ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯೇತರ ಚಟುವಟಿಕೆಯಲ್ಲೂ ಮುಂದು

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಸ್ತಾಪುರ ಸರ್ಕಾರಿ ಪ್ರೌಢಶಾಲೆ ಮಕ್ಕಳ ಸಾಧನೆ
Last Updated 18 ಜನವರಿ 2017, 5:54 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಸಸ್ತಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳದ್ದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎತ್ತಿದ ಕೈಯಾಗಿದೆ. ಇಲ್ಲಿ ನಡೆಯುವ ಇಂಥ ಪ್ರತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ.

ಪ್ರತಿ ರಾಷ್ಟ್ರೀಯ ಹಬ್ಬ, ಶಾಲಾ ಆರಂಭೋತ್ಸವ, ಮಹಾತ್ಮರ ಜಯಂತಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ, ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ಇತರೆ ಸಮಾರಂಭಗಳಲ್ಲಿ ಸಾಂಸ್ಕೃತಿಕ ಚಟುವಟಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಈ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಹುಟ್ಟುವಂತಾಗಿದೆ ಎಂದು ಮುಖ್ಯ ಶಿಕ್ಷಕ ಪಂಚಾಕ್ಷರಿ ಹಿರೇಮಠ ಹೇಳುತ್ತಾರೆ.

ಶಾಲೆ 2001ರಲ್ಲಿ ಆರಂಭವಾಗಿದೆ. ಅಂದಿನಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ. ಒಂದು ಸಲ ಶೇ 90ರಷ್ಟು ಫಲಿತಾಂಶವೂ ಬಂದಿತ್ತು. ಆದರೆ, ಕಳೆದ ಸಾಲಿನಲ್ಲಿ ಫಲಿತಾಂಶ ಕಡಿಮೆ ಆಗಿದ್ದರಿಂದ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಪ್ರತಿದಿನ ಮತ್ತು ಶನಿವಾರದಂದು ವಿಶೇಷ ತರಗತಿ ನಡೆಸಲಾಗುತ್ತಿದೆ. ಫೋನ್ ಮೂಲಕ ಪಾಲಕರಿಗೆ ಸಂಪರ್ಕಿಸಿ ಮಕ್ಕಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ವಿಜ್ಞಾನ ಪ್ರಯೋಗಾಲಯಕ್ಕೆ ಪ್ರತ್ಯೇಕ ವ್ಯವಸ್ಥೆಯಿದೆ. ಪ್ರತಿ ಶನಿವಾರ ವಿಶೇಷ ಪ್ರಯೋಗಗಳನ್ನು ಆಯೋಜಿಸಲಾಗುತ್ತದೆ. ವಿಜ್ಞಾನದ ಪ್ರಯೋಗಗಳ ಮತ್ತು ಗಣಿತದ ರೇಖಾಚಿತ್ರ ಇತ್ಯಾದಿಗಳ ರಂಗೋಲಿ ಚಿತ್ರ ಬಿಡಿಸುವ ಸ್ಪರ್ಧೆ ಕೂಡ ನಡೆಸಲಾಗಿದೆ ಎಂದು ವಿಜ್ಞಾನ ಶಿಕ್ಷಕ ಅನಿಲ ಚವಾಣ ಹೇಳಿದ್ದಾರೆ.

ಚಿತ್ರಕಲೆಯಲ್ಲಿ ಸ್ಪರ್ಧೆಯಲ್ಲಿ ಸ್ವಚ್ಛತೆಯ ಬಗ್ಗೆ ಚಿತ್ರ ಬಿಡಿಸಿದ ವಿದ್ಯಾರ್ಥಿ ಆದಿತ್ಯ ಭೀಮ ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾವಗೀತೆ ಹಾಡುಗಾರಿಕೆಯಲ್ಲಿ ಮೀನಾಕ್ಷಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಳು. ವೇಷಭೂಷಣದಲ್ಲಿ ಸುಮಲತಾ, ರೇಣುಕಾ ಪ್ರಭು, ಜನಪದ ಗೀತ ಗಾಯನದಲ್ಲಿ ಭಾಗ್ಯಶ್ರೀ, ಹಾಗೂ ಇತರೆ ಚಟುವಟಿಕೆಗಳಲ್ಲಿ ಪೂಜಾ, ಸೋನಮ್ಮ, ನೇಹಾ ತಾಲ್ಲೂಕು ಮಟ್ಟದಲ್ಲಿ ಪಾಲ್ಗೊಂಡಿದ್ದರು ಎಂದು ಚಿತ್ರಕಲಾ ಶಿಕ್ಷಕ ವೀರೇಶ ಹೆಗ್ಗೆ ಮತ್ತು ಶೋಭಾ ಹಿರೇಮಠ ಅವರು ತಿಳಿಸಿದರು.

ಕಬಡ್ಡಿ ಮತ್ತು ಕೊಕ್ಕೊದಲ್ಲಿ ಇಲ್ಲಿನ ತಂಡ ತಾಲ್ಲೂಕು ಮಟ್ಟಕ್ಕೆ ಆಯ್ಕೆಗೊಂಡಿತ್ತು. ವಾಲಿಬಾಲ್ ಆಟದಲ್ಲಿಯೂ ಮಕ್ಕಳು ವಿಶೇಷ ಆಸಕ್ತಿ ಹೊಂದಿದ್ದಾರೆ. ಆಟದ ಸಾಮಗ್ರಿಗಳಿಗಾಗಿ, ಗ್ರಂಥಾಲಯ, ಹಾಗೂ ಏಜ್ಯುಸ್ಯಾಟ್ ದೂರಶಿಕ್ಷಣ ವ್ಯವಸ್ಥೆಗಾಗಿ ಪ್ರತ್ಯೇಕ ಕೋಣೆಗಳಿವೆ. ಆಟಕ್ಕಾಗಿ ಶಾಲೆ  ಎದುರು ವಿಶಾಲವಾದ ಮೈದಾನವಿದೆ. ತರಗತಿಗಳಿಗಾಗಿಯೂ ನಾಲ್ಕು ಉತ್ತಮ ಕೋಣೆಗಳಿವೆ. ಕುಡಿಯುವ ನೀರಿಗಾಗಿ ಕೊಳವೆಬಾವಿ, ನಳದ ವ್ಯವಸ್ಥೆಯಿದೆ ಎಂದು ಶಿಕ್ಷಕರಾದ ಸಂಬಣ್ಣ, ಪ್ರಕಾಶ ವಾಡೇಕರ್ ಹೇಳಿದ್ದಾರೆ.

ಕಂಪ್ಯೂಟರ್ ವ್ಯವಸ್ಥೆ ಇದ್ದರೂ ಶಿಕ್ಷಕರಿಲ್ಲದೆ ಅನೇಕ ವರ್ಷಗಳಿಂದ ಕಂಪ್ಯೂಟರ್ ಕೋಣೆ ಮುಚ್ಚಿಯೇ ಇದೆ. ಆದ್ದರಿಂದ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ದೊರಕದಂತಾಗಿದ್ದು ಶೀಘ್ರದಲ್ಲಿ ಇದಕ್ಕಾಗಿ ವ್ಯವಸ್ಥೆ ಕಲ್ಪಿಸಬೇಕು ಎಂದು ಪಾಲಕರಾದ ಶಿವಲಿಂಗಪ್ಪ
ಆಗ್ರಹಿಸಿದ್ದಾರೆ.

ದೈಹಿಕ ಶಿಕ್ಷಕರಿಗೆ ಬೇರೆಡೆ ನಿಯೋಜನೆ ಮೇರೆಗೆ ಕಳುಹಿಸಲಾಗಿದ್ದು ಅವರನ್ನು ಇಲ್ಲಿಗೆ ಕರೆಸಿಕೊಳ್ಳಬೇಕು. ಶಾಲೆ ಸುತ್ತಲಿನಲ್ಲಿ ಆವರಣಗೋಡೆ ಇಲ್ಲ. ಈ ಕಾರಣ ಹಂದಿ, ನಾಯಿ ಎಲ್ಲೆಂದರಲ್ಲಿ ಓಡಾಡುತ್ತವೆ.

ಸಸಿಗಳನ್ನು ನೆಟ್ಟಾಗ ಜಾನುವಾರು ಅವುಗಳನ್ನು ತಿನ್ನುತ್ತಿವೆ. ಆದ್ದರಿಂದ ಸಂಬಂಧಿತರು ಆವರಣಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಗ್ರಾಮಸ್ಥರಾದ ಗುಂಡಪ್ಪ, ಸುಗಲಮ್ಮ ಒತ್ತಾಯಿಸಿದ್ದಾರೆ.

*

ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ವಿಷಯವಾರು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿ ನಡೆಸುತ್ತೇವೆ.
–ಪಂಚಾಕ್ಷರಿ ಹಿರೇಮಠ, ಮುಖ್ಯಶಿಕ್ಷಕ
     

*

–ಮಾಣಿಕ ಆರ್.ಭುರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT