ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರಗಳ ರಕ್ಷಣೆಗೆ ನೂತನ ಪ್ರಯೋಗ

ಹೊಸ ಹೆಜ್ಜೆ 35
Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ವಿದ್ಯುತ್ ಸಮಸ್ಯೆ ಯಾವ ಕಾಲಕ್ಕೂ ಇದ್ದದ್ದೇ. ಯಾವಾಗ ಅಧಿಕವಾಗಿ ವಿದ್ಯುತ್ (ಹೈ–ವೋಲ್ಟೇಜ್) ಹರಿಯುತ್ತದೋ, ಯಾವ ಸಮಯದಲ್ಲಿ ಕಡಿಮೆ ವಿದ್ಯುತ್ (ಲೋ–ವೋಲ್ಟೇಜ್) ಆಗುತ್ತದೋ... ಎಂದು ಹೇಳುವುದೇ ಕಷ್ಟ. ಅದರಲ್ಲಿಯೂ ಹೈ–ವೋಲ್ಟೇಜ್ ಬಂದರೆ ಮುಗಿದೇ ಹೋಯಿತು, ಯಂತ್ರಗಳು ಸುಟ್ಟು ಹೋಗುವ ಪ್ರಮಾಣವೇ ಹೆಚ್ಚು.

ಇದು ಗೃಹಬಳಕೆ ಯಂತ್ರಗಳನ್ನು ಬಳಕೆ ಮಾಡುತ್ತಿರುವವರ ಸಮಸ್ಯೆ ಕೂಡ ಹೌದು. ಈ ಸಮಸ್ಯೆಗೆ ಉಪಾಯ ಕಂಡುಹಿಡಿದಿದ್ದಾರೆ  ಕುಂಬಾರಜಡ್ಡಿಯ ಯುವಕ ಸಂತೋಷ ಹೆಬ್ಬಾರ. ಇದರ ಜೊತೆಗೆ, ಮನೆ, ಕೈಗಾರಿಕೆಗಳಿಗೆ ಅನುಕೂಲವಾಗುವ ಹತ್ತಾರು ಉಪಕರಣಗಳನ್ನು  ಆವಿಷ್ಕಾರ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ತೋಳಗೋಡ-ಹರಿಗದ್ದೆ ಸಮೀಪದ ಕುಂಬಾರಜಡ್ಡಿಯ ನಿವಾಸಿ ಸಂತೋಷ ಅವರು, ವಾಟರ್ ಕಂಟ್ರೋಲರ್ಸ್, ಕರೆಂಟ್ ಕಂಟ್ರೋಲರ್ಸ್ (ಇಂಡಸ್ಟ್ರೀಸ್), ಸ್ಟಾರ್ಟರ್ (ಮಲ್ಟಿ ಪರ್ಪಸ್  ಅಗ್ರಿ ಪಂಪ್) ಹಾಗೂ ಫೆನ್ಸ್ ಎಂಬ ಹೊಸ ಉಪಕರಣಗಳನ್ನು ಪರಿಚಯಿಸಿದ್ದಾರೆ.

ಪ್ರೌಢಶಾಲೆ ಓದುತ್ತಿರುವ ಸಮಯದಲ್ಲಿ ವಾಹನವೊಂದರ ವೈಪರ್ ಯಂತ್ರವನ್ನು ಬಳಸಿಕೊಂಡು ಅದಕ್ಕೆ ಚಿಕ್ಕ ವಾಟರ್ ಬಾಟಲ್‌ ಜೋಡಿಸಿ ಗೋಡೆ, ಬೈಕ್‌ಗೆ ನೀರು ಹಾಯಿಸಬಹುದಾದ ಉಪಕರಣವನ್ನು ತಾವೇ ಸಿದ್ಧಪಡಿಸಿದ್ದರು. ಆ ಸರಳ ಉಪಕರಣವು ದನ-ಕರುಗಳಿಗೆ ಬೂಟೆಕ್ಸ್‌ನಂತಹ ಕ್ರಿಮಿನಾಶಕ ಸಿಂಪಡಿಸಲು, ಬೈಕು- ಸೈಕಲ್‌ನಂತಹ ವಾಹನಗಳಿಗೆ ನೀರು ಹಾಯಿಸಲು ಬಹಳ ಉಪಯುಕ್ತ ಸಾಧನವಾಯಿತು.

ನಂತರ ಶಿರಸಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ವ್ಯಾಸಂಗ ಮುಂದುವರಿಸಿ ಹೊಸಹೊಸ ಯಂತ್ರಗಳ ಶೋಧನೆಯಲ್ಲಿ ಆಸಕ್ತರಾದರು. ನಿರಂತರ ಪ್ರಯತ್ನ, ಪರಿಶ್ರಮದ ಫಲವಾಗಿ ಅವರು 2010ರಲ್ಲಿ ವಾಟರ್ ಅಲಾರಂ ಸಿಸ್ಟಮ್ ಮತ್ತು ಆಟೋ ಆಫ್-ಆನ್ ಸಿಸ್ಟಮ್.... ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರಿಚಯಿಸಿದ್ದಾರೆ.

2011ರಲ್ಲಿ ಇವರು ಹಳದಿಪುರದ ಮಿಲ್‌ ಒಂದಕ್ಕೆ ಅನುಕೂಲವಾಗುವ ವಿಶಿಷ್ಟ ಮಾದರಿಯ ಅಲಾರಾಂ ಉಪಕರಣ ಅಳವಡಿಸಿದರು. ಅದು ಅಕ್ಕಿ, ಅವಲಕ್ಕಿ, ತೆಂಗಿನ ಎಣ್ಣೆ ಮಾಡುವಾಗ ಬಹಳ ಪ್ರಯೋಜನಕಾರಿ ಆಯಿತು. ಅವರ ಮಿಲ್‌ಗೆ ಆಗುತ್ತಿದ್ದ ತೊಂದರೆ, ಕಿರಿಕಿರಿ ತಪ್ಪಿಸಲು ಸಂತೋಷ ಅವರು, ಡಿಜಿಟಲ್ ಡಿಸ್‌ಪ್ಲೇ (ವೈಬ್ರೇಟರ್ ಕಂಟ್ರೋಲರ್)ಯನ್ನೂ ಶೋಧಿಸಿದರು.

ಹೀಗೆ ಕೈಗಾರಿಕೆ ಹಾಗೂ ಮನೆ ಬಳಕೆಯ ಯಂತ್ರಗಳಿಗೆ ವಿದ್ಯುತ್‌ನಿಂದ ಆಗುವ ಅನಾಹುತ, ದುಂದುವೆಚ್ಚವನ್ನು ತಪ್ಪಿಸಲು ನಾನಾ ರೀತಿಯ ಉಪಕರಣಗಳನ್ನು ಸಿದ್ಧಪಡಿಸಲು ಹಲವು ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕೊಳವೆ ಬಾವಿಯಲ್ಲಿ ಮಗು ಬಿದ್ದರೆ ಅದನ್ನು ಎತ್ತಲು ವಿನೂತನ ಮಾದರಿಯ ಯಂತ್ರವನ್ನು ಸಂತೋಷ ಅವರು ಬೆಂಗಳೂರಿನಲ್ಲಿ  ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಕಂಡುಹಿಡಿದಿದ್ದರು. ಈಗ ಅಡಿಕೆಗೊನೆಯನ್ನು ನೆಲದಿಂದಲೇ ಕೊಯ್ಯುವ ತೀರಾ ಸರಳವಾದ ಉಪಕರಣದ ಮಾದರಿಯನ್ನು ಅವರು ಸಿದ್ಧಪಡಿಸಿದ್ದಾರೆ.

‘ನನಗೆ ತಿಳಿದ ಹಾಗೆ ಈ ಸಾಧನವನ್ನು ತಯಾರು ಮಾಡಿದ್ದೇನೆ. ಇನ್ನಷ್ಟು ಸುಧಾರಣೆ ಆಗಬೇಕಾಗಿದೆ. ಅಡಿಕೆ ಬೆಳೆಗಾರರ ಅಭಿಪ್ರಾಯ ಸಂಗ್ರಹಿಸಿ ಅವರಿಗೆ ಅನುಕೂಲವಾಗುವಂತಹ ಕೊನೆ ಕೊಯ್ಯಲು ಸುಲಭವಾಗುವ ಯಂತ್ರವನ್ನು ಸಿದ್ಧಪಡಿಸುವ ಯೋಜನೆ ಚಾಲ್ತಿಯಲ್ಲಿದೆ’ ಎನ್ನುತ್ತಾರೆ ಸಂತೋಷ. ಸಂಪರ್ಕಕ್ಕೆ: 9341654791

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT