ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ವಾರ್ಥ ಸೇವೆಯಿಂದ ದೇಶದ ಉನ್ನತಿ: ಯಾದವ್‌

ಕೊಪ್ಪಳ: ಗವಿಮಠದ ಅಜ್ಜನ ಜಾತ್ರೆ ಸಮಾರೋಪ ಸಮಾರಂಭ; ಸನ್ಮಾನ ಸ್ವೀಕರಿಸಿದ ಸುಭೇದಾರ್‌
Last Updated 17 ಜನವರಿ 2017, 6:41 IST
ಅಕ್ಷರ ಗಾತ್ರ

ಕೊಪ್ಪಳ: ನಿಸ್ವಾರ್ಥದಿಂದ ಮಾಡುವ ಕೆಲಸ ದೇಶದ ಉನ್ನತಿಗೆ ಕಾರಣವಾಗುತ್ತದೆ ಎಂದು ಪರಮವೀರಚಕ್ರ ಪ್ರಶಸ್ತಿ ಪುರಸ್ಕೃತ, ಭಾರತೀಯ ಭೂಸೇನೆಯ ಯೋಧ ಸುಭೇದಾರ್‌ ಯೋಗೇಂದರ್‌ ಸಿಂಗ್‌ ಯಾದವ್‌ ಹೇಳಿದರು.

ಇಲ್ಲಿನ ಗವಿಮಠದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸೋಮವಾರ ಅವರು ಮಾತನಾಡಿದರು. ಜನನಿ ಮತ್ತು ಜನ್ಮಭೂಮಿ ಇವೆರಡಕ್ಕೆ ದ್ರೋಹ ಮಾಡಬಾರದು. ಯುವಕರ ಯೋಚನೆಗಳು ಸಕಾರಾತ್ಮಕವಾಗಿದ್ದರೆ ದೇಶವೂ ಸಕಾರಾತ್ಮಕವಾಗಿರುತ್ತದೆ. ಯುವಕರ ವ್ಯಕ್ತಿತ್ವ ಒಳ್ಳೆಯದಾಗಿದ್ದರೆ ಆಗ ದೇಶದ ವ್ಯಕ್ತಿತ್ವ ಒಳ್ಳೆಯದಾಗುತ್ತದೆ ಎಂದರು.

ಹುಟ್ಟು ಅಥವಾ ಸಾವು ದೇವರ ಕೈಲಿರುತ್ತದೆ. ಸಾವು ಬರುವುದು ಖಚಿತ ಆದರೆ, ಒಳ್ಳೆಯ ಕಾರ್ಯ ಮಾಡಿ ಹೋಗಬೇಕು. ಸತ್ತ ವ್ಯಕ್ತಿ ದೀರ್ಘ ಕಾಲ ನೆನಪಿನಲ್ಲಿ ಉಳಿಯಬೇಕು. ನಮ್ಮ ಕೆಲಸಗಳಿಂದ ಗುರುತು ಉಳಿಯುವಂತಾಗಬೇಕು ಎಂದರು.

ಕಾರ್ಗಿಲ್‌ ಕಾರ್ಯಾಚರಣೆಯ ದಿನಗಳನ್ನು ನೆನಪಿಸಿಕೊಂಡ ಯಾದವ್‌, 19ನೇ ವಯಸ್ಸಿನಲ್ಲಿ ಕೇವಲ ಎರಡೂವರೆ ವರ್ಷದ ಸೇವಾನುಭವ ಇದ್ದ ನನ್ನನ್ನು ದ್ರಾಸ್‌ ವಲಯದ ಟೈಗರ್‌ ಹಿಲ್‌ ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಅದು ನನ್ನ ಹೆಮ್ಮೆ ಮತ್ತು ಸೌಭಾಗ್ಯ. ಇದೇ ಕಾರ್ಯಾಚರಣೆ ವೇಳೆ ಆತ್ಮೀಯ ಸಹೋದ್ಯೋಗಿಗಳನ್ನು ಕಳೆದುಕೊಳ್ಳಬೇಕಾಯಿತು.

ಟೈಗರ್‌ ಹಿಲ್‌ನ ಶಿಖರದಲ್ಲಿದ್ದ ವೈರಿಪಡೆಯನ್ನು  ಹಿಮ್ಮೆಟ್ಟಿಸುವಾಗ ಸಾಕಷ್ಟು ಗುಂಡೇಟುಗಳೂ ಬಿದ್ದವು. ಒಂದು ಹೆಜ್ಜೆ ಮುಂದಿಟ್ಟರೂ, ಹಿಂದಿಟ್ಟರೂ ಸಾವು ಕಾದಿತ್ತು. ಆದರೂ ತಾಯ್ನಾಡಿಗಾಗಿ ಹೋರಾಡಿಯೇ ಸಾಯುತ್ತೇನೆ ಎಂಬ ಕೆಚ್ಚು ಇತ್ತು. ದೇವರ ಕೃಪೆಯಿತ್ತು. ನಾನು ಬದುಕುಳಿದೆ ಎಂದರು.
ರೈತ, ಸೈನಿಕ, ಸಾಮಾನ್ಯ ಕಾರ್ಮಿಕ, ಯುವಕರು ಈ ದೇಶದ ಶಕ್ತಿ. ಇವರಲ್ಲಿ ಯಾರಾದರೂ ಒಂದು ತಪ್ಪು ಹೆಜ್ಜೆ ಇಟ್ಟರೆ ಇಡೀ ದೇಶದ ವ್ಯವಸ್ಥೆ ಹಾಳಾಗುತ್ತದೆ ಎಂದರು.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಮರೆತು ಹೋಗುವ ಸಂಕ್ರಾಂತಿಯನ್ನು ಈ ಜಾತ್ರೆ ನೆನಪಿಸಿದೆ. ಊಟದ ಖಾದ್ಯಗಳು, ಬಡಿಸುವ ಅಕ್ಕರೆ... ಇಂಥ ಹಬ್ಬ ಬೆಂಗಳೂರಿನಲ್ಲಿಲ್ಲ. ಇದು ಶರಣರ ಕಿರಣಗಳ ಮಹಾಮನೆ. ವಚನಕ್ರಾಂತಿಯ ಫಲ ಗವಿಮಠದಲ್ಲಿ ಕಾಣುತ್ತಿದೆ. ದೇಶದಲ್ಲಿ ಅನೇಕ ಧರ್ಮಗಳಿವೆ. ಆದರೆ ನಮ್ಮದು ಸ್ವಾತಂತ್ರ್ಯಧರ್ಮ. ಸಂವಿಧಾನ ಎಲ್ಲ ಹಕ್ಕುಗಳನ್ನು ಕೊಟ್ಟಿದೆ. ಸ್ವಾತಂತ್ರ್ಯಧರ್ಮವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಜತೆಗೆ ಕನ್ನಡವನ್ನು ಉಳಿಸಬೇಕು. ಸಂಘಟನೆ, ಶಿಕ್ಷಣ, ಹೋರಾಟದ ಜತೆಗೆ ಒಡನಾಟವೂ ಇರಬೇಕು. ಪ್ರೀತಿ, ವಿಶ್ವಾಸಗಳಿಂದ ಬದುಕು ಸಾಗಿಸಬೇಕು ಎಂದರು.
ಸಾನಿಧ್ಯ ವಹಿಸಿದ್ದ ಮುಂಡರಗಿ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೇಶ್ವರ ಮಹಾಶಿವಯೋಗಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಅವರದ್ದೇ ಆದ ಸಾಧನೆಯ ಹಾದಿಯಲ್ಲಿ ನಡೆಯಬೇಕು. ನಾವು ಹೃದಯವಂತರಾಗಬೇಕು. ನಿಸ್ವಾರ್ಥ ಭಾವದಿಂದ ಸಾಧಿಸಬೇಕು. ಜತೆಗೆ ಎಲ್ಲರ ಚಿಂತನೆ ಇರಬೇಕು ಎಂದರು.

ಲತಾ ಹಂಸಲೇಖ, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಇದ್ದರು. ಹನುಮಂತಪ್ಪ ಕಾಮನಹಳ್ಳಿ ಅವರ ವಯೋಲಿನ್‌, ವಿಜಯಪುರದ ಗಿರಿಮಲ್ಲಪ್ಪ ಭಜಂತ್ರಿ ಅವರ ಶಹನಾಯಿ, ಗಂಗಾವತಿಯ ಜಲೀಲ್‌ ಪಾಷಾ ಅವರ ತಬಲಾವಾದನ,  ಎಂ.ಡಿ.ಪಲ್ಲವಿ  ಮತ್ತು ವೃಂದದವರಿಂದ ಭಾವ ಮಾದುರ್ಯ ಸಂಗೀತ ಕಾರ್ಯಕ್ರಮ ನಡೆಯಬೇಕು. ಬಳಿಕ ಗಂಗಾವತಿಯ ಬಿ.ಪ್ರಾಣೇಶ್‌ ಅವರಿಂದ  ನಗುವುದೇ ಸ್ವರ್ಗ ಕಾರ್ಯಕ್ರಮ ನಡೆಯಿತು.

*

ಸಂಸ್ಕಾರ ಮನುಷ್ಯನ ಅತಿದೊಡ್ಡ ಶಕ್ತಿ. ಹಿಂದೂಸ್ತಾನದ ಪವಿತ್ರ ಮಣ್ಣಿನಲ್ಲಿ ವೀರನೇ ಹುಟ್ಟುತ್ತಾನೆ. ಇಲ್ಲಿ ಋಷಿ ಮುನಿಗಳು, ಗುರುಗಳ ತಪಶ್ಯಕ್ತಿಯಿದೆ.
-ಸುಭೇದಾರ್‌ ಯೋಗೇಂದ್ರ ಸಿಂಗ್‌ ಯಾದವ್‌, ಭಾರತೀಯ ಭೂಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT