ತವೆ. 

ನಗರ ವ್ಯಾಪ್ತಿಯಲ್ಲೇ ಹಗ್ಗೇರಿ, ದುಂಡಿ ಬಸವೇಶ್ವರ, ಅಕ್ಕಮಹಾದೇವಿ ಹೊಂಡ, ಮುಲ್ತಾನ್, ಆಲನ್‌  ಸೇರಿದಂತೆ 6ಕೆರೆಗಳಿವೆ. ಆದರೆ, ಅವುಗಳಿಗೆ ನೀರು ಭರ್ತಿ ಮಾಡಿಲ್ಲ. ಇಡೀ ನಗರಕ್ಕೆ ನೀರು ಪೂರೈಸಬಹುದಾದ ಹೆಗ್ಗೇರಿ ಕೆರೆಯೇ ಭಣಗುಟ್ಟುತ್ತಿದ್ದು, ಕ್ರಿಕೆಟ್‌, ಕೊಬ್ಬರಿ ಹೋರಿ, ಚಕ್ಕಡಿ ಓಟದ ಅಂಗಣವಾಗಿದೆ.

ಅದೇ ರಾಗ ಅದೇ ಹಾಡು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಪಕ್ಷಗಳೂ ವಿವಿಧ ಸಂದರ್ಭಗಳಲ್ಲಿ ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿದಿವೆ. ಆದರೆ, ಸಾಕಷ್ಟು ಜಲಸಂಪನ್ಮೂಲಗಳಿದ್ದರೂ ಜಿಲ್ಲೆಯನ್ನು ಪ್ರತಿನಿಧಿಸಿದ ನಾಯಕರಿಗೆ ಎರಡು ದಶಕದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಕೇವಲ 74 ಸಾವಿರ ಜನಸಂಖ್ಯೆಯ ನಗರಕ್ಕೆ ವಾರಕ್ಕೆರಡು ದಿನ  ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.

ಕೆಂಚಾರಗಟ್ಟಿ ಹಾಗೂ ಕರ್ಜಗಿ ಜಾಕ್‌ವೆಲ್‌ಗಳಲ್ಲಿ 24X7 ನಿರಂತರವಾಗಿ ನೀರು ಪೂರೈಸುವ ‘ಪರ್ಯಾಯ’ ಪಂಪ್‌ಗಳ ವ್ಯವಸ್ಥೆಯನ್ನೂ ಮಾಡಿಲ್ಲ. ಪಂಪ್ ಖರೀದಿ ಹಾಗೂ ದುರಸ್ತಿಗಾಗಿ ‘ಬಿಲ್’ ಮಂಜೂರಿಯೇ ನಗರಸಭೆಯ ಸಾಧನೆಯಾಗಿದೆ. ಈ ಹಿಂದೆ ಕೆಂಚಾರಗಟ್ಟಿಯಿಂದ ಹೆಗ್ಗೇರಿ ಕೆರೆಗೆ ನೀರು
ಹರಿಸುವ ಯೋಜನೆ ರೂಪಿಸಲಾಗಿತ್ತು. ಕೋಟ್ಯಂತರ ರೂಪಾಯಿ ಖರ್ಚಾಯಿತೇ ವಿನಹ ಜನತೆಗೆ ಪ್ರಯೋಜನ ಲಭಿಸಿಲ್ಲ. ಕೆರೆ ಮಾತ್ರ ಭಣಗುಟ್ಟುತ್ತಿದೆ. ಈಗ ತುಂಗಭದ್ರಾ ಮೇಲ್ದಂಡೆ ಕಾಲುವೆಯಿಂದ ನೀರು ಪೂರೈಸುವ ಯೋಜನೆ ಸಾಗಿದೆ.

24X7 ಕುಡಿಯುವ ನೀರಿನ ಯೋಜನೆಯ ಬಗ್ಗೆ ಭರಪೂರ ಭರವಸೆಗಳು ದೊರಕಿವೆ. ಆದರೆ, ಚಾಲನೆಯ ದಿನ ಮಾತ್ರ ಯಕ್ಷಪ್ರಶ್ನೆಯಾಗಿದೆ. ನಗರದಲ್ಲಿ 320 ಕೊಳವೆಬಾವಿಗಳಿದ್ದರೂ, ವೈಯಕ್ತಿಕ ಬಳಕೆ ಹಾಗೂ ವ್ಯರ್ಥ ಆಗುತ್ತಿರುವುದೇ ಹೆಚ್ಚು. ಹಾವೇರಿ ನಗರ ನೀರು ಪೂರೈಕೆ ಪೈಪ್‌ಲೈನ್ ಗುತ್ತಲದಲ್ಲಿ ಈಚೆಗೆ ಒಡೆದು ಹೋಗಿ  ಒಂದು ವಾರ ನೀರು ಕಾರಂಜಿಯಂತೆ ನೀರು ಚಿಮ್ಮುತ್ತಿತ್ತು. ನೀರು ಸೋರಿಕೆ ತಡೆ ಕ್ರಮವು ಮಂದಗತಿಯಲ್ಲಿದೆ.

ಕೇವಲ 31 ವಾರ್ಡ್‌ಗಳ, 14 ಸಾವಿರ ಮನೆಗಳ, 74 ಸಾವಿರ ಜನಸಂಖ್ಯೆಯ ನಗರದ ಕುಡಿಯುವ ನೀರಿನ ಬವಣೆ. ಈ ವರ್ಷಾಂತ್ಯದೊಳಗೆ ಹೆಗ್ಗೇರಿ ಕೆರೆಯ ಹೂಳು ತೆಗೆದು, ಯುಟಿಪಿ ನೀರು ಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದ್ದಾರೆ. ಬೇಸಿಗೆ ಆರಂಭದೊಂದಿಗೆ ಜನರ ಬೇಡಿಕೆ –ಬವಣೆಯೂ ಹೆಚ್ಚಿದೆ. ನೀರು ನಗರ ಜನತೆಯನ್ನು ಕಾಡುವ ‘ನಿತ್ಯ ಮಾಯೆ’ಯಾಗಿದೆ. ಹಣ ಹರಿದು ‘ವ್ಯಯ’ವಾಗುತ್ತಲೇ ಇದೆ.

ಕೋಟ್ಯಂತರ ಖರ್ಚು!
ನಗರಸಭೆ ಮಾಹಿತಿ ಪ್ರಕಾರ ನಗರಕ್ಕೆ ಪ್ರತಿನಿತ್ಯ ಸುಮಾರು 50 ಲಕ್ಷ ಲೀಟರ್ ನೀರು ಪೂರೈಸ ಲಾಗುತ್ತಿದೆ.  ಅದಕ್ಕಾಗಿ ಬಜೆಟ್‌ನಲ್ಲಿ ವಾರ್ಷಿಕ ₹2.78 ಕೋಟಿ ಅನುದಾನ ಹಾಗೂ ವೇತನ, ಇತರ ಯೋಜನೆಗಳ ಹಣವನ್ನು ಖರ್ಚು ಮಾಡಲಾ ಗುತ್ತಿದೆ. ಅಲ್ಲದೇ, ಕರ ಮೂಲಕ ಸುಮಾರು ₹1.36 ಕೋಟಿ ಆದಾಯ ನಿರೀಕ್ಷಿಸ ಲಾಗಿದೆ. ಆದರೂ, ನೀರಿನ ಬವಣೆ ನೀಗಿಲ್ಲ. ನಿತ್ಯ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ.

*
ಹಾವೇರಿ ನಗರದಲ್ಲಿ ನೀರಿ ಗಿಂತ ನೀರಿನ ಹೆಸರಿಲ್ಲಿ ಹಣ ಹರಿದು ಹೋಗಿದೆ. ಆದರೆ, ನೀರಿನ ಬವಣೆ ನಿಂತಿಲ್ಲ. ಜನಪ್ರತಿನಿಧಿ, ಅಧಿ ಕಾರಿಗಳಿಗೆ ‘ಬರ’ವೇ ‘ವರ’ದಂತಿದೆ.
-ಶಿವಯೋಗಿ ಬೆನ್ನೂರ,
ಬಸವೇಶ್ವರ ನಗರ ‘ಸಿ’ ಬ್ಲಾಕ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT