ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಕರನಿಗೆ ಆ್ಯಸಿಡ್ ಎರಚಿದ ನರ್ಸ್‌!

ಬ್ಲೇಡ್‌ನಿಂದ ಕುಯ್ದು ಮುಖ ವಿರೂಪ ಮಾಡಿದಳು
Last Updated 17 ಜನವರಿ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಧರ್ಮಕ್ಕೆ ಮತಾಂತರನಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಮಾವನ ಮಗನೊಂದಿಗೆ ಸೇರಿ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ನರ್ಸ್‌ವೊಬ್ಬರು, ನಂತರ ಬ್ಲೇಡ್‌ನಿಂದ ಕುಯ್ದು ಮುಖವನ್ನೂ ವಿರೂಪ ಮಾಡಿದ ಘಟನೆ ವಿಜಯನಗರದ ಪೈಪ್‌ಲೈನ್ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಆ್ಯಸಿಡ್ ದಾಳಿಗೆ ಒಳಗಾಗಿರುವ ಪ್ರಕಾಶನಗರ ನಿವಾಸಿ ಜಯಕುಮಾರ್ (32), ಸದ್ಯ ವಿಶ್ವೇಶ್ವರಪುರದ ‘ಮೆಡಿಕೇರ್’ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುತ್ತಿಗೆ ಭಾಗ ಸುಟ್ಟು ಹೋಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಆರೋಪಿ ಲಿಡಿಯಾ (26) ಎಂಬಾಕೆಯನ್ನು ಬಂಧಿಸಿರುವ ವಿಜಯನಗರ ಪೊಲೀಸರು, ಪರಾರಿಯಾಗಿರುವ ಸುನೀಲ್‌ಗಾಗಿ (18) ಶೋಧ ನಡೆಸುತ್ತಿದ್ದಾರೆ.

ಐದು ವರ್ಷದ ಪ್ರೀತಿ:  ‘ಶ್ರೀರಾಂಪುರ ನಿವಾಸಿಯಾದ ಲಿಡಿಯಾ, ಎಂ.ಎಸ್ಸಿ ಪದವೀಧರೆ. ಅಲಿ ಅಸ್ಘರ್ ರಸ್ತೆಯ ಆಸ್ಪತ್ರೆಯೊಂದರಲ್ಲಿ ಆಕೆ ನರ್ಸ್‌ ಆಗಿದ್ದಾಳೆ. ಐದು ವರ್ಷಗಳ ಹಿಂದೆ ಆಕೆಗೆ ಪಕ್ಕದ ರಸ್ತೆಯ ಬಟ್ಟೆ ವ್ಯಾಪಾರಿ ಜಯಕುಮಾರ್‌ನ ಪರಿಚಯವಾಗಿತ್ತು. ಕ್ರಮೇಣ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು  ಹೇಳಿದರು.

‘ತನ್ನನ್ನು ಮದುವೆ ಆಗಿ, ಕ್ರೈಸ್ತ ಧರ್ಮಕ್ಕೆ ಮತಾಂತರ  ಆಗುವಂತೆ ಲಿಡಿಯಾ ಪ್ರಿಯಕರನನ್ನು  ನಿರಂತರವಾಗಿ ಪೀಡಿಸುತ್ತಿದ್ದಳು. ಕಳೆದ ನವೆಂಬರ್‌ನಲ್ಲಿ ವಿವಾಹವಾಗಲು  ಜಯಕುಮಾರ್ ಸಮ್ಮತಿ ಸೂಚಿಸಿದ್ದರಾದರೂ, ಮತಾಂತರಕ್ಕೆ ಮಾತ್ರ ಒಪ್ಪಿರಲಿಲ್ಲ. ಇದರಿಂದ ಪ್ರೀತಿಯಲ್ಲಿ ಒಡಕು ಉಂಟಾಗಿತ್ತು. ಈಕೆ ಕರೆ ಮಾಡಿದರೂ, ಜಯಕುಮಾರ್ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.’

‘ಈ ವರ್ತನೆಯಿಂದ ಕುಪಿತಗೊಂಡ ಲಿಡಿಯಾ, ಪ್ರಿಯಕರನಿಗೆ ಬುದ್ಧಿ ಕಲಿಸಲು ನಿರ್ಧರಿಸಿದಳು.  ಅದಕ್ಕೆ ಮಾವನ ಮಗ ಸುನೀಲ್‌ನ ನೆರವು ಕೇಳಿದ್ದಳು. ಆ್ಯಸಿಡ್ ಎರಚುವ ನಿರ್ಧಾರಕ್ಕೆ ಬಂದ ನರ್ಸ್,  ವಾರದ ಹಿಂದೆಯೇ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸಕ್ಕೆ ಬಳಸುವ ಆ್ಯಸಿಡ್ ಹಾಗೂ ಬ್ಲೇಡ್‌ಗಳನ್ನು ತೆಗೆದುಕೊಂಡು ತನ್ನ ಬಳಿ ಇಟ್ಟುಕೊಂಡಿದ್ದಳು.’

ಸ್ಕೂಟರ್‌ನಲ್ಲಿ ಬಂದರು: ‘ಜಯಕುಮಾರ್ ಅವರು ಸೋಮವಾರ ಸಂಜೆ ಸ್ನೇಹಿತ ಪದ್ಮನಾಭ್ ಜತೆ ಕಾರಿನಲ್ಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೋಗಿದ್ದರು. ಅವರ ಕುಟುಂಬ ಸದಸ್ಯರಿಂದಲೇ ಈ ವಿಷಯ ತಿಳಿದುಕೊಂಡ ಆರೋಪಿಗಳು, ಅತ್ತಿಗುಪ್ಪೆ ಬಸ್‌ ನಿಲ್ದಾಣದ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಅವರ ಬರುವಿಕೆಗಾಗಿಯೇ ಕಾಯುತ್ತಿದ್ದರು.’

‘ರಾತ್ರಿ 8.30ರ ಸುಮಾರಿಗೆ ಜಯಕುಮಾರ್ ಹಾಗೂ ಪದ್ಮನಾಭ್ ಅತ್ತಿಗುಪ್ಪೆ ಮಾರ್ಗವಾಗಿ ಮನೆಗೆ ವಾಪಸಾಗುತ್ತಿದ್ದರು. ಕೂಡಲೇ ಸ್ಕೂಟರ್‌ನಲ್ಲಿ ಅವರ ಕಾರನ್ನು ಹಿಂಬಾಲಿಸಿದ ಇವರಿಬ್ಬರೂ, ಪೈಪ್‌ಲೈನ್ ರಸ್ತೆಯಲ್ಲಿ ಬಲಗಡೆಯಿಂದ ಮುಂದೆ ಹೋಗಿ ಕಿಟಕಿ ಮೂಲಕ ಆ್ಯಸಿಡ್ ಎರಚಿದ್ದರು. ಕೂಡಲೇ ಕಾರು ನಿಲ್ಲಿಸಿದ ಜಯಕುಮಾರ್, ಕೆಳಗಿಳಿದು ಉರಿಯಿಂದ ಒದ್ದಾಡತೊಡಗಿದರು.

ಆಗ ಲಿಡಿಯಾ, ಬ್ಲೇಡ್‌ನಿಂದ ಮುಖವನ್ನು ಮನಸೋಇಚ್ಛೆ ಕೊಯ್ದು ಪರಾರಿಯಾಗಿದ್ದಳು.’‘ಬಳಿಕ ಪದ್ಮನಾಭ್ ಅವರು ಸ್ನೇಹಿತನನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ವಿಜಯನಗರ ಠಾಣೆ ಎಸ್‌ಐ ಕೆ.ತಿಮ್ಮೇಗೌಡ ಹಾಗೂ ಸಿಬ್ಬಂದಿ, ಶ್ರೀರಾಂಪುರಕ್ಕೆ ತೆರಳಿ ಆಕೆಯನ್ನು ವಶಕ್ಕೆ ಪಡೆದರು. ಆದರೆ, ಸುನೀಲ್ ಮನೆ ಬಿಟ್ಟು ಹೋಗಿದ್ದಾನೆ’ ಎಂದು ಅಧಿಕಾರಿಗಳು ವಿವರಿಸಿದರು. 

ಠಾಣೆಯಲ್ಲಿ ರಾಜಿ: ‘ಲಿಡಿಯಾ–ಜಯಕುಮಾರ್ ನಡುವೆ ಇತ್ತೀಚೆಗೆ  ಗಲಾಟೆಯಾಗಿ, ಇಬ್ಬರೂ ಶ್ರೀರಾಂಪುರ ಠಾಣೆ ಮೆಟ್ಟಿಲೇರಿದ್ದರು. ಎರಡೂ ಕುಟುಂಬಗಳ ಸಮ್ಮುಖದಲ್ಲಿ ರಾಜಿ ನಡೆದಿತ್ತು’ ಎಂದು ಪೊಲೀಸರು ತಿಳಿಸಿದರು.

‘ತಕ್ಕ ಪಾಠ’
‘ಐದು ವರ್ಷ ಪ್ರೀತಿ ಮಾಡಿ, ಮದುವೆ ಆಗಲು ಯೋಚಿಸುತ್ತಿದ್ದ. ಮಂತಾತರ ಆಗಲೂ ಒಪ್ಪಲಿಲ್ಲ. ಈ ಕಾರಣಕ್ಕೆ ತಕ್ಕ ಪಾಠ ಕಲಿಸಿದ್ದೇನೆ’ ಎಂದು ಲಿಡಿಯಾ ಹೇಳಿಕೆ ಕೊಟ್ಟಿದ್ದಾಳೆ. ಆರೋಪಿಗಳ ವಿರುದ್ಧ ಆ್ಯಸಿಡ್ ದಾಳಿ (326ಎ), ಕೊಲೆ ಯತ್ನ (307) ಹಾಗೂ ಅಕ್ರಮ ಬಂಧನ (ಐಪಿಸಿ 341) ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT