ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿಗೆ ಎಂದೂ ಬಾಡದ ಹೂವುಗಳು!

ಸಾರಿಗೆ ಬಸ್‌ಗಳು, ಆಟೊ­ರಿಕ್ಷಾಗಳಲ್ಲಿ ಬಂದಿಳಿಯುವ ಮಹಿಳೆಯರತ್ತ ಧಾವಿಸಿ ಪರಿಮಳದ ಹೂ ಮಾರುವರು...
Last Updated 16 ಜನವರಿ 2017, 8:39 IST
ಅಕ್ಷರ ಗಾತ್ರ

ಬಳ್ಳಾರಿ: ಇವರು ಬಿಸಿಲು ಲೆಕ್ಕಿಸದೆ ಹೂ ಮಾರುವ ಮಹಿಳೆಯರು. ಇವರ ಕೈಯಲ್ಲಿರುವ ಹೂವಿನ ಹಾರಗಳು ತುಸು ಬಾಡಿದರೂ, ಇವರು ಮಾತ್ರ ಎಂದಿಗೂ ಬಾಡುವುದಿಲ್ಲ. ಧೂಳು, ಹಸಿವು, ನೀರಡಿಕೆ, ಬೆವರಿಳಿಸುವ ಬಿಸಿಲ ನಡುವೆ ಇವರ ಮೊಗದಲ್ಲಿ ಹೂ ಮಾರುವ ಕಾತರ ಮತ್ತು ಸ್ವಾವಲಂಬನೆಯ ಸರಳ ಸೂತ್ರ ಮಾತ್ರ ಪರಿಮಳದಂತೆ ಹಬ್ಬಿರುತ್ತದೆ.

ಇವರಲ್ಲಿ ಹೆಚ್ಚಿನವರು ರಾಣಿ­ತೋಟ ಹಾಗೂ ಮಿಲ್ಲರ್‌ಪೇಟೆ ಪ್ರದೇ­ಶ­ದವರು. ಒಂದೇ ವಯಸ್ಸಿನ­ವರಂತೂ ಅಲ್ಲ. 50 ವರ್ಷದಿಂದ ಹೂ ಮಾರು­ತ್ತಿರುವ 80ರ ವೃದ್ಧೆ ನಾಗಮ್ಮ ಎಲ್ಲರಿ­ಗಿಂತ ಹಿರಿಯರೆನ್ನಬಹುದು. ಉಳಿ­ದಂತೆ ಕಳೆದ ವರ್ಷ ಎಸ್‌ಎಸ್‌­ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ­ಳಾಗಿರುವ ಗೌಸಿಯಾ, ಆಕೆಗಿಂತ ಒಂದೆರಡು ಹೆಚ್ಚು ವರ್ಷ ಹಿರಿಯರಾದ ಮಾಧವಿ, ಮಕ್ಕಳೊಂದಿಗರಾದ ಲಕ್ಷ್ಮಿ ಅವರ ಹಾಗೇ ಗೃಹಿಣಿಯರಾದ ಹಲವರು.

ಬಡತನ ಇವರ ಮನೆತನ. ಅದರ ರೂಪ ಹಲವು. ಹೂವು ಮಾರುವುದು ಅವರ ಹಸಿವು ಇಂಗಿಸುವ ಹಾಗೂ ಕುಟುಂಬವನ್ನು ಪೊರೆಯುವ ಏಕೈಕ ದಾರಿ. ಧೂಳುಮಯವಾದ ನಗರದ ಕಣೇಕಲ್ ಬಸ್‌ ನಿಲ್ದಾಣಕ್ಕೆ ಬರುವ ನಗರ ಸಾರಿಗೆ ಬಸ್‌ಗಳು, ಆಟೊ­ರಿಕ್ಷಾಗಳಲ್ಲಿ ಬಂದಿಳಿಯುವ ಪ್ರಯಾ­ಣಿಕ­ರನ್ನು ಅದರಲ್ಲೂ ಮಹಿಳೆಯರತ್ತ ಧಾವಿಸುವ ಈ ಮಂದಿ ಹೂವಿನ ಹಾರವನ್ನು ಮುಂದೊಡ್ಡುತ್ತಾರೆ. ಬೆಲೆ ಹೇಳಿ ಅವರೇ ಚೌಕಾಸಿಯನ್ನೂ ಮಾಡುತ್ತಾರೆ. ಒಂದೆರಡು ಮೊಳ ಹೆಚ್ಚು ಮಾರಾಟವಾದರೆ ಅವರ ಮೊಗದಲ್ಲಿ ಸಂತಸ ಮಿನುಗುತ್ತದೆ.

ಆಂಧ್ರ ಕಡೆಗೆ ತೆರಳುವ ಬಸ್‌ಗಳು ಬಂದರೆ ಇವರು ಅಲ್ಲಿಗೇ ಧಾವಿ­ಸುತ್ತಾರೆ.  ಕಿಟಿಕಿಯ ಬಳಿ ಕುಳಿತ ಮಹಿಳೆ­ಯರ ಹತ್ತಿರಕ್ಕೆ ಹಾರವನ್ನು ಒಯ್ಯುತ್ತಾರೆ. ‘ಒಂದೆರಡು ಮೊಳ ತಗೊಳ್ಳಿ ಅಕ್ಕಾ’ ಎಂದು ದುಂಬಾಲು ಬೀಳುತ್ತಾರೆ. ಅವರ ಅಂಥ ಪ್ರಯತ್ನದ ಪರಿಣಾಮವಾಗಿಯೇ ಬಳ್ಳಾರಿಯ ಹೂ ಮಾಲೆಗಳು ಆಂಧ್ರದ ಬೊಮ್ಮನಹಾಳು, ಕಣೇಕಲ್ಲು, ಕಣೇಕಲ್ಲು ಕ್ರಾಸ್‌, ರಾಯದುರ್ಗ, ಹಿಂದೂಪುರ, ಉರವಕೊಂಡದಿಂದ ಅನಂತಪುರ­ದವರೆಗೂ ಪಯಣಿಸುತ್ತವೆ!
ನಗರದ ಬೇರೆ ಯಾವುದೇ ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶಕ್ಕೆ ಹೋದರೆ, ಅಲ್ಲಿ ಹೂ ಮಾರುವವರು ಇದ್ದಲ್ಲೇ ಕುಳಿತಿರುತ್ತಾರೆ.

ಹೂ ಬೇಕಾದವರು ಅವರಲ್ಲಿಗೇ ಹೋಗಿ ಖರೀದಿಸುವುದು ಸಾಮಾನ್ಯ ದೃಶ್ಯ. ಆದರೆ ಕಣೇಕಲ್‌ ನಿಲ್ದಾಣದಲ್ಲಿ ಇದಕ್ಕೆ ತದ್ವಿರುದ್ಧ ದೃಶ್ಯಗಳು ಕಂಡುಬರುತ್ತವೆ.
ಬೆಳಿಗ್ಗೆಯೇ ಬೆಂಗಳೂರು ರಸ್ತೆಯ ಹೂವಿನ ಮಾರುಕಟ್ಟೆಗೆ ಹೋಗಿ ಬಿಡಿ ಹೂವನ್ನು ತರುವ ಈ ಮಹಿಳೆಯರು ಹೂಮಾಲೆಗಳನ್ನು ಸಿದ್ಧಪಡಿಸಿ ಬೆಳಗಿನ ತಿಂಡಿ ತಿಂದು ನಿಲ್ದಾಣಕ್ಕೆ ಬಂದರೆ ಮತ್ತೆ ಮನೆಗೆ ತೆರಳುವುದು ಮಧ್ಯಾಹ್ನದ ಬಳಿಕವೇ, ನಂತರ ಸಂಜೆ 4ರ ವೇಳೆಗೆ ಬಂದರೆ ಆರೇಳು ಗಂಟೆವರೆಗೂ ಹೂ ಮಾರುವ ಕಾಯಕ ನಡೆಯುತ್ತದೆ. ಇವರು ನಿಂತಲ್ಲಿ ನಿಲ್ಲುವುದಿಲ್ಲ ಎಂಬುದೇ ವಿಶೇಷ.

ಪ್ರತಿಯೊಬ್ಬರು ದಿನಕ್ಕೆ ಏನಿಲ್ಲ­ವೆಂದರೂ 150ರಿಂದ 250 ರೂಪಾಯಿ­ವರೆಗೂ ಸಂಪಾದಿಸುತ್ತಾರೆ. ಮನೆ, ಗಂಡ, ಮಕ್ಕಳಿರುವ ಮನೆಯಲ್ಲಿ ಇವರ ಸಂಪಾದನೆ ಇಲ್ಲದಿದ್ದರೆ ಕಷ್ಟ ಎಂಬ ಪರಿಸ್ಥಿತಿ. ಆದರೆ ಹೂವು ಮಾರುವುದು ಇವರಿಗೆ ಎಂದಿಗೂ ಕಷ್ಟ ಎನ್ನಿಸಿಲ್ಲ. ‘ಗಂಡ,ಮಕ್ಕಳು ಚೆನ್ನಾಗಿದ್ದರೆ ನಾವೂ ಚೆನ್ನಾಗಿರ್ತೇವೆ’ ಎಂಬುದು ಗೃಹಿಣಿ ಲಕ್ಷ್ಮಿ ಅವರ ಮಾತು.

ಋಣದಾಗ ಇರಬಾರ್ದು
ಗಟ್ಟಿಮೈಯಿನ, ಉತ್ಸಾಹಿ ಗೃಹಿಣಿ­ಯರ ನಡುವೆ, 80ರ ವೃದ್ಧೆ ನಾಗಮ್ಮ ಕೂಡ ಹೂವು ಮಾರುವ ಉತ್ಸಾಹವನ್ನು ಉಳಿಸಿಕೊಂಡಿ­ರುವುದು ಗಮನ ಸೆಳೆಯುತ್ತದೆ.  ಈ ವಯಸ್ಸಿ­ನಲ್ಲೂ ಹೂ ಮಾರಬೇಕೆ ಎಂದು ಕೇಳಿದರೆ  ಅವರು, ‘ಮೊಮ್ಮಗ ಇದ್ದಾನೆ. ಹೂ ಮಾರೋದು ಬೇಡ ಅಂತಾನೆ.

ಆದರೆ ಒಬ್ಬರ ಋಣದಲ್ಲಿ ಇರಬಾರದು ಎಂದೇ ಕೈಲಾದಷ್ಟು ಹೂ ಮಾರುತ್ತೇನೆ. ಬೇಕೆನಿಸಿದಾಗ ಸಾಯಿಬಾಬ ಗುಡಿಗೆ, ಎರ್ರಿತಾತನ ಮಠಕ್ಕೆ ಹೋಗಿಬರುತ್ತೇನೆ. ನನ್ನ ಅನ್ನವನ್ನು ನಾನು ಸಂಪಾದಿಸಿ­ಕೊಳ್ಳುತ್ತೇನೆ. ಅಷ್ಟು ಸಾಕು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT