ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗೆ ಸ್ಪಂದಿಸದಿದ್ದರೆ ಕಠಿಣ ಕ್ರಮ: ಡಿಸಿ

Last Updated 17 ಜನವರಿ 2017, 7:06 IST
ಅಕ್ಷರ ಗಾತ್ರ

ಹೊಸದುರ್ಗ: ‘ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಸ್ಪಂದಿಸದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗ ಹಾಗೂ ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿರುದ್ಧ  ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕುಡಿಯುವ ನೀರು ಪೂರೈಕೆ ಮಾಹಿತಿ ಕುರಿತ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯ್ತಿಯ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮುಂದಿನ ಮೇ ತಿಂಗಳ ಅಂತ್ಯದವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿ ಇರಬೇಕು. ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಅವರ ಹಿತ ಕಾಪಾಡಲು ತ್ವರಿತವಾಗಿ ಕ್ರಮಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಯಲ್ಲಿ ಅಂತರ್ಜಲ ಇಲ್ಲದಿದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು’ ಎಂದು ತಾಕೀತು ಮಾಡಿದರು.

‘ಟ್ಯಾಂಕರ್‌ ಮೂಲಕ ನೀರು ಪೂರೈಸಲು ಜಿಲ್ಲೆಯ ತಲಾ ಒಂದು ತಾಲ್ಲೂಕಿಗೆ ₹ 40 ಲಕ್ಷ ಬಿಡುಗಡೆಯಾಗಿದೆ’ ಎಂದು ತಿಳಿಸಿದರು.
‘ತಹಶೀಲ್ದಾರ್‌ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಲೆಕ್ಕಿಗ ಹಾಗೂ ಪಿಡಿಒಗಳಿಗೆ ಸದಾ ಕರ್ತವ್ಯದ ಚುರುಕು ಮುಟ್ಟಿಸುತ್ತಿರಬೇಕು. ಬೆಳಿಗ್ಗೆ 11ಕ್ಕೆ ಕರ್ತವ್ಯಕ್ಕೆ ಹಾಜರಾಗಿ ಮಧ್ಯಾಹ್ನ 3ಕ್ಕೆ ಮನೆಗೆ ತೆರಳುವಂತಾಗಬಾರದು. ಸಾರ್ವಜನಿಕರ ಸೇವೆ ಮಾಡಲು ನೇಮಕ ಮಾಡಿರು ವುದು ಎಂಬುದರ ಅರಿವು ಇರಲಿ’ ಎಂದು ಸೂಚನೆ ನೀಡಿದರು.

‘ಸರ್ಕಾರದ ಯೋಜನೆಗಳು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಬೇಕು. ಯಾವುದೇ ಗ್ರಾಮದಲ್ಲಿ ಏನೇ ಸಮಸ್ಯೆ ಇದ್ದರೂ ತಕ್ಷಣ ಮಾಹಿತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತೇಶ್‌ ಪಾಟೀಲ್‌ ಮಾತನಾಡಿ, ‘ಇದೇ ಜ. 30, 31ರಂದು ಸರ್ಕಾರದ ಯೋಜನೆಗಳ ಪರಿಶೀಲನಾ ಸಭೆ ಕರೆಯಲಾಗಿದೆ. ಜಿಲ್ಲೆಯಲ್ಲಿ ಪ್ರಗತಿ ಕುಂಠಿತವಾದರೆ ಅದಕ್ಕೆ ಡಿಸಿ ಹಾಗೂ ಸಿಇಒ ಜವಾಬ್ದಾರರಬೇಕು. ತಾಲ್ಲೂಕಿನಲ್ಲಿ ತಹಶೀಲ್ದಾರ್‌, ಇಒ ಹಾಗೂ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ಹಾಗೂ ಗ್ರಾಮ ಲೆಕ್ಕಿಗ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬುದನ್ನು ಅರಿಯಬೇಕು.  ಹಾಗಾಗಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು’ ಎಂದರು.

‘ಪಿಡಿಒಗಳು ನಿಷ್ಠೆಯಿಂದ ಕೆಲಸ  ಮಾಡಬೇಕು. ಮೇವು, ನೀರು, ನರೇಗಾ, ಬೆಳೆ ವಿಮೆ, ಕೃಷಿಹೊಂಡ, ನಮ್ಮ ಹೊಲ ನಮ್ಮ ರಸ್ತೆ, ಕಾಲುವೆ ನಿರ್ಮಾಣ, ಭೂ ಅಭಿವೃದ್ಧಿ, ಸ್ಮಶಾನ, ಶಾಲಾ ಕಾಂಪೌಂಡ್‌ ಹಾಗೂ ಕೆರೆ ಪುನಶ್ಚೇತನ ಸೇರಿದಂತೆ ಸಮೂಹ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಉದ್ಯೋಗ ಖಾತ್ರಿ ಕಾರ್ಮಿಕರಿಗೆ 150 ದಿನಗಳ ಕೆಲಸ ಕೊಡಬೇಕು’ ಎಂದು ಹೇಳಿದರು.

ಸರ್ಕಾರದ ಕೊಳವೆ ಬಾವಿ ಇರುವ ಕಡೆ 200ರಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿ ಕೊಳವೆಬಾವಿ  ಕೊರೆಸದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಈಗಾಗಲೇ ಅಂತಹ ಕೊಳವೆಬಾವಿಗಳು ಇದ್ದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ನನೆಗುದಿಗೆ ಬಿದ್ದಿರುವ ಕೊಳವೆಬಾವಿ ಯಂತ್ರೋಪಕರಣ ದುರ್ಬಳಕೆ ಯಾಗದಂತೆ ಸದ್ಬಳಕೆ ಮಾಡಿ ಕೊಳ್ಳಬೇಕು. ಈ ಬಗ್ಗೆ ಏನಾದರೂ ಲೋಪವಾದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪವಿಭಾಗ ಅಧಿಕಾರಿ ರಾಘವೇಂದ್ರ, ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಓಂಕಾರಪ್ಪ, ತಹಶೀಲ್ದಾರ್‌ ಮಲ್ಲಿಕಾರ್ಜುನ್‌, ಇಒ ಮಹಾಂತೇಶ್‌, ತಾಲ್ಲೂಕು ಮಟ್ಟದ ಅಧಿಕಾರಿ ಹಾಗೂ ಪಿಡಿಒಗಳು ಹಾಜರಿದ್ದರು.
 

*

ಶಿಕ್ಷಕರು ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡದಿರುವುದರಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದಿದೆ. ಈ ಬಾರಿ ಸುಧಾರಣೆ ಆಗದಿದ್ದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
- ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT