ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈಗೆ ಸಿ.ಎಂ ಸ್ಥಾನ ತಪ್ಪಿಸುವ ಹುನ್ನಾರ

Last Updated 17 ಜನವರಿ 2017, 7:38 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಪಕ್ಷದೊಳಗೆ ಹುನ್ನಾರ ನಡೆಯುತ್ತಿದೆ’ ಎಂದು ಬಿಜೆಪಿ ಮುಖಂಡ  ಆಯನೂರು ಮಂಜುನಾಥ್ ಆರೋಪಿಸಿದರು.

‘ಈಶ್ವರಪ್ಪ ಅವರ ಈಚಿನ ನಿಲುವು ಯಾವುದೇ ಕಾರಣಕ್ಕೂ ಸರಿಯಿಲ್ಲ. ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಅನ್ನು ಹೊತ್ತುಕೊಂಡು ತಿರುಗುತ್ತಿರುವುದರಲ್ಲಿ ಯಾವ ಅರ್ಥವೂ ಇಲ್ಲ, ಇದು ಕೇವಲ ಸ್ವಾರ್ಥವಷ್ಟೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಾರದೆಂದು ಹಲವರು ಈಶ್ವರಪ್ಪ ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿ
ಸುತ್ತಿದ್ದಾರೆ. ಗುಂಡುಗಳು ಬೇರೆಯವರದು, ಬಂದೂಕು ಬೇರೆಯವರದು, ಆದರೆ, ಹೆಗಲು ಮಾತ್ರ ಈಶ್ವರಪ್ಪ ಅವರದು. ಇದು ಅವರಿಗೆ ಗೊತ್ತಿಲ್ಲ ಎಂದರು.  ಬ್ರಿಗೇಡ್ ಸ್ಥಾಪಿಸುವ ಹಿಂದೆ ಯಾವ ಹಿಂದುಳಿದವರ ಏಳಿಗೆಯೂ ಇಲ್ಲ. ಅದು ತಮ್ಮನ್ನು ತಾವು ಗಟ್ಟಿಗೊಳಿಸಿಕೊಳ್ಳುವ ಉದ್ದೇಶವಷ್ಟೆ. ಇದು ಅಪಾಯಕಾರಿ ಬೆಳವಣಿಗೆ’ ಎಂದರು.

‘ಬ್ರಿಗೇಡ್‌ಗೆ ಸಂಬಂಧಪಟ್ಟಂತೆ ಭಾನುಪ್ರಕಾಶ್, ಗಿರೀಶ್ ಪಟೇಲ್ ಸೇರಿದಂತೆ ಹಲವರು ಪತ್ರ ಬರೆದಿರುವುದು ಪಕ್ಷದ ಒಡಕು ಮತ್ತಷ್ಟು ಹೆಚ್ಚಿಸಿದೆ. ಇದರಲ್ಲಿ ಕೆಲವರು ತಾವು ಸಹಿಯೇ ಮಾಡಿಲ್ಲ ಎನ್ನುತ್ತಿದ್ದಾರೆ. ಈ ರೀತಿಯ ಹೇಳಿಕೆಯ ಅಗತ್ಯವಾದರೂ ಏನಿತ್ತು. ಪಕ್ಷ ಬೆಳೆಯುವುದರ ಬದಲು ತಮ್ಮ ತಮ್ಮ ಭವಿಷ್ಯ ಹುಡುಕಲು ಹೊರಟಿದ್ದಾರೆ. ಭಾನುಪ್ರಕಾಶ್ ಮತ್ತು ಈಶ್ವರಪ್ಪ ಅವರು ಮೊದಲು ಶಿಸ್ತು ಕಲಿಯಬೇಕಿದೆ’ ಎಂದರು.

ಗೊಂದಲ ಬಗೆಹರಿಸಿಕೊಳ್ಳಲಿ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ ಮಾತನಾಡಿ, ‘ಬಿಜೆಪಿಯಲ್ಲಿನ ಪ್ರಸ್ತುತ ವಿವಾದದಲ್ಲಿ ಪದೇ ಪದೇ ನನ್ನ ಹೆಸರು ಪ್ರಸ್ತಾಪ ಮಾಡುತ್ತಾ ಈಶ್ವರಪ್ಪ ಅವರು ಗೊಂದಲ ಮಾಡುತ್ತಿದ್ದಾರೆ. ಪಕ್ಷದ ವಿಷಯದಲ್ಲಿ ನಾನೇ ಮಗ್ಗಲು ಮುಳ್ಳಾಗಿದ್ದೇನೆ ಎಂದು ಹೇಳುತ್ತಿರುವುದು ನನಗೆ ನೋವಾಗಿದೆ. ಮೂರು ಬಾರಿ ಕೋರ್ ಕಮಿಟಿಸಭೆ ನಡೆದಿದ್ದರೂ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡದ ಭಾನುಪ್ರಕಾಶ್ ಅವರು ಬಹಿರಂಗವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರು ಗೊಂದಲ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸುಭಾಷ್, ಬಿಳಕಿ ಕಷ್ಣಮೂರ್ತಿ, ಎಚ್.ಸಿ. ಬಸವರಾಜಪ್ಪ, ಜ್ಯೋತಿಪ್ರಕಾಶ್, ಡಿ.ಎಸ್. ಅರುಣ್,  ಜ್ಞಾನೇಶ್ವರ್, ಎನ್. ಮಂಜುನಾಥ್ ಉಪಸ್ಥಿತರಿದ್ದರು.

ಪಕ್ಷದ ವರ್ಚಸ್ಸಿಗೆ ಧಕ್ಕೆ; ಆರೋಪ: ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ.
ಭಾನುಪ್ರಕಾಶ್ ಅವರು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡರಾದ ಬಿ.ಎಸ್.ನಾಗರಾಜ್, ಬಿಳಿಕಿ ಕೃಷ್ಣಮೂರ್ತಿ, ಎಚ್.ಎಂ. ನಂಜಪ್ಪ, ಮಾಲತೇಶ್ ದೂರಿದರು.

‘ಈಶ್ವರಪ್ಪ ಸೇರಿದಂತೆ ಕೆಲವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ’ ಎಂದು ಪತ್ರಿಕಾ
ಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.‘ಈಶ್ವರಪ್ಪ ಅವರು ಸೋತಿದ್ದರೂ ಯಡಿಯೂರಪ್ಪ ಅವರು ವಿಧಾನ ಪರಿಷತ್‌ ಸದಸ್ಯರನ್ನಾಗಿ ನೇಮಕ ಮಾಡಿದ್ದರು.  ವಿರೋಧ ಪಕ್ಷದ ನಾಯಕರನ್ನಾಗಿಯೂ ಮಾಡಿದರು. ಆದರೂ ತಮ್ಮ ಸ್ವಾರ್ಥಕ್ಕಾಗಿ ಈಶ್ವರಪ್ಪನವರು ಪಕ್ಷದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಎಚ್.ಎಂ.ನಂಜಪ್ಪ ಮಾತನಾಡಿ, ‘ಈಶ್ವರಪ್ಪ ಮೊದಲಿನಿಂದಲೂ ಕುತಂತ್ರ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಬಿಜೆಪಿಯನ್ನು ತಾಯಿಗೆ ಹೋಲಿ
ಸುವ ಇವರು ಪದೇ ಪದೇ ಪಕ್ಷದ ವಿರುದ್ಧ ಚಟುವಟಿಕೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎಂ. ಅಶೋಕ್ ಪೈ, ಬೂದ್ಯಪ್ಪ ಗೌಡ, ರಾಜಶೇಖರ್, ಉಮೇಶ್, ಪ್ರಕಾಶ್ ಇತರರು ಇದ್ದರು.

ಮುಖಂಡರಿಂದ ಬಹಿರಂಗ ಆರೋಪ– ಪ್ರತ್ಯಾರೋಪ

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಬಣಗಳ ಮುಖಂಡರು ಬಹಿರಂಗವಾಗಿಯೇ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿದ ಘಟನೆ ಸೋಮವಾರ ನಗರದಲ್ಲಿ ನಡೆಯಿತು. ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿದ್ದ ಒಡಕು ಸ್ಫೋಟಗೊಂಡಿತು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಬೆಂಬಲಿಗರು ಅರ್ಧದಲ್ಲಿಯೇ ಗೋಷ್ಠಿ ಬಹಿಷ್ಕರಿಸಿ ಹೊರ ನಡೆದಿದರು. ಮತ್ತೊಂದೆಡೆ ಯಡಿಯೂರಪ್ಪ ಪಾಳಯದಲ್ಲಿ ಗುರುತಿಸಿಕೊಂಡಿರುವ ಕೆಲವು ಮುಖಂಡರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಹಾಗೂ ರಾಜ್ಯ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್ ಅವರು ಯಡಿಯೂರಪ್ಪ ವಿರುದ್ಧ ಬರೆದಿರುವ ಪತ್ರದ ಬಗ್ಗೆ ಎಸ್.ರುದ್ರೇಗೌಡ ಪ್ರಸ್ತಾಪಿಸಿದರು. ಆಗ ಎದ್ದು ನಿಂತ ಗಿರೀಶ್ ಪಟೇಲ್, ‘ಇದು ಪಕ್ಷದೊಳಗಿನ ವಿಚಾರ. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಆಂತರಿಕ ವಿಚಾರ ಪ್ರಸ್ತಾಪಿಸುವುದಕ್ಕೆ ನಮ್ಮ ವಿರೋಧವಿದೆ’ ಎಂದರು.

ಈ ವೇಳೆ ಮುಖಂಡ ಆಯನೂರು ಮಂಜುನಾಥ್ ಕುಳಿತುಕೊಳ್ಳುವಂತೆ ಗಿರೀಶ್ ಪಟೇಲ್‌ಗೆ ಸೂಚಿಸಿದರು. ಎಸ್.ರುದ್ರೇಗೌಡ, ‘ನನ್ನ ವಿಷಯ ಹೇಳುತ್ತೇನೆ’ ಎಂದು ಮಾತು ಮುಂದುವರಿಸಿ, ‘ಪಕ್ಷದ ಅಧ್ಯಕ್ಷನಾದ ನಂತರ ತಮ್ಮ ಮೇಲೆ ಕೆಲವರು ಗದಾ ಪ್ರಹಾರ ನಡೆಸುತ್ತಿದ್ದಾರೆ. ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಈಶ್ವರಪ್ಪ ವಿರುದ್ಧ ಹೇಳಿಕೆ ನೀಡಿದರು. ‘ಯಡಿಯೂರಪ್ಪ ಅವರು ಮಾತುಕತೆಗೆ ಸಿದ್ಧವಾಗಿದ್ದರೂ ಈಶ್ವರಪ್ಪ ಕೈಗೆ ಸಿಗುತ್ತಿಲ್ಲ’ ಎಂದರು. ಇದಕ್ಕೆ ಅಸಮಾಧಾನಗೊಂಡ ಗಿರೀಶ್ ಪಟೇಲ್, ‘ನಾನು ಈ ಪತ್ರಿಕಾಗೋಷ್ಠಿ ಬಹಿಷ್ಕರಿಸುತ್ತಿದ್ದೇನೆ’ ಎಂದು ತಿಳಿಸಿ ಹೊರ ನಡೆದರು.

‘ಪತ್ರಿಕಾಗೋಷ್ಠಿ ಎಪಿಎಂಸಿ ಚುನಾವಣಾ ಫಲಿತಾಂಶಕ್ಕೆ ಮಾತ್ರ ಸೀಮಿತವಾಗಿತ್ತು. ರಾಜಕಾರಣದ ಹೇಳಿಕೆಗಳನ್ನು ನೀಡುತ್ತಾರೆಂದು ಅರಿವಿರಲಿಲ್ಲ. ಆದ್ದರಿಂದ ಹೊರಗೆ ಬಂದೆ. ಪಕ್ಷದಲ್ಲಿ ಗೊಂದಲವಿದೆ. ಆದರೆ, ಬಣ ರಾಜಕಾರಣ ಇಲ್ಲ’  ಎಂದು ಅವರು ಸ್ಪಷ್ಟಪಡಿಸಿದರು. ಬಳಿಕ ಆಯನೂರು  ಅವರು ಈಶ್ವರಪ್ಪ ವಿರುದ್ಧ ಮೊನಚು ಮಾತುಗಳಿಂದ ಟೀಕಿಸಲಾರಂಭಿಸಿದರು. ಇದಕ್ಕೆ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ ಆಕ್ಷೇಪ ವ್ಯಕ್ತಪಡಿಸಿ, ‘ಇಲ್ಲಿ ಈ ವಿಷಯದ ಪ್ರಸ್ತಾಪ ಬೇಡ’ ಎಂದು ತಿಳಿಸಿ ಅವರೂ ಹೊರ ನಡೆದರು. ನಂತರ, ಈಶ್ವರಪ್ಪ ಗುಂಪಿನಲ್ಲಿ ಗುರುತಿಸಿಕೊಂಡಿರುವ ಚನ್ನಬಸಪ್ಪ, ಜ್ಞಾನೇಶ್ವರ ಹಾಗೂ ಕೆ.ಜಿ.ಕುಮಾರಸ್ವಾಮಿ ಹೊರ ನಡೆದರು. ಬಳಿಕ ಆಯನೂರು ಮಂಜುನಾಥ್ ಹಾಗೂ ರುದ್ರೇಗೌಡ ತಮ್ಮ ಮಾತನ್ನು ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT