ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಜಾತ್ರೆಗೂ ನೋಟು ರದ್ದು ಬಿಸಿ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಗರಿಷ್ಠ ಮುಖಬೆಲೆಯ ನೋಟು ರದ್ದುಗೊಂಡು 70 ದಿನ ಗತಿಸಿದರೂ, ಗ್ರಾಮೀಣ ರೈತರ ವಹಿವಾಟು ಸಹಜ ಸ್ಥಿತಿಗೆ ಮರಳಿಲ್ಲ.

ವಿಜಯಪುರ ನಗರದ ಹೊರವಲಯದ ತೊರವಿ ಬಳಿ ಸಿದ್ಧೇಶ್ವರ ಜಾತ್ರೆ ಅಂಗವಾಗಿ ನಡೆಯುತ್ತಿರುವ ಜಾನುವಾರು ಜಾತ್ರೆಗೂ ನೋಟು ನಿಷೇಧದ ಬಿಸಿ ಬೃಹತ್ ಪ್ರಮಾಣದಲ್ಲಿ ತಟ್ಟಿದೆ. ಜಾತ್ರೆ ಅಂತ್ಯಗೊಳ್ಳುವ ಸಮಯ ಬಂದರೂ ಶೇ 10ರಷ್ಟು ಜಾನುವಾರುಗಳೂ ಮಾರಾಟಗೊಂಡಿಲ್ಲ.
 
110 ಎಕರೆ ವಿಶಾಲ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಜಾತ್ರೆಯಲ್ಲಿ ಸೋಮವಾರ ಎರಡ್ಮೂರು ಸುತ್ತು ಹಾಕಿದರೂ ಎಲ್ಲೆಡೆಯೂ ನೋಟು ರದ್ದಿನ ವಿಷಯವೇ ಕೇಳಿ ಬಂತು.
 
ಈ ಹಿಂದಿನ ಜಾತ್ರೆಗಳಲ್ಲಿ ಲಕ್ಷ, ಲಕ್ಷ ರೂಪಾಯಿಗಳನ್ನು ಕಿಸೆಯಲ್ಲಿಟ್ಟುಕೊಂಡು ಬರುತ್ತಿದ್ದ ಖರೀದಿದಾರರು ಈ ಬಾರಿ ಬರಿಗೈಯಲ್ಲಿ ಬಂದಿದ್ದರು. ಜಾನುವಾರು ಕಿಮ್ಮತ್ತು ಲಕ್ಷ ದಾಟಿದ್ದರೂ ಕೇಳಿದ್ದು ಮಾತ್ರ ಅರ್ಧ ಬೆಲೆಗೆ ಎಂದು ವಿಜಯಪುರ ನಗರದ ಶಹಾಪೇಟೆಯ ರೈತ ಶಂಕರಪ್ಪ ಮಹಾದೇವಪ್ಪ ಶಹಾಪೇಟೆ ಹೇಳುತ್ತಾರೆ.
 
ಉರುಳೇ ನಂಗ ಉಳಿದಿರೋ ದಾರಿ
‘ನಮ್ದು ಎರಡ್‌ ಎಕ್ರೆ ಹೊಲ ಐತಿ. ನಾವ್ ಬಡವ್ರು. ಮಳಿ ಇಲ್ಲದಿದ್ದಕ ರಾಸಿನ ಬೆಲೆ ಕಮ್ಮಿ ಐತ್ರಿ. ಈಗಲೇ ಖರೀದಿಸಿದ್ರಾ ಮುಂದಿನ ಮಳೆಗಾಲದಲ್ಲಿ ರೈತರ ಹೊಲ ಮಾಡ್ಕೊಂಡು ದುಡ್ಕೊಬೌದು ಎಂಬ ಆಸೆಯಿಂದ ಜೋಡೆತ್ತಿನ ಖರೀದಿಗೆ ಹಡಗಲಿಯಿಂದ ಜಾತ್ರೆಗೆ ಬಂದೀವಿ.
 
‘ಮಹಾರಾಷ್ಟ್ರದ ಪಾಂಡೇವಾಡಿ ರೈತನ ಬಳಿ ₹ 43 ಸಾವಿರಕ್ಕೆ ಖರೀದಿ ಮಾತನಾಡಿ, ₹ 23 ಸಾವಿರ ಮುಂಗಡ ಕೊಟ್ಟೀವಿ. ಜಾತ್ರೆ ಇನ್ನೇನು ಮುಗೀತಾ ಬಂತು. ಒಂದೆರೆಡು ದಿನದೊಳಗ ಉಳಿದ ರೊಕ್ಕ ಹೊಂದ್ಸಿ ಎತ್ತುಗಳನ್ನು ಊರಿಗೆ ಹೊಡ್ಕೊಂಡು ಹೋಗಬೇಕ್ರೀ...
‘ರೊಕ್ಕ ಹೊಂದಿಸ್ಲಿಕ್ಕೆ ಮುಂಜಾನಿಂದ ಪರದಾಡ್ತೀವ್ನೀ. ಒಂದ ಐವತ್ತ್‌ ಮಂದಿ ಬಳಿ ಬೇಡ್ದೆ. ಯಾರೂ ಸಾಲ ಕೊಡಲಿಲ್ಲ. ಊರಿನ ಬ್ಯಾಂಕ್‌ಗೆ ಹೋಗಿ ಕಷ್ಟ ಹೇಳಿಕೊಂಡ್ರೂ ಮ್ಯಾನೇಜರ್ ಕೊಟ್ಟಿದ್ದು ₹  2 ಸಾವಿರ ಮಾತ್ರ. ಎಟಿಎಂ ಮುಂದ ನಿಂತ್ರ ರೊಕ್ಕಾನೇ ಸಿಗಲಿಲ್ರೀ.
 
‘ಜಲ್ದೀ ರೊಕ್ಕ ಹೊಂದ್ಸಿ ಕೊಡದಿದ್ದರಾ ರೈತ ತನ್ನೂರಿಗೆ ಎತ್ತುಗಳನ್ನು ಹೊಡ್ಕೊಂಡು ಹೋಗ್ತಾನೆ. ಮುಂಗಡ ಕೊಟ್ಟ ಇಸಾರಾನೂ ವಾಪಸ್‌ ಕೊಡಲ್ಲ. ದಿಕ್ಕೇ ತೋಚದ ಸ್ಥಿತಿ ನನ್ನದು. ಇದೋ ನನ್ನ ಬಂಡಿ. ರೊಕ್ಕ ಹೊಂದಾಣಿಕೆ ಆಗಿ ಜೋಡೆತ್ತು ನನ್ನ ಕೈ ಸೇರದಿದ್ದರೇ ಇದೇ ನೊಗಕ್ಕೆ ಉರುಳು ಹಾಕ್ಕೊಳೋದು ಬಿಟ್ಟರೇ ಬೇರೆ ಇನ್ಯಾವುದು ನಂಗ ತೋಚದಂಗಾಗೈತ್ರೀ...’ ಎಂದು ಹಡಗಲಿಯ ಯುವ ರೈತ ಸೋಮು ಗಂಗೂ ರಾಠೋಡ ‘ಪ್ರಜಾವಾಣಿ’ ಬಳಿ ಕಣ್ಣೀರಿಟ್ಟು ತಮ್ಮ ಅಸಹಾಯಕ ಸ್ಥಿತಿ ಬಿಚ್ಚಿಟ್ಟರು.
 
ಮೇವಿಲ್ಲ
‘ಜಾತ್ರೆಗೆ ಬಂದೀವಿ. ಹೊಳ್ಳಿ ಮನೆಗೆ ಹೋದ್ರೆ ಮೇವಿಲ್ಲ. ವರ್ಷ ಜೋಡೆತ್ತು ನೋಡ್ಕೊಬೇಕು ಅಂದ್ರೇ ₹ 1 ಲಕ್ಷ ಖರ್ಚು ಬರುತ್ತೆ. ₹ 1ಲಕ್ಷ ಕಿಮ್ಮತ್ತಿನ ಜೋಡೆತ್ತನ್ನು ವಿಧಿಯಿಲ್ಲದೆ ₹ 70 ಸಾವಿರಕ್ಕೆ ಕೊಟ್ಟೀವ್ನೀ. ಖರೀದಿದಾರ ಅರ್ಧ ದುಡ್ಡು ಕೊಟ್ವನೆ. ಉಳಿದಿದ್ದನ್ನು ಕೆಲ ದಿನ ಬಿಟ್ಟು ಕೊಡ್ತೀನಿ ಅಂದವ್ನೇ. ‘ಅವ್ನಿಗೂ ನೋಟ್‌ ಬ್ಯಾನ್‌ನ ತ್ರಾಸ್‌ ತಟ್ಟಿದೆ. ಇತ್ತ ನಮ್ಗೂ ವಿಧಿಯಿಲ್ಲ. ಏನು ಮಾಡಕಾಗಲ್ಲ. ಅನಿವಾರ್ಯ ಎಲ್ಲರನ್ನೂ ಸಂದಿಗ್ಧ ಸ್ಥಿತಿಗೆ ದೂಡಿದೆ’ ಎಂದು ಯುವರೈತ ಸಂತೋಷ ಶಹಾಪೇಟೆ ಹೇಳುತ್ತಾರೆ.
 
ಒಂದೆಡೆ ತೊಗರಿ ಧಾರಣೆ ಪ್ರಪಾತಕ್ಕೆ ಕುಸಿಯುತ್ತಿದೆ. ಇನ್ನೊಂದೆಡೆ ಸತತ ಬರದ ಹೊಡೆತ. ಇವೆರೆಡರ ಜತೆಗೆ ಇದೀಗ ನೋಟು ರದ್ದತಿಯ ಹೊಡೆತವೂ ರೈತರನ್ನು ಸಾಕಷ್ಟು ಹೈರಾಣಾಗಿಸಿದೆ. ನೋಟು ರದ್ದತಿಗೂ ಮುಂಚೆ ಎಲ್ಲಿ ಬೇಡಿದರೂ ಸಾಕಷ್ಟು ಕೈಗಡ (ಸಾಲ) ಖಾಸಗಿಯಾಗಿ ದೊರೆಯುತ್ತಿತ್ತು. ಎಟಿಎಂ, ಬ್ಯಾಂಕ್‌ಗಳಲ್ಲಿನ ಖಾತೆಯಿಂದಲೂ ಹಣ ಪಡೆಯಬಹುದಿತ್ತು. ಆದರೆ ಇದೀಗ ಇಂದಿಗೂ ಗ್ರಾಮೀಣ ವಲಯದ ಬ್ಯಾಂಕ್‌ಗಳಲ್ಲಿ ನಿತ್ಯ ಖಾತೆಯಿಂದ ಹಣ ಮರಳಿ ಪಡೆಯಲು ಹೋದರೆ ನೀಡುವುದು ₹ 2 ಸಾವಿರ ಮಾತ್ರ ಎಂದು ದಾಶ್ಯಾಳದ ರೈತ ಗುರುಪಾದ ಸಂಗಾಪುರ ತಿಳಿಸಿದರು.
 
ಜಾತ್ರೆಯಲ್ಲಿ ನಿರೀಕ್ಷಿತ ಬೆಲೆ ಜಾನುವಾರಿಗೆ ಸಿಗದಿದ್ದರಿಂದ ವಿಧಿಯಿಲ್ಲದೆ ಊರುಗಳಿಗೆ ರಾಸುಗಳ ಜತೆ ನಿರಾಸೆಯಿಂದ ಮರಳುತ್ತಿದ್ದೇವೆ. ₹20 ಸಾವಿರ ಕಿಮ್ಮತ್ತಿನ ಗರ್ಭಿಣಿ ಆಕಳನ್ನು ₹ 10 ಸಾವಿರಕ್ಕೆ ಕೇಳಿದರೆ ಇನ್ನೇನು ಮಾಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
 
**
ತೊಗರಿ ಬೆಲೆಯಲ್ಲಿ ಭಾರಿ ಕುಸಿತ, ಸತತ ಬರದ ಜತೆ ನೋಟು ರದ್ದುಗೊಂಡ ಬಳಿಕ ಮಾರುಕಟ್ಟೆಯಲ್ಲಿ ನಗದು ಸರಾಗವಾಗಿ ದೊರಕದಿರುವುದರ ಪರಿಣಾಮ ಜಾನುವಾರು ವಹಿವಾಟು ಮುಕ್ಕಾಲು ಭಾಗ ಕುಸಿದಿದೆ.
–ವಿ.ರಮೇಶ, ಎಪಿಎಂಸಿ ಕಾರ್ಯದರ್ಶಿ
 
**
ಮಂದಿ ಬಳಿ ರೊಕ್ಕವಿಲ್ಲ. ಅವರಿವರ ಬಳಿ ಬೇಡಿದರೂ ಯಾರೂ ಸಾಲ ಕೊಡಲ್ಲ. ರಾಸು ಖರೀದಿ ಬಳಿಕ ರೊಕ್ಕ ಹೊಂದಿಸಲು ಅಲೆದಾಡುವವರ ಸಂಖ್ಯೆಯೇ ಹೆಚ್ಚಿದೆ
–ಸಂತೋಷ ಶಹಾಪೇಟೆ, ಯುವ ರೈತ 
 
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT