ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ವ್ಯವಸ್ಥೆಯಲ್ಲಿ ವೃತ್ತಿಪರತೆ ಹೆಚ್ಚಳಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಅಪರಾಧಗಳ  ತಡೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ. ಜೊತೆಗೆ ಜನಸ್ನೇಹಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು ಎಂಬ ಕಿವಿಮಾತನ್ನೂ  ಅವರು ಹೇಳಿದ್ದಾರೆ. 

ವಾರ್ಷಿಕ ವಿಧಿಯಂತೆ ನಡೆಯುವ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳ ಸಮಾವೇಶದಲ್ಲಿ  ಮುಖ್ಯಮಂತ್ರಿಗಳು ಈ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿಯೇ ತುಮಕೂರು ಎಎಸ್ಐ ಒಬ್ಬರು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವುದು ವಿಪರ್ಯಾಸ. ಮನೆಗೆ ಬಿಡುವ ನೆಪದಲ್ಲಿ ಚಲಿಸುವ ವಾಹನದಲ್ಲಿ ಮಹಿಳೆಯ ಮೇಲೆ  ಅತ್ಯಾಚಾರ  ನಡೆಸಲಾಗಿದೆ ಎಂಬಂತಹ ಆರೋಪ  ಆಘಾತಕಾರಿಯಾದುದು.

ಪೊಲೀಸ್ ವ್ಯವಸ್ಥೆಯಲ್ಲಿ ಜನರ ವಿಶ್ವಾಸ ಕುಗ್ಗಿಸುವಂತಹ ಇಂತಹ ಪ್ರಕರಣ ಇಲಾಖೆಗೇ ಕಪ್ಪು ಚುಕ್ಕೆ.  ಈ ಆರೋಪಿಯನ್ನು  ರಕ್ಷಿಸುವುದಿಲ್ಲ ಎಂಬಂತಹ ಭರವಸೆಯನ್ನೇನೊ ಮುಖ್ಯಮಂತ್ರಿ ನೀಡಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವಂತಹ  ಇಂತಹ  ಅಪರಾಧ  ಸಮಾಜದಲ್ಲಿ ಘಟಿಸಿದಾಗ  ಕಠಿಣ ಸಂದೇಶ ರವಾನೆಯಾಗಬೇಕಾದುದು ಅವಶ್ಯ.  ಪೊಲೀಸರ ಮೇಲೆ ಅತ್ಯಾಚಾರ ಆರೋಪಗಳು ಇದೇ ಮೊದಲೇನಲ್ಲ. ಅತ್ಯಾಚಾರ ಕಾನೂನು ತಿದ್ದುಪಡಿಗೆ ಕಾರಣವಾದಂತಹ ಮಥುರಾ ಅತ್ಯಾಚಾರ ಪ್ರಕರಣದಲ್ಲೂ  (1972) ಪೊಲೀಸರೇ ಅಪರಾಧಿಗಳಾಗಿದ್ದರು.

ಇತ್ತೀಚೆಗೆ ಛತ್ತೀಸಗಡದಲ್ಲಿ ಆದಿವಾಸಿ ಮಹಿಳೆಯರ ಮೇಲೆ ಪೊಲೀಸರಿಂದ ನಡೆದಿರುವ ಅತ್ಯಾಚಾರಗಳ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ  ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ಬೆಳಕು ಚೆಲ್ಲಿದೆ. ಮಹಿಳೆ ಮೇಲಿನ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸದ ಸ್ಥಿತಿ ಪೊಲೀಸ್ ವ್ಯವಸ್ಥೆಯಲ್ಲಿದೆ ಎಂಬ ಟೀಕೆಗಳು ಈಗಾಗಲೇ ವ್ಯಾಪಕವಾಗಿವೆ.

ಇಂತಹ ಸಂದರ್ಭದಲ್ಲಿ ಸ್ವತಃ ಪೊಲೀಸ್ ಅಧಿಕಾರಿಯೇ ಆರೋಪಿಯಾಗಿರುವ  ತುಮಕೂರಿನ ಘಟನೆ ಕೊಳೆತುಹೋಗಿರುವ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಎಷ್ಟೆಲ್ಲಾ  ಕಠಿಣ ಶಬ್ದಗಳಲ್ಲಿ ಈ ಘಟನೆಯನ್ನು  ಖಂಡಿಸಿದರೂ ಸಾಲದು. ಪೊಲೀಸ್ ದುರ್ವರ್ತನೆ ಹಾಗೂ ಅಧಿಕಾರ ದುರುಪಯೋಗದ ಪ್ರಕರಣಗಳಿಗೆ ಯಾವುದೇ ಕ್ಷಮೆ ಇಲ್ಲ ಎಂಬುದನ್ನು  ಮನಗಾಣಿಸಬೇಕಾದುದು ಸರ್ಕಾರದ ಕರ್ತವ್ಯ.

ತೀವ್ರವಾದ ಗಸ್ತು ಇದ್ದಿದ್ದರೆ  ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದುರ್ವರ್ತನೆ ಹಾಗೂ ಮಂಡ್ಯದಲ್ಲಿ  ಹೊಸ ವರ್ಷದ ಮೊದಲ ವಾರದಲ್ಲಿ ನಡೆದ ರಾಜಕೀಯ ವೈಷಮ್ಯದ ಕೊಲೆ ಪ್ರಕರಣಗಳನ್ನು  ತಡೆಯಬಹುದಿತ್ತು ಎಂಬ ಅಭಿಪ್ರಾಯವನ್ನೂ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ.

ಗುಪ್ತಚರ  ವರದಿಗಳನ್ನಾಧರಿಸಿ ಸರಿಯಾಗಿ ಕ್ರಮ ಕೈಗೊಳ್ಳದಿದ್ದುದರ ವೈಫಲ್ಯ  ಇದು ಎಂಬುದನ್ನು  ಗುರುತಿಸಿರುವ ಅವರು ಗುಪ್ತಚರ ವರದಿಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕೆಂದೂ ನಿರ್ದೇಶಿಸಿದ್ದಾರೆ. ಆದರೆ ಸರ್ಕಾರದ ಇಂತಹ ಸಲಹೆಗಳು, ನಿರ್ದೇಶನಗಳು ಬರೀ ಬಾಯುಪಚಾರದ ಮಾತುಗಳಾಗಿಯೋ ಕಡತಗಳಲ್ಲೇ ಉಳಿದು ಬಿಡುವಂತಹ ಲಿಖಿತ ಆದೇಶಗಳಾಗಿಯೋ ಉಳಿದು ಬಿಡುತ್ತವೆಯೆ ಎಂಬಂತಹ ಅನುಮಾನ ಕಾಡುತ್ತದೆ.

ಜೊತೆಗೆ ಸಮಾವೇಶದಲ್ಲೇ ಇದ್ದ ಅಧಿಕಾರಿಗಳೂ ಮುಖ್ಯಮಂತ್ರಿ ಹಾಗೂ ಗೃಹಸಚಿವರ ಭಾಷಣಗಳನ್ನೇನೂ ಗಂಭೀರವಾಗಿ ಪರಿಗಣಿಸದೆ, ಅವರು ಭಾಷಣ ಮಾಡುತ್ತಿರುವಾಗಲೇ  ಚುಕ್ಕೆ, ಚೌಕಾಕಾರ, ಮೀನು, ವಿಮಾನ ಇತ್ಯಾದಿ ಚಿತ್ರಗಳನ್ನು ಬಿಡಿಸುತ್ತಾ ಕಾಲ ಕಳೆದರು ಎಂಬಂತಹ ವರದಿಯೂ ಪೊಲೀಸರ ಲಘು ಧೋರಣೆಗೆ ದ್ಯೋತಕ. ಅಥವಾ ರಾಜಕಾರಣಿಗಳ ಮಾತುಗಳ ಬಗ್ಗೆ ಪೊಲೀಸರಿಗೆ ವಿಶ್ವಾಸವೇ ಇಲ್ಲದಿರುವಂತಹ ಸ್ಥಿತಿ ನಿರ್ಮಾಣವಾಗಿರುವುದನ್ನೂ ಇದು ಧ್ವನಿಸುತ್ತದೆ.

ಇದಕ್ಕೆ ಕಾರಣವೂ ಸ್ಪಷ್ಟ. ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ 11 ವರ್ಷಗಳೇ ಕಳೆದವು. ಆದರೆ ಈಗಲೂ ಪೊಲೀಸ್ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಮುಂದುವರಿದೇ ಇದೆ. ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ಬದಲಿಗೆ ರಾಜಕಾರಣಿಗಳು ಹಾಗೂ ಪೊಲೀಸರ ಅಪವಿತ್ರ ಮೈತ್ರಿ ಮುಂದುವರಿಸಿಕೊಂಡು ಬರಲಾಗುತ್ತಿದೆ. 

ವರ್ಗಾವಣೆ, ಬಡ್ತಿಯಷ್ಟೇ ಅಲ್ಲ ಅಪರಾಧ ಪ್ರಕರಣಗಳ ತನಿಖೆಗಳಲ್ಲೂ ರಾಜಕಾರಣಿಗಳ ಹಸ್ತಕ್ಷೇಪ ಇರುವುದು ಅಕ್ಷಮ್ಯ.  ಪೊಲೀಸ್ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ವೃತ್ತಿಪರವಾಗಿಸಲು ರಾಜಕಾರಣಿಗಳು ಬಿಡುತ್ತಿಲ್ಲ ಎಂಬಂತಹ ವ್ಯಾಪಕ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.  ತಮ್ಮ ಮಾತು ಮತ್ತು ಕೃತಿಯ ಮಧ್ಯೆ ಸಮನ್ವಯ  ಸಾಧಿಸಬೇಕಾದ ಸವಾಲು ದೊಡ್ಡದಾಗೇ ಇದೆ ಎಂಬುದನ್ನು ರಾಜಕಾರಣಿಗಳೂ ಅರ್ಥ ಮಾಡಿಕೊಳ್ಳಬೇಕು. ಸ್ವತಂತ್ರವಾಗಿ, ವೃತ್ತಿಪರವಾಗಿ ಕಾರ್ಯ ನಿರ್ವಹಿಸುವಂತಹ ಪೊಲೀಸ್ ವ್ಯವಸ್ಥೆ ರೂಪಿಸಲು ಶ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT