ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಒತ್ತಾಯ

Last Updated 18 ಜನವರಿ 2017, 5:13 IST
ಅಕ್ಷರ ಗಾತ್ರ

ಹಳಿಯಾಳ: ತಾಲ್ಲೂಕಿನ ಕೆ.ಕೆ.ಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದ್ದರಿಂದ ಕೆ.ಕೆ.ಹಳ್ಳಿ ಗ್ರಾಮಸ್ಥರು ಸಚಿವ ಆರ್.ವಿ.ದೇಶಪಾಂಡೆಯವರನ್ನು ರಸ್ತೆ ಮಧ್ಯೆಯೇ ನಿಲ್ಲಿಸಿ, ಮನವಿ ಸಲ್ಲಿಸಿದರು.

ಕೆ.ಕೆ.ಹಳ್ಳಿ ಗ್ರಾಮದ ಮಹಿಳೆಯರು, ನೀರಿಗಾಗಿ ಮಂಗಳವಾರ ಬೆಳಿಗ್ಗೆಯಿಂದಲೇ ಖಾಲಿ ಕೊಡದೊಂದಿಗೆ ಕಾಯುತ್ತಿದ್ದರು. ಅದೇ ವೇಳೆ, ಸಚಿವರು ನಂದಿಗದ್ದಾ ಗ್ರಾಮದಿಂದ ಹಳಿಯಾಳಕ್ಕೆ ಬರುವಾಗ,  ಮಹಿಳೆಯರು ಅವರ ಕಾರನ್ನು ತಡೆದು, ‘ಈಗ ಪೂರೈಕೆ ಮಾಡುತ್ತಿರುವ  ಕುಡಿಯುವ ನೀರು ಸಾಕಾಗುತ್ತಿಲ್ಲ. ಕೂಡಲೇ ಗ್ರಾಮದಲ್ಲಿ ಕೊಳವೆ ಬಾವಿ ಮೂಲಕವಾದರೂ ನೀರಿನ ವ್ಯವಸ್ಥೆ ಮಾಡಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಿ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ನೀರಿಗಾಗಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯ ವರೆಗೂ ಕಾಯುತ್ತಿದ್ದರೂ ಅಗತ್ಯವಿರುವಷ್ಟು ನೀರು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ನಂತರ, ಹಳಿಯಾಳ ತಹಶೀಲ್ದಾರ ಕಾರ್ಯಾಲಯದಲ್ಲಿ ತುರ್ತು ಕ್ರಿಯಾಪಡೆ ಸಮಿತಿ ಸಭೆಯನ್ನು ಕರೆದು ಜಿಲ್ಲಾ ಪಂಚಾಯ್ತಿ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಲ್ಲೂಕಿನ ಮುರ್ಕವಾಡ ಭಾಗದಲ್ಲಿ ಅಗತ್ಯವಿರುವಲ್ಲಿ ಕೊಳವೆ ಬಾವಿಗಳನ್ನು ತೋಡಿಸಿ, ಅವಶ್ಯವಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸಿರಿ’ ಎಂದು ಸಚಿವ ದೇಶಪಾಂಡೆ ಸೂಚಿಸಿದರು.

ರೈತರ  ಖಾಸಗಿ ಗದ್ದೆಗಳ ಕೊಳವೆಬಾವಿಗಳಲ್ಲಿ ನೀರು ಇದ್ದಲ್ಲಿ ಆ ರೈತರಿಂದ ನೀರು ಪಡೆದು ಗ್ರಾಮಸ್ಥರಿಗೆ ಪೂರೈಸಬೇಕು.  ಯಾವುದೇ ರೀತಿಯಿಂದ ಕುಡಿಯುವ ನೀರು ಹಾಗೂ ದನಕರುಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಮೃತರ ಕುಟುಂಬಕ್ಕೆ ಸಾಂತ್ವನ: ಪರಿಹಾರ ವಿತರಣೆ
ಹಳಿಯಾಳ: ತಾಲ್ಲೂಕಿನ ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಬೆಂಕಿಗಾಹುತಿಯಾದವರ ಕುಟುಂಬಕ್ಕೆ ಮಂಗಳವಾರ ಭೇಟಿ ನೀಡಿದ ಸಚಿವ ಆರ್.ವಿ. ದೇಶಪಾಂಡೆ, ಕುಟುಂಬದವರಿಗೆ ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿದರು.  ಶಕುಂತಲಾ ಚಂದ್ರಕಾಂತ ಗೌಡಾ(28), ಸಂತೋಷ ಚಂದ್ರಕಾಂತ ಗೌಡಾ(6) ಅವಘಡದಲ್ಲಿ ಸಾವಿಗೀಡಾಗಿದ್ದರು.

ಘಟನೆಯ ವಿವರವನ್ನು ಪಡೆದ ಸಚಿವರು, ಈ ಬಗ್ಗೆ ಸರ್ಕಾರದಿಂದಲೂ ಸಹ ಪರಿಹಾರವನ್ನು ವಿತರಿಸಲಾಗುವುದು ಎಂದು ಹೇಳಿದರು.
ಜ.15 ರಂದು ಮಧ್ಯಾಹ್ನ ಘಡಿಯಾಳ ಗ್ರಾಮದ ಕಬ್ಬಿನ ಗದ್ದಯೊಂದರಲ್ಲಿ  ಸಂತೋಷ ಚಂದ್ರಕಾಂತ ಗೌಡಾ ಆಕಸ್ಮಿಕವಾಗಿ ತಗುಲಿದ ಬೆಂಕಿಯಲ್ಲಿ ಸಿಲುಕಿಕೊಂಡಾಗ ಆತನನ್ನು ರಕ್ಷಿಸಲು ಹೋದ ತಾಯಿ  ಶಕುಂತಲಾ ಕೂಡ ಸಾವಿಗೀಡಾಗಿದ್ದರು.

ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ
‘ಪ್ರತಿ ಮಗು ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಹಂತದವರೆಗಿನ ಶಿಕ್ಷಣ ಪಡೆಯಲು ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದೆ. ಈ ಯೋಜನೆಗಳಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ’ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ತಾಲ್ಲೂಕಿನ ಮುರ್ಕವಾಡ ಗ್ರಾಮದಲ್ಲಿ  ₹ 65 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಶಾಲಾ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
‘ತಾಲ್ಲೂಕಿನ 15 ಸಾವಿರ ವಿದ್ಯಾರ್ಥಿಗಳು ವಿದ್ಯಾಸಿರಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.  ಮುರ್ಕವಾಡ ಕೆರೆ ಅಭಿವೃದ್ದಿಗಾಗಿ ಹೂಳನ್ನು ತೆಗೆಯಲಾಗಿದೆ’ ಎಂದು ತಿಳಿಸಿದರು.

‘ಕಾಳಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಸಚಿವ ಸಂಪೂಟ ಮಂಜೂರಾತಿ ಸಿಕ್ಕಿದೆ. ನೀರಾವರಿ ಯೋಜನೆಯಿಂದ ರೈತರ ಅಭಿವೃದ್ದಿಯಾಗಲಿದೆ. ಸುಮಾರು 17000 ಎಕೆರೆ ಜಮೀನಿಗೆ ನೀರಾವರಿ ಸೌಲಭ್ಯ ಪಡೆಯಲಿದೆ. ಕಾವಲವಾಡದಿಂದ ಮುರ್ಕವಾಡ ವರೆಗೆ ₹14 ಕೋಟಿ ವೆಚ್ಚದಿಂದ ನೂತನ ರಸ್ತೆ ನಿರ್ಮಾಣ ಮಾಡಲಾಗಿದೆ’ ಎಂದರು.

7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ  ಪ್ರೋತ್ಸಾಹ ಧನ ವಿತರಿಸಲಾಯಿತು ಹಾಗೂ ಮುರ್ಕವಾಡ ಭಾಗದ 30 ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಪೀಶಪ್ಪ ಶಿಂಧೆ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ,  ಸದಸ್ಯೆ ಮಹೇಶ್ರೀ ಮಿಶಾಳೆ, ಕೃಷ್ಣಾ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯೆ ರೀಟಾ ಸಿದ್ದಿ, ಗ್ರಾಮಸ್ಥ ವೈ.ಪಿ.ಕೊರ್ವೇಕರ, ದೈವ ಕಮಿಟಿ ಅಧ್ಯಕ್ಷ ಮಾರುತಿ ಗುತ್ತೇಣ್ಣವರ, ಮುರ್ಕವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾರುತಿ ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ ಸ್ವಾಗತಿಸಿದರು. ಬಿ.ಎಸ್‌.ಇಟಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT