ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಲ್‌ ಕುಟುಂಬಕ್ಕೆ ಕಾದಿದೆ ಕಠಿಣ ಸ್ಪರ್ಧೆ!

ಪಂಜಾಬ್‌ ವಿಧಾನಸಭಾ ಚುನಾವಣೆ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ಧ ಪ್ರಬಲ ಅಭ್ಯರ್ಥಿಗಳು ಕಣಕ್ಕೆ
Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಚಂಡೀಗಡ:  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಹಾಗೂ ಅವರ ಮಗ, ಉಪ ಮುಖ್ಯಮಂತ್ರಿ ಸುಖ್‌ಬೀರ್‌ ಸಿಂಗ್‌ ಅವರು ಜೀವಮಾನದಲ್ಲೇ ಅತ್ಯಂತ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ. ಗೆಲುವಿಗಾಗಿ ಇಬ್ಬರು ಕೂಡ ತಮ್ಮ ತವರು ನೆಲದಲ್ಲಿ ಭಾರಿ ಸವಾಲನ್ನು ಮೀರಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಆಡಳಿತಾರೂಢ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ವರಿಷ್ಠ  89 ವರ್ಷದ  ಪ್ರಕಾಶ್‌ ಸಿಂಗ್‌ ಬಾದಲ್‌ ಅವರಿಗೆ ಈ ಬಾರಿಯದ್ದು ಬಹುತೇಕ ಕೊನೆಯ ಚುನಾವಣೆ. ಆದರೆ, ಅವರು ಇದನ್ನು ಅಧಿಕೃತವಾಗಿ ಘೋಷಿಸಿಲ್ಲ.

ಪಂಜಾಬ್‌ನ ಕಾಂಗ್ರೆಸ್‌ ಮುಖ್ಯಸ್ಥ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರಿಗೂ ಈ ಬಾರಿಯದ್ದು ಅತ್ಯಂತ ಸವಾಲಿನ ಚುನಾವಣೆ. ಇದು ತಮ್ಮ ಕೊನೆಯ ಚುನಾವಣೆ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ.

ಈ ಇಬ್ಬರೂ ಹಿರಿಯ ನಾಯಕರು ಲಂಬಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವುದರಿಂದ, ಪ್ರಚಂಡ ಸ್ಪರ್ಧೆ ಏರ್ಪಟ್ಟಿದೆ. ಇಡೀ ರಾಜ್ಯದ ಒಟ್ಟಾರೆ ಫಲಿತಾಂಶಕ್ಕಿಂತ, ಈ ಕ್ಷೇತ್ರದ ಫಲಿತಾಂಶವೇ ಕುತೂಹಲದ ಕೇಂದ್ರಬಿಂದುವಾಗಲಿದೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಅಮರೀಂದರ್‌ ಸಿಂಗ್‌ ಅವರು ಅಮೃತಸರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ಮುಖಂಡ ಅರುಣ್‌ ಜೇಟ್ಲಿ ಅವರನ್ನು ಸೋಲಿಸಿದ್ದರು.

ಗೆಲುವು ಸುಲಭವಲ್ಲ: ಬಾದಲ್‌ ಮಗ ಸುಖಬೀರ್‌ ಸಿಂಗ್‌ ಬಾದಲ್‌ ವಿರುದ್ಧವೂ ವಿರೋಧ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಹಾಗಾಗಿ, ಈ ಬಾರಿ ಅವರ ಗೆಲುವೂ ಸುಲಭವಾಗಿಲ್ಲ.

ಸುಖ್‌ಬೀರ್‌ ಅವರು ಸ್ಪರ್ಧಿಸಿರುವ ಜಲಾಲಬಾದ್‌ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷವು ಹಾಲಿ ಸಂಸದ, ಮಾಜಿ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಅವರ ಮೊಮ್ಮಗ ರವ್‌ಣೀತ್‌ ಸಿಂಗ್‌ ಬಿಟ್ಟು ಅವರನ್ನು ಕಣಕ್ಕಿಳಿಸಿದೆ.

ಮತ್ತೊಂದು ಪಕ್ಷ ಎಎಪಿಯು ಕೂಡ  ಪ್ರಭಾವಿ ಅಭ್ಯರ್ಥಿಯನ್ನೇ ಚುನಾವಣಾ ಆಖಾಡಕ್ಕೆ ಇಳಿಸಿದೆ. ರಾಜ್ಯ ಚುನಾವಣೆಯಲ್ಲಿ ಪಕ್ಷದ ಮುಖ, ಹಾಲಿ ಸಂಸದ  ಭಗವಂತ್‌ ಮಾನ್‌ ಅವರು ಸುಖ್‌ಬೀರ್‌ಗೆ ತೀವ್ರ ಪೈಪೋಟಿ ಒಡ್ಡಲಿದ್ದಾರೆ.

ಸುಖ್‌ಬೀರ್‌ ಅವರು ಪ್ರಬಲ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ. ಹಿಂದಿನ ಚುನಾವಣಾ ಫಲಿತಾಂಶಗಳೇ ಅದನ್ನು ಹೇಳುತ್ತವೆ. ಕಳೆದ ಚುನಾವಣೆಯಲ್ಲಿ ಸುಖ್‌ಬೀರ್‌ ಅವರು ಇದೇ ಕ್ಷೇತ್ರದಿಂದ 53 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು.

ಸಾಮಾನ್ಯವಾಗಿ ಪಕ್ಷವೊಂದರ ಉನ್ನತ ನಾಯಕರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಉಳಿದ ಪಕ್ಷಗಳು ‘ದುರ್ಬಲ’ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತವೆ. ಪಂಜಾಬ್‌ ಕೂಡ ಇದರಿಂದ ಹೊರತಾಗಿರಲಿಲ್ಲ. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎಎಪಿ ಬಾದಲ್‌ ಕುಟುಂಬದ ವಿರುದ್ಧ ತಮ್ಮ ಸಾಮರ್ಥ್ಯವನ್ನೆಲ್ಲ ಪಣಕ್ಕಿಟ್ಟಿವೆ.

ಅಮರೀಂದರ್‌ ಸಿಂಗ್‌ ಅವರು ಪಟಿಯಾಲ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ. ‘ಬಾದಲ್‌ ಅವರಿಗೆ ಪಾಠ ಕಲಿಸುವುದಕ್ಕಾಗಿ ಲಂಬಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತೇನೆ’ ಎಂದು ಅಮರೀಂದರ್‌ ಸಿಂಗ್‌  ಮಂಗಳವಾರ ಹೇಳಿದ್ದಾರೆ. ಇದಕ್ಕೆ, ‘ಎಲ್ಲಿ ನನಗೆ ಪಾಠ ಕಲಿಸುತ್ತಾರೆ ಎಂದು ನೋಡೋಣ, ನಾನು ಅಲ್ಲಿಯೇ ಇರುತ್ತೇನೆ’ ಎಂದು ಬಾದಲ್‌ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮುತಾಲಿಕ್‌ಗೆ ನಿರ್ಬಂಧ
ಪಣಜಿ (ಪಿಟಿಐ):
ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹಾಗೂ ಅವರ ಬೆಂಬಲಿಗರಿಗೆ ಗೋವಾ ಪ್ರವೇಶಿಸದಂತೆ ಬುಧವಾರದಿಂದ ಜಾರಿಗೆ ಬರುವಂತೆ  ಎರಡು ತಿಂಗಳು ನಿರ್ಬಂಧ ವಿಧಿಸಲಾಗಿದೆ. ಚುನಾವಣೆ ನಡೆಲಿರುವ ಗೋವಾದಲ್ಲಿ ಮುತಾಲಿಕ್ ಹಾಗೂ ಅವರ ಬೆಂಬಲಿಗರು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುತ್ತಾರೆ ಎಂಬ ಸಾಧ್ಯತೆ ಇರುವ ಕಾರಣ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT