ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಶತಮಾನ ಕಳೆದರೂ ದೊರಕದ ನೆಲೆ

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ನಡುಗಿಸುವ ಚಳಿ ತಾಳದೇ ಕವುದಿಯ ಒಳಗೆ ಮುದುರಿಕೊಂಡು ಗಾಢ ನಿದ್ದೆಯಲ್ಲಿದ್ದಾಗಲೇ ಯಂತ್ರಗಳ ಕರ್ಕಶ ಸದ್ದು ಕೇಳಿ ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ.  ಹೊರಗೆ ಓಡಿ ಬಂದು ನೋಡಿದರೆ, ಕಾರ್ಗತ್ತಲ ಸೀಳಿಕೊಂಡು ಬಂದ ಜೆಸಿಬಿ ಯಂತ್ರಗಳು ಗ್ರಾಮದ ಸುತ್ತಲೂ ದೊಡ್ಡ ಕಂದಕವನ್ನೇ ನಿರ್ಮಿಸುತ್ತಿವೆ. ಕ್ಷಣಕಾಲ ಏನೂ ತೋಚದೆ ನಿಂತಿದ್ದ ಅವರಿಗೆ ಕತ್ತಲು ಮರೆಯಾಗಿ ಬೆಳಕು ಮೂಡುವ ಹೊತ್ತಿಗೆ ಮತ್ತೊಂದು ಕಂಟಕ ಎದುರಾಗಿರುವ ವಾಸ್ತವ ಅರಿವಿಗೆ ಬಂದಿದೆ.
–ಅದು ಶಿವಮೊಗ್ಗ ನಗರದಿಂದ 15 ಕಿ.ಮೀ. ದೂರದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಶೆಟ್ಟಿಹಳ್ಳಿ ಎಂಬ ಪುಟ್ಟ ಗ್ರಾಮ.

ಈ ಗ್ರಾಮ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ಸೇರಿದೆ. ಇಲ್ಲಿ ನೆಲೆಸಿರುವ ಜನರು ನೆಲೆ ಕದಲಿಸಿ ಆಚೀಚೆ ಒತ್ತುವರಿ ಮಾಡಬಾರದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸರಹೊತ್ತಿನಲ್ಲೇ ಗ್ರಾಮಕ್ಕೆ ಬಂದು ಜೆಸಿಬಿ ಯಂತ್ರಗಳನ್ನು ಬಳಸಿ ದೊಡ್ಡ ಕಂದಕ ತೆಗೆಯುತ್ತಿದ್ದರು. ಬೆಳಿಗ್ಗೆ ಜನರು ನಿತ್ಯದ ಕೆಲಸಗಳಿಗೆ ತೆರಳಲು ಜಾನುವಾರುಗಳ ಜತೆಗೆ ಕಂದಕ ದಾಟಲಾಗದೇ ಪರದಾಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಅಷ್ಟೊಂದು ದೂರ ಆ ದಟ್ಟ ಕಾನನದಲ್ಲಿ ಈ ಜನರು ನೆಲೆ ನಿಂತಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟ ಜಾಡು ಶರಾವತಿ ಮುಳುಗಡೆ ಪ್ರದೇಶಕ್ಕೆ ತಂದು ನಿಲ್ಲಿಸಿತು.

ಮುಳುಗಡೆಯ ಇತಿಹಾಸ: ಪ್ರಪಂಚದ ಯಾವುದೇ ಭಾಗದಲ್ಲಿ ಜಲಾಶಯಗಳ ನಿರ್ಮಾಣಕ್ಕಾಗಿ ಅಲ್ಲಿನ ಜನ ವಸತಿಪ್ರದೇಶವನ್ನು ಒಮ್ಮೆ ಮಾತ್ರ ಕಳೆದುಕೊಂಡಿದ್ದಾರೆ. ಆದರೆ, ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಜನರನ್ನು ಜಲಾಶಯಗಳ ನಿರ್ಮಾಣಕ್ಕಾಗಿಯೇ ಹಲವು ಬಾರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಕ್ಕಲೆಬ್ಬಿಸಲಾಗಿದೆ.

ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮೂಲ ನಿವಾಸಿಗಳು ಜಲಾಶಯಗಳಿಗಾಗಿ ಮೂಲನೆಲೆ ಕಳೆದುಕೊಳ್ಳುತ್ತಾ ಅದೇ ದಟ್ಟ ಕಾನನದ ನಡುವೆ ಅಲೆಯುತ್ತಾ ಸಾಗಿದ್ದಾರೆ. ಒಂದೇ ಕಡೆ ಕೂಡು ಕುಟುಂಬವಾಗಿ ಬದುಕು ಸಾಗಿಸಿದ ಹಲವು ಜನರು ಪಶ್ಚಿಮಘಟ್ಟದ ಶ್ರೇಣಿಯ ಒಳಗೆ ಚದುರಿ ಹೋಗಿದ್ದಾರೆ. ನೀರು, ಮೇವಿನ ಅನುಕೂಲ ಇದ್ದ ಜಾಗದಲ್ಲಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಆ ನೆಲೆಗಳು ಇಂದಿಗೂ ಭದ್ರವಾಗಿಲ್ಲ. ಕಾಯಂ ನೆಲೆಗಾಗಿ, ಬದುಕಿನ ಭದ್ರತೆಗಾಗಿ ಈಗಲೂ ಸೆಣಸಾಡುತ್ತಿದ್ದಾರೆ.

ಮಲೆನಾಡಿನ ಜೀವ ನದಿ ಶರಾವತಿಗೆ ಸ್ವಾತಂತ್ರ್ಯ ಪೂರ್ವದಲ್ಲೇ ಮಡೆನೂರು–ಹಿರೇಭಾಸ್ಕರ ಅಣೆಕಟ್ಟೆ ನಿರ್ಮಿಸಲಾಗಿತ್ತು. 1958–64 ಅವಧಿಯಲ್ಲಿ ಜಲ ವಿದ್ಯುತ್‌ ಯೋಜನೆಗಳಿಗಾಗಿಯೇ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲಾಯಿತು. ಈ ಅಣೆಕಟ್ಟೆ ನಿರ್ಮಾಣದ ನಂತರ ಹಿರೇಭಾಸ್ಕರ ಲಿಂಗನಮಕ್ಕಿ ಜಲಾಶಯದ ಒಳಗೆ ಲೀನವಾಯಿತು. ನಂತರ ಚಕ್ರ–ಸಾವೇಹಕ್ಲು ಅವಳಿ ಅಣೆಕಟ್ಟೆ, ಮಾಣಿ ನಿರ್ಮಾಣವಾದವು. ಮತ್ತೊಂದು ತುದಿಯಲ್ಲಿ ನೀರಾವರಿ ಉದ್ದೇಶಕ್ಕೆ ಅದೇ 60ರ ದಶಕದಲ್ಲಿ ಭದ್ರಾ ನದಿಗೆ ಲಕ್ಕವಳ್ಳಿ ಬಳಿ, ತುಂಗಾ ನದಿಗೆ ಗಾಜನೂರು ಬಳಿ ಅಣೆಕಟ್ಟೆ ನಿರ್ಮಿಸಲಾಯಿತು.

ಬೀದಿಪಾಲಾದ ಯೋಜನಾ ಸಂತ್ರಸ್ತರು: 1960ರಿಂದ 1980ರವರೆಗಿನ ಎರಡು ದಶಕದ ಅವಧಿಯಲ್ಲಿ ವಿವಿಧ ಯೋಜನೆಗಳಿಗಾಗಿ ನೆಲೆ ಕಳೆದುಕೊಂಡ ಸಾವಿರಾರು ಸಂತ್ರಸ್ತ ಕುಟುಂಬಗಳನ್ನು ಸರ್ಕಾರ ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಭದ್ರಾವತಿ ತಾಲ್ಲೂಕುಗಳ ವ್ಯಾಪ್ತಿಯ ಖಾಲಿ ಜಾಗಗಳಿಗೆ ಸ್ಥಳಾಂತರಿಸಿತ್ತು. ಲಿಂಗನಮಕ್ಕಿ ಯೋಜನೆಗಾಗಿಯೇ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು.  ಹಲವು ಸಮುದಾಯಗಳ ಬದುಕು ಮತ್ತು ಭವಿಷ್ಯವೂ ಅಗಾಧ ಜಲರಾಶಿಯ ಒಳಗೆ ಮುಳುಗಿ ಹೋಯಿತು. ತೋಟ, ಗದ್ದೆ, ಜಮೀನು, ಮನೆಗಳ ದಾಖಲೆ ಇದ್ದವರಿಗೆ ಮಾತ್ರ ಪರಿಹಾರ, ಬದಲಿ ಜಮೀನು ಹಕ್ಕುಪತ್ರ ನೀಡಲಾಯಿತು. ಗೇಣಿ, ಕೂಲಿ ಮಾಡಿಕೊಂಡು, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಜೀವನ ಸಾಗಿಸುತ್ತಿದ್ದ ಜನರು ಬೀದಿಪಾಲಾದವರು. 

ಜಲ ವಿದ್ಯುತ್‌ ಯೋಜನೆಗಳಿಂದ ಸಂತ್ರಸ್ತರಾದವರಲ್ಲಿ ಶೇ 90ರಷ್ಟು ಜನರಿಗೆ ಭೂಮಿಯ ಹಕ್ಕು ಇರಲಿಲ್ಲ. ಶರಾವತಿ ಕಣಿವೆ ಯೋಜನೆಗಳು ಅನುಷ್ಠಾನಗೊಳ್ಳುವಾಗ ಭೂ ಒಡೆತನದ ಹಕ್ಕು ಬೆರಳೆಣಿಕೆಯ ಜನರಲ್ಲಿ ಇತ್ತು. ಹಾಗಾಗಿ, ಭೂ ದಾಖಲೆ ಇದ್ದವರಿಗೆ ಮಾತ್ರ ಸಾಕಷ್ಟು ಭೂಮಿ ನೀಡಲಾಗಿತ್ತು. ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದ ಗೇಣಿದಾರರಿಗೆ ಸೂಕ್ತ ನ್ಯಾಯ ಸಿಗಲೇ ಇಲ್ಲ. ಅಂತಹ ಗೇಣಿದಾರರು ಗುಳೆ ಬಂತು ನೆಲೆನಿಂತ ಹೊಸ ಸ್ಥಳದಲ್ಲಿಯೇ ಸಾಗುವಳಿ ಮಾಡಿಕೊಂಡು ಜೀವನ ಆರಂಭಿಸಿದ್ದರು. ಈಗಲೂ ಸರ್ಕಾರದ ಯೋಜನಾ ವರದಿಯಲ್ಲಿ ಸಂತ್ರಸ್ತರ ಪುನರ್ವಸತಿಗಾಗಿ ಹೇರಳವಾದ ಅನುದಾನ ಮೀಸಲಿದೆ. ಆದರೆ, ಸಂತ್ರಸ್ತರಿಗೆ ನೀಡಿದ ಭರವಸೆಗಳು ಮಾತ್ರ ಹಾಗೆಯೇ ಉಳಿದಿವೆ.

ಇಂದಿಗೂ ದೊರಕದ ಭೂಹಕ್ಕು
ಸರ್ಕಾರದ ಉದಾಸೀನ, ಅರಣ್ಯ ಇಲಾಖೆಯ ಬಿಗಿನಿಲುವುಗಳ ಪರಿಣಾಮ ಇಂದಿಗೂ ಭೂಮಿಯ ಮೇಲಿನ ತಮ್ಮ ಹಕ್ಕು ಅನುಭವಿಸಲು ಸಾಧ್ಯವಾಗಿಲ್ಲ. ಶರಾವತಿ ಮುಳುಗಡೆ ಸೇರಿದಂತೆ ಎಲ್ಲ ಯೋಜನೆಗಳ ಸಂತ್ರಸ್ತರನ್ನು ಸ್ಥಳಾಂತರಿಸುವಾಗ, ಸರ್ಕಾರ ಅವರು ಕಳೆದುಕೊಂಡ ಭೂಮಿಯ ಎರಡು ಪಟ್ಟು ನೀಡುವ ಭರವಸೆ ನೀಡಿತ್ತು. ಆದರೆ, ಕೊಟ್ಟದ್ದು ಮಾತ್ರ ಅಲ್ಪ ಪ್ರಮಾಣದ ಭೂಮಿ.  ಸಂತ್ರಸ್ತರು ನೆಲೆನಿಂತ ಭೂಮಿಯನ್ನು  ಕಂದಾಯ ಭೂಮಿ ಎಂದು ಪರಿಗಣಿಸಿ ಭೂ ಕಂದಾಯ ಕಾಯ್ದೆ 4 (1)ರ ಅಡಿ ಅಧಿಸೂಚನೆಯನ್ನೂ ಹೊರಡಿಸಿತ್ತು.

ಆದರೆ, ಅದನ್ನು ಅರಣ್ಯ ಇಲಾಖೆ ದಾಖಲೆಗಳಿಂದ ಬಿಡುಗಡೆ ಮಾಡದ ಪರಿಣಾಮ ಕಂದಾಯ ದಾಖಲೆಗಳಲ್ಲಿ ಆ ಪ್ರದೇಶ ಕಂದಾಯ ಭೂಮಿ ಎಂದು, ಅರಣ್ಯ ದಾಖಲೆಗಳಲ್ಲಿ ಅರಣ್ಯ ಭೂಮಿ ಎಂದು ಉಳಿದುಕೊಂಡಿದೆ.

ಅಂದು ಸರ್ಕಾರ ಮಾಡಿದ ಯಡವಟ್ಟು 30 ವರ್ಷಗಳ ನಂತರ ಮತ್ತೊಂದು ಸಮಸ್ಯೆ ಸೃಷ್ಟಿಸಿತು. ಅರಣ್ಯ ಒತ್ತುವರಿ ಪ್ರಕರಣ ಕೋರ್ಟ್‌ ಮುಂದೆ ಬಂದಾಗ ಈ ಎಲ್ಲ ಪ್ರದೇಶ ಅರಣ್ಯ ವ್ಯಾಪ್ತಿಗೆ ಸೇರಿದೆ ಎಂದು ಅರಣ್ಯ ಇಲಾಖೆ ಕೋರ್ಟ್‌ಗೆ ದಾಖಲೆ ಸಲ್ಲಿಸಿತ್ತು.

1995 ಸುಪ್ರೀಂಕೋರ್ಟ್‌ ಮಧ್ಯಂತರ ಆದೇಶ ನೀಡಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿತ್ತು. ಆದರೆ, ಈ 30 ವರ್ಷಗಳ ಅವಧಿಯಲ್ಲಿ ಮಲೆನಾಡಿನ ಭಾಗದಲ್ಲಿ ನಿರ್ಮಾಣವಾದ ಜಲ ವಿದ್ಯುತ್‌ ಯೋಜನೆಗಳು, ಅಲ್ಲಿನ ಜನರನ್ನು ಒಕ್ಕಲೆಬ್ಬಿಸಿದ ಪ್ರಕರಣ, ಪುನರ್ವಸತಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲೇ ಇಲ್ಲ. ಹಾಗಾಗಿ, ಸಂತ್ರಸ್ತರ ನೆಲೆಗಳು, ಮನೆ, ಶಾಲೆ, ಗೋಮಾಳ, ಸಾಗುವಳಿ  ಜಮೀನು, ಕಿರು ಅರಣ್ಯ ಸೇರಿದಂತೆ ಎಲ್ಲವೂ ಅರಣ್ಯ ಎಂದೇ ಭಾವಿಸಲಾಯಿತು.

ಸಂತ್ರಸ್ತರಿಗೆ ಉರುಳಾದ ಅರಣ್ಯ ನಿಯಮಗಳು
ಮುಳುಗಡೆ ನಂತರ ಸರ್ಕಾರ ಹಲವರಿಗೆ ಬಯಲು ಪ್ರದೇಶಗಳಲ್ಲಿ ಹೊಸ ನೆಲೆ ತೋರಿಸಿತ್ತು. ಆದರೆ, ತಲೆತಲಾಂತರಗಳಿಂದ ಅರಣ್ಯವನ್ನೇ ನಂಬಿಕೊಂಡು ಬಂದಿದ್ದ  ಮಲೆನಾಡಿಗರಿಗೆ ಬಯಲು ಸೀಮೆ ಪ್ರದೇಶ ಸರಿಕಾಣಲಿಲ್ಲ. ಹಾಗಾಗಿಯೇ, ಕಾಡಿನ ಉತ್ಪನ್ನ ಹೇರಳವಾಗಿ ದೊರೆಯುವ, ಜಾನುವಾರುಗಳಿಗೆ ಮೇವಿನ ಲಭ್ಯತೆ ಇರುವ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಪುರದಾಳು ಮತ್ತಿತರ ಭಾಗಗಳ ಅರಣ್ಯ ಪ್ರದೇಶಗಳಲ್ಲೇ  ನೆಲೆ ನಿಂತರು. ನೆಲೆ ನಿಂತ ದಶಕದ ನಂತರ ಅರಣ್ಯ ಇಲಾಖೆ ಕೈಗೊಂಡ ಬಿಗಿ ನಿಯಮಗಳು ಅವರಿಗೆ ಉರುಳಾಗಿ ಪರಿಣಿಮಿಸಿದವು.

ಹಲವು ಅರಣ್ಯ ಯೋಜನೆಗಳ ಘೋಷಣೆ: ಸಾಗರ, ಹೊಸನಗರ ತೀರ್ಥಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯ ಅರಣ್ಯ ಪ್ರದೇಶವನ್ನು ಶರಾವತಿ, ಸೋಮೇಶ್ವರ, ಶೆಟ್ಟಿಹಳ್ಳಿ, ಮೂಕಾಂಬಿಕಾ, ಭದ್ರಾ ಅಭಯಾರಣ್ಯ ಎಂದು ಘೋಷಿಸಲಾಗಿದೆ. ಹುಲಿ ಸಂರಕ್ಷಣಾ ಯೋಜನೆಗಳಿಗೂ ತಾಣ ಕಲ್ಪಿಸಲಾಗಿದೆ.

1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ, ಪರಿಸರ ಸೂಕ್ಷ್ಮವಲಯ, ಜೀವ ವೈವಿಧ್ಯ ತಾಣ ಮತ್ತಿತರ ಯೋಜನೆಗಳಿಂದಾಗಿ ಮತ್ತಷ್ಟು ಸಂಕಷ್ಟಗಳು ಎದುರಾಗಿವೆ. 

ಸಂತ್ರಸ್ತರಿಗೂ ಅಡ್ಡಿಯಾದ ಒತ್ತುವರಿ ಸಮಸ್ಯೆ
1980ರ ನಂತರ ಮಲೆನಾಡಿನ ಭಾಗದಲ್ಲಿ ಒತ್ತುವರಿ ಪ್ರಮಾಣ ಗಣನೀಯವಾಗಿ ಏರಿಕೆಯಾಗತೊಡಗಿದೆ. ಆ ಅವಧಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ ಭೂಮಿಯಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಹತ್ತಿ ಬೆಳೆಯಲು ಆರಂಭಿಸಿದರು. 1990ರ ನಂತರ ಮೆಕ್ಕೆಜೋಳ, ಶುಂಠಿ ಮಲೆನಾಡಿಗೆ ಲಗ್ಗೆ ಇಟ್ಟಿತು. ಜಿಲ್ಲೆಯ ಒಟ್ಟು ಕೃಷಿ ಭೂಮಿಯಲ್ಲಿ ಶೇ70ರಷ್ಟು ಭಾಗ 1980–90ರ ಅವಧಿಯಲ್ಲಿ ಸಾಗುವಳಿಯಾಗಿದೆ. ಹೀಗೆ ಮಲೆನಾಡಿನಲ್ಲಿ ನಡೆದ ಅವ್ಯಾಹತ ಸಾಗುವಳಿ ಪರಿಣಾಮ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿತು. ಇದು ಯೋಜನಾ ಸಂತ್ರಸ್ತರಿಗೂ ಸಮಸ್ಯೆಯಾಗಿ ಪರಿಣಮಿಸಿತು.

1970ರ ದಶಕದಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿದ ಜಮೀನಿನ ಭೂ ಒಡೆತನ ಪಡೆಯಲು ಆಯಾ ತಾಲ್ಲೂಕಿನ ಭೂ ನ್ಯಾಯ ಮಂಡಳಿ ಮುಂದೆ ದಾಖಲೆ ಸಲ್ಲಿಸಬೇಕಿತ್ತು. ಪರಿಶೀಲನೆ ನಡೆಸಿ, ನ್ಯಾಯ ಮಂಡಳಿ ಆದ್ಯತೆಯ ಮೇಲೆ ಭೂಮಿಯ ಹಕ್ಕು ನೀಡುತ್ತಿತ್ತು. 1990ರ ನಂತರ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಬಗರ್‌ಹುಕುಂ ಅಕ್ರಮ–ಸಕ್ರಮ ಸಮಿತಿಗಳು ರಚನೆಯಾದವು.  50, 100 ಎಕರೆ ಅಡಿಕೆ ಇದ್ದವರೂ ಸಾಗುವಳಿ ಪ್ರದೇಶ ವಿಸ್ತರಿಸಿಕೊಂಡರು.

ರಾಜ್ಯ ಸರ್ಕಾರ ಮೊದಲ ಬಾರಿಗೆ 1991–92ರಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು 94 (ಎ) ಅಡಿ ನಮೂನೆ 50ರಲ್ಲಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತು. ಹೀಗೆ ಸಲ್ಲಿಸಿದ ಅರ್ಜಿಗಳನ್ನು ಶಾಸಕರ ನೇತೃತ್ವದ ಬಗರ್‌ಹುಕುಂ ಸಮಿತಿಗಳು ಪರಿಶೀಲಿಸಿ, ಅರ್ಹ ಅರ್ಜಿಗಳನ್ನು ಮಾನ್ಯಮಾಡಿ ಸಾಗುವಳಿದಾರರಿಗೆ ಭೂ ಹಕ್ಕು ನೀಡಿದವು. ಸಾಗರ, ಸೊರಬ ಹೊರತುಪಡಿಸಿದರೆ ಉಳಿದ ಭಾಗಗಳಲ್ಲಿ ಅರ್ಜಿಗಳು ಸರಿಯಾಗಿ ವಿಲೇವಾರಿ ಆಗಲಿಲ್ಲ.

ರಾಜ್ಯ ಸರ್ಕಾರ 1998–99ರಲ್ಲಿ ಮತ್ತೆ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ನಿಯಮ 94 (ಬಿ) ಅಡಿ ನಮೂನೆ 53ರಲ್ಲಿ ಬಗರ್‌ಹುಕುಂ ಸಮಿತಿಗಳ ಮುಂದೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತು.

ಈ ನಿಯಮದ ಪ್ರಕಾರ ಭೂ ರಹಿತರಿಗೆ ಗರಿಷ್ಠ 4.30 ಎಕರೆ ಭೂಮಿ ಮಂಜೂರು ಮಾಡಲು ಆದೇಶಿಸಿ, 10 ವರ್ಷಕ್ಕೆ ಮೊದಲು ಉಳುಮೆ ಮಾಡಿದವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪ್ರಸ್ತುತ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಮುತುವರ್ಜಿಯ ಫಲವಾಗಿ ಬಹುತೇಕ ಜನರಿಗೆ ಸಾಗುವಳಿ  ಒಡೆತನ ಸಿಕ್ಕಿದೆ.

ತೆರವು ಕಾರ್ಯಾಚರಣೆಗಳು
ಒತ್ತುವರಿ ತೆರವಿಗೆ ಸರ್ಕಾರ ಹಲವು ಬಾರಿ ಕ್ರಮ ಕೈಗೊಂಡಿದೆ. ಇದು ಯೋಜನಾ ಸಂತ್ರಸ್ತರ ಮೇಲೂ ಪರಿಣಾಮ ಬೀರಿದೆ.
ವಿ.ಸುಬ್ರಮಣಿಯನ್ ವರದಿಯಂತೆ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ರಿಟ್‌ ಅರ್ಜಿ ದಾಖಲಾಗಿ, ಕೋರ್ಟ್ ನೋಟಿಸ್‌ ನೀಡಿದ ತಕ್ಷಣ ಸರ್ಕಾರ ‘ರಾಜ್ಯದ ಒಟ್ಟು ಅರಣ್ಯ ಭೂಮಿಯಲ್ಲಿ 2,04,442 ಎಕರೆ ಪ್ರದೇಶ ಒತ್ತುವರಿಯಾಗಿದೆ. ಒತ್ತುವರಿ ಮಾಡಿದವರ ವಿರುದ್ಧ  11,0626 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಮಾಣಪತ್ರ ಸಲ್ಲಿಸಿತ್ತು. ಇದರ ಪ್ರಕಾರ ಜಿಲ್ಲೆಯಲ್ಲಿ ಒತ್ತುವರಿಯಾದ ಅರಣ್ಯ ಭೂಮಿ 84,502 ಎಕರೆ. ದಾಖಲಾದ ಪ್ರಕರಣ 27,371. ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ಗೆ ಪೂರಕವಾಗಿ ಒತ್ತುವರಿ ತೆರವುಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ, ಪರಿಸರ, ಗೃಹ, ಅರಣ್ಯ, ಕಂದಾಯ ಇಲಾಖೆ ಕಾರ್ಯದರ್ಶಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿತ್ತು.

ವರವಾದ ಅರಣ್ಯಹಕ್ಕು ಕಾಯ್ದೆ: ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಒಪ್ಪಿಗೆ ಪಡೆದು 1978ರಲ್ಲಿ 14,848 ಹೆಕ್ಟೇರ್‌ ಪ್ರದೇಶ ಅರಣ್ಯ ವಾಸಿಗಳಿಗೆ ಮಂಜೂರು ಮಾಡಲಾಗಿತ್ತು. 2012ರಲ್ಲಿ ಮತ್ತೆ ತಿದ್ದುಪಡಿಗೊಂಡ ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ  ಹಕ್ಕುಗಳ ಮಾನ್ಯತಾ ಕಾಯ್ದೆ–2006’ ಈ ಕಾಯ್ದೆಯ ಅನ್ವಯ ಭೂಹಕ್ಕಿಗಾಗಿ ಅರ್ಜಿ ಸಲ್ಲಿಸಲು ಮುಳುಗಡೆ ಸಂತ್ರಸ್ತರಿಗೂ ಅವಕಾಶ ನೀಡಲಾಗಿತ್ತು.

ಪ್ರತಿ ಗ್ರಾಮದಲ್ಲೂ ಸ್ಥಳೀಯರನ್ನೇ ಒಳಗೊಂಡ ಗ್ರಾಮ ಅರಣ್ಯ ಹಕ್ಕು ಸಮಿತಿ ರಚಿಸಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ, ಒಬ್ಬರಿಗೆ ಕನಿಷ್ಠ 10 ಎಕರೆವರೆಗೆ ಅರಣ್ಯಭೂಮಿಯ ಹಕ್ಕಿನ ಮಾನ್ಯತೆ ನೀಡುವ ಅಧಿಕಾರವನ್ನು ಈ ಸಮಿತಿಗೆ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳ ಫಲವಾಗಿ ಹಲವು ಸಂತ್ರಸ್ತರಿಗೆ ಭೂಮಿಯ ಒಡೆತನ  ದೊರೆತಿದೆ.

ಸೌಲಭ್ಯ ವಂಚಿತ ಗ್ರಾಮಗಳು: ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಮುಳುಗಡೆ ಸಂತ್ರಸ್ತರು ನೆಲೆ ನಿಂತ ಪ್ರಮುಖ ಗ್ರಾಮಗಳು. 80 ಕುಟುಂಗಳು ಈ ಗ್ರಾಮದಲ್ಲಿ ನೆಲೆಸಿವೆ. ಈ ಗ್ರಾಮಗಳಿಗೆ ಇಂದಿಗೂ ವಿದ್ಯುತ್‌ ಸೌಲಭ್ಯ, ರಸ್ತೆ ಸಂಪರ್ಕ ದೊರೆತಿಲ್ಲ. ಬಸ್‌ ಸೌಕರ್ಯವಿಲ್ಲ. ಅಲ್ಲಿನ ಮಕ್ಕಳು 5ನೇ ತರಗತಿಯ ನಂತರ ದೂರದ ಊರುಗಳಿಗೆ ಶಿಕ್ಷಣಕ್ಕೆ ಹೋಗಬೇಕಿದೆ. ಸರ್ಕಾರದ ಪಡಿತರ ಪಡೆಯಲೂ ವೃದ್ಧರು, ಮಹಿಳೆಯರೂ ಎನ್ನದೇ 12 ಕಿ.ಮೀ. ದೂರದ ಪುರದಾಳು ಗ್ರಾಮಕ್ಕೆ ನಡೆಯಬೇಕಿದೆ.

ಇಂತಹ ವ್ಯವಸ್ಥೆಯ ಮಧ್ಯೆಯೇ ಅಲ್ಲಿನ ಜನ 50 ವರ್ಷ ಪೂರ್ಣಗೊಳಿಸಿದ್ದಾರೆ. ದಟ್ಟ ಕಾನನದ ಮಧ್ಯೆ ಕನಿಷ್ಠ ನಾಗರಿಕ ಸೌಲಭ್ಯವೂ ಇಲ್ಲದ ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಪುರದಾಳು, ಮಲೆಶಂಕರ, ರೇಚಿಕೊಪ್ಪ, ಕಲ್ಲುಕೊಪ್ಪ, ಸಂಕ್ಲಾಪುರ, ದೋಬೈಲ್‌ಘಾಟ್‌, ಹಾರೆಹಿತ್ತಲು, ಅಡ್ಡೇರಿ, ಕಟ್ಟಿಗೆಹಳ್ಳಿ, ಹುಣಸೆಕಟ್ಟೆ, ಎರೆಕೊಪ್ಪ, ಕೆರೆ ಹಳ್ಳಿ, ಚೌಡನಹಳ್ಳಿ, ರೇವಚಿಕೊಪ್ಪ ಸೇರಿದಂತೆ ಇನ್ನೂ ಹಲವು ಮುಳುಗಡೆ ಸಂತ್ರಸ್ತರ ಗ್ರಾಮಗಳಿಗೂ ಅಗತ್ಯ ಸೌಲಭ್ಯ ದೊರೆತಿಲ್ಲ.

ಸಂಸತ್ರಸ್ತರಿಗೆ ಹಂಚಿಕೆ ಮಾಡಿದ್ದರೂ ಅರಣ್ಯ ದಾಖಲೆಗಳಲ್ಲೇ ಉಳಿದುಕೊಂಡಿದ್ದ ಸುಮಾರು 12 ಸಾವಿರ ಎಕರೆ ಭೂಮಿ ಕಂದಾಯ ವ್ಯಾಪ್ತಿಗೆ ತಂದು ಸಂತ್ರಸ್ತರಿಗೆ ನೀಡಲು ಕಳೆದ ವರ್ಷ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್‌ಗೋಪಾಲ್‌ ಅವಿರತವಾಗಿ ಶ್ರಮಿಸಿದ್ದರು.

ಅವರ ಶ್ರಮದ ಫಲವಾಗಿ ಡಿಸೆಂಬರ್‌–2916ರ ಅಂತ್ಯದ ವೇಳೆಗೆ 2617 ಎಕರೆ ದೊರೆತಿದೆ. ಸೂಡೂರು ಅರಣ್ಯ ವ್ಯಾಪ್ತಿಯ ಸಿಂಗರಹಳ್ಳಿ, ಕರಡಿಬೆಟ್ಟ ಅರಣ್ಯ ವ್ಯಾಪ್ತಿಯ ತಪ್ಪೂರು, ಹಿರೆಹರಕೆ, ಕೊಣೆಹೊಸೂರು, ಶೆಟ್ಟಿಕೆರೆ, ಅಂಜನಾಪುರ, ಉಡುಗಣಿ, ಕಲ್ಮನೆ, ಅರಸಿನಗೆರೆ, ಕೊಪ್ಪ, ಶಿಕಾರಿಪುರ ಕಸಬಾ, ಅಣ್ಣಾಪುರ, ಕ್ಯಾಸನೂರು ಅರಣ್ಯ ವ್ಯಾಪ್ತಿಯ ಉಳವಿ, ಹೊಳೆಕೊಪ್ಪ, ಬೆಳ್ಳಂದೂರು ಮೀಸಲು ಅರಣ್ಯ ವ್ಯಾಪ್ತಿಯ ಮುಡುಬ ಸಿದ್ದಾಪುರ, ನಾಡಹಳ್ಳಿ ಗ್ರಾಮದ ಬಳಿ 863 ಎಕರೆ, ಕೋಡೂರು ಮೀಸಲು ಅರಣ್ಯ ವ್ಯಾಪ್ತಿಯ ಕೋಡೂರು, ಹೊಸಕೇರಿ, ಜೇನಿ ಮೀಸಲು ಅರಣ್ಯ ವ್ಯಾಪ್ತಿಯ ಮಸಕಲ್ಲು, ಜೇನಿ, ಬರುವೆ ಅರಣ್ಯ ವ್ಯಾಪ್ತಿಯ ತಮ್ಮಡಿಹಳ್ಳಿ,ಬೆನವಳ್ಳಿ, ಮಸರೂರು ಅರಣ್ಯ ವ್ಯಾಪ್ತಿಯ ಶಾಂತಿಕೆರೆ, ವಡೇರಕೊಪ್ಪ ಗ್ರಾಮದ ಬಳಿ 701 ಎಕರೆ, ಕಾರ್ಗಲ್‌ ಮೀಸಲು ಅರಣ್ಯ ವ್ಯಾಪ್ತಿಯ ಬಳಗಲ್ಲೂರು, ಇಡುವಾಣಿ, ಆವಿನಹಳ್ಳಿ, ಮುಂಬಾಳು, ಕಾಸ್ಪಡಿ, ಬರೂರು, ಭೈರಾಪುರ, ಕೊರ್ಲಿಕೊಪ್ಪ, ಚನ್ನಶೆಟ್ಟಿಕೊಪ್ಪ, ಹೊಸೂರು, ನರಸೀಪುರ, ತಳಗಿನ ಮನೆ, ಚಿಕ್ಕಬಿಲಗುಂಜಿ, ಹಿರೇಹಾರಕ, ಮಲಂದೂರು ಅರಣ್ಯವ್ಯಾಪ್ತಿಯ ಮಲ್ಲಂದೂರು ಭಾಗದಲ್ಲಿ 555 ಎಕರೆ, ಮತ್ತಿಕೈ ಅರಣ್ಯ ವ್ಯಾಪ್ತಿಯ ಹೊಸೂರು, ಕಾರಕ್ಕಿ, ಮತ್ತಿಕೈ, ಆಲುವಳ್ಳಿ, ಪುಣಜೆ, ಮುತ್ತೂರು ಗ್ರಾಮಗಳ ಬಳಿ 267 ಎಕರೆ ಭೂಮಿ ದೊರೆತಿದೆ. ಉಳಿದ ಜಮೀನಿನ ಹಕ್ಕು ಕೊಡಿಸುವ ಪ್ರಯತ್ನ ಮುಂದುವರಿದಿದೆ.

ಎಷ್ಟೋ ಬಾರಿ ಕಾಯಿಲೆ ಬಿದ್ದವರು, ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಲು ರಸ್ತೆ, ವಾಹನಗಳಿಲ್ಲದ ಕಾರಣ ಹಲವರು ಮೃತ ಪಟ್ಟಿದ್ದಾರೆ. ವಿದ್ಯುತ್ ಸೌಲಭ್ಯವಿಲ್ಲದ ಕಾರಣ ವಿಷಜಂತುಗಳ ಕಾಟಕ್ಕೆ  ಪ್ರಾಣ ತೆತ್ತಿದ್ದಾರೆ. ದೂರದ ಊರಿಗೆ ಮಕ್ಕಳನ್ನು ಕಳುಹಿಸಿ, ಓದಿಸಲಾಗದ ಕಾರಣ ಅವರೂ ನಮ್ಮಂತೆ ದಡ್ಡರಾಗಿದ್ದಾರೆ. ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದ ನಮಗೆ ಇಂತಹ ಸ್ಥಿತಿ ಬಂದಿದೆ. ನಮ್ಮ ಮುಂದಿನ ತಲೆಮಾರಿಗಾದರೂ ಸರ್ಕಾರ ಸೌಲಭ್ಯ ಕಲ್ಪಿಸಲಿ
–ಹೆಬ್ಬೂರು ಬೀರಾನಾಯ್ಕ ಚಿತ್ರಶೆಟ್ಟಿಹಳ್ಳಿ


ಮೊದಲು ನೀರಾವರಿ ಸೌಲಭ್ಯ ಕಲ್ಪಿಸಲಿಎಲ್ಲವನ್ನೂ ತೊರೆದು ಇಲ್ಲಿ ಬಂದು ನೆಲೆಸಿದ್ದೇವೆ. ಹಿಂದೆ ಉತ್ತಮ ಮಳೆಯಾಗುತ್ತಿದ್ದ ಕಾರಣ ಬೆಳೆಯಾಗುತ್ತಿತ್ತು. ಇಂದು ಮಳೆ ಕಡಿಮೆಯಾಗಿದೆ. ಬೆಳೆ ಕಷ್ಟವಾಗಿದೆ. ಹಾಗಾಗಿ, ಏತನೀರಾವರಿ ಸೌಲಭ್ಯ ಕಲ್ಪಿಸಿಕೊಡಲಿ. ಕಾನೆಹಳ್ಳದಿಂದ ನೀರು ಹರಿಸುವ ಯೋಜನೆ ಶೀಘ್ರ ಜಾರಿಗೊಳಿಸಲಿ.
– ಹುರಳಿ ಮಂಜಪ್ಪ ನಾಯ್ಕ ಪುರಾದಾಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT