ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣದಲ್ಲಿ ‘ಶಿವ ಮೂವ್ಸ್ ಆನ್’

Last Updated 18 ಜನವರಿ 2017, 5:06 IST
ಅಕ್ಷರ ಗಾತ್ರ

ಗೋಕರ್ಣ:  ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ತಾನು ಗಳಿಸಿದ ಋಣವನ್ನು ಯಾವುದಾದರೂ ರೀತಿಯಲ್ಲಿ ತೀರಿಸಲೇಬೇಕು. ಛಾಯಾಚಿತ್ರಗ್ರಾಹಕ ಹ್ಯಾರಿ ಪೆರೊನಿಯಸ್ ತಮ್ಮ ಛಾಯಾಚಿತ್ರದ ಮೂಲಕ ಗೋಕರ್ಣದ ಋಣ ತೀರಿಸುತ್ತಿದ್ದಾರೆ. ಚಿತ್ರದ ಮೂಲಕವೇ ಗೋಕರ್ಣದ ಅಭಿವೃದ್ಧಿಯ ಇತಿಹಾಸವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಇಲ್ಲಿ ತಿಳಿಸಿದರು. 

ಮಂಗಳವಾರ ಗೋಕರ್ಣದ ರಥಬೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಡನ್ ದೇಶದ ಪ್ರವಾಸಿಗ ಹ್ಯಾರಿ ಪೆರೊನಿಯಸ್ ರಚಿಸಿದ ‘ಶಿವ ಮೂವ್ಸ್ ಆನ್ ಇನ್ ಗೋಕರ್ಣ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ದೆಹಲಿ ಮೂಲದ ಉದ್ಯಮಿ ಅಭಿಜಿತ್ ಚಟರ್ಜಿ ಮಾತನಾಡಿ, ‘ಹ್ಯಾರಿ ತೆಗೆದ ಛಾಯಾಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ಗೋಕರ್ಣದ ಸಂಸ್ಕೃತಿ, ಆಚಾರ ವಿಚಾರವನ್ನು ಈ ಚಿತ್ರದ ಮೂಲಕ ನೋಡಬಹುದು’ ಎಂದು ಅಭಿಪ್ರಾಯಪಟ್ಟರು.

ಕೃತಿ ರಚಿನೆಕಾರ ಹ್ಯಾರಿ ಪೆರೊನಿಯಸ್ ಮಾತನಾಡಿ, ‘1986ರಲ್ಲಿ ಪ್ರಥಮವಾಗಿ ಭಾರತಕ್ಕೆ ನಾನು ಬಂದಿದ್ದೆ. ಛಾಯಾಚಿತ್ರ ಬದಲಿಗೆ ಸಾಕ್ಷ್ಯಚಿತ್ರ ಮಾಡಲು ನಿರ್ಧರಿಸಿದಾಗ ನನಗೆ ಕಣ್ಣಿಗೆ ಬಿದ್ದಿದ್ದು ಗೋಕರ್ಣ ಮತ್ತು ಅಲ್ಲಿಯ ಕುಡ್ಲೆ ಬೀಚ್. ಅಲ್ಲಿಯ ಜನರ ದಿನನಿತ್ಯದ ಜೀವನಶೈಲಿ, ಉಡುಗೆ ತೊಡುಗೆ, ಆಚಾರ ವಿಚಾರ ನನ್ನನ್ನು ತುಂಬಾ ಆಕರ್ಷಿಸಿತು. ಗೋಕರ್ಣದ ವೈದಿಕ ಧರ್ಮ ಮತ್ತು ಹಾಲಕ್ಕಿ ಒಕ್ಕಲಿಗರ ಜೀವನ ನನ್ನನ್ನು ಗೋಕರ್ಣದ ಬಗ್ಗೆ ಅಭ್ಯಸಿಸುವಂತೆ ಮತ್ತು ಪ್ರತಿವರ್ಷ ಇಲ್ಲಿಗೆ ಬರುವಂತೆ ಮಾಡಿತು.

ಇಲ್ಲಿಯ ವೈದ್ಯರು, ಶಿಕ್ಷಕರು ಎಲ್ಲ ವೃತ್ತಿ ಮಾಡುವ ಜನರ ಗೆಳೆತನವಾಯಿತು. ಪ್ರತಿವರ್ಷ ನನ್ನಂತೆ ಬರುವ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರೂ ನನಗೆ ಪರಿಚಯವಾದರು. ಈ ಪುಸ್ತಕ ಗೋಕರ್ಣ ಹೇಗೆ ಚಲಿಸುತ್ತಿದೆ ಎಂಬ ಬಗ್ಗೆ ವಿವರಣೆಯನ್ನು ಒಳಗೊಂಡಿದೆ’ ಎಂದು ಅವರು ಮಾಹಿತಿ ನೀಡಿದರು.

ಪುಸ್ತಕದಲ್ಲಿ ಕಪ್ಪು ಬಿಳುಪು ಚಿತ್ರಗಳೂ ಸೇರಿ 1986ರಿಂದ ತೆಗೆದ ಛಾಯಾಚಿತ್ರಗಳಿವೆ. ಗೋಕರ್ಣದ ಹಳೆಯ ರಥ ವೈಭವ ನೋಡಲು ಸಿಗುತ್ತಿದೆ. ಸ್ವಚ್ಛ ಸುಂದರವಾದ ಕಡಲ ತೀರದ 1987ನೇ ಇಸವಿಯ ಚಿತ್ರ ತುಂಬಾ ಆಕರ್ಷಣೀಯವಾಗಿ ಮೂಡಿಬಂದಿದೆ ಎಂದರು.

ಹಾಲಕ್ಕಿ ಜನಾಂಗದವರಿಂದ ಕಟ್ಟಲ್ಪಡುವ ರಥದ ವಿವಿಧ ಹಂತಗಳು ಕಾಣಸಿಗುತ್ತವೆ. ರಥದ ತುತ್ತತುದಿಯಲ್ಲಿ ನಿಂತು ತೆಗೆದ ಚಿತ್ರವಂತೂ ಇಡೀ ರಥ ಬೀದಿಯ ಎರಡು ಬದಿಯ ಮನೆಗಳ ಚಾವಣಿ ಅದ್ಭುತವಾಗಿ ಮೂಡಿ ಬಂದಿದೆ ಎಂದು ವಿವರಿಸಿದರು.  

ಮಹಾಬಲೇಶ್ವರ ನಂಬಿಯಾರ್, ಕುಮಾರ ಶಂಕರಲಿಂಗ, ಅನಂತ ಅಡಿ, ಪತ್ರಕರ್ತ ಶ್ರೀಧರ ಅಡಿ, ಶಿವರಾಮ ಗೋಪಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT