ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ನಿರ್ಮೂಲನೆಗೆ ಎಲ್ಲರೂ ದೃಢ ಸಂಕಲ್ಪ ಮಾಡಿ

ಜಿಲ್ಲಾಧಿಕಾರಿಯಿಂದ ಸವರ್ಣೀಯರ ಗೃಹಪ್ರವೇಶ– ಸಹಪಂಕ್ತಿ ಭೋಜನ
Last Updated 17 ಜನವರಿ 2017, 9:15 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜದಲ್ಲಿ ಈಗಲೂ ಆಚರಣೆಯಲ್ಲಿರುವ ಆಸ್ಪೃಶ್ಯತೆಯ ನಿರ್ಮೂಲನೆಗೆ ಪ್ರತಿಯೊಬ್ಬರು ದೃಢ ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾಧಿ ಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಕರೆ ನೀಡಿದರು.

ಭಾರತ ಗೃಹ ಪ್ರವೇಶ ಸಮಿತಿಯು ತಾಲ್ಲೂಕಿನ ನರಸಾಪುರ ಹಾಗೂ ಕುರ್ಕಿ ಗ್ರಾಮದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಸವರ್ಣೀಯರ ಮನೆಗೆ ಗೃಹಪ್ರವೇಶ ಮತ್ತು ಸಹಪಂಕ್ತಿ ಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾ ಡಿದ ಅವರು, ಜನ ಮನಪರಿವರ್ತನೆ ಮಾಡಿಕೊಳ್ಳುವ ಮೂಲಕ ಅನಿಷ್ಟ ಜಾತಿ ಪದ್ಧತಿಯ ನಿರ್ಮೂಲನೆಗೆ ಪಣ ತೊಡಬೇಕು ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಅಸ್ಪೃಶ್ಯತೆ ಆಚರಣೆ ಇಂದಿಗೂ ಜೀವಂತವಾಗಿರುವುದು ವಿಷಾದನೀಯ. ಜನಾಂದೋಲನದ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಾಗ ಮಾತ್ರ ಅಸ್ಪೃಶ್ಯತೆ ತೊಲಗಿಸಲು ಸಾಧ್ಯ. ಸಾಮಾಜಿಕ ಕಾರ್ಯಕ್ರಮಗಳನ್ನು ವೈಜ್ಞಾನಿಕ ಮಾನೋಭಾವದಿಂದ ನೋಡಿದಾಗ ಅಸ್ಪೃಶ್ಯತೆ, ಜಾತಿ ಪದ್ಧತಿ ಹಾಗೂ ತಾರತಮ್ಯ ಹೋಗಲಾಡಿಸಬಹುದು ಎಂದು ಅಭಿಪ್ರಾಯಪಟ್ಟರು.

ಅಸ್ಪೃಶ್ಯತೆ ಆಚರಣೆಯಿಂದ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ. ಸಮಾ ಜದ ಅಭಿವೃದ್ಧಿಯ ಮೇಲೆ ದುಷ್ಪರಿ ಣಾಮ ಬೀರುವ ಸಾಮಾಜಿಕ ಪಿಡುಗು ಗಳ ನಿರ್ಮೂಲನೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದುತಿಳಿಸಿದರು.

ದ್ವೇಷ ಸೃಷ್ಟಿಸುತ್ತಿವೆ: ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ವೈದ್ಯ ಡಾ.ಡಿ.ಕೆ.ರಮೇಶ್ ಮಾತನಾಡಿ, ‘ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮನುಷ್ಯ ಮನು ಷ್ಯರ ನಡುವೆ ದ್ವೇಷ ಸೃಷ್ಟಿಸುತ್ತಿವೆ. ಜಾತಿ ಪದ್ಧತಿಯನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಬೇಕು. ಅಂಬೇಡ್ಕರ್ ಆಶಯಗಳಿಗೆ ಬದ್ಧವಾಗಿ ದಲಿತರು ಸಮಾಜದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಕೆಲವರು ಆ ಆಶಯಗಳಿಗೆ ವಿರು ದ್ಧವಾಗಿ ವರ್ತಿಸುತ್ತಿದ್ದಾರೆ’ ಎಂದರು.

ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆ ಆಚರಣೆ ಜಾರಿಗೆ ತರಲು ರಾಜಕೀಯವೇ ಕಾರಣ. ದಲಿತರು ಮತ್ತು ಹಿಂದುಳಿದ ವರ್ಗದವರು ಸಮಾಜದ ಮುಖ್ಯ ವಾಹಿನಿಗೆ ಬಂದು ಬದುಕು ನಡೆಸುವ ಶಕ್ತಿಯನ್ನು ಅಂಬೇಡ್ಕರ್‌ ನೀಡಿದ್ದಾರೆ. ಅದೇ ಶಕ್ತಿಯನ್ನು ಬಳಸಿಕೊಂಡು ಅಸ್ಪೃ ಶ್ಯತೆ, ಜಾತಿ ಪದ್ಧತಿ ಹೋಗಲಾಡಿಸಬೇಕು. ಜನ ಇನ್ನಾದರೂ ತಮ್ಮ ಮನಸ್ಸು ಬದಲಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಸಲಹೆ ನೀಡಿದರು
.
‘ಅಸ್ಪೃಶ್ಯತೆಯ ನಿವಾರಣೆ ಮೊದಲು ಮನಸ್ಸುಗಳ ಮಧ್ಯೆ ಆಗಬೇಕು. ಉತ್ತಮ ಗುಣಗಳನ್ನು ಹೊಂದಿರುವವರು ಶ್ರೇಷ್ಠ ರಾಗಲು ಸಾಧ್ಯ. ಉತ್ತಮ ಗುಣಗಳು ಇಲ್ಲದವರು ಕನಿಷ್ಠರಾಗಿ ಬದುಕ ಬೇಕಾಗುತ್ತದೆ. ಅಸ್ಪೃಶ್ಯತೆ ನಿವಾರಣೆಯು ಕೇವಲ ಇಂತಹ ಕಾರ್ಯಕ್ರಮಗಳಿಗೆ ಸೀಮಿತವಾಗದೆ ನಿರಂತರವಾಗಿ ನಡೆಯುವ ಚಟುವಟಿಕೆಯಾಗಬೇಕು’ ಎಂದು ನರಸಾಪುರ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ಶೈಲಾ ಮನವಿ ಮಾಡಿದರು.

ದೊಡ್ಡ ದುರಂತ: ಭಾರತ ಗೃಹ ಪ್ರವೇಶ ಸಮಿತಿ ಮುಖಂಡ ಜಿ.ಶಿವಪ್ಪ ಅರಿವು ಮಾತನಾಡಿ, ‘ದಲಿತ ಸಮುದಾಯವನ್ನು ಒಳಗೊಂಡಂತೆ ಅಸ್ಪೃಶ್ಯತೆ  ಆಚರಣೆ ಎಲ್ಲ ಗ್ರಾಮಗಳಲ್ಲಿ ಇರುವುದು ದೇಶದ ದೊಡ್ಡ ದುರಂತ. 21ನೇ ಶತಮಾನದಲ್ಲೂ ಇಂತಹ ಪದ್ಧತಿ ಆಚರಣೆಯಲ್ಲಿರುವುದು ನಾಚಿಕೆಗೇಡು. ಎಲ್ಲ ಸಮುದಾಯ ದವರು ಎಲ್ಲರ ಮನೆಗಳು ಮತ್ತು ದೇವಾಲಯಗಳಿಗೆ ಮುಕ್ತವಾಗಿ ಹೋಗು ವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ನರಸಾಪುರ ಗ್ರಾಮದ ಲಿಂಗಾಯತ ಸಮುದಾಯದ ನಿವೃತ್ತ ಶಿಕ್ಷಕ ರಾಮಚಂದ್ರ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಅವರ ಮನೆಗಳಿಗೆ ದಲಿತರು ಪ್ರವೇಶ ಮಾಡಿದರು. ಕುರ್ಕಿ ಗ್ರಾಮದ ದಲಿತ ಸಮುದಾಯದ ಪಿ.ಮಂಜು ಅವರ ಮನೆಯಲ್ಲಿ ಸಹಪಂಕ್ತಿ ಭೋಜನ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪಶ್ರೀ, ಉಪ ವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್, ಡಿವೈಎಸ್ಪಿ ಅಬ್ದುಲ್ ಸತ್ತಾರ್, ತಾಲ್ಲೂಕು ಪಂಚಾ ಯಿತಿ ಮಾಜಿ ಅಧ್ಯಕ್ಷ ಉದಯ್‌ಶಂಕರ್, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್, ಗೃಹ ಪ್ರವೇಶ ಸಮಿತಿ ಸಂಚಾಲಕ ಟಿ.ವಿಜಿಕುಮಾರ್, ಕಲಾವಿದ ವೆಂಕಟ ಚಲಪತಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT