ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಜೆಟ್‌ ಬಳಕೆ 2017 ರ ನಿರ್ಣಯಗಳು

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
ಪ್ರತಿ ಬಾರಿ ಹೊಸವರ್ಷ ಕಾಲಿಟ್ಟಾಗ  ಹಲವರು ಹೊಸ ಹೊಸ ನಿರ್ಣಯಗಳನ್ನು ಕೈಗೊಳ್ಳುವುದು ಸಹಜ. ಈ ವರ್ಷವಾದರೂ ತೂಕ ಇಳಿಸಿಕೊಳ್ಳುತ್ತೇನೆ, ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಬಿಡುತ್ತೇನೆ, ಹಣ ಉಳಿತಾಯ ಮಾಡುತ್ತೇನೆ... ಹೀಗೆ ಒಬ್ಬೊಬ್ಬರದ್ದು ಒಂದೊಂದು ನಿರ್ಣಯಗಳಿರುತ್ತವೆ. ಆದರೆ ಜೀವನದ ದಿಕ್ಕನ್ನೇ ಬದಲಿಸುವ ತಾಂತ್ರಿಕ ವಸ್ತುಗಳ ಬಳಕೆ ಕುರಿತ ನಿರ್ಣಯಗಳನ್ನು ಯಾರೂ ಕೈಗೊಳ್ಳುವುದಿಲ್ಲ. 
 
ತಂತ್ರಜ್ಞಾನ ಬಳಕೆ ಇಂದು ಜೀವನದ ಅವಿಭಾಜ್ಯ ಅಂಗವಾಗಿದೆ. ಹಲವು ಅಕೌಂಟ್‌ಗಳ ಪಾಸ್‌ವರ್ಡ್‌ ಬದಲಿಸಿಕೊಳ್ಳುವ ನಿರ್ಣಯವನ್ನು ಯಾರು ಕೈಗೊಳ್ಳುತ್ತಾರೆ.  ಹ್ಯಾಕಿಂಗ್ ಇಂದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪಾಸ್‌ವರ್ಡ್ ಬದಲಿಸಿಕೊಳ್ಳುವುದರಿಂದ ಸಾಕಷ್ಟು ಅನುಕೂಲಗಳಿವೆ.  ನಮ್ಮ ಬಳಿ ಇರುವ ಕಂಪ್ಯೂಟರ್‌ಗಳ ಕೆಲಸ ಸರಳವಾಗುವಂತೆ ಮಾಡಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. 
 
ಇದಕ್ಕಾಗಿ ಕೆಲವು ಪ್ರಮುಖ ನಿರ್ಣಯಗಳನ್ನು ಇಲ್ಲಿ ಚರ್ಚಿಸಲಾಗಿದೆ. 
 
* ಪಾಸ್‌ವರ್ಡ್‌ ಸ್ವಚ್ಛಮಾಡಿಕೊಳ್ಳಿ
ಬ್ಯಾಂಕಿಂಗ್, ಷಾಪಿಂಗ್‌, ಸಾಮಾಜಿಕ ಮಾಧ್ಯಮ, ಇ–ಮೇಲ್‌ ಹೀಗೆ ಎಲ್ಲ ಕಡೆಯೂ ಪಾಸ್‌ವರ್ಡ್‌ ಇದ್ದರಷ್ಟೇ ಕೆಲಸ . ಹೆಚ್ಚಿನವರು ಒಂದೇ ಪಾಸ್‌ವರ್ಡ್ ಅನ್ನು ಎಲ್ಲಾ ಕಡೆಯೂ ಇಟ್ಟುಕೊಂಡಿರುತ್ತಾರೆ.  ಅದಕ್ಕೆ ಪ್ರಮುಖ ಕಾರಣ ಎಲ್ಲದಕ್ಕೂ ಒಂದೊಂದು ಪಾಸ್‌ವರ್ಡ್‌  ಹೇಗೆ ನೆನಪಿಟ್ಟುಕೊಳ್ಳುವುದು ಎಂಬುದು. ಕಳೆದ ವರ್ಷವೇ ಯಾಹೂ ತನ್ನ ಗ್ರಾಹಕರಿಗೆ ಒಂದು ಸಂದೇಶ ರವಾನಿಸಿತ್ತು. ಪದೇ ಪದೇ ಒಂದೇ ಪಾಸ್‌ವರ್ಡ್‌ ಬಳಸಬಾರದು ಎಂದು. 2013ರಲ್ಲಿ ಲಕ್ಷಾಂತರ ಅಕೌಂಟ್‌ ಗಳನ್ನು ಹ್ಯಾಕ್‌ ಮಾಡಲಾಗಿತ್ತು. ಇದರಿಂದ ಎಲ್ಲದಕ್ಕೂ ಒಂದೇ ಪಾಸ್‌ವರ್ಡ್‌ ಬಳಸುವುದು ಅಪಾಯಕಾರಿ ಎಂಬುದು ದೃಢಪಟ್ಟಿದೆ. 
 
2017ರಲ್ಲಾದರೂ ಒಂದೊಂದು ಅಕೌಂಟ್‌ಗೆ ಬೇರೆ ಬೇರೆ ರೀತಿಯ ಪಾಸ್‌ವರ್ಡ್‌ ಇಟ್ಟುಕೊಳ್ಳುವ ನಿರ್ಣಯ ಕೈಗೊಳ್ಳಿ. ನಿಮ್ಮ ಪಾಸ್‌ವರ್ಡ್‌ಗಳು ವಿಶಿಷ್ಟವಾಗಿದ್ದು,  ಕನ್ನ ಹಾಕುವವರ ಊಹೆ ಸಾಮರ್ಥ್ಯಕ್ಕೆ ಕೈಗೆಟುಕದಂತೆ ಸಶಕ್ತವಾಗಿರಲಿ. ಇದನ್ನು ಸರಳವಾಗಿಸಲು ಕೆಲವು ಅಪ್ಲಿಕೇಷನ್‌ಗಳು  ಲಭ್ಯವಿವೆ. LastPass or 1Password ಆ್ಯಪ್‌ಗಳು ಪಾಸ್‌ವರ್ಡ್‌ ನಿರ್ವಹಣೆ ಮಾಡುತ್ತವೆ.
 
ಎಲ್ಲೆಲ್ಲಿ ಆಯ್ಕೆ ಇರುತ್ತದೊ ಅಲ್ಲಿ ಎರಡು ಹಂತದ ಪರಿಶೀಲನೆ ಇದ್ದರೆ ಒಳ್ಳೆಯದು. ಯಾವಾಗ ಪಾಸ್‌ವರ್ಡ್‌ ಹಾಕಿದರೂ ನಿಮಗೊಂದು ಸಂದೇಶ ಬರುತ್ತದೆ. ಇದು ಸಾಮಾನ್ಯವಾಗಿ ಟೆಕ್ಸ್‌ ಸಂದೇಶವಾಗಿರುತ್ತದೆ. ಇದರಲ್ಲಿ ಒನ್‌ಟೈಮ್ ಕೋಡ್‌ ಇದ್ದು ಅನ್ನು ಲಾಗಿನ್‌ ಆಗುವಾಗ ನಮೂದಿಸಬೇಕಾಗುತ್ತದೆ. 
 
ಈ ರೀತಿ ಎರಡು ಹಂತದಲ್ಲಿ ಪಾಸ್‌ವರ್ಡ್‌ ಬಗ್ಗೆ ಜಾಗ್ರತೆ ವಹಿಸಿದರೆ ದೊಡ್ಡ ತೊಂದರೆಯಿಂದ ಪಾರಾಗಬಹುದು. 
 
* ನಿಮ್ಮ ಉಪಕರಣಗಳನ್ನು ನಿರ್ವಹಣೆ ಮಾಡಿ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ನಿರಂತರವಾಗಿ ಬಳಸುವುದರಿಂದ ಅವುಗಳು ಜಡವಾಗುತ್ತವೆ ಮತ್ತು ಅವುಗಳ ಜೀವಿತ ಅವಧಿ ಕಡಿಮೆಯಾಗುತ್ತದೆ. ಇದರಿಂದ ಅವುಗಳ ಕೆಲಸ ನಿಧಾನವಾಗುತ್ತದೆ. ಆದ್ದರಿಂದ ಬಳಕೆಯ ನಂತರ ಅವುಗಳ ನಿರ್ವಹಣೆಗೂ ಗಮನ ನೀಡಿದರೆ ಬಳಕೆ ಸಂದರ್ಭದಲ್ಲಿ ಅಡಚಣೆಗಳು ಎದುರಾಗದೆ ಸುಸೂತ್ರವಾಗುತ್ತದೆ. ಮೊದಲಿಗೆ ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿಕೊಳ್ಳಿ. ಐಫೋನ್‌, ಐಪಾಡ್‌ಗಳ ಬ್ಯಾಟರಿ ನಿರ್ವಹಣೆಗೆ ಒಂದು ವಿಧಾನವಿರುತ್ತದೆ. ಬ್ಯಾಟರಿ ಇಡೀ ಸಾಧನದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದರಿಂದ ಅದು ಹಳೆಯದಾದರೆ, ಸರಿಯಾಗಿ ಕೆಲಸ ಮಾಡದಿದ್ದರೆ ಹೊಸತನ್ನು ಖರೀದಿಸುವುದು ಇಲ್ಲವೇ ದುರಸ್ತಿ ಮಾಡಿಸುವುದು ಸೂಕ್ತ.  
 
ನೀವು ಬಳಸುವ ತಾಂತ್ರಿಕ ಸಾಧನದ  ಸಂಗ್ರಹ ಸಾಮರ್ಥ್ಯದ ಕಡೆಗೆ ಗಮನಹರಿಸುವುದೂ ಒಳ್ಳೆಯದು. ಅನಗತ್ಯವಾದ ಅಂಶಗಳನ್ನು ತೆಗೆದುಹಾಕುವುದು ಉತ್ತಮ. ಯಾವತ್ತೂ ನೋಡದ ಚಿತ್ರಗಳನ್ನು ತೆಗೆದು ಹಾಕಿದರೆ (ಡಿಲೀಟ್ ಮಾಡಿದರೆ) ಇನ್ನೂ ಒಳ್ಳೆಯದು. 
 
ನೀವು ಬಳಸುವ ಸಾಧನದ ಕಡೆಗೆ ಸ್ವಲ್ಪ ಪ್ರೀತಿ ತೋರುವುದು ಉತ್ತಮ. ಕಂಪ್ಯೂಟರ್ ಸ್ಕ್ರೀನ್‌ಗಳನ್ನು ಒದ್ದೆ ಬಟ್ಟೆಯಿಂದ ಒರೆಸುವುದು, ಧೂಳು ಹಿಡಿಯದಂತೆ ಎಚ್ಚರ ವಹಿಸಿ.  ಈ ರೀತಿಯ ಕೆಲಸಗಳನ್ನು ಕನಿಷ್ಠ ಪಕ್ಷ ಆರು ತಿಂಗಳಿಗೊಮ್ಮೆ ಮಾಡಿ ದರೆ ಅವುಗಳು ವರ್ಷಗಟ್ಟಲೆ ಉತ್ತಮವಾಗಿ ಕೆಲಸ ಮಾಡುತ್ತವೆ. 
 
* ಮೂಲಸೌಕರ್ಯದತ್ತ ಗಮನ ಕೊಡಿ 
ಎರಡು ವರ್ಷಕ್ಕೊಮ್ಮೆಯಾದರೂ ಹೊಸ ಸ್ಮಾರ್ಟ್ ಫೋನ್‌ ಖರೀದಿ ಮಾಡಲು ನಾವು ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಮನೆಯ ಮೂಲೆಯಲ್ಲಿ ಧೂಳು ತಿನ್ನುತ್ತಿರುವ ವೈಫೈ ರೂಟರ್ ಕಡೆ ತಲೆ ಎತ್ತಿ ಸಹ ನೋಡುವುದಿಲ್ಲ. ಈ ಸಾಧನವನ್ನು ನಾವು ಆಗಾಗ ಮೇಲ್ದರ್ಜೆಗೆ ಏರಿಸುತ್ತಲೇ ಇರಬೇಕಾಗುತ್ತದೆ. 
 
ಈ ವರ್ಷದಲ್ಲಾದರೂ ಇಂಟರ್‌ನೆಟ್‌ ಮೂಲಸೌಕರ್ಯ ಉತ್ತಮಪಡಿಸುವ ಕಡೆಗೆ ಯೋಚಿಸಿ. ನಿಮ್ಮ ರೂಟರ್‌ ಮೂರು ವರ್ಷ ಹಳೆಯದಾದರೆ ಅದನ್ನು ಬದಲಾಯಿಸಿ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ವೇಗದ, ಉತ್ತಮ ಗುಣಮಟ್ಟದ, ಸ್ಮಾರ್ಟರ್‌ ವೈರ್‌ಲೆಸ್‌ ಸಾಧನ ಅಳವಡಿಸಿಕೊಳ್ಳಿ. 
 
* ವ್ಯರ್ಥ ಸಾಮಾನುಗಳನ್ನು ಕಡಿಮೆ ಮಾಡಿಕೊಳ್ಳಿ 
ಬಳಕೆ ಮಾಡದ ಗ್ಯಾಡ್ಜೆಟ್‌ ಮತ್ತು ಪವರ್‌ ಕೇಬಲ್‌ಗಳು ಕೊಠಡಿಯ ಹೆಚ್ಚಿನ ಸ್ಥಳವನ್ನು ಆವರಿಸಿಕೊಳ್ಳುತ್ತವೆ. ಈ ರೀತಿಯ ಇ–ತ್ಯಾಜ್ಯವನ್ನು ಮಾರುವುದು ಒಳ್ಳೆಯದು. ಇಲ್ಲವೇ ಅವುಗಳು ಕೆಲಸ ಮಾಡುತ್ತಿದ್ದು ನೀವು ಬಳಕೆ ಮಾಡದೇ ಇದ್ದರೆ ಯಾರಿಗೆ ಅಗತ್ಯವಿದೆಯೊ ಅವರಿಗೆ ಕೊಡಿ.  ಕೆಲವು ಕಂಪೆನಿಗಳು ಬಳಸಿದ ವಸ್ತುಗಳನ್ನು ಮಾರಲು ನೆರವಾಗುತ್ತವೆ. 
 
* ಸ್ಮಾರ್ಟ್‌ ಶಾಪರ್‌ ನೀವೇ ಆಗಿ
ಎಲೆಕ್ಟ್ರಾನಿಕ್ಸ್‌ ಸಾಧನ ಖರೀದಿಗೆ ನೀವು ದಿನ ನಿಗದಿ ಪಡಿಸಬೇಕಿಲ್ಲ.  ಖರೀದಿಗಾಗಿ ಸಂಶೋಧನೆ ಮಾಡಿ, ಉತ್ತಮ ಗುಣಮಟ್ಟದ ವಸ್ತುಗಳು ಬೆಲೆ ಕಡಿಮೆ ಇರುವಾಗ ಖರೀದಿ ಮಾಡಿ. ಇದು ಆನ್‌ಲೈನ್‌ ಮಾರುಕಟ್ಟೆಗೂ ಅನ್ವಯಿಸುತ್ತದೆ. 
-ಬ್ರಿಯಾನ್‌ ಎಕ್ಸ್ ಚೆನ್ 
(ನ್ಯೂಯಾರ್ಕ್‌ ಟೈಮ್ಸ್‌) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT