ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಗ್ರಾಮದಲ್ಲಿ ನೂರೆಂಟು ಸಮಸ್ಯೆ

ಪ್ರವಾಹಪೀಡಿತ ನವ ಉಪ್ಪಲದಿನ್ನಿ ಗ್ರಾಮದಲ್ಲಿ ಮೂಲಸೌಕರ್ಯದ ಕೊರತೆ
Last Updated 17 ಜನವರಿ 2017, 6:23 IST
ಅಕ್ಷರ ಗಾತ್ರ

ಹುಣಸಗಿ: ಕಳೆದ 2009ರಲ್ಲಿ ದೋಣಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ನಲುಗಿ ಹೋಗಿದ್ದ ಉಪ್ಪಲದಿನ್ನಿ ಗ್ರಾಮದಲ್ಲಿ ಮೂಲ ಸೌಕರ್ಯಗಳೇ ಕೊರತೆ ಕಾಡುತ್ತಿದೆ.  ಗ್ರಾಮದಲ್ಲಿ  ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ, ರಸ್ತೆ ಹಾಗೂ ಶೌಚಾಲಯ ಸೇರಿದಂತೆ ಮತ್ತಿತ್ತರ ಸೌಲಭ್ಯಗಳು ಮರೀಚಿಕೆಯಾಗಿವೆ.

2009ರಲ್ಲಿ ದೋಣಿ ನದಿಗೆ ಪ್ರವಾಹ ಬಂದು ಉಪ್ಪಲದಿನ್ನಿ ಗ್ರಾಮದ ಸುಮಾರು 80 ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದವು. ಹಲವು ಮನೆಗಳಿಗೆ ನೀರು ಕೂಡಾ ನುಗ್ಗಿ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಮನಗಂಡ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸುರಪುರ ತಾಲ್ಲೂಕಿನ ಹೊಸೂರು ಪೈದೊಡ್ಡಿ, ಉಪ್ಪಲದಿನ್ನಿ ಗ್ರಾಮ ಸೇರಿದಂತೆ ಇತರ ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ಆದೇಶ ನೀಡಿದ್ದರು. 

ಅದರಂತೆ ಉಪ್ಪಲದಿನ್ನಿ ಗ್ರಾಮದಲ್ಲಿ ಸುಸಜ್ಜಿತ 90 ಮನೆಗಳನ್ನು ನಿರ್ಮಾಣ ಮಾಡಿ ಗ್ರಾಮಸ್ಥರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಇಂದಿಗೂ ಈ ನವ ಗ್ರಾಮದ ಕೆಲ ಭಾಗಕ್ಕೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಇಲ್ಲ ಎಂದು ಗ್ರಾಮದ ಬಾಲಪ್ಪ ಗಡ್ಡಿ ಆರೋಪಿಸುತ್ತಾರೆ.

ಈ ನವ ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರ ಹೊರತುಪಡಿಸಿದರೆ, ಯಾವುದೇ ಪ್ರಾಥಮಿಕ ಶಾಲೆಯ ಈ ಊರಿನಲ್ಲಿ ಇಲ್ಲ. ಇದರಿಂದಾಗಿ ನಿತ್ಯ ಹಳೆಯ ಗ್ರಾಮದಲ್ಲಿನ ಶಾಲೆಗೆ  ಮಕ್ಕಳು ನಡೆದುಕೊಂಡು ಹೋಗುವಂತಾಗಿದೆ. ಅಲ್ಲದೇ ಕುಡಿಯುವ ನೀರಿನ ಸೌಲಭ್ಯವೂ ದೊರೆತಿಲ್ಲ ಎಂದು ಗ್ರಾಮದ ಯಮನಪ್ಪ ಬಿರಾದಾರ ಹಾಗೂ ಪರಶುರಾಮ ಹೊಸಳ್ಳಿ ಅಳಲು ತೋಡಿಕೊಂಡರು.

ಮನೆ ನಿರ್ಮಿಸಿ ಪ್ರವಾಹ ಸಂತ್ರಸ್ತರಿಗೆ ನೀಡಲಾಗಿರುವ ಮನೆಗಳೂ ಕಳಪೆ ಕಾಮಗಾರಿಯಿಂದಾಗಿ ಮಳೆ ಬಂದರೇ ಸೋರುತ್ತಿದೆ. ಆದರೆ ಇದೇ ಮನೆಗಳಲ್ಲಿ ಅನಿವಾರ್ಯವಾಗಿ ವಾಸಿಸುವ ಸ್ಥಿತಿ ಇದೆ ಎಂದು ಗ್ರಾಮದ ಮಹಿಳೆಯರು ತಿಳಿಸಿದರು.

ಕೊಡೇಕಲ್ಲದಿಂದ ಸುಮಾರು 15 ಕಿಮೀ ದೂರದಲ್ಲಿರುವ ಈ ಗ್ರಾಮವು ಬರದೇವನಾಳ ಗ್ರಾ.ಪಂ. ವ್ಯಾಪ್ತಿಗೆ ಬರುತ್ತದೆ. ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಬಹುತೇಕ ಹಿಂದುಳಿದ ಜನಾಂಗದವರೇ ಹೆಚ್ಚಾಗಿದ್ದಾರೆ. ಗ್ರಾಮದಲ್ಲಿ ಕೆಲವರು ಗುಳೆ ಹೋಗಿದ್ದಾರೆ ಎಂದು ಯಂಕೂಬ ಹುಲಿಕೇರಿ ಹೇಳಿದರು.

ಪುಟ್ಟ ಗ್ರಾಮವು ಹತ್ತಾರು ಸಮಸ್ಯೆಯ ಮಧ್ಯೆ ಸಿಲುಕಿದೆ. ಇಲ್ಲಿನ ಜನತೆಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ. ಇನ್ನಾದರೂ ಇಲ್ಲಿನ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನಸ್ಸು ಮಾಡಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು  ಗ್ರಾಮಸ್ಥರು ಒತ್ತಾಯಿಸಿದ್ದಾರೆ.

*

ಉಪ್ಪಲದಿನ್ನಿ ಗ್ರಾಮಕ್ಕೆ ಪ್ರವಾಹ ಎದುರಾದಾಗ ಸಾಕಷ್ಟು ಮುಖಂಡರು ಭೇಟಿ ನೀಡಿ ಪರಿಹಾರದ ಭರವಸೆ  ನೀಡಿದ್ದರು. ಆದರೆ ಇಂದಿಗೂ ಗ್ರಾಮದಲ್ಲಿ ಶಾಲೆ ಆರಂಭಕ್ಕೆ  ಕ್ರಮ ಕೈಗೊಂಡಿಲ್ಲ.
-ಮಲ್ಲಿಕಾರ್ಜುನ ಬಿರಾದಾರ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT