ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳಿ ಕೈಗೆ ಬರೋದ್ರಾಗ್ ಮಳಿ ಮಾಯ ಆಗತೈತಿ’

ಆರ್ಥಿಕ ಸಂಕಷ್ಟದಲ್ಲಿ ರೈತರು *ಪರಿಹಾರಕ್ಕೆ ಒತ್ತಾಯ * ನೀರಾವರಿ ಯೋಜನೆಗೆ ಆಗ್ರಹ * ತಂಡದಿಂದ ಪರಿಶೀಲನೆ
Last Updated 16 ಜನವರಿ 2017, 7:20 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಅಷ್ಟಿಷ್ಟ ಮಳಿ ಬರತೈತಿ, ಸಾವಿರಾರ ರೂಪಾಯಿ ಖರ್ಚ್ ಮಾಡಿ ಬಿತ್ತನೆ ಮಾಡತೇವಿ, ಬೆಳಿ ಮೊಳಕಾಲುದ್ದ ಬರೋದ್ರಾಗ್ ಮಳಿ ಮಾಯಾ ಆಗತೈತಿ, ಬೆಳಿ ನಷ್ಟ ಆಗತೈತ್ರಿ, ನಾಲ್ಕಾರ ವರ್ಷದಿಂದ ನಮ್ ಹಣೆಬರಹಾ ಇದ್ ಆಗೈತ್ರಿ, ಸರ್ಕಾರ ನಮ್ ಸಂಕಷ್ಟಕ್ಕ ಸ್ಪಂದಿಸತ್ತಿಲ್ರಿ...!’

ಭಾರತೀಯ ಜನತಾ ಪಕ್ಷದಿಂದ ರಾಜ್ಯದಾದ್ಯಂತ ಮೂರು ತಂಡಗಳಲ್ಲಿ ಕೈಗೊಂಡಿರುವ ಬರ ಅಧ್ಯಯನ ತಂಡಗಳಲ್ಲಿ ಒಂದಾದ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ನೇತೃತ್ವದ ತಂಡ ಭಾನುವಾರ ಹುಕ್ಕೇರಿ ತಾಲ್ಲೂಕಿನ ಬೋರಗಲ್, ಚಿಕ್ಕೋಡಿ ತಾಲ್ಲೂಕಿನ ಕುಂಗಟೋಳಿ, ನಾಗರಮುನ್ನೋಳಿ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ, ಒಣಗಿರುವ ಕೆರೆ ಕೊಳ್ಳಗಳ ವೀಕ್ಷಣೆ ಸಂದರ್ಭದಲ್ಲಿ ರೈತಾಪಿ ಜನರು ಅಳಲು ತೋಡಿಕೊಂಡ ಪರಿಯಿದು.

ಹುಕ್ಕೇರಿ ತಾಲ್ಲೂಕಿನ ಬೋರಗಲ್‌ ಗ್ರಾಮದ ಹೊಲವೊಂದರಲ್ಲಿ ತೆನೆ ಹಾಕಿದ ಗೋವಿನ ಜೋಳದ ಬೆಳೆ ನೀರಿನ ಆಭಾವದಿಂದ ಒಣಗಿ ಹೋಗಿರುವುದನ್ನು  ಜಗದೀಶ ಶೆಟ್ಟರ್ ವೀಕ್ಷಿಸಿದರು. ಅಲ್ಲಿಂದ ಚಿಕ್ಕೋಡಿ ತಾಲ್ಲೂಕಿನ ಕುಂಗಟೋಳಿ ಗ್ರಾಮ ವ್ಯಾಪ್ತಿಯ ಒಣಗಿದ ಕೆರೆಯನ್ನು ವೀಕ್ಷಿಸಿ ಗ್ರಾಮಸ್ಥರ ಅಹವಾಲು ಆಲಿಸಿದರು.

‘1972ರಲ್ಲಿ ನಿರ್ಮಾಣಗೊಂಡಿರುವ ಈ ಕೆರೆ ಕೇವಲ ಮೂರ್ನಾಲ್ಕು ವರ್ಷ ಮಾತ್ರ ತುಂಬಿದೆ. ಹೀಗಾಗಿ ಈ ಭಾಗದ ಜಮೀನುಗಳಿಗೆ ನೀರಾವರಿ ಸೌಕರ್ಯ ದೊರಕುತ್ತಿಲ್ಲ. ಸರ್ಕಾರ ನದಿಯಿಂದ ಈ ಕೆರೆಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಬೇಕು ಮತ್ತು ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಬೇಕು’ ಎಂದು ಗ್ರಾಮಸ್ಥರು ಜಗದೀಶ ಶೆಟ್ಟರ್‌ ಅವರಿಗೆ ಮನವಿ ಮಾಡಿಕೊಂಡರು.

ಅಥಣಿ ಶಾಸಕ ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಾಗರಾಜ್‌ ತಂಡದಲ್ಲಿದ್ದರು. ಬೆಳಗಾವಿ ಜಿಲ್ಲಾ ಬಿಜೆಪಿ ಉಸ್ತುವಾರಿ ಈರಣ್ಣ ಕಡಾಡಿ,  ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹೇಶ ಭಾತೆ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ನಾಗೇಶ ಕಿವಡ ಹಾಗೂ ಕೃಷಿಕರು ತಂಡಕ್ಕೆ ಅಗತ್ಯ ಮಾಹಿತಿ ನೀಡಿದರು.

ನೀರು ಬಿಡುಗಡೆಗೆ ಮನವಿ
ನಿಪ್ಪಾಣಿ:
‘ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ವೇದಗಂಗಾ ನದಿಗೆ 4 ಟಿಎಂಸಿ ಅಡಿ ಬದಲಾಗಿ 6 ಟಿಎಂಸಿ ಅಡಿ ನೀರು ಹರಿಸಲು ರಾಜ್ಯ ಸರ್ಕಾರದ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬರಗಾಲ ವೀಕ್ಷಣೆ ಮಾಡಿ ಭಾನುವಾರ ಸಂಜೆ ಸಮೀಪದ ಭಿವಶಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ರಾಜ್ಯದಲ್ಲಿ 165 ತಾಲ್ಲೂಕುಗಳು ಭೀಕರವಾದ ಬರಗಾಲ ಪರಿಸ್ಥಿತಿ ಎದುರಿಸುತ್ತಿದ್ದು ರಾಜ್ಯ ಸರ್ಕಾರ ಕೇವಲ 139 ತಾಲ್ಲೂಕಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿದೆ. ಇನ್ನೂ 25 ತಾಲ್ಲೂಕುಗಳನ್ನು ಸೇರಿಸಬೇಕು ಎಂದು ಆಗ್ರಹಿಸಿದರು.

ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ‘ಕ್ಷೇತ್ರದ ತವಂದಿ, ಗವಾಣಿ, ಗಾಯಕನವಾಡಿ, ಬುದಲಮುಖ, ಅಮಲಝರಿ ಮೊದಲಾದ 14 ಹಳ್ಳಿಗಳು ವೇದಗಂಗಾ ನದಿ ಹತ್ತಿರವಿದ್ದರೂ ನೀರಾವರಿ ಯೋಜನೆಗಳಿಲ್ಲದೆ ಜನರು ಗುಳೆ ಹೊರಟಿದ್ದಾರೆ. ಒಪ್ಪಂದದ ಪ್ರಕಾರ ಮಹಾರಾಷ್ಟ್ರದಿಂದ 4 ಟಿಎಂಸಿ ಅಡಿ ನೀರು ಸಮರ್ಪಕವಾಗಿ ಬರುತ್ತಿಲ್ಲ ಎಂದು ಹೇಳಿದರು.

ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಸಂಜಯ ಶಿಂತ್ರೆ ಸ್ವಾಗತಿಸಿದರು. ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಸಹಕಾರ ಧುರೀಣ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಾಗರಾಜ, ಚಿಕ್ಕೋಡಿ ಘಟಕ ಅಧ್ಯಕ್ಷ ಶಶಿಕಾಂತ ನಾಯಿಕ, ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣಾ ಕಡಾಡಿ ಉಪಸ್ಥಿತರಿದ್ದರು.

ಗೋಶಾಲೆ ತೆರೆಯಲು ಆಗ್ರಹ
ರಾಯಬಾಗ:
ತಾಲ್ಲೂಕಿನಲ್ಲಿ ತೀವ್ರ ಬರ ಇರುವದರಿಂದ ಜನಜಾನುವಾರುಗಳಿಗೆ ಕುಡಿಯುವ ನೀರು, ಮೇವಿಗೆ ಕೊರತೆಯಾಗದಂತೆ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಬೇಕು. ಎಲ್ಲೆಲ್ಲಿ ಮೇವು ಬ್ಯಾಂಕ್ ಸ್ಥಾಪಿಸಬೇಕು, ಗೋಶಾಲೆಗಳನ್ನು ತೆರೆಯಬೇಕು ಎಂಬುದರ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ತಹಶೀಲ್ದಾರರಿಗೆ ಸೂಚಿಸಿದರು.

ಭಾನುವಾರ ತಾಲ್ಲೂಕಿನ ಬೆಂಡವಾಡ ಗ್ರಾಮದಲ್ಲಿ ಮಳೆ ಇಲ್ಲದೆ ಒಣಗಿದ ರೈತರ ಬೆಳೆಗಳನ್ನು ವೀಕ್ಷಿಸಿ ಯಾವುದೇ ಪರಸ್ಥಿತಿಯಲ್ಲಿ ಜನತೆಗೆ ಕುಡಿಯುವ ನೀರಿನ ಹಾ ಗೂ ಜಾನುವಾರಗಳಿಗೆ ಮೇವಿನ ಕೊರತೆ ಆಗಬಾರದು ಎಂದು ತಾಲ್ಲೂಕು ಆಡಳಿತಕ್ಕೆ ವಿವರಿಸಿದರು.

ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ತಾಲ್ಲೂಕಿನ ದಕ್ಷಿಣ ಭಾಗದ 18  ಗ್ರಾಮಗಳಲ್ಲಿ ಬರದ ಛಾಯೆ ತೀವ್ರವಾಗಿದೆ. ಆದ್ದರಿಂದ ಈ ಭಾಗದಲ್ಲಿ ಶೀಘ್ರ ಮೇವು ಬ್ಯಾಂಕ್, ಗೋಶಾಲೆ ಆರಂಭಿಸುವಂತೆ ಒತ್ತಾಯಿಸಿದರು.

ಈ ಭಾಗದ ಗ್ರಾಮಗಳ 17 ಕೆರೆಗಳನ್ನು ತುಂಬಿಸಿದರೆ ಈ ಜನರಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸಲಹೆ ಮಾಡಿದರು.

ಶಾಸಕರಾದ ಲಕ್ಷ್ಮಣ ಸವದಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ನಾಯಿಕ, ಈರಣ್ಣ ಕಡಾಡಿ, ಬಸವರಾಜ ಸನದಿ, ಮಾಜಿ ಶಾಸಕ ಬಿ.ಸಿ. ಸರಿಕರ, ಸುರೇಶ ಚೌಗಲಾ, ಸದಾ ಹುಂಜಾಗೋಳ, ಸದಾ ಹಳಿಂಗಳಿ ಪಾಲ್ಗೊಂಡಿದ್ದರು.

ಶ್ವೇತಪತ್ರ ಹೊರಡಿಸಲಿ
ಚಿಕ್ಕೋಡಿ:
‘ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ನಿರ್ವಹಣೆಗಾಗಿ ಕಳೆದ ಅಕ್ಟೋಬರ್‌ನಿಂದ ಇಲ್ಲಿವರೆಗೆ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ ಮತ್ತು ಯಾವ ರೀತಿಯಲ್ಲಿ ಬರ ಕಾಮಗಾರಿಗಳನ್ನು ಕೈಗೊಂಡಿದೆ ಎಂಬುದರ ಕುರಿತು ಶ್ವೇತ ಪತ್ರ ಹೊರಡಿಸಲಿ’ ಎಂದು ಬಿಜೆಪಿ ಕೈಗೊಂಡಿರುವ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಹುಕ್ಕೇರಿ, ಚಿಕ್ಕೋಡಿ ತಾಲ್ಲೂಕುಗಳ ಬರಪೀಡಿತ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಒಂದು ಗೋಶಾಲೆ, ಮೇವು ಬ್ಯಾಂಕ್‌ ಸ್ಥಾಪನೆ ಮಾಡಿಲ್ಲ’ ಎಂದರು.

‘ಕೇಂದ್ರ ಸರ್ಕಾರ ನೀಡಿದ ಬೆಳೆ ಹಾನಿ ಪರಿಹಾರ ಧನವನ್ನೂ ಸಂತ್ರಸ್ಥ ರೈತರಿಗೆ ಸಮರ್ಪಕವಾಗಿ ವಿತರಿಸಿದ ರಾಜ್ಯ ಸರ್ಕಾರ, ಪ್ರಸಕ್ತ ಬರದಲ್ಲೂ ರೈತರ ಸಾಲ ಮನ್ನಾ ಮಾಡಲು ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಕೇಂದ್ರ ಸರ್ಕಾರ ಅರ್ಧದಷ್ಟು ಪರಿಹಾರ ನೀಡಿದರೆ ರಾಜ್ಯದ ರೈತರ ಕೃಷಿ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರವೂ ಅರ್ಧದಷ್ಟು ಹಣ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳುತ್ತಾರೆ.

ಈ ಕುರಿತು ಕೇಂದ್ರ ಸರ್ಕಾರಕ್ಕೆ ಒಂದು ಸಣ್ಣ ಪತ್ರ ಬರೆಯುವಂತೆ ವಿಧಾನಮಂಡಲದಲ್ಲಿ ತಾವೂ ಸರ್ಕಾರಕ್ಕೆ ಸೂಚನೆ ನೀಡಿದ್ದು, ಸರ್ಕಾರಕ್ಕೆ ಒಂದು ಪತ್ರವನ್ನೂ ಬರೆಯಲೂ ಆಗಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಒಂದು ಪತ್ರ ಬರೆದರೆ ಬಿಜೆಪಿ ಮುಖಂಡರ ನಿಯೋಗದೊಂದಿಗೆ ತೆರಳಿ ಸಾಲ ಮನ್ನಾ ಮಾಡಲು ಅರ್ಧದಷ್ಟು ಹಣ ಮಂಜೂರಿಗೆ ಪ್ರಯತ್ನಿಸುತ್ತೇವೆ ಎಂದು ಶೆಟ್ಟರ್‌ ಹೇಳಿದರು.

ತಪ್ಪು ಮಾಹಿತಿ: ತಹಶೀಲ್ದಾರ್‌ ತರಾಟೆಗೆ
ಹುಕ್ಕೇರಿ ತಾಲ್ಲೂಕಿನ ಬೋರಗಲ್‌ ಗ್ರಾಮಕ್ಕೆ ಬಿಜೆಪಿ ಬರ ಅಧ್ಯಯನ ತಂಡ ಭೇಟಿ ನೀಡಿದಾಗ ಅಲ್ಲಿನ ತಹಶೀಲ್ದಾರ್ ನಾಗನಗೌಡ ಪಾಟೀಲ ತಂಡ ನೇತೃತ್ವ ವಹಿಸಿದ್ದ ಜಗದೀಶ ಶೆಟ್ಟರ್‌ ಅವರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಇತರೆ ಜನಪ್ರತಿನಿಧಿಗಳಿಂದ ತರಾಟೆಗೆ ಒಳಗಾದರು.

ಜಗದೀಶ ಶೆಟ್ಟರ್‌ ಅವರು ಬರ ಪರಿಸ್ಥಿತಿ ಕುರಿತು ವಿಚಾರಣೆ ನಡೆಸುತ್ತಿದ್ದಾಗ ಮಧ್ಯೆ ಬಾಯಿ ಹಾಕಿದ ತಹಶೀಲ್ದಾರರು, ‘ ಸರ್, ಅಥಣಿ ಮತ್ತು ರಾಯಬಾಗ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ’ ಎಂದು ಹೇಳುತ್ತಿದ್ದಂತೆಯೇ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿ ನಿಮಗೆ ಸರಿಯಾದ ಮಾಹಿತಿ ಇಲ್ಲ ಎಂದರು. ಆದರೂ, ನಾಗನಗೌಡ ಪಾಟೀಲ ಅವರು, ‘ಸರ್ ನಾನು ತಹಶೀಲ್ದಾರ್ ಇದ್ದೇನೆ. ಅಥಣಿ ಮತ್ತು ರಾಯಬಾಗ ಮಾತ್ರ ಬರಪೀಡಿತ ಎಂದು ಘೋಷಣೆ ಆಗಿಲ್ಲ ಎಂಬ ಮಾಹಿತಿ ಇದೆ’ ಎಂದರು.

ಆಗ ಗರಂ ಆದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ‘ನಾನು ಎಂಎಲ್‌ಎ ನನಗೆ ಗೊತ್ತಿದೆ. ಚಿಕ್ಕೋಡಿ ತಾಲ್ಲೂಕು ಬರಪೀಡಿತ ಎಂದು ಘೋಷಣೆ ಆಗಿಲ್ಲ. ನಿವೇನು ಹೇಳುತ್ತೀರಿ’ ಎಂದು ತಹಶೀಲ್ದಾರರನ್ನು ತರಾಟೆಗೆ ತಗೆದುಕೊಂಡರು. ಅಥಣಿ ಶಾಸಕ ಲಕ್ಷ್ಮಣ ಸವದಿ ಅವರೂ ತಹಶೀಲ್ದಾರರನ್ನು ತರಾಟೆಗೆ ತಗೆದುಕೊಂಡರು.

*
ಕೊಳವೆ ಬಾವಿ ಕೊರೆಸಿದರೂ ಪಂಪಸೆಟ್‌ ಅಳವಡಿಸಿಲ್ಲ. ವಿದ್ಯುತ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಫಸಲು ಕೈಗೆ ಬಾರದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಚಿಕ್ಕೋಡಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ, ಕೃಷಿ ಸಾಲ ಮನ್ನಾ ಮಾಡಬೇಕು. ಗೋ ಶಾಲೆ ಸ್ಥಾಪನೆ ಮಾಡಬೇಕು.
-ಯಮುನವ್ವ,
ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT