ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಬಂಡೂರು ಕೆರೆ ನೀರು ಅಕ್ರಮ ಬಳಕೆ

Last Updated 17 ಜನವರಿ 2017, 9:58 IST
ಅಕ್ಷರ ಗಾತ್ರ

ಚನ್ನಪಟ್ಟಣ: ಅಂತರ್ಜಲ ಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಶಿಂಷಾ ಏತ ನೀರಾವರಿ ಯೋಜನೆಯಿಂದ ನೀರು ಹರಿಸಿ ತಾಲ್ಲೂಕಿನ ಕೆರೆಗಳಿಗೆ ತುಂಬಿಸಿದ್ದರೆ, ಆ ನೀರನ್ನು ವ್ಯವಸಾಯಕ್ಕಾಗಿ ಕಳವು ಮಾಡಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ.

ತಾಲ್ಲೂಕಿನ ಬಂಡೂರು ಕೆರೆಯಲ್ಲಿ ಕೆಲವು ರೈತರು ನೀರನ್ನು ಕಳವು ಮಾಡಿ ವ್ಯವಸಾಯಕ್ಕೆ ಬಳಸಿಕೊಳ್ಳುವ ಮೂಲಕ ಸಣ್ಣ ನೀರಾವರಿ ಇಲಾಖೆಯ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ನಡೆಯುತ್ತಿದೆ.

ತಾಲ್ಲೂಕಿನ ಕೆರೆಗಳಲ್ಲಿ ಸಂಗ್ರಹವಾಗುವ ನೀರನ್ನು ಕನಿಷ್ಠ ಮೂರು ವರ್ಷಗಳ ಕಾಲ ವ್ಯವಸಾಯ ಸೇರಿದಂತೆ ಯಾವುದೇ ಉಪಯೋಗಕ್ಕೂ ಬಳಸಿಕೊಳ್ಳದೆ ಕೇವಲ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಬಳಕೆ ಮಾಡಬೇಕು ಎನ್ನುತ್ತದೆ ನಿಯಮ. ಆದರೆ ಇಲ್ಲಿ ನೀರನ್ನು ವ್ಯವಸಾಯಕ್ಕೆ ಬಳಸಲು ಅನ್ಯಮಾರ್ಗ ಬಳಸುತ್ತಿದ್ದಾರೆ ರೈತರು.

ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ಆಚೆ ತರಲು ಇರುವ ಮಾರ್ಗಗಳಾದ ತೂಬುಗಳನ್ನು ಸಣ್ಣ ನೀರಾವರಿ ಇಲಾಖೆ ಮುಚ್ಚಿದ್ದರೂ ರೈತರು ಮಾತ್ರ ಕೆರೆಯ ಏರಿಗಳ ಮೇಲೆ ಪೈಪುಗಳನ್ನು ಹಾಕಿ ಯಾವುದೇ ಮೋಟಾರ್ ಹಾಕದೆ ಕೇವಲ ಗಾಳಿಯ (ಏರ್ ಔಟ್) ಸಹಾಯದಿಂದಲೇ ನೀರನ್ನು ಹೊರತರುತ್ತಾ ತಮ್ಮ ವ್ಯವಸಾಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಕೆರೆಯ ಏರಿ ಮೇಲೆ ಅವರವರ ಜಮೀನುಗಳು ಇರುವ ಕಡೆ ಕನಿಷ್ಠ 20 ರಿಂದ 30ಕಡೆ ರೈತರು ಪೈಪ್‌ಗಳನ್ನು ಕೆರೆಯ ನೀರಿಗೆ ಇಳಿಬಿಟ್ಟು ಆ ಪೈಪುಗಳನ್ನು ತಮ್ಮ ಜಮೀನಿಗೆ ಹಾಕಿ ಗಾಳಿಯ ಸಹಾಯದಿಂದಲೇ ನೀರು ಹರಿಯುವಂತೆ ಮಾಡುತ್ತಿದ್ದಾರೆ. ಯಾವುದೇ ಖರ್ಚಿಲ್ಲದೆ ವಿದ್ಯುತ್ ಸಹಾಯವೂ ಇಲ್ಲದೆ ಕೆಲವು ರೈತರು ಲೀಲಾಜಾಲವಾಗಿ ನೀರು ಹರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿ.ವಿ.ಹಳ್ಳಿ ಗ್ರಾಮದ ಬಿ.ಸಿ.ದೊರೆಸ್ವಾಮಿ ದೂರಿದ್ದಾರೆ.

ಕೆಲವು ರೈತರು ನೀರನ್ನು ರಾತ್ರಿಪೂರ್ತಿ ಹಾಗೆಯೆ ಹರಿಯಲು ಬಿಡುವುದರಿಂದ ರಾತ್ರಿಯೆಲ್ಲ  ನೀರು ಕೆಳಭಾಗಕ್ಕೆ ಹರಿದು ಪೋಲಾಗುತ್ತಿದೆ ಎಂಬುದು ಇವರ ಆರೋಪವಾಗಿದೆ.

ಕುಡಿಯುವ ನೀರಿನ ಯೋಜನೆ: ಶಿಂಷಾ ಏತ ನೀರಾವರಿ ಯೋಜನೆಯು ಸುಮಾರು ₹ 200 ಕೋಟಿ ವೆಚ್ಚದಲ್ಲಿ ನಡೆದಿದ್ದು, ಇದನ್ನು ಕುಡಿಯುವ ನೀರಿನ ಯೋಜನೆ ಎಂದು ಜಾರಿಗೆ ತರಲಾಗಿದೆ.

ಶಿಂಷಾ ನದಿಯ ಇಗ್ಗಲೂರು ಎಚ್.ಡಿ.ದೇವೇಗೌಡ ಬ್ಯಾರೇಜ್ ನಲ್ಲಿ ನೀರು ಇದ್ದಾಗ ಹಾಗೂ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಬಳಸಿಕೊಂಡು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ. ತಾಲ್ಲೂಕಿನಲ್ಲಿ ತಳಮಟ್ಟ ಸೇರಿರುವ ಅಂತರ್ಜಲವನ್ನು ಮೇಲೆತ್ತುವುದು ಇದರ ಮೂಲ ಉದ್ದೇಶವಾಗಿದೆ. ಇದರ ಮೂಲಕ ತಾಲ್ಲೂಕಿನ ಕೊಳವೆ ಬಾವಿಗಳಿಗೆ ನೀರು ಇಳಿದು ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗುತ್ತದೆ ಎಂಬುದು ಈ ಯೋಜನೆ ಗುರಿಯಾಗಿದೆ.

ಬೇಸಿಗೆಯಲ್ಲಿ ನೀರು ಇರುವುದಿಲ್ಲ: ತಾಲ್ಲೂಕಿನ ಹಲವಾರು ಕೆರೆಯಲ್ಲಿ ಸದ್ಯ ನೀರು ಇದ್ದು, ಜನ ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರು ಒದಗಿಸುತ್ತವೆ. ಈಗ ಕೆಲವು ರೈತರು ನೀರನ್ನು ಈ ರೀತಿ ಕಳುವು ಮಾಡುವುದರಿಂದ ಬೇಸಿಗೆಯಲ್ಲಿ ಕೆರೆಗಳು ಸಂಪೂರ್ಣ ಖಾಲಿಯಾಗುವುದು ಖಚಿತ ಎಂದು ಬಿ.ವಿ.ಹಳ್ಳಿ ಗ್ರಾಮದ ಬಿ.ಎಸ್.ಕೃಷ್ಣಪ್ಪ ಆರೋಪಿಸುತ್ತಾರೆ.

ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಇದ್ದರೆ ಎಲ್ಲರಿಗೂ ಅನುಕೂಲ. ಇದನ್ನು ಅರಿಯದೆ ಕೆಲವರು ನೀರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಹೊರಟಿದ್ದಾರೆ ಎಂಬುದು ಇವರ ಆರೋಪ.

ಕೆರೆಯ ಹಿನ್ನೆಲೆಯಲ್ಲಿ ಬೆಟ್ಟಗುಟ್ಟಗಳು ಇದ್ದು, ಇಲ್ಲಿ ಸಾವಿರಾರು ಪ್ರಾಣಿ ಪಕ್ಷಿಗಳು ವಾಸಿಸುತ್ತವೆ. ಇವೆಲ್ಲವೂ ಕೆರೆಯ ನೀರನ್ನೆ ಕುಡಿಯಲು ಬಳಸುವುದರಿಂದ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಇಲ್ಲದಂತೆ ಕೆಲವರು ನೀರನ್ನು ಖಾಲಿ ಮಾಡುತ್ತಿದ್ದಾರೆ ಎಂದು ಬಿಪಿ.ಮಹೇಶ್ ದೂರುತ್ತಾರೆ.

ನೀರನ್ನು ಬಳಸಿಕೊಳ್ಳುತ್ತಿರುವುದು ರೈತರೇ ಆದರೂ ರೈತರು ಈ ವಿಷಯ ಅರ್ಥ ಮಾಡಿಕೊಳ್ಳಬೇಕು. ಕೇವಲ ತಮ್ಮ ಉಪಯೋಗಕ್ಕಾಗಿ ನೀರನ್ನು ಪೋಲು ಮಾಡಿದರೆ ಹೆಚ್ಚು ಜನರ ಹಿತವನ್ನು ಬಲಿ ಕೊಟ್ಟಂತಾಗುತ್ತದೆ ಎಂಬುದನ್ನು ಮನಗಾಣಬೇಕು ಎಂಬುದು ಗ್ರಾಮದ ಬಹುತೇಕರ ಅಭಿಪ್ರಾಯವಾಗಿದೆ.
ಹಾಗೆಯೆ ಕೆರೆ ಅಂಗಳದಲ್ಲಿರುವ ಮರಳನ್ನು ಸಹ ಕೆಲವರು ಲೂಟಿ ಮಾಡುತ್ತಿದ್ದಾರೆ. ಇದರಿಂದ ಕೆರೆಯಂಗಳದಲ್ಲಿ ಹಲವಾರು ಗುಂಡಿಗಳು ಬಿದ್ದಿವೆ. ಇದರಿಂದ ಕೆರೆಯ ಅಂತರ್ಜಲದ ಮಟ್ಟವೂ ಕುಸಿಯುವ ಭೀತಿ ಎದುರಾಗಿದೆ ಎಂಬುದು ಕೆಲವರ ಆರೋಪವಾಗಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಗಮನ ಹರಿಸಿ ಇಲ್ಲಿ ನಡೆಯುತ್ತಿರುವ ನೀರು, ಮರಳು ಲೂಟಿಯನ್ನು ತಡೆಗಟ್ಟಬೇಕು ಎಂಬುದು ಎಲ್ಲರ ಆಗ್ರಹವಾಗಿದೆ.

*

ಬಂಡೂರು ಕೆರೆಯಲ್ಲಿ ನೀರಿನ ಕಳ್ಳತನ ನಡೆಯುತ್ತಿರುವುದು  ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟಲು ಕ್ರಮ ತೆಗೆದುಕೊಂಡಿದ್ದರೂ ಕೆಲವು ರೈತರು ಮತ್ತೆ ಮತ್ತೆ ಈ ಕೆಲಸ ಮಾಡಲಾರಂಭಿಸಿದ್ದಾರೆ. ಇದನ್ನು ಶಾಶ್ವತವಾಗಿ ತಡೆಗಟ್ಟಲಾಗುವುದು

-ಸುಧಾಕರ್, ಎಇಇ, ಸಣ್ಣ ನೀರಾವರಿ ಇಲಾಖೆ

**

- ಎಚ್.ಎಂ. ರಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT