ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ಸೈಟ್‌ನಲ್ಲಿ ಕೃಷಿ ಮಾಹಿತಿ

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಪಂಚಗವ್ಯ ತಯಾರಿಕಾ ವಿಧಾನ ಹೇಗೆ? ಟ್ರೈಕೋಡರ್ಮಾವನ್ನು  ಯಾವ ರೀತಿ ಬಳಕೆ ಮಾಡಬೇಕು? ಅಜೋಲ್ಲಾ ಬೆಳೆಯುವ ಬಗೆ ಹೇಗೆ? ಎಂಬೆಲ್ಲ ಪ್ರಶ್ನೆಗಳು ರೈತರನ್ನು ಕಾಡುವುದು ಸಹಜ. ಇಂತಹ ಸಂದರ್ಭ ಬಂದಾಗಲೆಲ್ಲ ಒಂದೋ ರೈತರು ಕೃಷಿ ತಜ್ಞರನ್ನು ಸಂಪರ್ಕಿಸಬೇಕು, ಇಲ್ಲವೇ ತಮಗಿಂತ ಹಿರಿಯ ಮತ್ತು ಅನುಭವಿ ಅಲ್ಲದೆ ಈಗಾಗಲೇ ಇಂತಹ ಪ್ರಯೋಗಗಳನ್ನು ಮಾಡಿದವರಿಂದ ಮಾಹಿತಿ ಪಡೆದುಕೊಳ್ಳಬೇಕು.

ಆದರೆ ಬಹುತೇಕ ಸಂದರ್ಭದಲ್ಲಿ ರೈತರಿಗೆ ಸರಿಯಾದ ಸಮಯದಲ್ಲಿ, ಸೂಕ್ತ ಮಾಹಿತಿ ದೊರೆಯುವುದಿಲ್ಲ. ಇಂತಹ ಕಷ್ಟ ಎದುರಿಸುವ ರೈತರಿಗೆ ಸ್ವಲ್ಪಮಟ್ಟಿನ ನೆರವಾಗಲಿ ಎಂಬ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಸಮೀಪದ ಭೂತನಕಾಡಿನ ಪ್ರಗತಿಪರ ಕೃಷಿಕ ವಿಜ್ಞಾನಿ ಬಿ.ಸಿ.ಅರವಿಂದ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.

ತಮ್ಮ ‘ಹಸಿರು ಆರ್ಗ್ಯಾನಿಕ್ಸ್’ ಸಂಸ್ಥೆ ಹೆಸರಿನಲ್ಲಿ   hasiruorganics.com ವೆಬ್‌ಸೈಟ್‌ ಆರಂಭಿಸಿ ಕೃಷಿಕರಿಗೆ ಬೇಕಾದ ಮಾಹಿತಿಯನ್ನು ಹಂಚುತ್ತಿದ್ದಾರೆ.
‘ಇಂದು ರೈತರು ಮೊಬೈಲ್ ಇಲ್ಲವೇ ಟ್ಯಾಬ್‌ ಬಳಸುತ್ತಾರೆ. ಕೆಲವರ ಬಳಿ ಕಂಪ್ಯೂಟರ್‌ಗಳೂ ಇರುತ್ತವೆ. ತಮ್ಮ ಮಕ್ಕಳ ಉಪಯೋಗಕ್ಕೆ ಇಂಟರ್‌ನೆಟ್‌ ಸಂಪರ್ಕ ತೆಗೆದುಕೊಂಡಿರುತ್ತಾರೆ. ಅವರು ಕೃಷಿಯ ಮಾಹಿತಿಯನ್ನೂ ನೋಡಬಹುದು’ ಎನ್ನುತ್ತಾರೆ ಅರವಿಂದ.

ಅರವಿಂದ ಅವರು ಮೂಡಿಗೆರೆ ಪಟ್ಟಣದಲ್ಲಿ ಕಚೇರಿ ಆರಂಭಿಸಿ ರೈತರಿಗೆ ಉಚಿತವಾಗಿ ಮಾಹಿತಿ, ಸಲಹೆ,  ನೀಡುತ್ತಾ ಬಂದಿದ್ದಾರೆ. ರೈತರು ಇರುವೆಡೆಗೆ ಹೋಗಿ ತರಬೇತಿ ನೀಡುತ್ತಾರೆ. ಇದೀಗ ಜಾಲತಾಣದ ಮೂಲಕ ಕೃಷಿಕರ ತೋಟ ತಲುಪುವ ಯತ್ನ ಮಾಡಿದ್ದಾರೆ.

ವೆಬ್‌ಸೈಟ್‌ನಲ್ಲಿ ಲಭ್ಯವಿರುವ  ಮಾಹಿತಿಗಳು: ಕಾಂಪೋಸ್ಟ್ ಮಾಡುವ ವಿಧಾನ, ನರ್ಸರಿ ಮಾಡುವ ಮಾಹಿತಿ, ಜೈವಿಕ ಕೀಟನಾಶಕ (ಟ್ರೈಕೋಡರ್ಮಾ) ಮತ್ತು ಜೈವಿಕ ನಿಯಂತ್ರಕ (ಸುಡೋ ಮೊನಾಸ್)ಗಳ ಬಳಕೆಯ ಕುರಿತು ಮಾರ್ಗದರ್ಶನ, ಸಾವಯವ ಕೃಷಿಪದ್ಧತಿ ವಿವರ, ಸಾವಯವ ಸೂಕ್ಷ್ಮ ಪೌಷ್ಟಿಕದ್ರವ್ಯಗಳಾದ ಜೀವಾಮೃತ, ಪಂಚಗವ್ಯ, ಅಮೃತಪಾನಿ, ತ್ರಿಮೂರ್ತಿ ಟಾನಿಕ್ ಕುರಿತ ಮಾಹಿತಿ, ಅಜೋಲ್ಲಾ ಬೆಳೆಯುವ ಬಗೆ, ‘ಬ್ಲ್ಯಾಕ್ ಗೋಲ್ಡ್ ಲೀಗ್ ಕಾಳುಮೆಣಸು ಸಂಘಟನೆಯ ತರಗತಿಯಲ್ಲಿನ ಕೃಷಿ ಆಚರಣೆ,  ಕೃಷಿ ತ್ಯಾಜ್ಯ ನಿರ್ವಹಣೆ, ಆಟೋಮೆಷನ್ ತಂತ್ರಜ್ಞಾನ ಬಳಸಿ ಕೃಷಿಯನ್ನು ಆಧುನೀಕರಿಸುವುದು, ಕೀಟ ಮತ್ತು ರೋಗ ನಿಯಂತ್ರಣದ ಜೈವಿಕ ವಿಧಾನ ಹೀಗೆ ಹತ್ತು ಹಲವು ವಿಷಯಗಳ ಕುರಿತು  ವಿವರವಾದ ಮಾಹಿತಿ ನೀಡಲಾಗಿದೆ.

ಹಸಿರು ಆರ್ಗ್ಯಾನಿಕ್ಸ್‌ನಿಂದ ತರಬೇತಿ: ‘ಬ್ಲ್ಯಾಕ್ ಗೋಲ್ಡ್ ಲೀಗ್ ಮೂಲಕ ಕಾಳುಮೆಣಸು ಬೆಳೆಯಲ್ಲಿ ನರ್ಸರಿಯಿಂದ ಕೊಯ್ಲಿನವರೆಗೂ ಅನುಸರಿಸಬೇಕಾದ ಪೂರ್ಣ ಅಭ್ಯಾಸಕ್ರಮಗಳ ಕುರಿತು ತಿಂಗಳಿಗೊಮ್ಮೆ ರೈತರ ತೋಟದಲ್ಲಿ ಆಯೋಜಿಸಿ ತರಬೇತಿ ನೀಡಲಾಗುತ್ತದೆ.

ರೈತರ ತೋಟದಲ್ಲೇ ಕಾಂಪೋಸ್ಟ್ ತಯಾರಿಕೆ: ಕಾರ್ಮಿಕರ ಸಮಸ್ಯೆ, ಸಮಯದ ಅಭಾವ, ಗುಣಮಟ್ಟದ ಸಾಮಗ್ರಿಗಳ ಕೊರತೆ, ಮಾಹಿತಿ ಇಲ್ಲದಿರುವುದನ್ನು ಅರಿತು ಸಂಸ್ಥೆಯೇ ಗುಣಮಟ್ಟದ ಸಾಮಗ್ರಿಗಳು ಮತ್ತು ನುರಿತ ಕಾರ್ಮಿಕರನ್ನು ಕಳುಹಿಸಿ ರೈತರ ತೋಟದಲ್ಲೇ ಕಾಂಪೋಸ್ಟ್ ತಯಾರಿಸಿ ಕೊಡಲಾಗುತ್ತಿದೆ. ಹಸಿರು ಆರ್ಗ್ಯಾನಿಕ್ಸ್‌ ವತಿಯಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡಿ ಯುವಜನತೆಯನ್ನು ಕೃಷಿಯೆಡೆಗೆ ಆಕರ್ಷಿಸಿ ತೊಡಗಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ.
ರೈತರಿಂದಲೇ ಮೆಚ್ಚುಗೆ: ಹಸಿರು ವೆಬ್‌ಸೈಟ್‌ಗೆ ಭೇಟಿ ನೀಡಿರುವ ನೂರಾರು ರೈತರು ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದಾರೆ.

‘ಕೃಷಿಕರೇ ಈ ರೀತಿ ವೆಬ್‌ಸೈಟ್‌ ರೂಪಿಸಿರುವುದು ಹೊಸ ಪ್ರಯತ್ನ. ಹಳ್ಳಿಯಿಂದ ದಿಲ್ಲಿ ತಲುಪುವ ಯತ್ನವಿದು. ಎಲ್ಲ ಉತ್ಪನ್ನಗಳನ್ನು ಹೇಗೆ ತಯಾರು ಮಾಡಬೇಕು ಎಂಬ ಬಗ್ಗೆ ಚಿತ್ರ ಸಮೇತ ವಿವರ ನೀಡಲಾಗಿದೆ. ಇದರಿಂದ ಸಾಮಾನ್ಯ ಕೃಷಿಕರಿಗೂ ತಿಳಿಯಲಿದೆ’ ಎನ್ನುತ್ತಾರೆ ಹಾಸನದ ಕೃಷಿಕ ಕಿರಣ್‌.

‘ಕೆಲವು ವೆಬ್‌ಸೈಟ್‌ಗಳನ್ನು ವಾಣಿಜ್ಯ ಉದ್ದೇಶದಿಂದ ರೂಪಿಸಿರುತ್ತಾರೆ. ಉತ್ಪನ್ನಗಳ ತಯಾರಿಯನ್ನು ‘ಟ್ರೇಡ್‌ ಸೀಕ್ರೆಟ್‌’ ಹೆಸರಿನಲ್ಲಿ ತಿಳಿಸುವುದಿಲ್ಲ. ಆದರೆ ಹಸಿರು ಆರ್ಗ್ಯಾನಿಕ್ಸ್‌ನಲ್ಲಿ ಆ ಯಾವ ರಹಸ್ಯ ಇಲ್ಲ. ಆದ್ದರಿಂದ ಇದು ರೈತಸ್ನೇಹಿ ಮತ್ತು ಜನಸ್ನೇಹಿ’ ಎನ್ನುತ್ತಾರೆ ಚಿಕ್ಕಮಗಳೂರಿನ  ವಿವೇಕ್‌. ಹಸಿರು ಉತ್ಪನ್ನಗಳನ್ನು ಇವರು ಬಳಸಿಯೂ ಅನುಭವ ಹೊಂದಿದ್ದಾರೆ.

‘ವೆಬ್‌ಸೈಟ್‌ ಉತ್ತಮವಾಗಿದೆ. ಅನುಭವ ಇರುವ ಕೃಷಿಕರೇ ಮಾಹಿತಿ ಹಾಕಿರುವ ಕಾರಣ ಅದನ್ನು ಅನುಭವಗಳಿವೆ’ ಎನ್ನುತ್ತಾರೆ ಕೃಷಿ ಸಲಹೆಗಾರ ಡಾ.ಸುನಿಲ್ ತಮಗಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT