ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳಲ್ಲಿ ವಾಹನ ನಿಲುಗಡೆ ಶುಲ್ಕ

ಎಂ.ಜಿ.ರಸ್ತೆ, ಎಸ್‌.ಎಸ್‌. ಪುರಂ ರಸ್ತೆಗಳಲ್ಲಿ ಪ್ರಾಯೋಗಿಕ ಜಾರಿಗೆ ಮಹಾನಗರ ಪಾಲಿಕೆ ನಿರ್ಧಾರ
Last Updated 18 ಜನವರಿ 2017, 5:02 IST
ಅಕ್ಷರ ಗಾತ್ರ

ತುಮಕೂರು: ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ಶುಲ್ಕ ಜಾರಿಗೆ ತರುವ ಬಗ್ಗೆ ಪಾಲಿಕೆಯಲ್ಲಿ ಚಿಂತನೆ ನಡೆದಿದೆ. ಪ್ರಾಯೋಗಿಕವಾಗಿ ನಗರದ ಎಂ.ಜಿ.ರಸ್ತೆ, ಎಸ್‌.ಎಸ್‌.ಪುರಂ ಹಾಗೂ ಅಶೋಕ ರಸ್ತೆಯಲ್ಲಿ ಈ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ. ನಂತರದ ದಿನಗಳಲ್ಲಿ ಜನನಿಬಿಡ ಹಾಗೂ ವಾಣಿಜ್ಯ– ವಹಿವಾಟು ಹೆಚ್ಚಿರುವ ಎಲ್ಲ ರಸ್ತೆಗಳಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ.

ನಗರದಲ್ಲಿ ಎಲ್ಲೂ ವಾಹನ  ನಿಲುಗಡೆಗೆ ಸ್ಥಳಾವಕಾಶ ಇಲ್ಲವಾಗಿದೆ. ಹೋಟೆಲು, ವಾಣಿಜ್ಯ ಮಳಿಗೆಗಳು, ಮದುವೆ ಮಂಟಪಗಳಲ್ಲಿ  ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲವಾಗಿದೆ. ಹೀಗಾಗಿ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದು ಸಾಮಾನ್ಯವಾಗಿದೆ. ಇದನ್ನು ತಡೆಯಲು ಶುಲ್ಕ ನೀತಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕನ್ಸರ್‌ವೆನ್ಸಿಗಳಲ್ಲಿ ಜಾಗ: ನಗರದ ಎಂ.ಜಿ.ರಸ್ತೆಯಲ್ಲಿ ಕನ್ಸರ್‌ ವೆನ್ಸಿಗಳನ್ನು ವಾಹನ ನಿಲುಗಡೆ ಜಾಗಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮಹಾನಗರ ಪಾಲಿಕೆ ಮೇಯರ್‌ ಯಶೋದಮ್ಮ, ಉಪ ಮೇಯರ್‌ ಟಿ.ಆರ್‌.ನಾಗರಾಜ್‌, ಆಯುಕ್ತ ಆಶಾದ್‌ ಷರೀಪ್‌ ಹಾಗೂ ಪೊಲೀಸ್‌ ಅಧಿಕಾರಿಗಳ ತಂಡ ಎಂ.ಜಿ.ರಸ್ತೆಯಲ್ಲಿರುವ ಕನ್ಸರ್‌ವೆನ್ಸಿಗಳನ್ನು ಪರಿಶೀಲಿಸಿದೆ.

ಈ ರಸ್ತೆಯಲ್ಲಿ ನಾಲ್ಕು  ಕನ್ಸರ್‌ವೆನ್ಸಿಗಳಿದ್ದು, ಎಲ್ಲವಕ್ಕೂ ಈಗಾಗಲೇ ಸಿಮೆಂಟ್‌ ಹಾಕಲಾಗಿದೆ. ಒಟ್ಟು 1200 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ.

ಈಗ ಈ  ಕನ್ಸರ್‌ವೆನ್ಸಿಗಳನ್ನು ಜನರು ಬಯಲು ಶೌಚಕ್ಕಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ಅಕ್ಕ–ಪಕ್ಕದ ಕಟ್ಟಡಗಳಿಗೆ ಶೌಚದ ವಾಸನೆ ಬಡಿಯುತ್ತಿದೆ. ಪರಿಸರಕ್ಕೂ ಹಾನಿಯಾಗುತ್ತಿದೆ. ಇವುಗಳನ್ನು ವಾಹನ ನಿಲುಗಡೆಗೆ ಬಳಸಿಕೊಂಡರೆ ಬಯಲು ಶೌಚಕ್ಕೂ ತಡೆ ಹಾಕಿದಂತೆ ಆಗಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ವಾದವಾಗಿದೆ.
 
ಕನ್ಸರ್‌ವೆನ್ಸಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶ ಮಾಡಿಕೊಡಲಾಗುವುದು. ರಸ್ತೆಯಲ್ಲಿ ಕಾರುಗಳ ನಿಲುಗಡೆಗೆ ಅವಕಾಶ ನೀಡಲಾಗುವುದು. ಕಾರುಗಳಿಗೂ ಸಹ ವಾಹನ ನಿಲುಗಡೆ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಎಂ.ಜಿ.ರಸ್ತೆ ಅಲ್ಲದೆ ಎಸ್‌.ಎಸ್‌.ಪುರ, ಅಶೋಕನಗರ ಮುಖ್ಯ ರಸ್ತೆಯಲ್ಲೂ ವಾಹನ ನಿಲುಗಡೆ ಶುಲ್ಕ ಜಾರಿಗೆ ತರಲು ನಿರ್ಧರಿಸಲಾಗಿದೆ.

ಎಸ್‌.ಎಸ್‌.ಪುರಂನಲ್ಲಿ ದಿನ ಬಿಟ್ಟು ದಿನ ರಸ್ತೆಯ ಒಂದೊಂದು ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶವನ್ನು ಈಗಾಗಲೇ ಕಲ್ಪಿಸಲಾಗಿದೆ. ಪ್ರತಿ ದಿನ ನೂರಾರು ವಾಹನಗಳನ್ನು ನಿಲುಗಡೆ ಮಾಡುವುದರಿಂದ ಪಾಲಿಕೆಗೆ ಉತ್ತಮ ಆದಾಯವೂ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಅಶೋಕನಗರದಲ್ಲಿ ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದರಿಂದ ರಸ್ತೆ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಶುಲ್ಕ ಪಾವತಿ ವ್ಯವಸ್ಥೆ ಜಾರಿಗೆ ತಂದರೆ ಅಡ್ಡಾದಿಡ್ಡಿ ವಾಹನ ನಿಲುಗಡೆಯೂ ತಪ್ಪಲಿದೆ. ಸಂಚಾರ ವ್ಯವಸ್ಥೆಯೂ ಸುಧಾರಿಸಲಿದೆ ಎಂಬುದು ಪಾಲಿಕೆಯ ಅಭಿಪ್ರಾಯವಾಗಿದೆ.

ಸಾರ್ವಜನಿಕರಿಗೆ ಹೊರೆ
ವಾಹನ ನಿಲುಗಡೆ ಶುಲ್ಕ ಜಾರಿ ಮಾಡುವುದರಿಂದ ಜನ ಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ಡಿವೈಎಫ್‌ಐನ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್‌.ರಾಘವೇಂದ್ರ ಹೇಳಿದರು.

ಹೋಟೆಲುಗಳು, ವಾಣಿಜ್ಯ ಮಳಿಗೆಗಳು ತಮ್ಮ ಗ್ರಾಹಕರಿಗೆ ಉಚಿತವಾಗಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇದನ್ನು ಜಾರಿಗೆ ತರಲು ಸಾಧ್ಯವಾಗದ ಪಾಲಿಕೆಯು ರಸ್ತೆಗಳಲ್ಲಿ ಶುಲ್ಕ ಪಾವತಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವುದು ಸರಿ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರಿ ಬಸ್‌ ನಿಲ್ದಾಣದ ಎದುರು ರಸ್ತೆಯಲ್ಲಿ  ಯಾವುದೇ ಕಾರಣಕ್ಕೂ ಶುಲ್ಕ ಪಾವತಿ ವ್ಯವಸ್ಥೆ ಜಾರಿಗೆ ತರಬಾರದು. ಇಲ್ಲಿ ಜನ ಸಾಮಾನ್ಯರು ತಮ್ಮ ಬಂಧುಗಳನ್ನು ಬಸ್‌ ನಿಲ್ದಾಣಕ್ಕೆ ಕರೆ ತಂದು ಅವರನ್ನು ಬಸ್ಸಿಗೆ ಹತ್ತಿಸಲು ಹೋಗಿ ಬರುವಷ್ಟಕ್ಕೆ ಶುಲ್ಕ ತೆತ್ತಬೇಕಾಗುತ್ತದೆ. ಆರಂಭದಲ್ಲಿ ಕಡಿಮೆ ಶುಲ್ಕ ವಿಧಿಸಿದರೂ ನಂತರದ ವರ್ಷಗಳಲ್ಲಿ ಹೆಚ್ಚಿಸಲಾಗುತ್ತದೆ. ಇಂಥ ಪದ್ಧತಿ ಜಾರಿಗೆ ಬರುವುದು ಬೇಡ ಎಂದು ತಿಳಿಸಿದರು.

*
ಮಾರ್ಚ್ ತಿಂಗಳವರೆಗೂ ವಾಹನ ನಿಲುಗಡೆ ಉಚಿತವಾಗಿ ಇರಲಿದೆ. ನಂತರ ಶುಲ್ಕ ವಿಧಿಸಲಾಗುವುದು. ಯಾರಿಗೂ ಹೊರೆಯಾಗದಂತೆ ಶುಲ್ಕ ವಿಧಿಸಲಾಗುವುದು.
-ಟಿ.ಆರ್‌.ನಾಗರಾಜ್‌,
ಉಪ ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT