ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್ ಜತೆ ಚಹಾ ಸೇವಿಸಿದ್ದ ರಿಷಿ ಕಪೂರ್!

ಬಾಲಿವುಡ್‌
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಎರಡು ಬಾರಿ ಚಹಾ ಸೇವಿಸಿದ್ದ ರಹಸ್ಯವನ್ನು ಬಾಲಿವುಡ್‌ ನಟ ರಿಷಿ ಕಪೂರ್ ಹೊರಗೆಡವಿದ್ದಾರೆ.
 
ಸೋಮವಾರವಷ್ಟೇ ಬಿಡುಗಡೆಯಾಗಿರುವ ರಿಷಿ ಆತ್ಮಕತೆ ‘ಖುಲ್ಲಂಖುಲ್ಲಾ’ ಕೃತಿಯಲ್ಲಿ ಈ ರಹಸ್ಯ ಬಯಲಾಗಿದ್ದು, ರಿಷಿ ತಮ್ಮ ಬದುಕಿನ ಅನೇಕ ರಹಸ್ಯಗಳನ್ನು ಇಲ್ಲಿ ಮುಕ್ತವಾಗಿ ಬಿಚ್ಚಿಟ್ಟಿರುವುದು ವಿಶೇಷ.
 
‘1988ರಲ್ಲಿ ಮೊದಲ ಬಾರಿಗೆ ದಾವೂದ್ ಇಬ್ರಾಹಿಂ ನನ್ನನ್ನು ಅವನ ಮನೆಗೆ ಚಹಾ ಕುಡಿಯಲು ಆಹ್ವಾನಿಸಿದ್ದ. ಆದರೆ, ಆ ಸಮಯದಲ್ಲಿ ಇನ್ನೂ ಮುಂಬೈನಲ್ಲಿ ಬಾಂಬ್ ಸ್ಫೋಟದ ಘಟನೆಯಾಗಲೀ, ದಾವೂದ್‌ ಭಾರತಕ್ಕೆ ಬೇಕಾದ ಅಪರಾಧಿಯಾಗಲೀ ಆಗಿರಲಿಲ್ಲ. ಹಾಗಾಗಿ, ಅಂದು ದಾವೂದ್ ಜತೆ ಚಹಾ ಸೇವಿಸಿದ್ದು ತಪ್ಪಲ್ಲ’ ಎಂದೂ ರಿಷಿ ಸ್ಪಷ್ಟನೆ ನೀಡಿದ್ದಾರೆ. 
 
1988ರಲ್ಲಿ ಸ್ನೇಹಿತ ಬಿಟ್ಟೂ ಆನಂದ್ ಜತೆ ದುಬೈಗೆ ಹೋಗಿದ್ದೆ.  ದಾವೂದ್‌ನ ಬಂಟರು ದುಬೈಗೆ ಬರುತ್ತಿದ್ದ ವಿಐಪಿಯ ನಿಗಾ ವಹಿಸುತ್ತಿದ್ದರು. ಇನ್ನೇನು ನಾನು ವಿಮಾನ ನಿಲ್ದಾಣದಿಂದ ಹೊರಡಬೇಕೆನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು ದಾವೂದ್ ಸಾಬ್ ಮಾತಾಡುತ್ತಾರೆ ಎಂದು ಫೋನ್ ಕೊಟ್ಟ.
 
ನಿಮಗೆ ಏನಾದರೂ ಸಹಾಯ ಬೇಕಾ ಎಂದು ಕೇಳಲು ಕರೆ ಮಾಡಿದೆ ಎಂದು ಹೇಳಿದ ದಾವೂದ್, ನಂತರ ತನ್ನ ಮನೆಗೆ ಆಹ್ವಾನಿಸಿದ. ಅಲ್ಲಿಂದ ನಮ್ಮನ್ನು ದಾವೂದ್ ಮನೆಗೆ ಕರೆದೊಯ್ಯಲಾಯಿತು’ ಎಂದು ಅವರು ಮೊದಲ ಭೇಟಿಯನ್ನು ವಿವರಿಸಿದ್ದಾರೆ. 
 
1989ರಲ್ಲಿ ಪತ್ನಿ ನೀತೂ ಸಿಂಗ್ ಜತೆ ಶೂ ಶಾಪಿಂಗ್‌ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ 10 ಬಾಡಿಗಾರ್ಡ್‌ಗಳೊಂದಿಗೆ ದಾವೂದ್ ನಮ್ಮನ್ನು ಸುತ್ತುವರಿದ. ನಿಮಗೇನು ಬೇಕು ಖರೀದಿಸಿ ಎಂದೂ ದಾವೂದ್ ನನಗೆ ಹೇಳಿದ’ ಎಂದು ರಿಷಿ ನೆನಪಿಸಿಕೊಂಡಿದ್ದಾರೆ.
 
ಮೊದಲ ಭೇಟಿಯಲ್ಲಿ ಹೆಚ್ಚು ಮಾತನಾಡಿದ್ದೆವು. ಆದರೆ, ಎರಡನೇ ಭೇಟಿಯಲ್ಲಿ ಅಷ್ಟಾಗಿ ಮಾತನಾಡಲಾಗಲಿಲ್ಲ. ಆದರೆ,  ಇಬ್ಬರ ನಡುವಿನ ಮಾತುಕತೆಯಲ್ಲಿ ದಾವೂದ್ ತಾನೊಬ್ಬ ದೇಶಭ್ರಷ್ಟ. ಏಕೆಂದರೆ ನನಗೆ ಭಾರತದಿಂದ  ನ್ಯಾಯ ದೊರೆಯಲಾರದು. ಅಲ್ಲಿ ನನಗೆ ಬಹಳ ಮಂದಿ ಶತ್ರುಗಳಿದ್ದಾರೆ. ಬಹಳಷ್ಟು ರಾಜಕಾರಣಿಗಳಿಗೆ ನಾನು ಹಣ ಸರಬರಾಜು ಮಾಡುತ್ತೇನೆ. ಅವರೆಲ್ಲಾ ನನ್ನ ಜೇಬಿನಲ್ಲಿದ್ದಾರೆ’ ಎಂದು ಹೇಳಿದ್ದ.
 
ಆಗ ನಾನು ‘ದಾವೂದ್‌ ನಾನೊಬ್ಬ ಕಲಾವಿದ ಅಷ್ಟೇ. ನನ್ನನ್ನು ಬಿಟ್ಟುಬಿಡು ಮಾರಾಯ. ಇದರಲ್ಲಿ ನನ್ನನ್ನು ಎಳೆದುತರಬೇಡ ಎಂದು ಕೋರಿದೆ. ಅದು ಅವನಿಗೆ ಅರ್ಥವಾಯಿತು. ಆದರೆ, ದಾವೂದ್ ಯಾವತ್ತೂ ನನ್ನನ್ನು ಪ್ರೀತ್ಯಾದರಗಳಿಂದಲೇ ನಡೆಸಿಕೊಂಡಿದ್ದಾನೆ’ ಎಂದು ರಿಷಿ ಕಪೂರ್  ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT