ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನೋಡಿ, ಮಾತಾಡಿ...

ಸಿನಿಮಾ ನೋಡಿ, ಮಾತಾಡಿ...
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
* ಸಿನಿಮಾ ನೋಡಿ ಅದರ ಬಗ್ಗೆ ಮಾತನಾಡುವ ಅಪರೂಪದ ಪ್ರಯತ್ನಕ್ಕೆ ಕೈಹಾಕಿದ್ದೀರಿ? 
ಹೌದು. ‘ಬನದ ನೆರಳು’ ಚಿತ್ರದ ನಂತರ ನಾನು ಮಾಡಿರುವ ‘ಮುನ್ಸೀಫ’ ಹಾಗೂ ‘ಸಾಲದ ಮಗು’ ಸೂಕ್ಷ್ಮಸಂವೇದನೆಯ ಚಿತ್ರಗಳೆಂದು ವಿಶ್ಲೇಷಿಸಲಾಗುತ್ತಿದೆ. ಇದೀಗ ಪ್ರೇಕ್ಷಕರೊಂದಿಗೆ ಸಮಾಲೋಚನೆ ನಡೆಸುವ ಒಂದು ಪ್ರಯತ್ನವಾಗಿ ‘ಸಿನಿಮಾ ಸಂಭ್ರಮ’ ಹೆಸರಿನಲ್ಲಿ ಚಿತ್ರಗಳ ಪ್ರದರ್ಶನ ಹಾಗೂ ಕಮ್ಮಟವನ್ನು ಹಮ್ಮಿಕೊಂಡಿದ್ದೇನೆ. ಚಿತ್ರಪ್ರೇಮಿಗಳ ಜತೆ ಸಂವಾದ ನಡೆಸುವ ಜತೆಗೆ ಅವರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ಉದ್ದೇಶ. 
 
* ಕಾರ್ಯಕ್ರಮದ ಆಶಯದ ಬಗ್ಗೆ ಹೇಳಿ.
ಚಿತ್ರೋತ್ಸವಗಳು ಹಾಗೂ ಸಿನಿಮಾಗೆ ಸಂಬಂಧಿಸಿದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳಲ್ಲಿ ಇತ್ತೀಚೆಗೆ ಸಿನಿಮಾಸಕ್ತರು ಅದರಲ್ಲೂ ಯುವಜನರು ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ. ‘ಮುನ್ಸೀಫ’ ಹಾಗೂ ‘ಸಾಲದ ಮಗು’ವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಹಾಗೂ ಸಿನಿಮಾ ಸಂಬಂಧಿ ಕಮ್ಮಟ ನಡೆಸುವ ಆಲೋಚನೆ ಇತ್ತು. ಅದರಂತೆ, ನಮ್ಮ ಭಾವಮಾಧ್ಯಮ ಸಂಸ್ಥೆಯಡಿ ಈ ‘ಸಿನಿಮಾ ಸಂಭ್ರಮ’ವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
 
* ಪರ್ಯಾಯ ಸಿನಿಮಾಗಳ ಪ್ರದರ್ಶನ ಹಾಗೂ ಕಾರ್ಯಾಗಾರದ ಅಗತ್ಯತೆ ಕುರಿತು ಹೇಳಿ. 
ಕಮರ್ಷಿಯಲ್ ಚಿತ್ರಗಳ ಭರಾಟೆ ಅಥವಾ ಅಬ್ಬರದಲ್ಲಿ ಕಲಾತ್ಮಕ, ಪ್ರಯೋಗಾತ್ಮಕ ಹಾಗೂ ಪರ್ಯಾಯ ಚಿತ್ರಗಳನ್ನೂ ಜನರಲ್ಲಿ ರಿಜಿಸ್ಟರ್ ಮಾಡಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ, ಇಂತಹ ಚಿತ್ರಗಳಿಗೆ ಹೆಚ್ಚಿನ ಪ್ರೇಕ್ಷಕರಿದ್ದಾರೆ. ಆ ಸಂಖ್ಯೆ ಹೆಚ್ಚುತ್ತಿದೆ ಕೂಡ. ಚಿತ್ರವೊಂದನ್ನು ವೀಕ್ಷಿಸಿದರೆ ಸಾಕು ಎಲ್ಲಾ ಅರ್ಥವಾಗುತ್ತದೆ ಎಂಬ ಭಾವನೆ ಸಾಮಾನ್ಯವಾಗಿ ಜನರಲ್ಲಿದೆ.
 
ಆದರೆ, ಚಿತ್ರ ನಿರ್ಮಾಣದ ಬಗ್ಗೆ ಒಂದಿಷ್ಟು ಮಾಹಿತಿ ಇದ್ದಾಗ, ಸಿನಿಮಾ ನೋಡುವ ಬಗೆಯೇ ಭಿನ್ನವಾಗಿರುತ್ತದೆ. ಅದಕ್ಕಾಗಿಯೇ ‘ಸಿನಿಮಾ ಸಂಭ್ರಮ’ ದಲ್ಲಿ ಚಿತ್ರಗಳ ಪ್ರದರ್ಶನ ಮತ್ತು ಕಮ್ಮಟವನ್ನು ಒಂದಕ್ಕೊಂದು ಪೂರಕವಾಗಿ ಹಮ್ಮಿಕೊಳ್ಳಲಾಗಿದೆ. ಬಳಿಕ ನಡೆಯುವ ಕಮ್ಮಟ ಒಂದು ರೀತಿಯಲ್ಲಿ ರಸಗ್ರಹಣ ಶಿಬಿರವಿದ್ದಂತೆ ಎನ್ನಬಹುದು. 
 
* ಪರ್ಯಾಯ ಚಿತ್ರಗಳ ನಿರ್ಮಾಣಕ್ಕಿರುವ ಸವಾಲುಗಳೇನು?
ವಿಷಯವೊಂದನ್ನು ಹೇಳಲೇಬೇಕು ಅಂದುಕೊಳ್ಳುವ ನಿರ್ದೇಶಕರು ಮಾತ್ರ ಪರ್ಯಾಯ ಚಿತ್ರಗಳ ನಿರ್ಮಾಣಕ್ಕೆ ಮುಂದಾಗುತ್ತಾರೆ. ಈ ಚಿತ್ರಗಳ ನಿರ್ಮಾಣ ವೆಚ್ಚ ಹೆಚ್ಚೆಂದರೆ 50 ಲಕ್ಷ. ಆರ್ಥಿಕ ದೃಷ್ಟಿಯಲ್ಲಿ ಹೇಳುವುದಾದರೆ, ಇಂತಹ ಚಿತ್ರಗಳಲ್ಲಿ ಕೈ ಸುಟ್ಟುಕೊಳ್ಳುವುದೂ ಕಡಿಮೆಯೇ ಎನ್ನಬಹುದು. ಸಬ್ಸಿಡಿ ಮತ್ತು ಟಿ.ವಿ. ಹಕ್ಕು ಖರೀದಿಯಲ್ಲೇ ಬಹುತೇಕ ಹಣ ವಾಪಸ್ ಬರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಪನೋರಮಾ ಅಥವಾ ರಾಷ್ಟ್ರೀಯ ಪ್ರಶಸ್ತಿಗಳಿಗೆ ಆಯ್ಕೆಯಾದರೆ ಅಲ್ಲೂ ಅಲ್ಪ ಸ್ವಲ್ಪ ಹಣ ಬರುತ್ತದೆ. ನನ್ನ ಮೊದಲ ಚಿತ್ರ ‘ಬನದ ನೆರಳು’ ಕೂಡ ಇದೇ ರೀತಿ ಸ್ವಲ್ಪ ಲಾಭ ಮಾಡಿದೆ. ಕಮರ್ಷಿಯಲ್ ಚಿತ್ರಗಳಂತೆ ಪರ್ಯಾಯ ಚಿತ್ರಗಳು ಸೋಲುವುದು ವಿರಳ. 
 
* ಎಂಜಿನಿಯರಿಂಗ್ ಓದಿದ ನೀವು ಸಿನಿಮಾದತ್ತ ವಾಲಿದ್ದು ಹೇಗೆ?
ಶಾಲಾ ದಿನಗಳಿಂದಲೇ ನಾಟಕಗಳ ಬಗ್ಗೆ ಆಸಕ್ತಿ ಇದ್ದಿದ್ದರಿಂದ ಅಂದೇ, ರಂಗಭೂಮಿ ಪ್ರವೇಶವೂ ಆಯಿತೆನ್ನಿ.  ಕಾಲೇಜು ಶಿಕ್ಷಣಕ್ಕೆ ಮೈಸೂರಿಗೆ ಹೋದಾಗ, ಪತ್ರಿಕೆಗಳಲ್ಲಿ ಬರುತ್ತಿದ್ದ ಸಿನಿಮಾ ವರದಿ ಮತ್ತು ವಿಮರ್ಶೆಗಳನ್ನು ಓದಿಕೊಂಡು ಹೋಗಿ ಸಿನಿಮಾಗಳನ್ನು ನೋಡುತ್ತಿದ್ದೆ. ಚಲನಚಿತ್ರೋತ್ಸವ ಹಾಗೂ ದಸರಾ ಚಿತ್ರೋತ್ಸವಗಳನ್ನು ಮಿಸ್ ಮಾಡಿದ್ದೇ ಇಲ್ಲ. ಎಂಜಿನಿಯರಿಂಗ್ ಮುಗಿಸಿದ ನಂತರ ತರಬೇತಿಗಾಗಿ ರಾಜಸ್ತಾನದಲ್ಲಿ ಎರಡು ವರ್ಷ ಇದ್ದೆ. ಅಲ್ಲಿಂದ ಬಂದವನೇ ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಅನೇಕ ತಂಡಗಳ ಜತೆ ಕೆಲಸ ಮಾಡಿದೆ. ಬಳಿಕ, ಸಾಕ್ಷ್ಯಚಿತ್ರ ಹಾಗೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡೆ. ಕವಿಗಳಾದ ಕುವೆಂಪು, ವಿ.ಕೃ. ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿದಂತೆ ಹಲವರ ಸಾಕ್ಷ್ಯಚಿತ್ರಗಳ ನಿರ್ಮಾಣ, ನಾಟಕಗಳ ನಿರ್ದೇಶನ ಮಾಡಿದ್ದೇನೆ.  
 
‘ಮುನ್ಸೀಫ’
ಬಾಗಲೋಡಿ ದೇವರಾಯ ಅವರ ‘ಹುಚ್ಚ ಮುನ್ಸಿಫ’ ಕಥೆಯಾಧಾರಿತ ಚಿತ್ರ ‘ಮುನ್ಸಿಫ’. ಬದಲಾಗದ ಅಸ್ತಿತ್ವದ ನೆಲೆಗಳನ್ನು ಭೂತ ಮತ್ತು ವರ್ತಮಾನಗಳೊಂದಿಗೆ ಈ ಚಿತ್ರ ಮುಖಾಮುಖಿಯಾಗಿಸುತ್ತದೆ. 
 
2013ರ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಉತ್ತಮ ಫೀಚರ್ ಫಿಲ್ಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮುಂಬೈ ಚಲನಚಿತ್ರೋತ್ಸವ ಹಾಗೂ ಚೆನ್ನೈ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ.
 
‘ಸಾಲದ ಮಗು’
‘ಸಾಲದ ಮಗು’ ಕುವೆಂಪು ಅವರ ಸಣ್ಣಕಥೆ ಆಧರಿತ ಚಿತ್ರವಾಗಿದೆ. ಮಲೆನಾಡಿನ ಕಥಾನಕದ ಈ ಚಿತ್ರ,  ಸಾಲದ ವಿಷವೃತ್ತದಲ್ಲಿ ಕಮರಿಹೋಗುವ ಒಬ್ಬ ಬಾಲಕನ ಚಿತ್ರಣವನ್ನು ಸಿನಿಮಾ ನೀಡುತ್ತದೆ. 
 
2016ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೆಟ್‌ಪ್ಯಾಕ್ ಪ್ರಶಸ್ತಿಯನ್ನು ‘ಸಾಲದ ಮಗು’ ತನ್ನದಾಗಿಸಿಕೊಂಡಿದೆ. ಅಲ್ಲದೆ, 2015ರಲ್ಲಿ ಸ್ಟುಟ್‌ಗರ್ಟ್‌ನಲ್ಲಿ ನಡೆದ ಭಾರತೀಯ ಚಲನಚಿತ್ರೋತ್ಸವ ಹಾಗೂ 2016ರ ಫಿಲಿಪ್ಪೀನ್ಸ್‌ ಚಲನಚಿತ್ರೋತ್ಸವಕ್ಕೂ ಈ ಚಿತ್ರ ಆಯ್ಕೆಯಾಗಿದೆ.
 
**
ಕಮ್ಮಟದ ಅತಿಥಿಗಳು
ಏಳು ದಿನದ ಈ ಸಂಭ್ರಮದಲ್ಲಿ ಸಿನಿಮಾ ವೀಕ್ಷಣೆ ಜತೆಗೆ ಕಥೆಯ ಆಯ್ಕೆ, ಚಿತ್ರಕಥೆಯ ರಚನೆ, ವಿನ್ಯಾಸ, ನಿರ್ದೇಶನ, ಸಿನಿಮಾ ಛಾಯಾಗ್ರಹಣ, ಸಂಕಲನ ಮತ್ತು ಸಂಗೀತ ನಿರ್ದೇಶನದ ಬಗ್ಗೆ ಚರ್ಚೆ ನಡೆಯಲಿದೆ. 
 
ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಜಯತೀರ್ಥ, ಛಾಯಾಗ್ರಾಹಕ ಎಚ್.ಎಂ. ರಾಮಚಂದ್ರ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಕಲಾ ನಿರ್ದೇಶಕ ಶಶಿಧರ ಅಡಪ ಸೇರಿದಂತೆ ಪ್ರಮುಖ ಸಿನಿಮಾ ಮಂದಿ ಈ ಕಮ್ಮಟದಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. 
 
ಇಡೀ ಕಮ್ಮಟವನ್ನು ಸಿನಿಮಾತಜ್ಞ ಜಿ.ಎಸ್. ಭಾಸ್ಕರ್ ನಿರ್ವಹಿಸಲಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT