ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಮರೆಸಿತು ಮಿಧಾಡಿಯ ಪಯಣ

ತಾಣ/ ಪಯಣ
Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ವಾರದ ರಜೆಯ ಮೋಜಿಗೆ ಹಾಗೂ ಕೆಲಸದ ಜಂಜಾಟದ ಒತ್ತಡ ನಿವಾರಣೆಗೆ ವಾರಾಂತ್ಯದ ಪ್ರವಾಸಕ್ಕೆ ಪ್ರತಿ ಬಾರಿ ಹೋಗುತ್ತಿರುವಂತೆ ಈ ಬಾರಿಯೂ ನಾವು ಐದು ಮಂದಿ ಸ್ನೇಹಿತರು ಪ್ರವಾಸಕ್ಕೆ ತಯಾರಿ ನಡೆಸಿದೆವು. ವಾಟ್ಸಾಪ್ ಗ್ರೂಪ್‌ನಲ್ಲಿ ಜಾಗದ ಚರ್ಚೆ ಜೋರಾಗಿ ನಡೆಯಿತು. ನಂದಿ ಹಿಲ್ಸ್, ಮಡಿಕೇರಿ, ಊಟಿ ಅಂತೆಲ್ಲಾ ಚರ್ಚೆ ಆಯ್ತು. ಕೊನೆಗೆ ಆಯ್ಕೆ ಮಾಡಿಕೊಂಡದ್ದು ಚಿಕ್ಕಮಗಳೂರಿನ ಮಿಧಾಡಿ ವ್ಯೂ ಪಾಯಿಂಟ್‌.

ಮಾರ್ಗನಕ್ಷೆಯನ್ನು ಗೆಳೆಯ ಪರಪ್ಪನಿಗೆ ಹೇಳಿ ಸಿದ್ಧಪಡಿಸಿಕೊಳ್ಳಲಾಯಿತು. ಶನಿವಾರ ಮಧ್ಯರಾತ್ರಿ ನಮ್ಮ ತಂಡ, ಗೆಳೆಯ ವಿಜಯ್‌ನ ಕಾರಿನಲ್ಲಿ ತುಮಕೂರಿನಿಂದ ಪ್ರಯಾಣ ಆರಂಭಿಸಿತು. ತಮಾಷೆ, ನಗುವಿನೊಂದಿಗೆ ಸಾಗಿದ ಪ್ರಯಾಣ ತಡರಾತ್ರಿಯಾಗಿದ್ದರಿಂದ ಕಾರು ಚಾಲಕನನ್ನು ಹೊರತುಪಡಿಸಿ ಮಿಕ್ಕೆಲ್ಲರೂ ನಿದ್ದೆಗೆ ಜಾರಿದ್ದೆವು. ಕಾರಿನ ಮ್ಯೂಸಿಕ್ ಸಿಸ್ಟಂ ಮೂಲಕ ರವಿಚಂದ್ರನ್ ಗೀತೆಗಳು ಸಣ್ಣದಾಗಿ ಕೇಳಿಬರುತ್ತಿತ್ತು.

ಕಣ್ಣುಬಿಟ್ಟಾಗ ಬೆಳಿಗ್ಗೆ ನಾಲ್ಕು ಗಂಟೆ ಆಗಿತ್ತು. ಎಚ್ಚರವಾದ ಎಲ್ಲರೂ ಟೀ ಕುಡಿದು ಪ್ರಯಾಣ ಮುಂದುವರಿಸಿದೆವು. ಮುಂಜಾನೆಯ ಚುಮು ಚುಮು ಚಳಿಯಲ್ಲಿ ಮ್ಯೂಸಿಕ್ ಸಿಸ್ಟಂನಿಂದ ಬರುತ್ತಿದ್ದ ಸಂಗೀತದ ಆಲಾಪನೆಯೊಂದಿಗೆ ನಮ್ಮ ಪ್ರಯಾಣ ಮುಂದೆ ಸಾಗಿತು. ಬೇಲೂರು, ಮೂಡಿಗೆರೆ ಕೊಟ್ಟಿಗೆಹಾರದ ಮೂಲಕ ಸಾಗಿದ ನಮ್ಮ ಕಾರು ಕೆಳಗೂರು ಎಂಬಲ್ಲಿ ನಿಂತಿತು. ಅದಾಗಲೇ ಸಮಯ 6.30. ಅಲ್ಲಿಯೇ ಫ್ರೆಶ್‌ಅಪ್ ಆಗಿ ಬಿಸಿಬಿಸಿಯಾದ ಮಲೆನಾಡು ಟೀ ಸವಿದೆವು.

ಕೆಳಗೂರು ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ಖಂಡಿತಾ ಹೇಳಲೇಬೇಕು. ಕೆಳಗೂರು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಸೊಬಗು ಇರುವಂತಹ ಸಣ್ಣ ಊರು. ಕಾಫಿ ಮತ್ತು ಟೀ ಎಸ್ಟೇಟ್‌ಗಳಿಗೆ ಪ್ರಸಿದ್ಧಿ. ಅಲ್ಲಿನ ಟೀ, ಕಾಫಿ ಎಸ್ಟೇಟ್‌ಗಳನ್ನು ನೋಡುತ್ತಿದ್ದರೆ ಆಹಾ! ಎಂದು ಮೈ ಮರೆಯುವಷ್ಟು ಸೊಗಸಾಗಿವೆ. ಒಪ್ಪವಾಗಿ ಜೋಡಿಸದಂತೆ ಕಾಣುವ ಟೀ, ಕಾಫಿ ಗಿಡಗಳನ್ನು ನೋಡುವುದೇ ಚೆಂದ. ರವಿಚಂದ್ರನ್ ಅಭಿನಯದ ‘ಶ್ರೀರಾಮಚಂದ್ರ’ ಚಲನಚಿತ್ರದಲ್ಲಿನ ‘ಸುಂದರಿ ಸುಂದರಿ ಸುರಸುಂದರಿ...’ ಹಾಡಿನ ಚಿತ್ರೀಕರಣ ನಡೆದಿದ್ದು ಇದೇ ಕೆಳಗೂರಿನ ಟೀ ಎಸ್ಟೇಟ್‌ನಲ್ಲಿ. ‘ಯುಗಪುರುಷ’ ಚಿತ್ರವೂ ಚಿತ್ರೀಕರಣಗೊಂಡಿದ್ದು ಇಲ್ಲಿಯೇ. ಈ ಮಾರ್ಗದ ಮೂಲಕ ಬರುವ ಎಲ್ಲಾ ವಾಹನಗಳೂ ಇಲ್ಲಿ ನಿಲ್ಲಿಸಿ ಕಾಫಿ, ಟೀ, ತಿಂಡಿ ಸವಿದು ಮುಂದೆ ಸಾಗುವರು.

ಸಮಯ ಬೆಳಿಗ್ಗೆ 7.30 ಆಗಿತ್ತು. ತಿಂಡಿ ತಿನ್ನೋಣವೆಂದು ಅಲ್ಲಿನ ಹೋಟೆಲ್‌ನಲ್ಲಿ ವಿಚಾರಿಸಿದರೆ ‘ಇನ್ನೂ ಸ್ವಲ್ಪ ಲೇಟಾಗುತ್ತೆ ಸರ್!’ ಎಂದ ಹೋಟೆಲ್‌ನವ. ಸರಿ ಮತ್ತೇನು ಮಾಡುವುದು ಎಂದು ನಮ್ಮ ಪಯಣದ ಗುರಿಯೆಡೆಗೆ ಸಾಗಿದೆವು. ಅಂಕು ಡೊಂಕಿನ ದಾರಿಯಲ್ಲಿ ಬಳುಕುತ್ತಾ ಸಾಗಿದಂತೆ ಎಲ್ಲೆಡೆ ಹರಡಿರುವ ಹಸಿರು ಸೌಂದರ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ಹಾಗೆಯೇ ಸಾಗಿ ಸುಮಾರು ಮೂರು ನಾಲ್ಕು ಕಿ.ಮೀ ನಂತರ ಎಡಕ್ಕೆ ತಿರುಗಿ ಮಿಧಾಡಿ ವ್ಯೂ ಪಾಯಿಂಟ್‌ನತ್ತ ಸಾಗಿದೆವು. ಕಿರಿದಾದ ರಸ್ತೆ, ಸುತ್ತಲೂ ಕಾಫಿ, ಟೀ ಎಸ್ಟೇಟ್‌ಗಳ ಸೌಂದರ್ಯ ರಾಶಿಯಲ್ಲಿ ನಮ್ಮ ಪಯಣ ಸಾಗಿತು. ನಗರಪ್ರದೇಶದಲ್ಲಿನ ಟ್ರಾಫಿಕ್ ಕಿರಿಕಿರಿ, ದೈನಂದಿನ ಕೆಲಸದ ಒತ್ತಡಗಳಿಂದ ಬೇಸತ್ತಿದ್ದ ನಮಗೆ ಅಲ್ಲಿನ ಪ್ರಶಾಂತ ವಾತಾವರಣ ಮನಸ್ಸಿಗೆ ಮುದ ನೀಡಿತು. ಅಲ್ಲಿಯೇ ಇದ್ದುಬಿಡಬೇಕೆನ್ನಿಸಿತು.

ದಾರಿಯಲ್ಲಿ ಸಿಗುವ ಗಿರಿಮನೆ ಹೋಮ್‌ಸ್ಟೇ, ಘಾಟಿಕಲ್ಲು ಹೋಮ್‌ಸ್ಟೇಗಳನ್ನು ದಾಟಿ ಮುಂದೆ ಸಾಗುತ್ತಿರುವಾಗಲೇ ನಮ್ಮ ಕಣ್ಣಿಗೆ ಬಿದ್ದದ್ದು ದೂರದ ಎತ್ತರ ಪ್ರದೇಶದಲ್ಲಿ ವಾಹನವೊಂದು ನಿಂತಿರುವುದು, ಸುಮಾರು ಜನರು ಅಲ್ಲಿಂದ ಪ್ರಕೃತಿ ವೀಕ್ಷಣೆ ಮಾಡುತ್ತಿದ್ದರು. ನಮಗೆ ಅನಿಸದ್ದು ಬಹುಶಃ ಅದೇ ವ್ಯೂ ಪಾಯಿಂಟ್ ಇರಬಹುದೆಂದು. ಆ ಸ್ಥಳಕ್ಕೆ ಅನತಿ ದೂರದಲ್ಲಿ ನಮ್ಮ ಕಾರನ್ನು ನಿಲ್ಲಿಸಿ ಅಲ್ಲಿಂದ ಮಣ್ಣಿನ ರಸ್ತೆಯ ಮೂಲಕ ಕಾಲು ನಡಿಗೆಯಲ್ಲೇ ವ್ಯೂ ಪಾಯಿಂಟ್ ಕಡೆಗೆ ಸಾಗಿದೆವು.

ಅದಾಗಲೇ 8.30 ಆಗಿತ್ತು. ಸೂರ್ಯ ಸ್ವಲ್ಪ ಸ್ವಲ್ಪವಾಗಿಯೇ ಮೇಲೇರುತ್ತಿದ್ದ. ಆದರೂ ಮಲೆನಾಡಿನ ಚಳಿಯ ಅನುಭವ ಆಗುತ್ತಿತ್ತು. ತಂಪಾದ ಗಾಳಿಯೂ ಬೀಸುತ್ತಿತ್ತು. ಮಿಧಾಡಿ ವ್ಯೂ ಪಾಯಿಂಟ್ ತುದಿಗೆ ಬಂದಾಯಿತು. ಆಹಾ! ಅದೇನು ಸೌಂದರ್ಯ! ವರ್ಣಿಸಲು ಪದಗಳೇ ಸಾಲವು. ಅಂತಹ ವಾತಾವರಣದ ತುದಿಯಲ್ಲಿ ನಾವಿದ್ದೆವು. ತುತ್ತ ತುದಿಯಲ್ಲಿ ನಿಂತ ನಮ್ಮನ್ನು ಹಾಗೆಯೇ ಎತ್ತಿಕೊಂಡು ಹೋಗಿ ಬಿಡುತ್ತದೇನೋ ಅನ್ನುವಷ್ಟು ಸುಯ್ಯೆಂದು ಬೀಸುತ್ತಿದ್ದ ಗಾಳಿ. ಆ ಚಳಿಗಾಳಿಗೆ ಗಡಗಡ ನಡುಗತ್ತಲೇ ಸುತ್ತಲೂ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ಹಸಿರು ಕಣ್ಣಿಗೆ ಹಬ್ಬ ತರುತ್ತಿತ್ತು. ದಣಿದ ಕಣ್ಣುಗಳಿಗೆ ತಂಪೆರೆಯುತ್ತಿದ್ದವು.

ಸುತ್ತಲಿನ ಪರಿಸರ, ರಭಸದಿಂದ ಬೀಸುವ ತಂಗಾಳಿ, ಅಲ್ಲಲ್ಲಿ ಚಲಿಸುವ ಮಂಜಿನ ಮೋಡಗಳು ಆಗಾಗ ಸೂರ್ಯನ ಇಣುಕು, ಪರಿಸರವನ್ನು ಇನ್ನಷ್ಟು ಸುಂದರವಾಗಿಸಿದ್ದವು. ಇಂತಹ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ನಮಗೆ ಸ್ವರ್ಗವೇ ಧರೆಗಿಳಿದಂತೆ ಎನಿಸುತ್ತಿತ್ತು. ಮೈಮನಗಳಲ್ಲಿ ರೋಮಾಂಚನ ಉಂಟುಮಾಡುವಂತಹ ಹಾಗೂ ಚಳಿಗಾಲದಲ್ಲಿ ಸುರಿವ ಇಬ್ಬನಿಯ ಧಾರೆ ಶೃಂಗಾರ ಕಾವ್ಯವನ್ನೇ ಕಡೆದಿಡುವಂತಹ ಈ ಪ್ರದೇಶದಲ್ಲಿ ಗೆಳೆಯರೆಲ್ಲಾ ವಿವಿಧ ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು. ಅಲ್ಲಿನ ಕಲ್ಲೊಂದರ ಮೇಲೆ ನಿಂತು ಫೋಟೊ ತೆಗೆಸಿಕೊಂಡ ದೃಶ್ಯ ನಿಜಕ್ಕೂ ಮರೆಯಲಾಗದ ಅನುಭವ.

ಇಂತಹ ಅನುಭೂತಿ ನೀಡಿದ ಮಿಧಾಡಿ ವ್ಯೂ ಪಾಯಿಂಟ್ ನೋಡಿಕೊಂಡು ಅಲ್ಲಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಕಳಸ, ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ದರ್ಶನ ಮಾಡಿಕೊಂಡು ಅಲ್ಲಿಯೇ ಗೆಳೆಯ ಚಂದ್ರುವಿನ ಹರಕೆ ತೀರಿಸಿ ಅಪರಾಹ್ನ ಅಲ್ಲಿಂದ ಹೊರಟು ಹಾಸನ ಮಾರ್ಗವಾಗಿ ವಾಪಸ್ ಬಂದು ಕುಣಿಗಲ್‌ನಲ್ಲಿ ರಾತ್ರಿಯ ಊಟ ಮುಗಿಸಿ ರಾತ್ರಿ 10ರ ಹೊತ್ತಿಗೆ ತುಮಕೂರಿಗೆ ಆಗಮಿಸಿದೆವು. ಪ್ರಯಾಣದುದ್ದಕ್ಕೂ ಗೆಳೆಯರೊಂದಿಗಿನ ಮೋಜು, ತಮಾಷೆಯ ಬುತ್ತಿ ಖಾಲಿಯಾಗಲಿಲ್ಲ. ವೀಕೆಂಡ್ ಪ್ರಯಾಣ ಮುಗಿಸಿ ಬಂದರೂ ಮಿಧಾಡಿ ವ್ಯೂ ಪಾಯಿಂಟ್‌ನ ಅನುಭವ ಮಾತ್ರ ಮರೆಯಲಸಾಧ್ಯ.

ಹೋಗುವುದು ಹೀಗೆ
ಬೆಂಗಳೂರಿನಿಂದ ಹೋಗುವುದಾದರೆ 280 ಕಿ.ಮೀ. ಆಗುತ್ತದೆ. ಕೊಟ್ಟಿಗೆಹಾರದ ಮೂಲಕ ಕೆಳಗೂರು, ಸುಂಕಸಾಲೆ ಮುಖಾಂತರ ಹೋಗಬೇಕು. ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋದರೆ ಅನುಕೂಲ. ಪ್ರವಾಸಿಗಳು ಉಳಿದುಕೊಳ್ಳಲು ಖಾಸಗಿ ಹೋಮ್‌ಸ್ಟೇಗಳು ಲಭ್ಯ. ಊಟ ಉಪಾಹಾರಕ್ಕೆ ಕೆಳಗೂರು, ಸುಂಕಸಾಲೆಗಳಲ್ಲಿ ಸಣ್ಣಪುಟ್ಟ ಹೋಟೆಲ್‌ಗಳಿವೆ. ಘಾಟಿಕಲ್ಲು (ಬಲ್ಲಾಳರಾಯನ ದುರ್ಗ), ಕಳಸ, ಹೊರನಾಡು ಇಲ್ಲಿಂದ ಹತ್ತಿರದಲ್ಲೇ ಇರುವಂತಹ ನೋಡಬಹುದಾದ ಪ್ರವಾಸಿತಾಣಗಳು. ನೀವೂ ಒಮ್ಮೆ ಹೋಗಿ ಬನ್ನಿ. ಪ್ರಾಕೃತಿಕ ಸೌಂದರ್ಯದ ಖನಿಯಾಗಿರುವ ಮಿಧಾಡಿ ವ್ಯೂ ಪಾಯಿಂಟ್ ಪ್ರವಾಸ ಅನೂಹ್ಯ ಅನುಭವಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ.  v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT