ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2016ರ ಏರಿಳಿತದ ಹಾದಿ...

ರಿಯಲ್ ಎಸ್ಟೇಟ್
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
2016ರಲ್ಲಿ ನೋಟು ರದ್ದತಿಗೂ ಮುನ್ನ ಬೆಂಗಳೂರು ರಿಯಲ್‌ ಎಸ್ಟೇಟ್‌ ವಹಿವಾಟಿನ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳೆಂದರೆ ರಾಜಕಾಲುವೆ ಒತ್ತುವರಿ ತೆರವು ಮತ್ತು ಮೆಟ್ರೊ ರೈಲು ಸಂಪರ್ಕ.
 
ಹೌದು, ನೋಟು ರದ್ದತಿಗೂ ಮುನ್ನ ನಗರದ ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ಬಹಳಷ್ಟು ಏರಿಳಿತಗಳಾಗಿವೆ. ಜೊತೆಗೆ 2016ರಲ್ಲಿ ಕೇಂದ್ರವು, ಡೆವಲಪರ್‌ಗಳು ಮತ್ತು ಖರೀದಿದಾರರ ಮಧ್ಯೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಉದ್ಯಮದ ವಿಶ್ವಾಸ ಕಾಯ್ದುಕೊಂಡು ಅಭಿವೃದ್ಧಿ ಸಾಧಿಸುವ ಸಲುವಾಗಿ ‘ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ–2016’ ಜಾರಿಗೆ ತಂದಿತು.
 
ಕಾಯ್ದೆಯಿಂದ ಬಹಳಷ್ಟು ಒಳ್ಳೆಯದಾಗಲಿದೆ ಎಂದು ಬಹುತೇಕ ಡೆವಲಪರ್‌ಗಳು ಹೇಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕಾಯ್ದೆ ಇನ್ನಷ್ಟೇ ಜಾರಿಯಾಗಬೇಕಿದೆ. ಹಾಗಾಗಿ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಮೇಲೆ ಕಾಯ್ದೆಯ ಪರಿಣಾಮ ಅಷ್ಟಾಗಿ ಕಂಡು ಬಂದಿಲ್ಲ.
 
ರಾಜಕಾಲುವೆ ಅವಾಂತರ
ರಾಜಕಾಲುವೆಗಳ ಮೇಲೆ ಕಟ್ಟಿದ ಕಟ್ಟಡಗಳನ್ನು ಪಾಲಿಕೆಯು ತೆರವು ಮಾಡಿದ ಬೆಳವಣಿಗೆ ರಿಯಲ್‌ ಎಸ್ಟೇಟ್‌ ವಹಿವಾಟಿನ ಮೇಲೆ ಪರಿಣಾಮ ಬೀರಿತು. 
 
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳು (ಬಿಎಂಆರ್‌ಡಿಎ) ರಾಜಕಾಲುವೆ ಇರುವ ಜಾಗದಲ್ಲಿ ಯೋಜನೆಗೆ ಅನುಮೋದನೆ ನೀಡಿದೆ. ಇದರಲ್ಲಿ ಅಧಿಕಾರಿಗಳ ತಪ್ಪೂ ಇದೆ. ಇದರಿಂದಾಗಿ ಖರೀದಿದಾರರಿಗೆ ತೊಂದರೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಬಸವನಗುಡಿಯ ಎಸ್ಸೆನ್‌ ಇನ್ಫ್ರಾ ಟೌನ್‌ಶಿಪ್‌ನ ನಿರ್ದೇಶಕ ಶ್ರೀವತ್ಸ.
 
‘ವಿಮಾನ ನಿಲ್ದಾಣದ ಸಮೀಪ ನಾವು ಸಿಲ್ವರ್‌ ಕೈಟ್ಸ್‌ ಹೆಸರಿನಲ್ಲಿ 400 ಎಕರೆ ಜಾಗದಲ್ಲಿ ಲೇಔಟ್‌ ಮಾಡುತ್ತಿದ್ದೇವೆ. ಜನ ಎಚ್ಚೆತ್ತಿದ್ದಾರೆ. ರಾಜಕಾಲುವೆ ಒತ್ತುವರಿ ಕಾರ್ಯ ಆರಂಭವಾದ ಮೇಲೆ ಖರೀದಿದಾರರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಜಾಗದಲ್ಲಿ ರಾಜಕಾಲುವೆ ಇದೆಯಾ ಅಂತಾ ಕೇಳುತ್ತಾರೆ. ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ’ ಎನ್ನುತ್ತಾರೆ ಅವರು.
 
ಸರ್ಕಾರ ಚಾಟಿ ಬೀಸಲು ತಡ ಮಾಡಿದ ಕಾರಣ ಲೇಔಟ್ ಅಭಿವೃದ್ಧಿ ಪಡಿಸುವವರ ಮೇಲೆ ಜನರಿಗೆ ನಂಬಿಕೆ  ಕಡಿಮೆಯಾಗಿದೆ. ಹೀಗಾಗಿ ಹೊಸದಾಗಿ ನಿವೇಶನ ಖರೀದಿ ಮಾಡಲು ಬರುವವರು ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ಮುಂದುವರಿಯುತ್ತಿದ್ದಾರೆ.
 
‘ಖರೀದಿದಾರರಿಗೆ ಬಿಲ್ಡರ್‌ಗಳ ಮೇಲೆ ನಂಬಿಕೆ ಕಡಿಮೆಯಾಗಿರುವ ಕಾರಣ ವಹಿವಾಟಿಗೆ ಪೆಟ್ಟು ಬಿದ್ದಿದೆ. ನಕ್ಷೆಗಳನ್ನು ಇಟ್ಟುಕೊಂಡು, ನಾಲೆಗಳನ್ನು ಗಮನಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಾಲೆಗಳಿಗೆ ಪ್ರತ್ಯೇಕ ಜಾಗ ಬಿಡುತ್ತಿದ್ದೇವೆ’ ಎನ್ನುತ್ತಾರೆ ಶ್ರೀವತ್ಸ.
 
‘ಅಧಿಕಾರಿಗಳು ಹೊಸ ಯೋಜನೆಗಳಿಗೆ ಅನುಮೋದನೆ ನೀಡುವಾಗಲೇ ಪ್ರತಿ ಅಂಶವನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು. ಕೆಲ ಸಂದರ್ಭಗಳಲ್ಲಿ ರಾಜಕಾಲುವೆ ಅಥವಾ ನಾಲೆಯ ವಿಚಾರ ಡೆವಲಪ್‌ರ್‌ಗಳಿಗೂ ಗೊತ್ತಿರುವುದಿಲ್ಲ. ಇದೆಲ್ಲಾ ಹಳೆಯ ಲೇಔಟ್‌ಗಳ ಸಮಸ್ಯೆ. ಹೊಸ ಲೇಔಟ್‌ಗಳಿಗೆ ಈ ತೊಂದರೆ ಕಂಡು ಬರುತ್ತಿಲ್ಲ. ಯಾರೋ ಮಾಡಿದ ತಪ್ಪಿನಿಂದ ಖರೀದಿದಾರರು ವಹಿವಾಟಿಗೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಬಿಡಿಎ  ಲೇಔಟ್‌ಗಳಿಗೆ ಮಾತ್ರ ಬೇಡಿಕೆ ಕಡಿಮೆಯಾಗಿಲ್ಲ’ ಎಂದು   ಹೇಳುತ್ತಾರೆ ಶ್ರೀವತ್ಸ.
 
ಮೆಟ್ರೊದೊಂದಿಗೆ ಬೇಡಿಕೆಯೂ ಬಂತು
ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ, ಮೆಜೆಸ್ಟಿಕ್‌ನಿಂದ ಯಲಚೇನಹಳ್ಳಿ ಮಾರ್ಗದ ಮೆಟ್ರೊ ರೈಲು ಸೇವೆ ಆರಂಭವಾದ ಮೇಲೆ ನಗರದ ಹೊರ ವಲಯಗಳಲ್ಲೂ ಬೇಡಿಕೆ ಹೆಚ್ಚುತ್ತಿದೆ. ಮೆಜೆಸ್ಟಿಕ್‌ನಿಂದ ಯಲಚೇನಹಳ್ಳಿಗೆ 25 ನಿಮಿಷಕ್ಕೆ ಬರಬಹುದು. ವಾಹನದಲ್ಲಿ ಬಂದರೆ ಒಂದೂವರೆ ಗಂಟೆ ಬೇಕಾಗುತ್ತದೆ. ಉದಯಪಾಳ್ಯ ಭಾಗದಲ್ಲೂ ಭೂಮಿ ಬೆಲೆ ದುಪ್ಪಟ್ಟಾಗಿದೆ.
 
ಯಲಚೇನಹಳ್ಳಿ, ಉದಯಪಾಳ್ಯ ಸುತ್ತಮುತ್ತ ಚದರ ಅಡಿಗೆ ಮೂರು ಸಾವಿರ ಬೆಲೆ ಇತ್ತು. ಮೆಟ್ರೊ ಬಂದ ಮೇಲೆ 6–7 ಸಾವಿರಕ್ಕೆ ಏರಿಕೆಯಾಗಿದೆ. ಮೆಜೆಸ್ಟಿಕ್‌ನಿಂದ ಉದಯಪಾಳ್ಯ ದೂರ ಎನ್ನುತ್ತಿದ್ದವರು ಮೆಟ್ರೊ ಬಂದ ಮೇಲೆ ಖರೀದಿಗೆ ಮುಗಿಬೀಳುತ್ತಿದ್ದಾರೆ.
 
***
ಆರು ತಿಂಗಳು ಕಾಯಬೇಕು
ನೋಟು ರದ್ದತಿಯಿಂದ ರಿಯಲ್‌ ಎಸ್ಟೇಟ್‌ ವಹಿವಾಟಿಗೆ ಪೆಟ್ಟಾಗಿರುವುದಂತೂ ಸತ್ಯ. 2016ರಲ್ಲಿ ತಿಂಗಳಿಗೆ 70ರಿಂದ 80 ನಿವೇಶನಗಳು ಬುಕ್‌ ಆಗುತ್ತಿದ್ದವು. ನೋಟು ರದ್ದಾದ ಮೇಲೆ 30 ಕೂಡ ಬುಕ್‌ ಆಗುತ್ತಿಲ್ಲ. 2016ರ ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯಿಂದ ದೊಡ್ಡ ಬಿಲ್ಡರ್‌ಗಳಿಗೆ ತೊಂದರೆ ಆಗಿಲ್ಲ. ಖರೀದಿದಾರರಿಂದ ಮುಂಚಿತವಾಗಿ ಹಣ ಸಂಗ್ರಹಿಸಿ, ಲೇಔಟ್‌ ಮಾಡುತ್ತಿದ್ದವರಿಗೆ ಹೊಡೆತ ಬಿದ್ದಿದೆ. 2017ರ ಬಜೆಟ್‌ಗಾಗಿ ಜನ ಕಾಯುತ್ತಿದ್ದಾರೆ. ಭೂಮಿ ಬೆಲೆ ಇಳಿಮುಖವಾಗಬಹುದೆಂಬ ಭರವಸೆಯಲ್ಲಿದ್ದಾರೆ. ರಿಯಲ್‌ ಎಸ್ಟೇಟ್‌ ವಹಿವಾಟು 2015ರಂತೆ ಸುಧಾರಿಸಲು ಆರು ತಿಂಗಳಾದರೂ ಬೇಕಾಗುತ್ತದೆ.
–ಅಜಯ್‌ ಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಆಸ್ತಾ ಪ್ರಾಪರ್ಟಿ
 
**
ಸ್ಥಳ -ಬೆಲೆ (ಚದರ ಅಡಿ)
ಜಯನಗರ 8ನೇ ಬ್ಲಾಕ್‌ -₹ 20 ಸಾವಿರ
ಯಲಚೇನಹಳ್ಳಿ -₹7 ಸಾವಿರ
ಜಯನಗರ 7ನೇ ಬ್ಲಾಕ್‌ -₹18 ಸಾವಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT