ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುಪ್ಟಿ ಕಮಿಷನರ್’ ಮತ್ತು ಅರ್ಥವ್ಯವಸ್ಥೆ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

-ಡಾ. ಶಿವಕುಮಾರ

ದೇವನೂರ  ಮಹಾದೇವ ಅವರ ‘ಒಡಲಾಳ’ ಕತೆಯಲ್ಲಿ ‘ದುಪ್ಟಿ ಕಮಿಷನರ್’ ಎಂಬ ಒಂದು ಪಾತ್ರವಿದೆ. ಅದೊಂದು ರೋಗಿಷ್ಟ ಹೈದ. ಹುಟ್ಟಿದಂದಿನಿಂದಲೂ ಅದಕ್ಕೆ ಏನೋ ಕಾಯಿಲೆ. ಅದರ ಶರೀರ ತೊಗಟೆ ತೆಗೆದ ಮರದ ಕಡ್ಡಿಯಂತಿದೆ.

ಯಾವಾಗಲೂ ಒಂದು ದುಪ್ಪಟ್ಟಿ ಹೊದ್ದು ಮೂಲೆಯಲ್ಲಿ ಕುಳಿತೇ ಇರುತ್ತದೆ ಆ ಹೈದ. ಅದಕ್ಕೆ ಬಡಿದಿರುವ ಕಾಯಿಲೆ ಯಾವುದೆಂದು ಆ ಮನೆಯ ಯಜಮಾನಿ ಸಾಕವ್ವನಾದಿಯಾಗಿ ಯಾರಿಗೂ ತಿಳಿಯದು. ಆ ಹೈದನಿಗೂ ತಿಳಿಯದು. ಅದು ಈ ಲೋಕದಿಂದ ಎಂದೋ ‘ಚುಕ್ತ’ವಾದದ್ದು ಎಂದೇ ಎಲ್ಲರೂ ತಿಳಿದಿದ್ದಾರೆ. ಹಾಗಾಗಿ ಆ ಹೈದ ತನ್ನ ಪಾಡಿಗೆ ತಾನು ಕೂತಿದೆ. ಉಳಿದವರೆಲ್ಲ ತಮ್ಮ ಪಾಡಿಗೆ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತ ಕಾಲಕಳೆಯುತ್ತಿದ್ದಾರೆ.

ಈ ‘ದುಪ್ಟಿ ಕಮಿಷನರ್’ ಪಾತ್ರ ಕೃತಿಯಲ್ಲಿ ಕೇವಲ ಪಾತ್ರವಾಗಿ ಬರುವುದಿಲ್ಲ. ಅದು ಇಡೀ ದಲಿತ-ಹಿಂದುಳಿದ ಸಮಾಜಕ್ಕೆ ಬಡಿದಿರುವ ಹಸಿವು- ದಾರಿದ್ರ್ಯಗಳೆಂಬ ಭೀಕರ ರೋಗಗಳ ಸಂಕೇತವಾಗಿದೆ. ಎಲ್ಲ ಕಾಲದ, ಎಲ್ಲ ಅರಸರ ಆಡಳಿತ ವ್ಯವಸ್ಥೆಗಳಲ್ಲೂ ನಿರ್ಲಕ್ಷ್ಯಕ್ಕೆ ಒಳಗಾದ ಬಡವರ ಸಂಕೇತವಾಗಿದೆ. ಆದ್ದರಿಂದ ಅದರ ಮಾವ ಆ ಹೈದನಿಗೆ ‘ದುಪ್ಟಿ ಕಮಿಷನರ್’ ಎಂದು ಅಡ್ಡ ಹೆಸರಿಟ್ಟಿದ್ದಾನೆ. ಈಗ ಇದೇ ಹೆಸರು ಎಲ್ಲರ ಬಾಯಲ್ಲೂ ನಿಂತಿದೆ.

ನಮ್ಮ ಪ್ರಧಾನಿ ನಗದುರಹಿತ ಅರ್ಥವ್ಯವಸ್ಥೆಗೆ ಕರೆ ನೀಡುತ್ತಿದ್ದಾರೆ. ‘ನಿಮ್ಮ ಮೊಬೈಲ್‌ಗಳಲ್ಲೇ ನಿಮ್ಮ ಬ್ಯಾಂಕ್ ಇದೆ. ವ್ಯವಹರಿಸಿ’ ಎಂದು ದಿನದಿನವೂ ಪ್ರಚಾರ ಮಾಡುತ್ತಿದ್ದಾರೆ! ವಿಪರ್ಯಾಸವೆಂದರೆ ಅರ್ಧಕ್ಕಿಂತಲೂ ಹೆಚ್ಚು ಭಾರತ ‘ದುಪ್ಟಿ ಕಮಿಷನರ್’ನಂತೆ ರೋಗ ಬಡಿದು ಮೂಲೆಯಲ್ಲಿ ಕುಳಿತಿದೆ. ಈ ‘ದುಪ್ಟಿ ಕಮಿಷನರ್’ನ ಬಳಿ ಕ್ರೆಡಿಟ್, ಡೆಬಿಟ್ ಕಾರ್ಡುಗಳಿಲ್ಲ, ಸ್ಮಾರ್ಟ್ ಫೋನಿಲ್ಲ. ಕೇವಲ ತನ್ನ ಹೊಟ್ಟೆ ತುಂಬಿಸಿಕೊಳ್ಳಲಿಕ್ಕಾಗಿ ಪರದಾಡುತ್ತಿರುವ ಇವನಿಗೆ ನೋಟು ರದ್ದತಿ, ನಗದುರಹಿತ ಅರ್ಥ ವ್ಯವಸ್ಥೆ,   ಮೊಬೈಲ್ ವಾಲೆಟ್‌ನಂತಹ ಪದಗಳು ಕೂಡ ಹೊಸತು!

ದುರಂತವೆಂದರೆ, ಯಾವ ಸರ್ಕಾರ ಕಾನೂನು ಮಾಡಿದರೂ ಅದು ಇವನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವನಿಗೇನೋ ಒಂದಿಷ್ಟು ಅನುದಾನವನ್ನು ಎಸೆದು ತಮ್ಮ ಹೈಟೆಕ್ ಬದುಕಿನತ್ತ ಯೋಜನೆ ರೂಪುಗೊಳಿಸುತ್ತವೆ.

1992ರಲ್ಲಿ ಪಿ.ವಿ.ನರಸಿಂಹರಾವ್‌ ನೇತೃತ್ವದ ಸರ್ಕಾರ ಜಾರಿಗೆ ತಂದ ಉದಾರೀಕರಣ, ಖಾಸಗೀಕರಣ, ಜಾಗತೀಕರಣವಾಗಲಿ, ಈಗ ಎನ್‌ಡಿಎ ಸರ್ಕಾರ ಮಾಡಿರುವ ನೋಟು ರದ್ದತಿ, ತರಲು ಹೊರಟಿರುವ ನಗದುರಹಿತ ಅರ್ಥ ವ್ಯವಸ್ಥೆಯಂತಹ ಯೋಜನೆಗಳಾಗಲಿ ಯಾವುವೂ ಈ ‘ದುಪ್ಟಿ ಕಮಿಷನರ್’ ನನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದವುಗಳಲ್ಲ.

ಒಡಿಶಾದಲ್ಲೆಲ್ಲೋ ಇವನ ಒಬ್ಬ ದೊಡ್ಡಪ್ಪ ಆಂಬುಲೆನ್ಸ್‌ಗೆ ಹಣ ಕಟ್ಟಲಾಗದೆ ತನ್ನ ಹೆಂಡತಿಯ ಶವವನ್ನು ಹೆಗಲಲ್ಲಿ ಹೊತ್ತು ನಡೆಯುತ್ತಾನೆ. ಗುಜರಾತಿನ ಊನಾದಲ್ಲಿ ಇವನ ಸೋದರರು ಸತ್ತ ದನದ ಚರ್ಮ ಸುಲಿದು ಬದುಕಲೆತ್ನಿಸಿ, ಚರ್ಮ ಸುಲಿದು ಹೋಗುವಂತೆ ತಾವೇ ಹೊಡೆತ ತಿನ್ನುತ್ತಿದ್ದಾರೆ. ಭಾರತದ ಐದು ವರ್ಷಕ್ಕಿಂತಲೂ ಚಿಕ್ಕ ವಯಸ್ಸಿನವರಲ್ಲಿ ಶೇ 44ರಷ್ಟಿರುವ ಇವನ ತಮ್ಮಂದಿರು ಕಡಿಮೆ ತೂಕವನ್ನು ಹೊಂದಿದ್ದು ಕದಿರು ಕಡ್ಡಿಯಂತೆ ಉಸಿರಾಡುತ್ತಿದ್ದಾರೆ. ಈ ವಿಚಾರದಲ್ಲಿ ಭಾರತ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ!

ಮಡಿಕೇರಿಯ ಮೂಲೆಯಲ್ಲಿ ಇವನ ಬಂಧು-ಬಳಗದವರು ವಾಸಕ್ಕೆ ಮನೆಗಳಿಲ್ಲದೆ  ಬೀದಿಗೆ ಬಿದ್ದಿದ್ದಾರೆ. ರಾಷ್ಟ್ರದ ರಾಜಧಾನಿ ದೆಹಲಿಯೊಂದರಲ್ಲೇ ಲಕ್ಷ ಲಕ್ಷ ಜನ ರಾತ್ರಿ ವೇಳೆ ಈಗಿನ ಡಿಸೆಂಬರ್- ಜನವರಿಯ ಕೊರೆಯುವ ಚಳಿಯಲ್ಲಿ ರಸ್ತೆ ಬದಿಗಳಲ್ಲಿ ಮಲಗುವ ಕರಾಳ ದೃಶ್ಯಗಳನ್ನು ಯಾರಾದರೂ ಖುದ್ದು ಹೋಗಿ ನೋಡಬಹುದು. 

1992ರಿಂದ ಈಚೆಗೆ ಕೇಂದ್ರದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಶ್ರೀಮಂತ ಉದ್ಯಮಿಗಳಿಗೆ ಸುಮಾರು ₹ 40 ಲಕ್ಷ ಕೋಟಿ ಹಣವನ್ನು ನೆರವು, ಸಬ್ಸಿಡಿಗಳ ರೂಪದಲ್ಲಿ ನೀಡಿವೆ. ಅಲ್ಲದೆ, ಇದೇ ಶ್ರೀಮಂತ ಉದ್ದಿಮೆದಾರರು  ಕಟ್ಟಲಾಗದೆ ಬಾಕಿ ಉಳಿಸಿಕೊಂಡಿರುವ ₹ 8.5 ಲಕ್ಷ ಕೋಟಿಗಳಷ್ಟು ಸಾಲವನ್ನು ಈಗ ವಸೂಲಾಗದ ಸಾಲದ ಮೊತ್ತ ಎಂದು ಬ್ಯಾಂಕ್‌ಗಳು ಪರಿಗಣಿಸಿವೆ. ಆದರೆ ಈ ‘ದುಪ್ಟಿ ಕಮಿಷನರ್‌’ನ ತಂದೆ ತಾಯಿಗಳಾದ ರೈತರು ಮಾಡಿರುವ ಕೇವಲ ₹ 1 ಲಕ್ಷ ಕೋಟಿಗೂ ಕಡಿಮೆ ಇರುವ ಸಾಲವನ್ನು ಮನ್ನಾ ಮಾಡಲು ಇದೇ ಸರ್ಕಾರಗಳು ಹಿಂದೇಟು ಹಾಕುತ್ತಿವೆ.

‘ದುಪ್ಟಿ ಕಮಿಷನರ್‌’ಗೆ ನೀಡುವ ಒಂದೊಂದು ತುತ್ತು ಅನ್ನವನ್ನೂ ಲೆಕ್ಕಹಾಕುವ ಸರ್ಕಾರಗಳು ಅಂಬಾನಿ- ಅದಾನಿ- ಮಲ್ಯರಂಥವರಿಗೆ ನೀಡಲಾಗುತ್ತಿರುವ ಭಾರಿ ಮೊತ್ತದ ಬಗ್ಗೆ ಮೌನವಾಗಿವೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 80ನೇ ಸ್ಥಾನದಷ್ಟು ಹಿಂದಿದೆ. ಮಾನವಾಭಿವೃದ್ಧಿಯಲ್ಲಿ 130ನೇ ಸ್ಥಾನದಷ್ಟು ಹಿಂದೆ ಬಿದ್ದಿದೆ.

ಅಂತೂ ಈ ‘ದುಪ್ಟಿ ಕಮಿಷನರ್’ ಹೇಗಿದ್ದರೂ ಎಲ್ಲಿದ್ದರೂ ಸರ್ಕಾರಗಳ ಕಣ್ಣಿಗಂತೂ ಕಾಣುತ್ತಿಲ್ಲ. ಸರ್ಕಾರಗಳ ಅಂತಃಸಾಕ್ಷಿಯಂತೂ ಎಂದೋ ಸತ್ತುಹೋಗಿದೆ. ಆದರೆ ಜನರು...! ದಿನಾ ಸಾಯುವವರಿಗೆ ಅಳುವವರು ಯಾರು ಎಂಬಂತೆ ಇವರಿಗೂ ಇಂದ್ರಿಯಗಳು ಜಡ್ಡುಗಟ್ಟಿವೆಯೇ? ನಗದುರಹಿತ ವ್ಯವಸ್ಥೆ ನಿರ್ಮಾಣಕ್ಕೆ ಸರ್ಕಾರಗಳು ಅತಿಯಾದ ಕಾಳಜಿ ತೋರುತ್ತಿದ್ದರೆ, ಮಾಧ್ಯಮಗಳು, ಬ್ಯಾಂಕ್ ಅಧಿಕಾರಿಗಳು ಇದಕ್ಕಾಗಿ ಸಮರೋಪಾದಿಯಲ್ಲಿ ಶ್ರಮಿಸುತ್ತಿದ್ದಾರೆ! ಇವರೆಲ್ಲಾ ಇದೇ ಪ್ರೀತಿಯನ್ನು ಬಡತನರಹಿತ, ಜಾತಿರಹಿತ, ಅಸಮಾನತೆರಹಿತ ವ್ಯವಸ್ಥೆ ನಿರ್ಮಾಣಕ್ಕೆ  ಏಕೆ ತೋರುತ್ತಿಲ್ಲ?

1992ರ ನಂತರ ವಿವಿಧ ಪಕ್ಷಗಳು ಮುತುವರ್ಜಿ ವಹಿಸಿ ದೇಶದಲ್ಲಿ ಜಾರಿಗೆ ತಂದ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣಗಳಿಂದಾಗಿ  ಇಂದು ದೇಶದ ಶೇ 58.4ರಷ್ಟು ಸಂಪತ್ತು ಶೇ 1ರಷ್ಟು ಜನರ ಕೈಗೆ ಬಂದಿದೆಯಂತೆ (ಕ್ರೆಡಿಟ್ ಸುಸ್ಸೆ ಗ್ರೂಪ್  ರೂಪಿಸಿರುವ ಜಾಗತಿಕ ವರದಿ).

ಈಗ ನಮ್ಮ ಪ್ರಧಾನಿ ಕೈಗೊಂಡ ನೋಟು ರದ್ದತಿ ಕ್ರಮದಿಂದಾಗಿ, ಇಡೀ ದೇಶದ ಶೇ 80ರಷ್ಟಿರುವ ಅಸಂಘಟಿತ ವಲಯದ ಅಳಿದುಳಿದ ಅರ್ಥವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಶೇ 94ರಷ್ಟಿರುವ ಕಪ್ಪು ಆಸ್ತಿಯ ಮೇಲೆ ಕಣ್ಣಿಡದ ಪ್ರಧಾನಿ ಕೇವಲ ಶೇ 6ರಷ್ಟಿರುವ  ಕಪ್ಪುಹಣದ ಮೇಲೆ ಪ್ರಹಾರ ನಡೆಸುತ್ತಾರೆ ಎಂದರೆ ಅರ್ಥವೇನು? ಶೇ 58.4ರಷ್ಟು ಸಂಪತ್ತು ಹೊಂದಿರುವ ಶೇ 1ರಷ್ಟು ಜನರನ್ನು ರಕ್ಷಿಸುವುದಕ್ಕಲ್ಲವೇ...?

ಈ ಶೇಕಡ ಒಂದೆರಡರಷ್ಟಿರುವ ಹಣವಂತರು ಚುನಾವಣೆಗೆಂದು ಪಕ್ಷಗಳಿಗೆ ಹಣ ನೀಡುತ್ತಾರೆ. ಗೆದ್ದ ಪಕ್ಷಗಳು ಇದೇ ಹಣವಂತರ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತವೆ. ‘ದುಪ್ಟಿ ಕಮಿಷನರ್’ ಮಾತ್ರ ಹಾಗೇ ಕುಳಿತಲ್ಲೇ ದುಪ್ಪಟ್ಟಿ ಹೊದ್ದು ಅಸಹಾಯಕನಾಗಿ ಕುಳಿತಿದ್ದಾನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT