ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ನ್ಯಾಯಾಲಯ ನಿರ್ಮಾಣಕ್ಕೆ 15 ಎಕರೆ ಭೂಮಿ

Last Updated 17 ಜನವರಿ 2017, 6:33 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಇಲ್ಲಿನ ಮಿನಿವಿಧಾನ ಸೌಧ ಬಳಿ ಒಟ್ಟು15 ಎಕರೆ ಕಂದಾಯ ಭೂಮಿಯನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದ್ದರಿಂದ ವಕೀಲರ ಸಂಘ ಜ.17ರಂದು ಕರೆ ನೀಡಿದ್ದ ಬಂದ್‌ ಘೋಷಣೆ ಹಿಂಪಡೆಯಲಾಗಿದೆ ಎಂದು ಸೋಮವಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಇಟಗಿ ತಿಳಿಸಿದರು.

ಸೋಮವಾರ ಬೆಳಿಗ್ಗೆ 10 ನಗರಕ್ಕೆ ಆಗಮಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಹಳೇ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಖುಷ್ಬೂ ಗೋಯೆಲ್ ಚೌಧರಿ ಹಾಗೂ ಕಂದಾಯ ಇಲಾಖೆ ಹಿರಿ–ಕಿರಿಯ ಅಧಿಕಾರಿಗಳೊಂದಿಗೆ 1.30 ಗಂಟೆ ಸಮಯ ಸಭೆ ನಡೆಸಿದರು.

ಮಧ್ಯಾಹ್ನ 1ಕ್ಕೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅವರು, ‘ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮಿನಿವಿಧಾನ ಸೌಧದ ಬಳಿ 10 ಎಕರೆ ಭೂಮಿ ಕೊಡಿಸಲಾಗುವುದು. ವಕೀಲರು ಪ್ರತಿಭಟನೆ, ಬಂದ್  ಬಂದ್ ಕೈಬಿಡುವಂತೆ ಅವರು ಮನವೊಲಿಸಲು ಮುಂದಾದರು. ಆದರೆ, ಕನಿಷ್ಠ 15 ಎಕರೆ ಜಾಗ ಇದ್ದರೆ ಮಾತ್ರ ಸಂಕೀರ್ಣ ನಿರ್ಮಾಣಕ್ಕೆ ಅನುಮತಿ ನೀಡಬಹುದು ಎಂಬುದಾಗಿ ಹೈಕೋರ್ಟ್‌ ನಿಯಮ ಇದೆ.  ಆದರೆ, ಸಂಕೀರ್ಣ ನಿರ್ಮಾಣಕ್ಕೆ ಅಗತ್ಯ ಇರುವುದು 22 ಎಕರೆ ಭೂಮಿ. ನೀವು 10 ಎಕರೆ ನೀಡಿದರೆ ಉಳಿದ ಭೂಮಿಗಾಗಿ ಎಲ್ಲಿ ಹೋಗುವುದು ಎಂದು ವಕೀಲರು ಸಚಿವರನ್ನು ಪ್ರಶ್ನಿಸಿದರು.

ಸತತ 1 ಗಂಟೆ ನಿಂತು ವಕೀಲರೊಂದಿಗೆ ಚರ್ಚೆ ನಡೆಸಿದ ಅವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ವಕೀಲರು ಹಠ ಬಿಡಲಿಲ್ಲ. ‘ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರ ₹ 15 ಕೋಟಿ ಮಂಜೂರು ಮಾಡಿದೆ. ನೀವು ನೀಡುವುದಾದರೆ ಒಮ್ಮೆಗೆ 15 ಎಕರೆ ಭೂಮಿ ನೀಡಿ. ಇಲ್ಲದಿದ್ದರೆ ನಾವು ಪ್ರತಿಭಟನೆ, ಬಂದ್‌ ನಿಲ್ಲಿಸುವುದಿಲ್ಲ’ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ: ಈ ಮಧ್ಯೆ ವಕೀಲರಿಗೂ– ಸಚಿವರಿಗೂ ಮಾತಿನ ಚಕಮಕಿ ನಡೆಯಿತು. ತಾಳ್ಮೆ ಕಳೆದುಕೊಂಡ ಸಚಿವರು ಕೆಲ ವಕೀಲರಿಗೆ ದಬಾಯಿಸಿದರು. ಸಂವಿಧಾನ, ಶಿಸ್ತು, ನಿಯಮ, ಮಾರ್ಗದರ್ಶನ ನೀಡಬೇಕಾದ ನೀವೇ ಹೀಗೆ ವರ್ತಿಸಿದರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರು ವರ್ಷಗಳಿಂದ ತಾಳ್ಮೆಯಿಂದ ಇದ್ದೇವೆ. ಅದಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ವಕೀಲರು ಸಚಿವರಿಗೆ ಜವಾಬು ನೀಡಿದರು.

ಡಯಾಲಿಸಿಸ್‌ ಘಟಕ ಆರಂಭಕ್ಕೆ ಕ್ರಮ: ಜಿಲ್ಲಾ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಆದರೆ, ಅದಕ್ಕೂ ಮುಖ್ಯವಾಗಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ ತೊಂದರೆ. ಆಗುತ್ತಿದೆ ಎಂದ ಸಚಿವರು,‘ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಖುಷ್ಬೂ ಗೋಯೆಲ್ ಚೌಧರಿ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಒಂದೂ ವೆಂಟಿಲೇಟರ್‌ ಇಲ್ಲ ಎಂಬ ಮಾಹಿತಿಯನ್ನು ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ ಅಚ್ಚರಿ ವ್ಯಕ್ತಪಡಿಸಿ ಕೂಡಲೇ ಜಿಲ್ಲಾ ಆಸ್ಪತ್ರೆಗೆ ವೆಂಟಿಲೇಟರ್‌ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ನಗರಸಭೆಗಳಿಗೆ ಚಾಟಿ ಬೀಸುವೆ: ಜಿಲ್ಲೆಯಲ್ಲಿನ ಎಲ್ಲಾ ನಗರಸಭೆಗಳು ನಿಷ್ಕ್ರಿಯಗೊಂಡಿವೆ. ಹಾಗಾಗಿ, ಪ್ರತಿಯೊಂದು ನಗರಸಭೆಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸುವುದಾಗಿ ಸಚಿವ ಪ್ರಯಾಂಕ್‌ ಖರ್ಗೆ ತಿಳಿಸಿದರು.

‘ಯಾದಗಿರಿ ನಗರದಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಬೀದಿದೀಪಗಳು ಬೆಳಗುತ್ತಿಲ್ಲ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ನಗರಸಭೆಗಳ ಪ್ರಗತಿ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಕಂದಾಯ ವಸತಿಗೃಹ ಸ್ಥಳ ವಕೀಲರಿಗೆ:

ಮಧ್ಯಾಹ್ನನದ ನಂತರ ಸಚಿವರು ತಹಶೀಲ್ದಾರ್, ಕಂದಾಯ ನಿರೀಕ್ಷರ, ಗ್ರಾಮಲೆಕ್ಕಿಗರ ತುರ್ತುಸಭೆ ನಡೆಸಿ ಮಿನಿವಿಧಾನ ಸೌಧ ಒಳಗೊಂಡಂತೆ ಕಂದಾಯ ಭೂಮಿ ಇರುವ ನೀಲನಕ್ಷೆಯನ್ನು ತರಿಸಿಕೊಂಡು 1ಗಂಟೆ  ಸಮಾಲೋಚನಾ ಸಭೆ ನಡೆಸಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗಯೊಂದಿಗೆ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಕಂದಾಯ ಸಚಿವ ಕಾಗೋಡು ಅವರೊಂದಿಗೂ ಮಾತನಾಡಿದ ಅವರು, ಕಂದಾಯ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 5 ಎಕರೆ ಭೂಮಿಯನ್ನು ನ್ಯಾಯಾಂಗ ಇಲಾಖೆಗೆ ನೀಡುವಂತೆ ಮನವಿ ಮಾಡಿದರು.

ಸಚಿವ ಕಾಗೋಡು, ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಅವರು ಸಚಿವರ ಮನವಿಗೆ ಸಮ್ಮತಿಸಿದ್ದರಿಂದ ಜಿಲ್ಲಾ ನ್ಯಾಯಾಂಗ ಇಲಾಖೆಗೆ ಒಟ್ಟು 15 ಎಕರೆ ಭೂಮಿ ನೀಡುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಸಂಜೆಹೊತ್ತಿಗೆ ಪ್ರಕಟಿಸಿದರು. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆಯುವುದಾಗಿ ಅವರು ತಿಳಿಸಿದರು.

ಪ್ರವಾಸೋದ್ಯಮಕ್ಕೆ ₹ 100 ಎಕರೆ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗಾಗಿ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹ 50 ಕೋಟಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ₹ 50 ಕೋಟಿ ಸೇರಿ ಒಟ್ಟು ₹100 ಕೋಟಿ ಅನುದಾನ ಮೀಸಲಿಟ್ಟಿದೆ. ಯಾದಗಿರಿ ಕೋಟೆ, ಶಹಾಪುರದ ಮಾವಿನಕೆರೆ, ಸ್ಲೀಪಿಂಗ್‌ ಬುದ್ಧ ತಾಣಗಳ ಅಭಿವೃದ್ಧಿ ಕುರಿತಂತೆ  ಹಂಪಿಯಲ್ಲಿ ನಡೆಯಲಿರುವ ಪ್ರವಾಸೋದ್ಯಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಸುರಪುರ ತಾಲ್ಲೂಕಿನ ಬೋನಾಳ ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆ ಎಂಬುದಾಗಿ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅನುದಾನ ಬಿಲ್‌ ತಡೆಹಿಡಿಯಲು ಜಿಲ್ಲಾಧಿಕಾರಿಗೆ ಆದೇಶಿಸಿದ್ದೇನೆ’ ಎಂದು ತಿಳಿಸಿದರು.

*

ಜಿಲ್ಲಾ ಉಸ್ತುವಾರಿ ಸಚಿವರು 15 ಎಕರೆ ಭೂಮಿಯನ್ನು ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ  ನೀಡಲು ಭರವಸೆ ನೀಡಿರುವುದರಿಂದ ಪ್ರತಿಭಟನೆಯನ್ನು ತಾತ್ಕಲಿಕವಾಗಿ ಹಿಂಪಡೆಯಲಾಗಿದೆ. ಭೂಮಿ ಸಿಗದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು
-ಮಹಿಪಾಲ ರೆಡ್ಡಿ ಇಟಗಿ, ಜಿಲ್ಲಾ  ವಕೀಲರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT