ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

Last Updated 17 ಜನವರಿ 2017, 9:39 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಎ.ಪಿ.ಎಂ.ಸಿ. ಚುನಾವಣೆ ಅತ್ಯಂತ ಯಶಸ್ವಿಗೊಳಿಸಲು ತಾಲ್ಲೂಕು ಆಡಳಿತವು ಸರ್ವ ಸಿದ್ಧತೆ ನಡೆಸಿದೆ ಎಂದು ಚುನಾವಣಾಧಿಕಾರಿ, ತಹಶೀಲ್ದಾರ್‌  ಆರ್‌.ಯೋಗಾನಂದ್‌ ತಿಳಿಸಿದರು.

ಮಂಗಳವಾರ ನಡೆಯುವ ಚುನಾವಣೆಗೆ ಸೋಮವಾರವೇ  ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ,  ಮತದಾನದ ಸಾಮಗ್ರಿ ಮತಗಟ್ಟೆಗಳಿಗೆ ಕಳಿಸುವ ಕಾರ್ಯ ನಿಯೋಜನೆಯಲ್ಲಿದ್ದ ಅವರು ಸೋಮವಾರ ಈ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಒಟ್ಟು 11 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. 50 ಸಾವಿರದಷ್ಟು ಮತದಾರರು ಮತ ಚಲಾಯಿಸುತ್ತಿದ್ದಾರೆ. 91 ಮತಗಟ್ಟೆ ಮಾಡಲಾಗಿದೆ. 400 ಸಿಬ್ಬಂದಿ  ಚುನಾವಣಾ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದರು.

ಎಲ್ಲಾ ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಪರಿಗಣಿಸಿ ಸೂಕ್ತ ಭದ್ರತೆಯೊಂದಿಗೆ ಚುನಾವಣೆ ನಡೆಸಲಾಗುತ್ತಿದೆ. ವರ್ತಕರ ಕ್ಷೇತ್ರವನ್ನು ಅತಿ ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ ಎಂದರು.

ಮತದಾರರು ಆಧಾರ್‌ ಕಾರ್ಡ್‌, ಮತದಾರರ ಗುರುತುಚೀಟಿ, ಪಡಿತರ ಚೀಟಿ, ಬ್ಯಾಂಕ್‌ ಪಾಸ್‌ಪುಸ್ತಕ, ಪಾಸ್‌ಪೋರ್ಟ್‌, ಪಾನ್‌ಕಾರ್ಡ್‌ಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿಯಾಗಿ ತರಬೇಕು. ಒಂದು ಮತಗಟ್ಟೆಯಲ್ಲಿ ಮತಗಟ್ಟೆ ಚುನಾವಣಾ ಅಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಇಬ್ಬರು ಚುನಾವಣಾ ಸಹಾಯಕರು, ಒಬ್ಬರು ಭದ್ರತಾ ಸಿಬ್ಬಂದಿ ಕೆಲಸ ಮಾಡಲಿದ್ದಾರೆ ಎಂದರು.  

ಮತದಾನ ಮಂಗಳವಾರ ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ನಡೆಯಲಿದೆ. ನಂತರ ಎಲ್ಲಾ ಮತಪೆಟ್ಟಿಗೆಗಳನ್ನು ಕನಕಪುರ ಜಿ.ಟಿ.ಟಿ.ಸಿ. ಆವರಣದಲ್ಲಿ ಮಾಡಿರುವ ಎರಡು ಭದ್ರತಾ ಕೊಠಡಿಗಳಲ್ಲಿ ಇಡಲಾಗುವುದು. ಈ ಕೊಠಡಿಗಳಿಗೆ ಸಿಸಿಟಿವಿ ಅಳವಡಿಸಿ ಪೊಲೀಸ್‌ ಭದ್ರತೆ ಮಾಡಿರುವುದಾಗಿ ತಿಳಿಸಿದರು.
ಮತದಾನ ನಡೆಯುವ ಶಾಲೆಗಳಿಗೆ ರಜೆ ನೀಡಲಾಗಿದೆ. ಗುರುವಾರ ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟಿಸಲಾಗುವುದೆಂದು ಹೇಳಿದರು.

ಚುನಾವಣೆಗೆ ನಿಯೋಜಿತರಿಗೆ ಆರ್‌.ಟಿ.ಜಿ.ಎಸ್‌. ಮೂಲಕ ತಕ್ಷಣವೇ ಚುನಾವಣಾ ಭತ್ಯೆ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು, ಚುನಾವಣೆಯಲ್ಲಿ ಕೃಷಿ ಕ್ಷೇತ್ರದ ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ, ವರ್ತಕರ ಕ್ಷೇತ್ರದ ಮತದಾರರಿಗೆ ಎಡಗೈ ಉಂಗುರದ ಬೆರಳಿಗೆ ಶಾಯಿ ಹಾಕಲಾಗುವುದೆಂದು ತಿಳಿಸಿದರು.

ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಗೃಹರಕ್ಷಕ ದಳದ ಸಿಬ್ಬಂದಿ, ಒಟ್ಟು 155 ಪೊಲೀಸರು ಸೇರಿದಂತೆ 215 ಮಂದಿಯನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ, ಇಬ್ಬರು ಸರ್ಕಲ್‌ ಇನ್‌ಸ್ಪೆಕ್ಟರ್‌ಗಳು, 7 ಎಸ್.ಐ, 18 ಎ.ಎಸ್‌.ಐ ಇವರಲ್ಲಿ ಸೇರಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT