ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಪ್ರೀತಿಸುವುದೇ ನಿಜವಾದ ಭಕ್ತಿ

‘ಹರಿದಾಸ ಹಬ್ಬ’ದಲ್ಲಿ ಪ್ರವಚನ ನೀಡಿದ ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ
Last Updated 17 ಜನವರಿ 2017, 7:04 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕೇವಲ ಕೈಮುಗಿದು ತೀರ್ಥ, ಪ್ರಸಾದ ಪಡೆಯುವುದು ಭಕ್ತಿಯಲ್ಲ. ಪ್ರತಿ ಕ್ಷಣವೂ ನಮ್ಮ ಇಷ್ಟ ದೇವರನ್ನು ಪ್ರೀತಿಸುವುದೇ ಭಕ್ತಿ’ ಎಂದು ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ ತಿಳಿಸಿದರು.

ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಹರಿವಾಯು ಗುರುಸೇವಾ ಸಂಘದಿಂದ ಹಮ್ಮಿಕೊಂಡಿರುವ ‘ಹರಿದಾಸ ಹಬ್ಬ’ದ ಹರಿವಾಯು ಸ್ತುತಿಯ 16ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

‘ಪ್ರೀತಿಯ ಪರ್ಯಾಯ ಶಬ್ದವೇ ಭಕ್ತಿ ಎಂಬುದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಪರಮಾತ್ಮನೊಬ್ಬನೇ ಶಾಶ್ವತ. ಆದ ಕಾರಣ ಪ್ರತಿ ಕ್ಷಣ ಆತನನ್ನು ಪ್ರೀತಿಯಿಂದ ಸ್ಮರಿಸಿ, ಧ್ಯಾನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಬಹುತೇಕರು ಕಂಡ ಕಂಡವರನ್ನು ಪ್ರೀತಿ ಮಾಡುತ್ತಾರೆ. ಆದರೆ, ಅವರನ್ನು ಪ್ರೀತಿಸುವವರ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ಹೊಂದಿರುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.

‘ಮಹಾರುದ್ರ ಬಿಲ್ವ ಪತ್ರೆ ಪ್ರಿಯ, ಮಹಾವಿಷ್ಣು ತುಳಸಿ ಪತ್ರೆ ಪ್ರಿಯ, ಮಹಾಗಣಪತಿ ಗರಿಕೆ ಪತ್ರೆ ಪ್ರಿಯರಾಗಿದ್ದಾರೆ. ಆದರೆ, ಮಾನವರ ಪತ್ರೆ ತಾಪತ್ರೆ ಆಗಿದೆ. ಮನುಷ್ಯನ ಜೀವನದಲ್ಲಿ ಬರುವಂತಹ ಎಲ್ಲ ತಾಪ ತ್ರಯಗಳು ನಿವಾರಣೆ ಆಗಬೇಕಾದರೆ, ಭಗವಂತನಿಗೆ ಪ್ರಿಯವಾದ ಪತ್ರೆಯನ್ನು ಭಕ್ತಿಯಿಂದ ಸಮರ್ಪಿಸುವ ಮೂಲಕ ನಿವಾರಣೆಯ ಮಾರ್ಗ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.

‘ಪ್ರತಿಯೊಬ್ಬರಿಗೂ ಒಂದಿಲ್ಲೊಂದು ರೀತಿಯ ದುಃಖ ಇದ್ದೇ ಇರುತ್ತದೆ. ಅದೇ ರೀತಿ ನೆಮ್ಮದಿಗಾಗಿ ಕೂಡ ಅನೇಕರು ಹಂಬಲಿಸುತ್ತಿದ್ದಾರೆ.  ಪರಮಾತ್ಮನ ಸ್ಮರಣೆ ಮಾಡಬೇಕು’ ಎಂದರು.

‘ಪ್ರಸ್ತುತ ಯಾರನ್ನೂ ನಂಬುವಂತಹ ವಾತಾವರಣವಿಲ್ಲ. ಆದ ಕಾರಣ ಭಗವಂತನನ್ನು ನಂಬಿದರೆ, ಅವರವರ ಯೋಗ್ಯತೆ ಅನುಸಾರ ಕರುಣಿಸುತ್ತಾನೆ. ಜತೆಗೆ ಕಂಡ ಕಂಡವರಲ್ಲಿ ಬೇಡುವ ಪರಿಪಾಠವೂ ಸರಿಯಲ್ಲ. ದೇವರನ್ನು ಬಿಟ್ಟರೆ ಯಾರು ಕೂಡ ದಯೆ ತೋರಲಾರರು’ ಎಂದು ಹೇಳಿದರು.

‘ಮನೆಯಾಗಲಿ, ಕಚೇರಿಯಾಗಲಿ, ಎಲ್ಲಿಯೇ ಆಗಲಿ ಯಜಮಾನ ಕರೆಯುವವರೆಗೂ ಹೋಗುವುದು ಉತ್ತಮ ಬೆಳವಣಿಗೆಯಲ್ಲ. ದೇವರ ಬಳಿ ಹೋಗಲು ದುರಾಸೆ, ವೈರಾಗ್ಯ ತೊರೆದು ಭಕ್ತಿಯೆಂಬ ಮಾರ್ಗದಲ್ಲಿ ಸಾಗಿದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.

ಹರಿವಾಯು ಗುರು ಸೇವಾ ಸಂಘ: ವಿಶೇಷ ಧಾರ್ಮಿಕ ಕಾರ್ಯ ಕ್ರಮದಲ್ಲಿ ಕನಕದಾಸರ ಮೇರುಕೃತಿ ಹರಿಭಕ್ತ ಸಾರದ ಕುರಿತು ಪ್ರವಚನ ಸಪ್ತಾಹ. ಬೆಳಿಗ್ಗೆ 8 ಕ್ಕೆ. ರಾಘವೇಂದ್ರ ಸ್ವಾಮಿ ಮಠ. ಸಾಮೂಹಿಕ ವಿಷ್ಣುನಾಮ ಸ್ತೋತ್ರ ಪಾರಾಯಣ. ಸಂಜೆ 6 ಕ್ಕೆ. ಗೋಧೂಳಿಯಲ್ಲಿ ಗೋವಿಂದ ಗೀತಾಮೃತ ಕಾರ್ಯಕ್ರಮ. ಸಂಜೆ 6.30 ಕ್ಕೆ. ಶ್ರೀಮದ್ ಭಾಗವತ ಸಂದೇಶ. ಸಂಜೆ 7ಕ್ಕೆ. ವಾಸವಿ ವಿದ್ಯಾಸಂಸ್ಥೆ ಆವರಣ.

ಮೋಕ್ಷ ದೊರಕಲು ಸನ್ಯಾಸಿಯೇ ಆಗಬೇಕಿಲ್ಲ ಎಂದು ಬ್ರಹ್ಮ ದೇವರೆ ಹೇಳಿದ್ದಾರೆ. ಭಕ್ತಿ ಬಿಟ್ಟರೆ, ಯಾವ ದಾರಿಯೂ ಇಲ್ಲ.
– ವಿದ್ಯಾಸಿಂಧು ಮಾಧವ ತೀರ್ಥ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT