ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಡಾಂಬರೀಕರಣಕ್ಕೆ ನಾಗರಿಕರ ಒತ್ತಾಯ

ಎಂಟು ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸಾಗರ ಬಂದ್‌ಗೆ ಕರೆ: ಪ್ರತಿಭಟನಾಕಾರರು
Last Updated 18 ಜನವರಿ 2017, 5:27 IST
ಅಕ್ಷರ ಗಾತ್ರ

ಸಾಗರ: ಇನ್ನು ಎಂಟು ದಿನದಲ್ಲಿ ಶಿವಪ್ಪನಾಯಕ ವೃತ್ತದಿಂದ ದುರ್ಗಾಂಬಾ ವೃತ್ತದವರೆಗೆ ರಸ್ತೆ ಡಾಂಬರೀಕರಣ ಮಾಡದೆ ಇದ್ದಲ್ಲಿ ಸಾಗರ ಬಂದ್‌ಗೆ ಕರೆ ನೀಡಲಾಗುವುದು ಎಂದು ಸೊರಬ ರಸ್ತೆ ವರ್ತಕರ ಸಂಘದ ಮುಖಂಡ ಯು.ಜೆ.ಮಲ್ಲಿಕಾರ್ಜುನ ಎಚ್ಚರಿಸಿದರು.

ಇಲ್ಲಿನ ಶಿವಪ್ಪನಾಯಕ ವೃತ್ತದಿಂದ ದುರ್ಗಾಂಬಾ ವೃತ್ತದವರೆಗೆ ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿ ಮಂಗಳವಾರ ಈ ಭಾಗದ ನಿವಾಸಿಗಳು ನಡೆಸಿದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕಳೆದ ಮೂರು ವರ್ಷಗಳಿಂದ ಒಳಚರಂಡಿ ಕಾಮಗಾರಿ ಹೆಸರಿನಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಇದರಿಂದ ಈ ಭಾಗದ ನೂರಾರು ಅಂಗಡಿಗಳು, ವಾಸದ ಮನೆಗಳು ದೂಳಿನಿಂದ ಮುಚ್ಚಿ ತುಂಬಿವೆ. ಜನರು ಅಸ್ತಮಾ, ಅಲರ್ಜಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಡಾಂಬರೀಕರಣಕ್ಕೆ ಹಲವು ಬಾರಿ ಮನವಿ ಮಾಡಿದರೂ  ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವ ಕಾಗೋಡು ತಿಮ್ಮಪ್ಪ ಅವರು ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಬಂದರೆ ಜನರ ಸಮಸ್ಯೆ ತಿಳಿಯುತ್ತದೆ. ಆರೋಗ್ಯಪೂರ್ಣವಾಗಿ ಬದುಕಲು ಅವಕಾಶ ನೀಡಿ ಎಂದು ರಸ್ತೆಗಿಳಿದು ಪ್ರತಿಭಟನೆ ಮಾಡುವ ಸ್ಥಿತಿಯನ್ನು ಸ್ಥಳೀಯ ಆಡಳಿತ ನಿರ್ಮಾಣ ಮಾಡಿರುವುದು ದುರಂತ. ಮುಂದಿನ 8 ದಿನದಲ್ಲಿ ರಸ್ತೆ ಡಾಂಬರೀಕರಣ ಮಾಡದೆ ಇದ್ದಲ್ಲಿ ಸಾಗರ ಬಂದ್ ಮಾಡುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ನಗರವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರ ಅವೈಜ್ಞಾನಿಕತೆಯಿಂದ ನಗರದ ಬಹುತೇಕ ರಸ್ತೆಗಳು ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿಯ ಪರಮಾಪ್ತರೊಬ್ಬರು ರಾಜ್ಯದಲ್ಲಿ ಒಳಚರಂಡಿ ಕಾಮಗಾರಿಗಳ ಗುತ್ತಿಗೆ ಹಿಡಿದಿದ್ದು, ಶಿವಮೊಗ್ಗ, ಶಿಕಾರಿಪುರದಲ್ಲೂ ಯುಜಿಡಿ ಕಾಮಗಾರಿ ಸ್ಥಿತಿ ಇದೇ ಆಗಿದೆ. ಗುತ್ತಿಗೆದಾರ ಯಾರು ಎನ್ನುವುದು ಸಹ ಸ್ಥಳೀಯ ಆಡಳಿತಕ್ಕೆ ಗೊತ್ತಿಲ್ಲ ಸಬ್ ಕಂಟ್ರಾಕ್ಟ್ ನೀಡಿ ಕೆಲಸ ಮಾಡಿಸಲಾಗುತ್ತಿದೆ. ಇದು ಕಾಮಗಾರಿ ವಿಳಂಬ ಹಾಗೂ ಕಳಪೆ ಆಗಲು ಕಾರಣವಾಗಿದೆ ಎಂದು ದೂರಿದರು.

ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಮಾತನಾಡಿ, ‘ಪ್ರತಿಸಾರಿ ನಗರಸಭೆ ಸಾಮಾನ್ಯಸಭೆಯಲ್ಲಿ ಸೊರಬ ರಸ್ತೆ ಡಾಂಬರೀಕಣದ ಬಗ್ಗೆ ಆಡಳಿತ ನಡೆಸುವವರ ಗಮನಕ್ಕೆ ತರಲಾಗುತ್ತಿದೆ. ಆದರೆ, ನಮ್ಮ ಮಾತಿಗೆ ಕಾಂಗ್ರೆಸ್ ಆಡಳಿತ ಗಮನ ಕೊಡುತ್ತಿಲ್ಲ. ಬಹುಮತ ಇದೆ ಎನ್ನುವ ಸೊಕ್ಕಿನಲ್ಲಿ ಜನವಿರೋಧಿ ಆಡಳಿತ ನಡೆಸಲಾಗುತ್ತಿದೆ. ಇದರಿಂದ ಸೊರಬ ರಸ್ತೆಯ ಜನರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರುವಂತಾಗಿದೆ’ ಎಂದು ದೂರಿದರು.

ಪೌರಾಯುಕ್ತರ ಭೇಟಿ: ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್ ಬಂದು, ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.
‘ರಸ್ತೆ ಡಾಂಬರೀಕರಣದ ಬಗ್ಗೆ ಆಡಳಿತ ಅಗತ್ಯ ಗಮನ ಹರಿಸಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆ. ಅವರಿಗೆ ರಸ್ತೆ ಡಾಂಬರೀಕಣಕ್ಕೆ ಸಂಬಂಧಪಟ್ಟಂತೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅರವಿಂದ ರಾಯ್ಕರ್, ಪ್ರಮುಖರಾದ ಐ.ವಿ.ಹೆಗಡೆ, ಪ್ರವೀಣ ಬಣಕಾರ್, ವೈ.ವಿ.ಗೋಪಾಲಕೃಷ್ಣ, ಲಕ್ಷ್ಮಣ ಮಾಗಡಿ, ಅಕ್ಕಿ ಆನಂದ್, ವಿ.ಶಂಕರ್, ಬಾಬಣ್ಣ, ವಿ.ಮಹೇಶ್, ಎಸ್.ವಿ.ಕೃಷ್ಣಮೂರ್ತಿ, ಸತೀಶಬಾಬು, ಲಕ್ಷ್ಮಣರಾವ್ ಬಾಪಟ್ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT