ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಅಮಾನಿ ಕೆರೆ: ಅಕ್ರಮ ಮಣ್ಣು ಲೂಟಿ

ಕಣ್ಮುಚ್ಚಿ ಕುಳಿತ ಇಲಾಖಾ ಅಧಿಕಾರಿಗಳು, ಸ್ಥಳೀಯ ನಾಗರಿಕರ ಆಕ್ರೋಶ !
Last Updated 17 ಜನವರಿ 2017, 10:00 IST
ಅಕ್ಷರ ಗಾತ್ರ

ದೇವನಹಳ್ಳಿ: ದೂಳೆಬ್ಬಿಸಿ ಗರ್ಜಿಸುತ್ತಿರುವ ಯಂತ್ರಗಳು, ಮಣ್ಣು ಹೊತ್ತು ಸಾಗುತ್ತಿರುವ ಟಿಪ್ಪರ್‌ಗಳು, ಹತ್ತಿರ ಹೋದರೆ ಸಾವಿಗಾಗಿ ಅಗಾಧ ಆಳದವರೆಗೆ ಬಾಯ್ದೆರೆದು ಕಾದಿರುವ  ಗುಂಡಿಗಳು.

ಇದು ದೇವನಹಳ್ಳಿ ಪಟ್ಟಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿರುವ ದೊಡ್ಡಅಮಾನಿಕೆರೆಯಲ್ಲಿನ ದೃಶ್ಯ. ಇಷ್ಟೆಲ್ಲಾ ಅಧಿಕಾರಿಗಳ ಕಣ್ಮುಂದೆ ಅಕ್ರಮ ಮಣ್ಣು ಲೂಟಿಯಾಗುತ್ತಿದ್ದರೂ ಅವರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

ಇಲ್ಲಿ ಅಕ್ರಮ ಮರಳು, ಕಲ್ಲು ಗಣಿಗಾರಿಕೆ, ಅಕ್ರಮ ಮಣ್ಣು ಸಾಗಾಣಿಕೆಗಳ ಅಪಖ್ಯಾತಿಯಾಗಿದೆ ಎಂಬುದಕ್ಕೆ ಅನೇಕ ಕೆರೆಗಳಲ್ಲಿ ನಡೆಯುತ್ತಿರುವ ಮಣ್ಣು ಮಾಫಿಯಾವೇ ಉದಾಹರಣೆಯಾಗಿ ಕಾಣುತ್ತದೆ. ಇಷ್ಟೆಲ್ಲಾ ವ್ಯವಸ್ಥಿತ ಅಕ್ರಮಕ್ಕೆ ಸಾಕ್ಷಿಯಾಗಿದ್ದರೂ ಪ್ರಸ್ತುತ ದೊಡ್ಡಅಮಾನಿಕೆರೆಯಲ್ಲಿನ ಕೆರೆ ಅಂಗಳದಲ್ಲಿ ಈಗಲೂ ಮಣ್ಣು ಅಪೋಶನವಾಗುತ್ತಿದೆ.

ನಿರಂತರವಾಗಿ ಅಕ್ರಮ ಮಣ್ಣು ಸಾಗಾಣಿಕೆಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.

ದೇವನಹಳ್ಳಿ ಕೂಗಳತೆಯ ಅಂತರದಲ್ಲಿರುವ 452 ಎಕರೆಯಷ್ಟು ವಿಸ್ತಾರವಿರುವ ಕೆರೆ ವ್ಯಾಪ್ತಿಯಲ್ಲಿ 87 ಹೆಕ್ಟೇರ್‌ ಜಲಾವೃತ ವಿಸ್ತೀರ್ಣದಲ್ಲಿ ಕೆರೆಯ ನೀರಿನ ಸಾಮರ್ಥ್ಯ 1.5947 ಎಂಸಿಯುಎಂ ಹೊಂದಿದೆ.

ದೇವನಹಳ್ಳಿ ಪಟ್ಟಣ, ಕೋಡಿ ಮಂಚೇನಹಳ್ಳಿ, ಅಕ್ಕುಪೇಟೆ ವ್ಯಾಪ್ತಿಯಲ್ಲಿ ಕೆರೆ ತುಂಬಿದರೆ 250ಕ್ಕೂ ಹೆಚ್ಚು ಎಕರೆಯಲ್ಲಿ ನೀರಾವರಿ ಜತೆಗೆ ಕೆರೆ ವ್ಯಾಪ್ತಿಯಲ್ಲಿರುವ 672ಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲ ಸಮೃದ್ಧವಾಗಲಿದೆ.

ಕಳೆದ ಮುಂಗಾರಿನಲ್ಲಿ ರಾಜಕಾಲುವೆ ಒತ್ತುವರಿ ಸೇರಿದಂತ ಹಲವು ಅಡೆತಡಗಳ ನಡುವೆಯೂ ಮೂರು ಅಡಿ ನೀರು ಹರಿದು ಬಂದಿತ್ತು .ಕೆರೆಯ ಅಂಚಿನಲ್ಲಿ ಅಕ್ರಮ ಮರಳು ದಂಧೆ ಮತ್ತು ಪ್ರಸ್ತುತ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಣಿಕೆಗಾಗಿ ತೊಡುತ್ತಿರುವ ಆಳವಾದ ಗುಂಡಿಯಿಂದಾಗಿ ಇಡೀ ಕೆರೆಯಂಗಳದಲ್ಲಿ ನಿಂತ ನೀರು ರಾತ್ರೋರಾತ್ರಿ ಇಂಗುತ್ತಿದೆ ಎಂಬುದು ಸ್ಥಳೀಯ ಗ್ರಾಮಸ್ಥರ ಆತಂಕ. ದೇವನಹಳ್ಳಿ ಬೈಪಾಸ್‌ ರಸ್ತೆ ದಾಟಿ ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಇದ್ದು, ಕೆರೆ ಏರಿಯ ಮೇಲೆಯೇ ಪ್ರತಿಯೊಂದು ವಾಹಗಳು ಸಾಗಬೇಕು.

ಕೆರೆಕೋಡಿ ಒಂದು ಬದಿಯಲ್ಲಿ ಅರಣ್ಯ ಇಲಾಖೆ ಆಡಳಿತ ಕಚೇರಿ ಇದೆ. ಅರಣ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಕಂದಾಯ ಮತ್ತು ಇತರೆ ಅಧಿಕಾರಿಗಳು ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಣಿಕೆಯನ್ನು ನೋಡಿಕೊಂಡೇ ಸಾಗಬೇಕು. ಕೆರೆಯ ಶೇ 75 ರಷ್ಟು ಸಾವಕನಹಳ್ಳಿ ವ್ಯಾಪ್ತಿಯಲ್ಲಿದ್ದರೆ ಪ್ರಮುಖ ನೀರು ನಿಲ್ಲುವ ಸಾಮರ್ಥ್ಯವಿರುವ ಉಳಿದ ಭಾಗ ದೇವನಹಳ್ಳಿ ಪಟ್ಟಣದ ವ್ಯಾಪ್ತಿಯಲ್ಲಿದೆ. ಇದರಿಂದ ಎರಡು ಠಾಣೆ ಸರಹದ್ದಿನಲ್ಲಿ ಬರುವುದರಿಂದ ಪೊಲೀಸರು ತಲೆ ಕೆಡಿಸಿಕೊಳ್ಳುವುದಿಲ್ಲ.

ಸಾವಕನಹಳ್ಳಿ ನಿಲೇರಿ, ನೀರಗಂಟಿಪಾಳ್ಯ, ಅಕ್ಕುಪೇಟೆ, ಕೋಡಿಮಂಚೇನಹಳ್ಳಿ ವ್ಯಾಪ್ತಿಯ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವ ಏಕೈಕ ಕೆರೆ ಇದಾಗಿದೆ. ಮಣ್ಣು ಹೊರತೆಗೆಯಲು ಸಣ್ಣ ನೀರಾವರಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಪಡೆದರೂ ಒಂದರಿಂದ ಒಂದುವರೆ ಅಡಿ ಮಾತ್ರ ಮಣ್ಣು ತೆಗೆಯಬೇಕು.  ಆರೇಳು ಅಡಿಯವರೆವಿಗೂ ತೋಡಲು ಅವಕಾಶವಿಲ್ಲ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆರೆಗೆ ಅನುಮತಿ ನೀಡಲು ಬರುವುದಿಲ್ಲ ಇದೆಲ್ಲಾ ಗೊತ್ತಿದ್ದರೂ ನಾಲ್ಕಾರು ಯಂತ್ರಗಳಿಂದ ರಾಜಾರೋಷವಾಗಿ ಮಣ್ಣು ಅಕ್ರಮ ಸಾಗಾಣಿಕೆ ಆಗುತ್ತದೆ ಎಂದರೆ ಅಧಿಕಾರಿಗಳ ಮತ್ತು ಸ್ಥಳೀಯ ಮುಖಂಡರ ಬೆಂಬಲವಿಲ್ಲದೆ ಸಾಧ್ಯವಿಲ್ಲ ಎನ್ನುತ್ತಾರೆ ನೀರಗಂಟಿಪಾಳ್ಯದ ಮಹೇಶ್‌.

ಕೆರೆ ಪಕ್ಕದಲ್ಲಿರುವ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಜಿಲ್ಲೆಯ ಏಕೈಕ ವೃಕ್ಷಗಳ ವನ ಪ್ರಸ್ತುತ 60 ಎಕರೆ ವಿಸ್ತೀರ್ಣದಲ್ಲಿದ್ದು, ಅಪಾರ ಗಿಡಮರ, ಆರ್ಯುವೇದ ಸಸ್ಯ ಸಂಕುಲ ಒಳಗೊಂಡಿದೆ. ವಿವಿಧ ಹಣ್ಣಿನ ಪ್ರಾದೇಶಿಕ ಮರಗಳಿರುವುದರಿಂದ ಅಪಾರ ವಿವಿಧ ಪ್ರಬೇಧಗಳ ಪಕ್ಷಿಗಳು ಕೆರೆಯಿಂದ ಉದ್ಯಾನವನಕ್ಕೆ ದಾಂಗುಡಿ ಇಟ್ಟು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಕೆರೆಯಲ್ಲಿ ನೀರು ಅಲ್ಪಸ್ವಲ್ಪ ತುಂಬಿದರೂ ಸಹಜ ಸ್ಥಿತಿಗೆ ಪಕ್ಷಿಗಳು ಮರಳುತ್ತವೆ. ಇಷ್ಟೆಲ್ಲಾ ಇಲ್ಲಿ ಬೆಳವಣಿಗೆ ಇದ್ದರೂ ಅಕ್ರಮಕ್ಕೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳ ಜವಾಬ್ದಾರಿ ಏನು ಎಂದು ಪ್ರಶ್ನಿಸುತ್ತಾರೆ ಪರಿಸರವಾದಿಗಳು.

**
    – ವಡ್ಡನಹಳ್ಳಿ ಭೋಜ್ಯಾನಾಯ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT