ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ: ಮೂರು ಪ್ರತಿಭಟನೆ

ನೂತನ ಪಡಿತರ ಪದ್ಧತಿಗೆ ವಿರೋಧ lಬೀದಿಗಿಳಿದ ಮಹಿಳೆಯರು lಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ
Last Updated 17 ಜನವರಿ 2017, 5:51 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.

ನೂತನ ಪಡಿತರ ಪದ್ಧತಿಗೆ ವಿರೋಧ: ಪಡಿತರ ವಿತರಣಾ ಪದ್ಧತಿಯಲ್ಲಿ ಹೊಸದಾಗಿ ಜಾರಿಗೆ ತಂದಿರುವ ನಗದು ಕೂಪನ್ ಪದ್ಧತಿ ವಿರೋಧಿಸಿ  ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಹಿಳೆಯರು ಪ್ರತಿಭಟನೆ ಮಾಡಿದರು.

‘ನಮಗೆ ಹಣ ಬೇಡ ರೇಷನ್ ಕೊಡಿ’, ‘ಕೂಪನ್ ಪದ್ಧತಿ ರದ್ದು ಮಾಡಿ’, ‘ಅರ್ಹರಿಗೆ ಕೂಡಲೇ ಪಡಿತರ ಚೀಟಿ ವಿತರಿಸಿ’, ‘ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಪಡಿಸಿ’ ಎಂಬ ಘೋಷಣೆ ಕೂಗಿದರು.

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್ ಮಾತನಾಡಿ, ಬಿಜೆಪಿಯು ಸಾರ್ವತ್ರಿಕ ಚುನಾವಣೆಯಲ್ಲಿ ಸಾರ್ವತ್ರಿಕ ಆಹಾರ ಭದ್ರತಾ ವ್ಯವಸ್ಥೆ ಜಾರಿಗೊಳಿಸುವ ವಾಗ್ದಾನ ಮಾಡಿತ್ತು. ಅದರೆ ಅದಕ್ಕೆ ತದ್ವಿರುದ್ಧವಾಗಿ ಹಣಕಾಸು ಸಚಿವರು ಆಹಾರ ಭದ್ರತಾ ಕಾಯ್ದೆ ಸೇರಿದಂತೆ ಎಲ್ಲಾ ಯೋಜನೆಗಳನ್ನು ಮರು ಪರಿಶೀಲಿಸಲಾಗುವುದು ಎಂದು ಹೇಳುವ ಮೂಲಕ ಬಡವರು, ದುಡಿಯುವ ವರ್ಗಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯರಾದ ವಿ.ನಾಗಮ್ಮಾಳ್, ಎಸ್.ಎಂ.ಶರ್ಮಾ, ವಿ.ಜಿ.ದೇಸಾಯಿ, ಸೀಮಾ ದೇಶಪಾಂಡೆ, ಮಹೇಶ ಎಸ್.ಬಿ., ಮಹೇಶ ನಾಡಗೌಡ ಇದ್ದರು.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ: ಚಿಕ್ಕಮಗಳೂರಿನ ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಆತ್ಮಹತ್ಯೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಪದಾಧಿಕಾರಿಗಳು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಚಿಕ್ಕಮಗಳೂರಿನ ಶೃಂಗೇರಿಯ ಚಂದ್ರಶೇಖರ ಮೆಮೊರಿಯಲ್ ಕಾಲೇಜಿನಲ್ಲಿ ಈಚೆಗೆ ಎಬಿವಿಪಿ ಹಾಗೂ ದೇಶ ಭಕ್ತ ವಿದ್ಯಾರ್ಥಿಗಳ ವತಿಯಿಂದ ಹುತಾತ್ಮ ಯೋಧರ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಭಿಷೇಕ್ ಮೇಲೆ ಕಾರ್ಯಕ್ರಮ ನಡೆಸದಂತೆ ಎನ್‌ಎಸ್‌ಯುಐ ಕಾರ್ಯಕರ್ತರು ಒತ್ತಡ ಹೇರಿದರು. ಇಷ್ಟೇ ಅಲ್ಲ ಅಭಿಷೇಕ್ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು.

ಇದರಿಂದ ಮನನೊಂದ ಆತ, ನನ್ನ ಸಾವಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲು ಉದನೂರ, ಕೈಲಾಸ ಪಾಟೀಲ, ಸಚಿನ್ ನಿಗ್ಗುಡಗಿ, ಪ್ರವೀಣ ನಾಯಕ ಇದ್ದರು.

ನಿವೃತ್ತಿ ವೇತನ ನೀಡಲು ಆಗ್ರಹ: ನಿವೃತ್ತ ಗ್ರಾಮ ಪಂಚಾಯಿತಿ ನೌಕರರಿಗೆ ನಿವೃತ್ತಿ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನಕ್ಕೆ ಪ್ರತ್ಯೇಕ ಅನುದಾನ ನೀಡಬೇಕು. ಗ್ರಾಮ ಪಂಚಾಯಿತಿ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಎಲ್ಲಾ ಸಿಬ್ಬಂದಿಯ ಸೇವಾ ಪುಸ್ತಕ ನಿರ್ವಹಿಸಬೇಕು. ಕಂಪ್ಯೂಟರ್ ಆಪರೇಟರ್‌ಗಳ ಬಾಕಿ ವೇತನ ಪಾವತಿಸಬೇಕು.
ಕೆಲಸದಿಂದ ತೆಗೆದು ಹಾಕಿರುವ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಬಾಬುರಾವ ಧುತ್ತರಗಾಂವ, ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕಡಣಿ, ಖಜಾಂಚಿ ಶಿವಾನಂದ ಕವಲಗಾ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಸೇರಿದಂತೆ ರೈತರು ಇದ್ದರು.

ಸಚಿವರಿಗೆ ರೈತರ ಮುತ್ತಿಗೆ
ಕ್ವಿಂಟಲ್ ತೊಗರಿಗೆ ₹6,500 ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ರೈತರು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿಗದಿಪಡಿಸುವ ಸಂಪುಟ ಉಪಸಮಿತಿ ಅಧ್ಯಕ್ಷರೂ ಆದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಿಗೆ  ಮುತ್ತಿಗೆ ಹಾಕಿದರು. ತೊಗರಿ ಖರೀದಿ ಪ್ರಕ್ರಿಯೆಯಲ್ಲಿ ಗೊಂದಲ, ಅವ್ಯವಹಾರ ನಡೆಯುತ್ತಿದ್ದು ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸಿದರು.  ಬೆಂಗಳೂರಿಗೆ ತೆರಳಿದ ಬಳಿಕ ಪರಾಮರ್ಶೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT