ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜದ ಉಂಡೆ ಹಾಕುವ ಮೂಲಕ ಹೊಸ ಯತ್ನ

ಕೊಂಗಾಡಿಯಪ್ಪ ಪದವಿ ಕಾಲೇಜಿನ ಎನ್‌ಎಸ್‌ಎಸ್‌ ವತಿಯಿಂದ, ಪರಿಸರ ಜಾಗೃತಿಗಾಗಿ ಕಾಲ್ನಡಿಗೆ ಜಾಥಾ
Last Updated 16 ಜನವರಿ 2017, 7:07 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೊಂಗಾಡಿಯಪ್ಪ ಪದವಿ ಕಾಲೇಜಿನ ರಾಷ್ಟ್ರಿಯ ಸೇವಾ ಯೋಜನಾ ಘಟಕ (ಎನ್‌ಎಸ್‌ಎಸ್‌)  ವತಿಯಿಂದ ತಿಪ್ಪೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾಲ್ನಡಿಗೆ ಜಾಥಾ ಮತ್ತು ಗುಂಡುತೋಪುಗಳಲ್ಲಿ ಬೀಜದ ಉಂಡೆಗಳನ್ನು ಹಾಕುವ ಕಾರ್ಯಕ್ರಮ ನಡೆಯಿತು.

ಜಾಥಾವನ್ನು ಸಹಾಯಕ ಆರಣ್ಯ ಸಂರಕ್ಷಣಾ ಅಧಿಕಾರಿ ಎಸ್. ನಾಗೇಶ್ ಹಾಗೂ ಶಿಬಿರದ ಕಾರ್ಯಕ್ರಮ ಅಧಿಕಾರಿ ಪ್ರೊ.ಚಂದ್ರಪ್ಪ ಉದ್ಘಾಟಿಸಿದರು.
ಶಿಬಿರದಲ್ಲಿ ಬೀಜದ ಉಂಡೆಗಳನ್ನು ವಿಶೇಷ ಕುರಿತು ಮಾತನಾಡಿದ ಯುವ ಸಂಚಲನದ ಚಿದಾನಂದ ಮೂರ್ತಿ, ಬೀಜದ ಉಂಡೆ ಹಾಕುವಂತಹ ಹೊಸ ಪ್ರಯತ್ನವನ್ನು ಮಾಡಲಾಯಿತು.

ಈ ಬೀಜದ ಉಂಡೆಗಳನ್ನು ಕೆಮ್ಮಣ್ಣಿನಲ್ಲಿ ಹದವಾಗಿ ಕಲಸಿಕೊಂಡು ಅದರಲ್ಲಿ ಕಾಡಿನ ಬೀಜವನ್ನು ಇಟ್ಟು ಉಂಡೆಯ ರೂಪವನ್ನು ಕೊಟ್ಟು ನಂತರ ನೆರಳಿನಲ್ಲಿ ಒಣಗಿಸಿ  ಗಟ್ಟಿಯಾದ ಮೇಲೆ ಇವುಗಳನ್ನು ಎಲ್ಲಿಬೇಕಾದರೂ ಇಡಬಹುದು ಅಥವಾ ಎಸೆಯಬಹುದು. ಇವು ಮಳೆ ಆಶ್ರಯವಿಲ್ಲದೆ ಬರಗಾಲದಲ್ಲೂ ಮೂರು ನಾಲ್ಕು ವರ್ಷಗಳವರೆಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತವೆ. ಮಳೆ ಬಂದ ತಕ್ಷಣ ಮಣ್ಣಿನ ಉಂಡೆ ತೇವಾಂಶವನ್ನು ಹೀರಿಕೊಂಡು ಮೊಳಕೆ ಒಡೆಯಲು ಪ್ರಾರಂಭಿಸುತ್ತವೆ.

ಈ ರೀತಿ ಮೊಳಕೆ ಒಡೆದ ಉಂಡೆಗಳಿಗೆ ಯಾವುದೇ ಪೋಷಣೆ ಬೇಕಾಗಿರುವುದಿಲ್ಲ. ನಿರುಮ್ಮಳವಾಗಿ ಬೇರುಬಿಟ್ಟು ಬೆಳೆಯುತ್ತವೆ. ಅರಣ್ಯೀಕರಣಕ್ಕೆ ಇದು ಉತ್ತಮ ಮಾರ್ಗವಾಗಿದೆ. ಇದನ್ನು ಅಕಾಲಿಕವಾಗಿ ಗಿಡ ನೆಡುವವರೂ ಈ ಪ್ರಯೋಗದ ಮೂಲಕ ಬೀಜ ಬಿತ್ತಿದರೆ ಒಂದಷ್ಟು ಕಾಡಿನ ಮರಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಶ್ರಮ ಸಮಯ ಮತ್ತು ಖರ್ಚು ಉಳಿತಾಯವಾಗುತ್ತದೆ. ಗಿಡ ನೆಡವುದಕ್ಕಿಂತ ಇದು ಉತ್ತಮವಾದ ಪ್ರಯತ್ನವಾಗಿದೆ ಎಂದರು.

ಜಾಥವನ್ನು ಉದ್ದೇಶಿಸಿ ಮಾತನಾಡಿದ  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ನಾಗೇಶ್, ಮನುಷ್ಯನಿಗೆ ಆಹಾರ, ನಿದ್ದೆ, ಜೊತೆಗೆ ಗಾಳಿ ಮುಖ್ಯ. ಆಹಾರ ಮತ್ತು ನಿದ್ದೆಗಳನ್ನು ಗಂಟೆಗಳ ಗಟ್ಟಲೆ ತಡೆದು ಬದುಕಬಹುದು. ಆದರೆ ಗಾಳಿಯನ್ನು ತಡೆದು ಬದುಕಲು ನಿಮಿಷಗಳಷ್ಟೇ ಸಾಕಾಗುತ್ತದೆ. ಇಂಥ ಗಾಳಿಯ ಮೂಲ ಪ್ರಕೃತಿಯಲ್ಲಿ ಮರ ಗಿಡಗಳು. ಇವುಗಳ ಅಸ್ತಿತ್ವವನ್ನು ಇಲ್ಲವಾಗಿಸಿದರೆ ಮನುಷ್ಯನಿಗೆ ಪ್ರಾಣಾಂತಿಕವಾದ ಅಪಾಯ ಕಾದಿರುತ್ತದೆ ಎಂದರು.

ಪ್ರಗತಿಯ ಹೆಸರಿನಲ್ಲಿ ಮಾರಣ ಹೋಮಕ್ಕೆ ಒಳಗಾಗುವ ಮರಗಿಡಗಳನ್ನು ಮತ್ತೆ ಮರು ಸೃಷ್ಟಿಸುವ ಹೊಣೆ ಕೇವಲ ಅರಣ್ಯ ಇಲಾಖೆಗಷ್ಟೇ ಸೀಮಿತ ವಾಗಬಾರದು.
ಕಾಡಿನ ವಾತಾವರಣವನ್ನು ಹುಟ್ಟು ಹಾಕವ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಅದರಂತೆ ಉಂಡೆ ಬೀಜದ ಪ್ರಯತ್ನ ಮರಗಳನ್ನು ಬೆಳೆಸುವ ತಂತ್ರದಲ್ಲಿ ತುಂಬಾ ಯೋಗ್ಯವಾದ ಹೊಸ ಪರಿಕಲ್ಪನೆಯಾಗಿದೆ ಎಂದರು.

ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಪ್ರೊ.ಚಂದ್ರಪ್ಪ ಮಾತನಾಡಿ, ಮಣ್ಣಿನ  ಉಂಡೆ ಬೀಜದ ಮೂಲಕ ಅರಣ್ಯೀಕರಣದ ಪರಿಕಲ್ಪನೆ ತುಂಬಾ ಸರಳ ಮತ್ತು ಉಪಯುಕ್ತವಾದದ್ದು. ನಾವು ಪ್ರತಿ ವಾರ್ಷಿಕ ಯುವ ಜನ ಸೇವಾ ಶಿಬಿರಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಮಾಡುತ್ತಿದ್ದೆವು. ಅವುಗಳಿಗೆ ನಾವು ಇರುವ ತನಕ ಪೋಷಣೆ ಮಾಡುತ್ತಿದ್ದು ಶಿಬಿರ ಮುಗಿದ ನಂತರ ಅವುಗಳನ್ನು ನೋಡಿಕೊಂಡರೆ ಉಳಿಯುತ್ತಿದ್ದವು, ಇಲ್ಲದಿದ್ದರೆ ಅಳಿಯುತ್ತಿದ್ದವು.

ಆದರೆ ಮಣ್ಣಿನ ಉಂಡೆಗಳಲ್ಲಿ ಕಾಡಿನ ಬೀಜಗಳನ್ನು ಇಟ್ಟು ನೆರಳಿನಲ್ಲಿ ಒಣಗಿಸಿ ಗೋ ಮಾಳದಲ್ಲೋ ಗುಂಡು ತೋಪಿನಲ್ಲೋ ಎಸೆಯುವುದರಿಂದ ಮಳೆಗಾಲ ಬಂದಾಗ ಬೇರು ಬಿಟ್ಟು ಸ್ವತಂತ್ರವಾಗಿ ಸಸಿಗಳು ಬೆಳೆಯುತ್ತವೆ. ಇದರಿಂದ ಕಡಿಮೆ ಶ್ರಮದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.

ಈ ಕಾರ್ಯ ಕ್ರಮದಲ್ಲಿ ಪ್ರೊ.ರಂಗಸ್ವಾಮಿ ಬೆಳಕವಾಡಿ,ಎನ್ ಎಸ್ ಎಸ್ ಸಹಾಯಕ ಅಧಿಕಾರಿ ನಾರಾಯಣಸ್ವಾಮಿ, ಮುರುಳಿ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT