ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಸೊಬಗಿನ ಮಣ್ಣಿನ ಆಭರಣ

ಫ್ಯಾಷನ್‌
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
ಮಣ್ಣಿನ ಗುಣವೇ ಅಂಥದ್ದು. ಮಣ್ಣಿನ ವಾಸನೆಯಷ್ಟೇ ಅಲ್ಲ, ಅದರಲ್ಲಿ ತಯಾರಾದ ಸಣ್ಣ ವಸ್ತುವಿಗೂ ದೇಸಿ ಸೊಬಗಿದೆ. ಮಣ್ಣು ಮನಸಿಗಷ್ಟೇ ಅಲ್ಲ ಮೈಯಿಗೂ ಒಪ್ಪುವ ಗುಣವಂತೆ.
 
ಹೌದು. ಮಣ್ಣಿನಿಂದ ಮಾಡಿದ ಬಗೆಬಗೆ ವಿನ್ಯಾಸದ ಆಭರಣಗಳು ಈಗ ಹೆಣ್ಣಿನ ಮೈಯನ್ನು ಅಲಂಕರಿಸುತ್ತಿವೆ. ವಿವಿಧ ಬಣ್ಣಗಳಲ್ಲಿ ಉಡುಪಿಗೆ ತಕ್ಕಂತೆ ದೊರೆಯುವ ಟೆರಾಕೋಟ ಆಭರಣಗಳು ಎಲ್ಲಾ ವಯೋಮಾನದವರಿಗೂ ಆಪ್ಯಾಯಮಾನ. 
 
ಎಲ್ಲರಿಗೂ ಇಷ್ಟ
ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತಿತರ ಲೋಹಗಳಲ್ಲಿ ನಮಗೆ ಬೇಕಾದ ವಿನ್ಯಾಸದ ಆಭರಣಗಳು ದೊರೆಯುವುದು ಕಷ್ಟ. ದೊರೆತರೂ ಉಡುಪಿಗೆ ಹೊಂದುತ್ತದೆಯೇ, ಹೊಂದಿದರೂ ಬೆಲೆಯನ್ನು ಭರಿಸಬಹುದೇ ಎಂದು ಯೋಚನೆ ಮಾಡುವುದು ಸಾಮಾನ್ಯ.
 
ಆದರೆ, ಟೆರಾಕೋಟ ಆಭರಣಗಳಲ್ಲಿ ಇಂಥ ರಗಳೆಗಳಿಲ್ಲ. ಕಾಲೇಜು ಹುಡುಗಿಯರಿಂದ ಹಿಡಿದು 60ರ ವಯೋಮಾನದವರಿಗೂ ಥರಾವರಿ ವಿನ್ಯಾಸದ ಟೆರಾಕೋಟ ಆಭರಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಸೃಜನಶೀಲದ ಪ್ರತೀಕ
‘ಸೃಜನಶೀಲ ವ್ಯಕ್ತಿತ್ವದವರು ಹೆಚ್ಚಾಗಿ ಟೆರಾಕೋಟ ಆಭರಣಗಳನ್ನು ಧರಿಸುತ್ತಾರೆ. ಅವರಿಗೆ ಬೇಕಾದ ವಿನ್ಯಾಸದಲ್ಲಿ ಉಡುಪಿಗೆ ತಕ್ಕಂತೆ ಹೊಂದುವ ಆಭರಣಗಳನ್ನು ತಯಾರಿಸಿಕೊಡುತ್ತೇನೆ’ ಎನ್ನುತ್ತಾರೆ ಗ್ರೀನ್ ಲೋಟಸ್ ಟೆರಾಕೋಟ ಜ್ಯುವೆಲರಿಯ ವಿನ್ಯಾಸಕಿ ಪ್ರತಿಭಾ ವೀರು.
ಕಾಲೇಜು ಹುಡುಗಿಯರು ಆಧುನಿಕ ವಿನ್ಯಾಸ ಇಷ್ಟಪಟ್ಟರೆ, ಗೃಹಿಣಿಯರು ಪುರಾತನ ಶೈಲಿಯ ಅಂದರೆ ಆ್ಯಂಟಿಕ್‌ ಮಾದರಿಯ ಆಭರಣಗಳನ್ನು ಬಯಸುತ್ತಾರೆ. ಉದ್ಯೋಗಸ್ಥ ಮಹಿಳೆಯರು ಜೀನ್ಸ್‌, ಕುರ್ತಾ, ಕಾಟನ್‌ ಸೀರೆಗಳ ಬಣ್ಣ, ವಿನ್ಯಾಸಕ್ಕೆ ತಕ್ಕ ಆಭರಣಗಳನ್ನು ತಯಾರಿಸಿಕೊಡಿ ಎಂದು ಬೇಡಿಕೆ ಮಂಡಿಸುತ್ತಾರೆ. ಅದರಲ್ಲೂ ಸಾಫ್ಟ್‌ವೇರ್ ಕ್ಷೇತ್ರದ ಮಹಿಳೆಯರಿಗೆ ಈ ಆಭರಣಗಳೆಂದರೆ ಪಂಚಪ್ರಾಣ ಎಂಬುದು ಟೆರಾಕೋಟ ಆಭರಣ ವಿನ್ಯಾಸಕರ ಅಭಿಪ್ರಾಯ.
 
‘ಕೆಲ ಗ್ರಾಹಕರು ತಮ್ಮ ಉಡುಪಿನ ಚಿತ್ರಗಳನ್ನು ವಾಟ್ಸ್‌ ಆ್ಯಪ್‌ನಲ್ಲಿ ಕಳುಹಿಸಿ ಇದಕ್ಕೆ ಹೊಂದುವಂತಹ ಆಭರಣ ಮಾಡಿ ಎನ್ನುತ್ತಾರೆ. ಆಗ ಮೊದಲು ಡ್ರಾಯಿಂಗ್ ಸ್ಕೆಚ್ ಹಾಕಿ, ಕಲರ್ ಸ್ಕೀಮ್ ಮಾಡಿ ಕಳಿಸುತ್ತೇನೆ. ಅದು ಅವರಿಗೆ ಇಷ್ಟವಾದಲ್ಲಿ  ಮಾತ್ರ ಆಭರಣ ತಯಾರಿಸಿಕೊಡುತ್ತೇನೆ’ ಎನ್ನುತ್ತಾರೆ ಪ್ರತಿಭಾ.
ಬುಡಕಟ್ಟು ಜನಾಂಗದವರು ಧರಿಸುತ್ತಿದ್ದ ಮಾದರಿಯ ಮಣ್ಣಿನಾಭರಣಗಳಿಗೆ ಹೆಚ್ಚು ಬೇಡಿಕೆ ಇದೆ. ಕೆಲವರು ಮಣ್ಣಿನ ಬಣ್ಣದ ಫೈಯರಿಂಗ್  ಮತ್ತೆ ಕೆಲವರು ಕಪ್ಪು ಫೈಯರಿಂಗ್  ಮಾಡಿರುವ ಆಭರಣಗಳನ್ನು ಬಯಸುತ್ತಾರೆ. ಕಾಟನ್‌ ಡ್ರೆಸ್‌ ಮತ್ತು ಸೀರೆಗಳಿಗೆ ಟೆರಾಕೋಟ ಆಭರಣಗಳನ್ನು ಧರಿಸುವುದು ಹೆಚ್ಚು ಸೂಕ್ತ.
 
ಅಕ್ರಿಲಿಕ್ ಬಣ್ಣಗಳಲ್ಲಿ ಥರೇವಾರಿ ವಿನ್ಯಾಸದಲ್ಲಿ ದೊರೆಯುವ ಟೆರಾಕೋಟ ಆಭರಣಗಳನ್ನು ಎಲ್ಲೆಂದರಲ್ಲಿ ಸುಲಭವಾಗಿ ಒಯ್ಯುಬಹುದು. ಕಳೆದರೂ ಸಮಸ್ಯೆಯಿಲ್ಲ. ಮತ್ತೆ ಕೈಗೆಟುಕುವ ದರದಲ್ಲಿ ಖರೀದಿಸಬಹುದು. 
ಜುಮುಕಿಗೆ ಬೇಡಿಕೆ
ಸಣ್ಣ ಗಾತ್ರದ ಜುಮುಕಿಯಿಂದ ಹಿಡಿದು ದೊಡ್ಡದೊಡ್ಡ ಗಾತ್ರದ ಜುಮುಕಿಗಳು ಹೆಚ್ಚು ಮಾರಾಟವಾಗುತ್ತವೆ. ₹ 150 ಆರಂಭಿಕ ಬೆಲೆಗಳಲ್ಲಿ ದೊರೆಯುವ ಈ ಜುಮುಕಿಗಳನ್ನು ಧರಿಸಿದರೆ ಕೊರಳಲ್ಲಿ ಸರವನ್ನೂ ಧರಿಸುವುದು ಬೇಡ.  ಧರಿಸಿದವರ ಅಂದ ಜುಮುಕಿಯಿಂದಲೇ ಇಮ್ಮಡಿಯಾಗುತ್ತದೆ.
 
ಜುಮುಕಿ ಮಾತ್ರವಲ್ಲ, ಉಂಗುರ, ಬ್ರೇಸ್‌ಲೆಟ್‌, ಕಾಲ್ಗೆಜ್ಜೆ, ಉತ್ತರ ಕರ್ನಾಟಕ ಶೈಲಿಯ ಟಿಕ್ಕಿ, ಬೋರ್‌ಮಳ, ಗುಂಡಿನ ಸರ, ಅವಲಕ್ಕಿ ಸರವೂ ದೊರೆಯುತ್ತದೆ. ಆನ್‌ಲೈನ್ ಸೇರಿದಂತೆ ಸ್ಥಳೀಯ ಮಾರುಕಟ್ಟೆ, ಚಿತ್ರಸಂತೆ, ಕರಕುಶಲ ಮೇಳಗಳಲ್ಲಿ ಟೆರಾಕೋಟ ಆಭರಣಗಳಿಗೆ ಕಾಯಂ ಸ್ಥಾನ. ಆದರೆ, ಫಿನಿಷಿಂಗ್‌ ಮತ್ತು ಗುಣಮಟ್ಟವನ್ನು ಖಾತರಿಪಡಿಸಿಕೊಂಡು ಖರೀದಿಸುವುದು ಒಳ್ಳೆಯದು ಎಂಬುದು ವಿನ್ಯಾಸಕರ ಕಿವಿಮಾತು.
 
***
ಕರಕುಶಲ ಮೇಳಗಳಲ್ಲಿ ಬೆಲೆ (ಆರಂಭಿಕ)
ಜುಮುಕಿ ₹ 150ರಿಂದ
ಉಂಗುರ ₹ 90 
ಬ್ರೇಸ್‌ಲೆಟ್‌ ₹150
ಕಾಲ್ಗೆಜ್ಜೆ ₹ 300ರಿಂದ 
ಪೂರ್ತಿ ಸೆಟ್‌ ₹ 250ರಿಂದ 
ದೇಸಿ ಅಂಗಡಿ ದರ (ಬಣ್ಣರಹಿತ)
ಕಿವಿಯೋಲೆ ₹ 25ರಿಂದ ಆರಂಭ
ಜುಮುಕಿ ₹ 95
ಪೂರ್ತಿ ಸೆಟ್ ₹ 185
(ವಿನ್ಯಾಸಕ್ಕೆ ತಕ್ಕಂತೆ ಬೆಲೆಗಳಲ್ಲಿ ಏರುಪೇರು ಇರುತ್ತದೆ)

 

***
ಟೆರಾಕೋಟ ಆಭರಣಗಳು ನಿಮ್ಮನ್ನು ನೂರು ಜನರಲ್ಲಿ ಎದ್ದು ಕಾಣುವಂತೆ ಮಾಡುತ್ತವೆ. ದೇಸಿ ಸಂಸ್ಕೃತಿಯನ್ನು  ಬಿಂಬಿಸುವ ಈ ಆಭರಣಗಳು ಮೈ–ಮನಸ್ಸಿಗೆ ಸಂತಸವನ್ನೂ ನೀಡುತ್ತವೆ.
–ಪ್ರತಿಭಾ ವೀರು,
ವಿನ್ಯಾಸಕಿ, facebook.com/greenlotusjewels

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT