ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುವವರಿಲ್ಲ ಗೋಗಿ ಗ್ರಾಮದ ಗೋಳು

Last Updated 17 ಜನವರಿ 2017, 6:29 IST
ಅಕ್ಷರ ಗಾತ್ರ

ಕಮಲಾಪುರ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬೆಲ್ಲ ಹೊಂಡಗಳು, ಬಸ್‌ ವ್ಯವಸ್ಥೆ ಇಲ್ಲದೆ ಜನರ ಪರದಾಟ, ರಸ್ತೆಯ ಮೇಲೆ ಹರಿಯುವ ಚರಂಡಿ ನೀರು. ಇವು ಗೋಗಿ (ಕೆ) ಗ್ರಾಮದ ಸಮಸ್ಯೆಗಳು. ಗ್ರಾಮದಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ಇದೆ.

ಕಮಲಾಪುರ ಜಿಲ್ಲಾ ಪಂಚಾಯಿತಿ, ಜೀವಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಗಿ (ಕೆ) ಗ್ರಾಮ ಇದೆ. ಗ್ರಾಮದಲ್ಲಿ ಸುಮಾರು 400 ಮನೆಗಳಿದ್ದು, 2 ಸಾವಿರ ಜನಸಂಖ್ಯೆ ಇದೆ. 5 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆ, 2 ಅಂಗನವಾಡಿ ಕೇಂದ್ರಗಳಿವೆ.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ತುಂಬೆಲ್ಲ 2 ಅಡಿ ಆಳದ ಹೊಂಡಗಳಿವೆ. ಪ್ರಸವ, ಅಪಘಾತವಾದ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಪರದಾಡಬೇಕಾಗಿದೆ. ಅಲ್ಲದೇ, ಆಸ್ಪತ್ರೆಗೆ ಕರೆದೊಯ್ಯುವಾಗ ಹದಗೆಟ್ಟ ರಸ್ತೆಯಿಂದಾಗಿ ಕೆಲವರು ಮಾರ್ಗಮಧ್ಯೆ ಮೃತಪಟ್ಟಿರುವ ಘಟನೆಗಳೂ ಇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಬಸ್‌ ಸಂಚಾರ ಸ್ಥಗಿತ: ಗ್ರಾಮದಲ್ಲಿ ರಸ್ತೆಗಳು  ಹದಗೆಟ್ಟಿರುವುದರಿಂದ ಕಳೆದ ಒಂದ ವಾರದಿಂದ ಬಸ್‌ ಸಂಚಾರ ನಿಂತು ಹೋಗಿದೆ. ಈ ಬಗ್ಗೆ ಅವರನ್ನು ಕೇಳಿದರೆ ರಸ್ತೆ ಸಮಸ್ಸೆ ಮುಂದಿಡುತ್ತಾರೆ. 268 ವಿದ್ಯಾರ್ಥಿಗಳು ಬಸ್‌ ಪಾಸ್‌ ಹೊಂದಿದ್ದಾರೆ. ಬಸ್‌ ಬಾರದ ಕಾರಣ 3 ಕಿ.ಮೀ ನಡೆದುಕೊಂಡು ಹೋಗಿ  ಖಾಸಗಿ ವಾಹನಗಳಲ್ಲಿ ಸಂಚರಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆ ಪರಿಹರಿಸಲು ಕ್ರಮ  ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಅನೀಲ್‌ ಬಿರಾದಾರ ಹೇಳಿದರು.

ನೀರು, ಚರಂಡಿ ಅವ್ಯವಸ್ಥೆ: ಕಳಪೆ ಕಾಮಗಾರಿಯಿಂದಾಗಿ ನೀರಿನ ಪೈಪ್‌ ಲೈನ್‌ ಹಾಳಾಗಿದೆ. ಕುಡಿಯಲು ಹೊಲದ ಬಾವಿಯ ನೀರೆ ಗತಿ. ಕೆಲವು ಕಡೆಗಳಲ್ಲಿ ಸಿಸಿ ರಸ್ತೆ ಇದೆ. ಚರಂಡಿ ಎಲ್ಲಿಯೂ ಇಲ್ಲ. ಹೀಗಾಗಿ ಎಲ್ಲ ಮನೆಗಳ ಚರಂಡಿ ನೀರು ರಸ್ತೆ ಮೇಲೆ ಸಂಗ್ರಹಗೊಳ್ಳುತ್ತವೆ. ಇದರಿಂದ ಓಡಾಡಲು ತೊಂದರೆಯಾಗುತ್ತಿದೆ. ಕೊಳಚೆ ನೀರಿನಿಂದಾಗಿ ದುರ್ನಾತ ಬರುತ್ತಿದ್ದು, ಸೊಳ್ಳೆ ಕಾಟ ಹೆಚ್ಚಾಗಿದೆ. ಹೀಗಾಗಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗಿದೆ ಎಂದು ಗ್ರಾಮದ ಮಹಿಳೆಯರು ದೂರುತ್ತಾರೆ.

ಶಾಲೆ ಸಮಸ್ಯೆ: ಶಾಲೆಯಲ್ಲಿಯೂ ಕುಡಿಯಲು ನೀರಿಲ್ಲ. ಬಿಸಿಯೂಟ ಮಾಡಿ ನೀರು ಕುಡಿಯುಲು ಮನೆಗೆ ಹೋಗಬೇಕು. ಶಾಲೆಯಲ್ಲಿ 5 ಜನ ಶಿಕ್ಷಕರಿದ್ದಾರೆ. ಆದರೆ, ಕೆಲವು ಬಾರಿ ಇಬ್ಬರು, ಮೂವರು ಮಾತ್ರ ಇರುತ್ತಾರೆ. ಕೇಳಿದರೆ ರಸ್ತೆ ಸರಿಯಿಲ್ಲ, ಬಸ್‌ ಬಂದಿಲ್ಲ ಎಂದು ಸಬೂಬು ಹೇಳುತ್ತಾರೆ ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದರು.
ತೀರ್ಥಕುಮಾರ ಬೆಳಕೋಟಾ

ಗ್ರಾ.ಪಂ ಅಧ್ಯಕ್ಷರ ವಿರುದ್ಧ ಜನರ ಆಕ್ರೋಶ
ಕಮಲಾಪುರ:
ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರೆ ಅವರು ಸ್ಪಂದಿಸುತ್ತಿಲ್ಲ. ಏನೇ ಕೇಳಿದರೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ.

ಸಾರ್ವಜನಿಕರ ಯಾವ ಸಮಸ್ಯೆಗೂ ಕಿವಿಗೊಡದೆ ದರ್ಪ ತೋರಿಸುತ್ತಾರೆ. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶರಣಬಸಪ್ಪ ಬಿರಾದಾರ, ವಿರೇಶ ಗುಂಡಪ್ಪಾ, ಸದ್ದಾಮ ಮುಲ್ಲಾ ಒತ್ತಾಯಿಸಿದ್ದಾರೆ.

ಪಡಿತರ ಸಮಸ್ಯೆ: ಪಡಿತರ ವಿತರಿಸಲು ದಿನ ಮುಂದೂಡುತ್ತ ಕೆಲವೊಮ್ಮೆ ವಿತರಿಸುವುದೇ ಇಲ್ಲ. ಈಗ 2 ತಿಂಗಳಾದರು ಪಡಿತರ ವಿತರಿಸಿಲ್ಲ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಅವರನ್ನು ಕೇಳುವವರು ಇಲ್ಲ. ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಗ್ರಾಮವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ. ಸರ್ಕಾರದ ಯೋಜನೆಗಳು ಜನರನ್ನು ತಲುಪುತ್ತಿಲ್ಲ ಎಂದು ಪ್ರಕಾಶ ಸಂಗಮ, ಹಣಮಂತ ಮಾಂಗ, ಮಲ್ಲೇಶಪ್ಪ ಉಪಳಾಂವ, ಮಹೇಶ ಗುತ್ತೇದಾರ ಬೇಸರ ವ್ಯಕ್ತಪಡಿಸಿದರು.

ವಿದ್ಯುತ್‌ ಸಮಸ್ಯೆ: ಗ್ರಾಮದಲ್ಲಿನ ವಿದ್ಯುತ್‌ ಪರಿವರ್ತಕಗಳು ಕೆಟ್ಟಿದ್ದು, ರೈತರ ಪಂಪ್‌ಸೆಟ್‌ಗಳಿಗೆ ಸಮಪರ್ಕ ವಿದ್ಯುತ್‌ ಸಿಗುತ್ತಿಲ್ಲ. ಅವುಗಳನ್ನು ಬದಲಿಸುವಂತೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಮನವಿಗೆ ಜೆಸ್ಕಾ ಸಿಬ್ಬಂದಿ ಕಿವಿಗೊಡುತ್ತಿಲ್ಲ ಎನ್ನುತ್ತಾರೆ ರೈತ ಹಣಮಂತ ಹೊಸಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT