ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಬಾರಿಯ ಚಾಂಪಿಯನ್ನರಿಗೇ ಮತ್ತೆ ಪಟ್ಟ

‘ಪ್ರಜಾವಾಣಿ’ ಕ್ವಿಜ್‌: ಪ್ರತಿ ಪ್ರಶ್ನೆಗೂ ಥಟ್ಟಂತ ಉತ್ತರ ನೀಡಿದ ವಿದ್ಯಾರ್ಥಿಗಳು, ಪ್ರೇಕ್ಷಕರ ಸಾಲಲ್ಲೂ ವೇಗದ ಉತ್ತರ
Last Updated 18 ಜನವರಿ 2017, 5:30 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯ (ಬಿ) ತಂಡ ಈ ಬಾರಿಯ  ವಲಯಮಟ್ಟದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನಲ್ಲಿ ‘ಪಾಯಿಂಟ್‌ಗಳ ಶತಕ’ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕೊನೆಯ ಮೂರು ಸುತ್ತು ಗಳಲ್ಲಂತೂ ಅಮೋಘ ಪ್ರದರ್ಶನ ನೀಡಿದ ಈ ತಂಡದ ಹೇಮಂತ್‌ ಕೆ.ಪಿ. ನವೀನ್‌ ಎಂ.ಪಾಟೀಲ್‌ ಶಿವಮೊಗ್ಗ ವಲಯದ ಚಾಂಪಿಯನ್‌ ಎನಿಸಿಕೊಂಡರು.

ಕಳೆದ ವರ್ಷ ನಡೆದ ದಾವಣಗೆರೆ ವಲಯಮಟ್ಟದ ಚಾಂಪಿಯನ್‌ಷಿಪ್‌ ನಲ್ಲೂ ಇದೇ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು. ಬೆಂಗಳೂರಿನಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಮಾಡಿಕೊಂಡ ಸಣ್ಣ ತಪ್ಪಿನ ಕಾರಣ ಮೂರನೇ ಸ್ಥಾನ ಪಡೆದಿತ್ತು.

ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ನಡೆದ ಕ್ವಿಜ್‌ ಚಾಂಪಿ ಯನ್‌ಷಿಪ್‌ನಲ್ಲಿ ರಾಮಕೃಷ್ಣ ವಿದ್ಯಾಲಯ ತಂಡ ಬರೋಬರಿ 100 ಅಂಕ ಗಳಿಸಿ ಸುಲಭವಾಗಿಯೇ ಮೊದಲ ಸ್ಥಾನ ಗಳಿಸಿತು.

ಮಂಗಳೂರು ವಲಯಮಟ್ಟದಲ್ಲಿ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳು 90 ಅಂಕ ಗಳಿಸಿದ್ದು, ಈ ಬಾರಿ ಇದು ವರೆಗಿನ ಅತ್ಯಧಿಕ ಅಂಕ ಗಳಿಕೆಯಾಗಿತ್ತು.
ಶಿವಮೊಗ್ಗದ ಗೋಪಾಳದ ಶ್ರೀರಾಮಕೃಷ್ಣ ವಿದ್ಯಾನಿಕೇತನ (50) ಎರಡನೇ ಸ್ಥಾನ ಪಡೆದರೆ, ಜಾವಳ್ಳಿಯ ಜ್ಞಾನದೀಪ ಶಾಲೆ (45) ಮೂರನೇ ಸ್ಥಾನ ಪಡೆಯಿತು.

ಇವೆರಡೂ ತಂಡಗಳು ಕ್ವಿಜ್‌ನ ಅಂತಿಮ ಸುತ್ತು ಮುಗಿದಾಗ ತಲಾ 45 ಅಂಕ ಗಳಿಸಿದ್ದವು. ಆದರೆ, ಟೈಬ್ರೇಕರ್‌ನಲ್ಲಿ ‘ಮೂಕಜ್ಜಿಯ ಕನಸುಗಳು’ ಕೃತಿ ಬರೆದವರು ಯಾರು? ಎಂಬ ಪ್ರಶ್ನೆಗೆ ‘ಶಿವರಾಮ ಕಾರಂತ’ ಎಂದು ತಕ್ಷಣವೇ ಸರಿಯಾದ ಉತ್ತರ ಹೇಳಿದ ರಾಮಕೃಷ್ಣ ವಿದ್ಯಾನಿಕೇತನ ಅಂತಿಮವಾಗಿ ಮೂರನೇ ಸ್ಥಾನ ಪಡೆಯಿತು.

ಹೊಸನಗರದ ರಾಮಕೃಷ್ಣ ವಿದ್ಯಾಲಯ (ಎ) ತಂಡ ನಾಲ್ಕನೇ ಸ್ಥಾನ, ಹೊಸನಗರದ ಹೋಲಿ ರಿಡೀಮರ್‌ ಮತ್ತು ಶಿಕಾರಿಪುರದ ಕುಮದ್ವತಿ ಪ್ರೌಢಶಾಲೆಗಳ ತಂಡ ತಲಾ 10 ಅಂಕ ಗಳಿಸಿ ಜಂಟಿಯಾಗಿ ಐದನೇ ಸ್ಥಾನ ಪಡೆದವು.

ಮೊದಲ ಬಹುಮಾನ ಪಡೆದ ತಂಡಕ್ಕೆ ₹ 6 ಸಾವಿರ, ಎರಡನೇ ಸ್ಥಾನ ಪಡೆದ ತಂಡಕ್ಕೆ ₹ 4 ಸಾವಿರ ಮತ್ತು ಮೂರನೇ ಸ್ಥಾನ ಪಡೆದ ತಂಡಕ್ಕೆ ₹  2 ಸಾವಿರ ನಗದು ಬಹುಮಾನ, ಟ್ರೋಫಿ ನೀಡಿ ಗೌರವಿಸಲಾಯಿತು.

250 ತಂಡಗಳು ಭಾಗಿ: ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕು, ನೆರೆಯ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕೆಲವು ತಂಡಗಳು ಸೇರಿದಂತೆ ಸುಮಾರು 250 ತಂಡಗಳು ಪೂರ್ವಭಾವಿ ಸುತ್ತಿನಲ್ಲಿ ಭಾಗವಹಿಸಿದ್ದವು.

ಮೊದಲ ಆರು ಸ್ಥಾನ ಗಳಿಸಿದ ಮೇಲ್ಕಂಡ ತಂಡಗಳು ವೇದಿಕೆಯಲ್ಲಿ ಅಂತಿಮ ಸುತ್ತಿನ ಹಣಾಹಣಿ ನಡೆಸಿ ದವು. ಪೂರ್ವಭಾವಿ ಸುತ್ತಿನ ಕೊನೆಯ ಪ್ರಶ್ನೆ –ಕುಪ್ಪಳಿಯ ‘ಕವಿಶೈಲ’ದ ಚಿತ್ರ ತೋರಿಸಿ ಇದು ಯಾವ ಕವಿಗೆ ಸಂಬಂಧಿಸಿದ್ದು ಎಂದು ಕೇಳಲಾಗಿತ್ತು. ಇದಕ್ಕೆ ಬಹುತೇಕ ವಿದ್ಯಾರ್ಥಿಗಳು ಸರಿಯಾಗಿ ಉತ್ತರಿಸಿದ್ದರು.

ಮೊದಲ ಸುತ್ತಿನಲ್ಲಿ ಕೇಳಿದ ಪ್ರಶ್ನೆಗಳು ಆಸಕ್ತಿ ಕೆರಳಿಸಿದವು– ಗಿನ್ನೆಸ್‌ ದಾಖಲೆ ಪುಸ್ತಕದಲ್ಲಿ ‘ಸ್ಕೋವಿಲ್‌ ಸ್ಕೇಲ್‌’ನಲ್ಲಿ ಅತ್ಯಂತ ಖಾರ ಎಂದು ದಾಖಲಾದ ಮೆಣಸು ಯಾವುದು ಎಂಬ ಪ್ರಶ್ನೆಗೆ ವೇದಿಕೆಯಲ್ಲಿದ್ದ ಸ್ಪರ್ಧಿಗಳಿಂದ ‘ಬ್ಯಾಡಗಿ’, ‘ಗುಂಟೂರು’ ಇತ್ಯಾದಿ ಹೆಸರುಗಳು ಕೇಳಿಬಂದವು. ಆದರೆ, ಪ್ರೇಕ್ಷಕರ ಪಾಲಿಗೆ ಹೋದ ಈ ಪ್ರಶ್ನೆಯ ಸರಿಯುತ್ತರ– ಬೂಟ್‌ ಜಲೋಕಿಯಾ  ಎಂಬುದಾಗಿತ್ತು.

ವಿಷಯಕ್ಕೆ ಸಂಬಂಧಿಸಿದ ಕ್ರೀಡೆ ಕುರಿತ ಪ್ರಶ್ನೆ ಹೀಗಿತ್ತು– ಗಾವಸ್ಕರ್‌ಗೆ ಮಗ ಹುಟ್ಟಿದಾಗ ತಮ್ಮಿಷ್ಟದ ಮೂವರು ಪ್ರಸಿದ್ಧ ಕ್ರಿಕೆಟಿಗರ ಹೆಸರು ಸೇರಿಸಿ ರೋಹನ್‌ ಜೈವಿಶ್ವ ಗವಾಸ್ಕರ್‌ ಎಂದು ಹೆಸರು ಆಯ್ದುಕೊಂಡರು. ಇವರಲ್ಲಿ ರೋಹನ್‌ ಕನಾಯ್‌, ಎಂ.ಆರ್‌. ಜೈಸಿಂಹ ಅವರ ಜೊತೆಗೆ ಭದ್ರಾವತಿಯಲ್ಲಿ ಜನಿಸಿದ ಆಟಗಾರರೊಬ್ಬರ ಹೆಸರಿನಿಂದ ವಿಶ್ವ ಎಂದು ತೆಗೆದುಕೊಳ್ಳಲಾಗಿದೆ. ಈ ಆಟ ಗಾರ ಯಾರು? ಜಿ.ಆರ್‌.ವಿಶ್ವನಾಥ್‌ ಎಂದು ಉತ್ತರ ನೀಡಿದವರು ರಾಮಕೃಷ್ಣ ವಿದ್ಯಾಲಯ ‘ಬಿ’ ತಂಡದವರೇ. ಈ ಉತ್ತರಕ್ಕೆ ಚಪ್ಪಾಳೆಯ ಸುರಿಮಳೆ ಯಾಯಿತು.

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಇನ್ನೊಂದು ಪ್ರಶ್ನೆಯನ್ನೂ ಕೇಳ ಲಾಯಿತು– ಈ ಬೆಳೆಯನ್ನು ಅನೇಕ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಬಳಸುತ್ತಾರೆ. ದೇಶದಲ್ಲಿ ಕರ್ನಾಟಕ ಈ ಬೆಳೆಯನ್ನು ಅತಿ ಹೆಚ್ಚು ಬೆಳೆಯುತ್ತದೆ. ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಅದರ ದೊಡ್ಡ ಉತ್ಪಾದಕ ಜಿಲ್ಲೆಯಾಗಿದೆ. ಆ ಬೆಳೆ ಯಾವುದು ಎಂಬ ಪ್ರಶ್ನೆಗೆ ‘ಎ’ ತಂಡದಿಂದ ಅಡಿಕೆ ಎಂಬ ಸರಿಯುತ್ತರ ಬಂತು.

ಸುಳಿವು ಸುತ್ತಿನ ಒಂದು ಪ್ರಶ್ನೆಗೆ ಮೊದಲ ಸುಳಿವು–  ಶಿವಮೊಗ್ಗದಲ್ಲಿ 1973ರಲ್ಲಿ ಹುಟ್ಟಿದ ಈ ನಟ ‘ತಾಯವ್ವ’ ಚಲನಚಿತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿದರು. ಇವರು ಯಾರು ಎಂದು ಕೇಳುತ್ತಿದ್ದಂತೆ ಕಿಚ್ಚ ಸುದೀಪ್‌ ಎಂದು ರಾಮಕೃಷ್ಣ ವಿದ್ಯಾಲಯದವರು ಥಟ್ಟನೇ ಹೇಳಿದರು.

ಈ ಗಾಯಕ 1922ರಲ್ಲಿ ರೋಣ ದಲ್ಲಿ ಹುಟ್ಟಿದ್ದ. ಅಗಸರ ಚನ್ನಪ್ಪ ಎಂಬವರ ಬಳಿ ಸಂಗೀತ ಪಾಠ ಕಲಿತ ನಂತರ ಶಾಮಾಚಾರ್ಯ ಜೋಶಿ ಅವರ ಬಳಿ ಶಿಕ್ಷಣ ಮುಂದುವರಿಸಿದರು. ಅಂತಿಮವಾಗಿ ಸವಾಯಿ ಗಂಧರ್ವ ಅವರ ಬಳಿ ಐದು ವರ್ಷ  ಸಂಗೀತ ಕಲಿಕೆ ಪೂರೈಸಿದರು. ಇವರು ಯಾರು? ಎಂಬ ಪ್ರಶ್ನೆಗೂ ಈ ತಂಡದವರೇ ‘ಭೀಮಸೇನ ಜೋಶಿ’ ಎಂದು ಸರಿ ಉತ್ತರ ನೀಡಿದರು.

‘ಭಾರತದ ರಾಷ್ಟ್ರೀಯ ಪಕ್ಷಿಯನ್ನಾಗಿಸಲು ಪಕ್ಷಿತಜ್ಞ ಡಾ.ಸಲೀಂ ಅಲಿ ಒಂದು ಪಕ್ಷಿಯ ಹೆಸರು ಶಿಫಾರಸು ಮಾಡಿದ್ದರು. ಆದರೆ, ಅಂತಿಮವಾಗಿ ನವಿಲು ರಾಷ್ಟ್ರ ಪಕ್ಷಿಯಾಯಿತು. ಶಿಫಾರಸು ಮಾಡಿದ ಈ ಚಿತ್ರದಲ್ಲಿರುವ ಪಕ್ಷಿ ಯಾವುದಾಗಿತ್ತು’ ಎಂಬ ಪ್ರಶ್ನೆ ವೇದಿಕೆಯಿಂದ ಕೊನೆಗೆ ಪ್ರೇಕ್ಷಕರತ್ತ ‘ಪಾಸ್‌’ ಆಯಿತು. ಅಲ್ಲಿಂದ ಸರಿ ಯುತ್ತರ– ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌– ಮೂಡಿಬಂತು.

ಬೆಂಗಳೂರಿನ ರಾಘವ್‌ ಚಕ್ರವರ್ತಿ ಮತ್ತು ಅರವಿಂದ್‌ ಶ್ರೀನಿವಾಸ್‌ ಕ್ವಿಜ್‌ ಕಾರ್ಯಕ್ರಮ ನಡೆಸಿಕೊಟ್ಟರು. ಉಪ ವಿಭಾಗಾಧಿಕಾರಿ ಎಚ್‌.ಕೆ.ಕೃಷ್ಣಮೂರ್ತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್‌.ಮಚಾದೊ ಅತಿಥಿಗಳಾಗಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಆರಂಭದಲ್ಲಿ ಕ್ವಿಜ್‌ ಮಾಸ್ಟರ್‌ ಕೇಳಿದ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಹೇಳಿದ ಇಬ್ಬರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯಿಂದ ಕ್ವಿಜ್‌ ಚಾಂಪಿ ಯನ್‌ಷಿಪ್‌ ಉದ್ಘಾಟಿಸಲಾಯಿತು. ಪ್ರಸರಣ ವಿಭಾಗದ ಎಜಿಎಂ ಬಿ.ಎ. ರವಿ, ಹುಬ್ಬಳ್ಳಿ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಶಿವರಾಜ್‌ ನರೋಣ,  ದಾವಣಗೆರೆ ಬ್ಯುರೊ ಮುಖ್ಯಸ್ಥ ನಾಗೇಶ್‌ ಪಿ. ಶೆಣೈ, ಪ್ರಸರಣ ವಿಭಾಗದ ವೈ.ವಿ.ಪೂರ್ಣಪ್ರಸಾದ್‌, ಕಾರ್ಯ ನಿರ್ವಾಹಕ ನಂದಗೋಪಾಲ್‌, ನರಸಿಂಹ ಮೂರ್ತಿ ಉಪಸ್ಥಿತರಿದ್ದರು. ದೀಕ್ಷಾ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.

ವಲಯ ಮಟ್ಟದ ಸ್ಪರ್ಧೆಗೆ ದಾವಣಗೆರೆಯ ಸರ್‌ ಎಂ.ವಿ. ಪದವಿ ಪೂರ್ವ ಕಾಲೇಜು ಸಹ ಪ್ರಾಯೋಜಕತ್ವ ವಹಿಸಿತ್ತು. ಸಂಸ್ಥೆಯ ಕಾರ್ಯದರ್ಶಿ ಶ್ರೀಧರ್, ಪ್ರಾಂಶುಪಾಲ ರಾಜೇಂದ್ರ ನಾಯ್ಡು ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಮಾಡಿದರು.

ವಿಜೃಂಭಿಸಿದ ರಾಮಕೃಷ್ಣ ವಿದ್ಯಾಲಯದ ಮಕ್ಕಳು
ಮೊದಲ ಎರಡು ಸುತ್ತುಗಳ ನಂತರ ಜಾವಳ್ಳಿಯ ಜ್ಞಾನದೀಪ ಶಾಲೆ ಮತ್ತು ರಾಮಕೃಷ್ಣ ವಿದ್ಯಾಲಯ ತಲಾ 30 ಅಂಕಗಳೊಂದಿಗೆ ಸಮಬಲ ಮಾಡಿ ಕೊಂಡಿದ್ದವು. ಆದರೆ, ಸಂಪರ್ಕ ಸುತ್ತು, ಸುಳಿವು ಸುತ್ತು ಮತ್ತು ಬಝರ್‌ ಸುತ್ತಿನಲ್ಲಿ ರಾಮಕೃಷ್ಣ ವಿದ್ಯಾಲಯದ ಹೇಮಂತ್‌ ಕೆ.ಪಿ. ಮತ್ತು ನವೀನ್‌ ಎಂ.ಪಾಟೀಲ್‌ ಒಟ್ಟು 70 ಪಾಯಿಂಟ್‌ ಬಾಚಿಕೊಂಡರು.

ಈ ತಂಡದ ಮೇಲುಗೈ ಎಷ್ಟಿತ್ತೆಂದರೆ ಕನೆಕ್ಟಿಂಗ್‌ ಸುತ್ತಿನ ಆರರಲ್ಲಿ ಐದು ಪ್ರಶ್ನೆಗಳಿಗೆ ಸರಿಯಾದ ಉತ್ತರ ಹೇಳಿದ್ದರು. ಕೊನೆಯ ಹಂತದಲ್ಲಿ ಒಂದು ಪ್ರಶ್ನೆಗೆ ಮಾತ್ರ ಅವರು ಎಡವಿದರು. ‘ಎಲ್ಯೂಸಿವ್‌ ಕೊರಕಾನ’ ಎಂಬುದು ಕರ್ನಾಟಕದ ಮುಖ್ಯ ಆಹಾರ ಪದಾರ್ಥ. ದೇಶದಲ್ಲಿ ಈ ಬೆಳೆಯ ಶೇ 58ರಷ್ಟು ಉತ್ಪನ್ನ ವನ್ನು ಕರ್ನಾಟಕವೇ ಬೆಳೆಯುವ ಮುಂಚೂಣಿ ರಾಜ್ಯವಾಗಿದೆ. ಈ ಬೆಳೆ ಯಾವುದು? ಎಂಬ ಪ್ರಶ್ನೆಗೆ ‘ಜೋಳ’ ಎಂದು ಉತ್ತರಿಸಿದರು. ಆದರೆ ‘ರಾಗಿ’ ಎಂದು ಕಿದ್ವಾಯಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಫೈಜಾ ತಬಸ್ಸುಮ್‌ ಉತ್ತರ ನೀಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT