ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ತಿಂಗಳ ಅವಧಿಯಲ್ಲಿ ಒಂದೇ ಪ್ರಕರಣ ದಾಖಲು

ಭ್ರಷ್ಟಾಚಾರ ನಿಗ್ರಹ ದಳದ ಠಾಣೆ ವಸತಿಗೃಹವೊಂದರಲ್ಲಿ ಕಾರ್ಯನಿರ್ವಹಣೆ: ಸಾರ್ವಜನಿಕರಲ್ಲಿ ಅರಿವಿನ ಕೊರತೆ
Last Updated 16 ಜನವರಿ 2017, 8:12 IST
ಅಕ್ಷರ ಗಾತ್ರ

ಕಾರವಾರ:  ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರಚಿಸಿದ್ದು, ರಾಜ್ಯದ ಹಲವೆಡೆ ಎಸಿಬಿ ತಂಡ ದಾಳಿ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಂದು ಪ್ರಕರಣ ಮಾತ್ರ ದಾಖಲಾಗಿದೆ. 

ಇಲ್ಲಿನ ಕಾಜುಬಾಗದ ಪೊಲೀಸ್‌ ವಸತಿಗೃಹವೊಂದರಲ್ಲಿ ಎಸಿಬಿ ಪೊಲೀಸ್‌ ಠಾಣೆ ಕಳೆದ ಐದು ತಿಂಗಳಿಂದ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿವೆ. ಠಾಣೆಗೆ ಈವರೆಗೆ 120 ದೂರು ಅರ್ಜಿಗಳು ಬಂದಿವೆ. ಆದರೆ ಅವುಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಅಡಿ ಬರದೇ ಇರುವ ಕಾರಣ ತಿರಸ್ಕೃತಗೊಂಡಿವೆ.

ಭಟ್ಕಳದ ಪುರಸಭೆಯ ಮುಖ್ಯಾಧಿಕಾರಿಯು ವ್ಯಕ್ತಿಯೊಬ್ಬರಿಂದ ₹ 4 ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖಾ ಹಂತದಲ್ಲಿದೆ.

ಎಸಿಬಿ ವ್ಯಾಪ್ತಿಗೆ ಬರುವ ಪ್ರಕರಣಗಳು: ‘ಯಾವುದೇ ಸರ್ಕಾರಿ ನೌಕರರು ನ್ಯಾಯಯುತವಾಗಿ ಮಾಡಬೇಕಾದ ಸಾರ್ವಜನಿಕ ಕೆಲಸಕ್ಕೆ ಹಣಕ್ಕಾಗಿ (ಲಂಚ) ಒತ್ತಾಯಿಸುವುದು, ಲಂಚ ಪಡೆ ಯುವುದು, ಲಂಚದ ರೂಪದಲ್ಲಿ ಬೇರೆ ಪ್ರತಿಫಲ ಪಡೆಯುವುದು, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಬೇರೆ ರೀತಿಯ ಅವ್ಯವಹಾರಗಳನ್ನು ನಡೆಸು ವುದು, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಗಳಿಕೆ ಮಾಡುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988 ಪ್ರಕಾರ ಅಪರಾಧ ವಾಗುತ್ತದೆ.

ಈ ಸಂಬಂಧ ದೂರುಗಳಿದ್ದರೆ ಸಾರ್ವಜನಿಕರು ನಮ್ಮ ಠಾಣೆಗೆ ಸಲ್ಲಿಸಬಹುದು’ ಎಂದು ಎಸಿಬಿ ಇನ್‌ಸ್ಪೆಕ್ಟರ್‌ ರಾಘವೇಂದ್ರ ಹಳ್ಳೂರ ‘ಪ್ರಜಾವಾಣಿ’ಗೆ ತಿಳಿಸಿದರು.


ಅರಿವಿನ ಕೊರತೆ: ‘ದಾಯಾದಿ ಕಲಹ, ಜಮೀನು ವ್ಯಾಜ್ಯ, ನ್ಯಾಯಾಲಯದಲ್ಲಿರುವ ಪ್ರಕರಣ ಮೊದಲಾದ ವೈಯಕ್ತಿಕ ವಿಷಯಗಳ ಬಗ್ಗೆ ಎಸಿಬಿ ಠಾಣೆಗೆ ದೂರು ನೀಡಲು ಅವಕಾಶವಿಲ್ಲ. ಇಂತಹ ವಿಷಯಗಳಲ್ಲಿ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಸಲ್ಲಿಸಬೇಕು. ಎಸಿಬಿ ಠಾಣೆಗೆ ಬಂದಿರುವ 120 ದೂರು ಅರ್ಜಿಗಳು ಸಹ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದಾಗಿವೆ. ಅಲ್ಲದೇ ದೂರುದಾರರು ಕೊಡುವ ಮಾಹಿತಿ ಅಪೂರ್ಣವಾಗಿದ್ದರೆ ಅಂತಹ ಪ್ರಕರಣವನ್ನು ಬೆನ್ನೆತ್ತುವುದು ಸಹ ಕಷ್ಟಸಾಧ್ಯ’ ಎನ್ನುತ್ತಾರೆ ಅವರು.

ಫಲಕ ಅಳವಡಿಕೆ: ‘ಎಸಿಬಿ ವ್ಯಾಪ್ತಿಗೆ ಬರುವ ಪ್ರಕರಣಗಳು, ಠಾಣೆಯ ವಿಳಾಸ, ದೂರವಾಣಿ ಮಾಹಿತಿ ಇರುವ ಫಲಕವನ್ನು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಎಸಿಬಿ ಕಾರ್ಯನಿರ್ವಹಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇದು ಸಹಕಾರಿಯಾಗಲಿದೆ. ಲೋಕಾಯುಕ್ತ ಸಂಸ್ಥೆಗೆ ಈಗ ದಾಳಿ ಮಾಡುವ ಅಧಿಕಾರವಿಲ್ಲ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳು ಲೋಕಾಯುಕ್ತ ಠಾಣೆಗೆ ಬಂದರೆ ಅವರು ಅದನ್ನು ನಮಗೆ ವರ್ಗಾಯಿಸಬೇಕು. ಸರ್ಕಾರಿ ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಯಾರಾದರೂ ಠಾಣೆಗೆ ದೂರು ನೀಡಿದರೆ ನಾವು ಸಹ ಏಕಾಏಕಿ ದಾಳಿ ಮಾಡುವ ಆಗಿಲ್ಲ. ನ್ಯಾಯಾಲಯದಲ್ಲಿ ಮೊದಲು ಪ್ರಕರಣ ದಾಖಲಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು’ ಎಂದು ವಿವರಿಸಿದರು.

ಡಿವೈಎಸ್ಪಿ ಹುದ್ದೆ ಖಾಲಿ
ಠಾಣೆಯಲ್ಲಿ ಪ್ರಮುಖವಾಗಿ ಡಿವೈಎಸ್ಪಿ ಹುದ್ದೆ ಖಾಲಿ ಇದೆ. ಉಳಿದಂತೆ ಇನ್‌ಸ್ಪೆಕ್ಟರ್‌–2, ಹೆಡ್‌ ಕಾನ್‌ಸ್ಟೆಬಲ್‌ –1 ಹಾಗೂ ಕಾನ್‌ಸ್ಟೆಬಲ್‌–4 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಿರುವ ಠಾಣೆಯ ಕಚೇರಿಯು ನಗರದ ಹೃದಯಭಾಗದಿಂದ ಸ್ವಲ್ಪ ದೂರದಲ್ಲಿದೆ. ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ನಗರದೊಳಗೆ ಕಚೇರಿಗೆ ಜಾಗವನ್ನು ಗುರುತಿಸುವ ಕಾರ್ಯ ನಡೆದಿದೆ.

ಪ್ರತಿ ತಿಂಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುತ್ತಿದ್ದೇವೆ. ಸಾರ್ವಜನಿಕರು ದೂರಗಳು ನೀಡುವುದಿದ್ದರೆ ಕಚೇರಿ ದೂರವಾಣಿ (08382) 229988 ಅಥವಾ ಇನ್‌ಸ್ಪೆಕ್ಟರ್‌ ಮೊಬೈಲ್‌ ಸಂಖ್ಯೆ 9480806297, 9480806298 ಕರೆ ಮಾಡಬಹುದು ಎಂದು ಇನ್‌ಸ್ಪೆಕ್ಟರ್‌ ರಾಘವೇಂದ್ರ ತಿಳಿಸಿದರು.

*
ಸಾರ್ವಜನಿಕರು ದೂರು ನೀಡಿದರೆ ಮಾತ್ರ ದಳಕ್ಕೆ ತನಿಖೆ ನಡೆಸಲು ಅವಕಾಶವಿದೆ.  ಜನರಲ್ಲಿ ಎಸಿಬಿ ಕಾರ್ಯಾಚರಣೆ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ.
-ರಾಘವೇಂದ್ರ ಹಳ್ಳೂರ,
ಇನ್‌ಸ್ಪೆಕ್ಟರ್‌,  ಎಸಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT