ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೌಲ್ಯಯುತ ಜೀವನಕ್ಕೆ ವಚನಗಳು ಅಗತ್ಯ’

Last Updated 18 ಜನವರಿ 2017, 6:00 IST
ಅಕ್ಷರ ಗಾತ್ರ

ಕಮಲನಗರ:  12ನೇ ಶತಮಾನದ ಶರಣರು ನೀಡಿದ ವಚನಗಳ ಸಾರವನ್ನು ಅರಿತು ಜೀವನ ನಡೆಸಿದರೆ, ಪ್ರತಿಯೊಬ್ಬರ ಜೀವನ ಅರ್ಥಪೂರ್ಣ ಹಾಗೂ ಮೌಲ್ಯಯುತವಾಗಿ ರೂಪುಗೊಳ್ಳುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಜಗನ್ನಾಥ ಮೂಲಗೆ ಹೇಳಿದರು.

ಸಮೀಪದ ಮುಧೋಳ್ (ಬಿ) ಗ್ರಾಮದಲ್ಲಿ ಈಚೆಗೆ ನಡೆದ 129ನೇ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನ ಸಾಹಿತ್ಯ ಪ್ರತಿಯೊಬ್ಬರಿಗೂ ಜೀವನದ ಮೌಲ್ಯಗಳನ್ನು ಕಟ್ಟಿಕೊಡುತ್ತದೆ. ಮಾನವನ ಸಹಜ ಆಸೆ, ಆಕಾಂಕ್ಷೆ, ಸ್ವಾರ್ಥ, ದುರಾಸೆ ಇಂತಹವುಗಳಿಂದ ಮುಕ್ತಿ ನೀಡಿ ಸನ್ಮಾರ್ಗದೆಡೆಗೆ ಕೊಂಡೊಯ್ಯುತ್ತದೆ. ನಡೆ ನುಡಿಗಳಲ್ಲಿ ಅಂತರವಿರದ ಶರಣರ ಜೀವನದ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಶರಣ ಮಾಧವರಾವ್‌ ಹುಲ್ಲಾಳೆ ಮಾತನಾಡಿ, ದೇವ ಮಾರ್ಗ, ಸತ್ಯ ಮಾರ್ಗವನ್ನು ಕಂಡುಕೊಳ್ಳಬೇಕಾದರೆ, ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮತ್ಸರ, ಲೋಭಗಳನ್ನು ತ್ಯಜಿಸಬೇಕು. ಆವಾಗ ಮಾತ್ರ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಪ್ರೊ.ಹಾವಗಿರಾವ ವಟಗೆ ಮಾತನಾಡಿ, ಶರಣ ಸಾಹಿತ್ಯ ಕುಲ, ಮತ ಭೇದವಿಲ್ಲದ, ದೇಶ, ಭಾಷೆಗಳ ಗಡಿಗಳಿಲ್ಲದ ವಿಶ್ವವ್ಯಾಪಿ ಸಾಹಿತ್ಯವಾಗಿದೆ. ಇಂತಹ ಸಾಹಿತ್ಯದ ಅಧ್ಯಯನದಿಂದ ಸಾಮಾಜಿಕ ಬದಲಾವಣೆ ತರಲು ಸಾಧ್ಯ ಎಂದರು.

ಮುಖಂಡ ಸೋಮನಾಥ ಖಡಕೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶರಣ ಕಾಶಿನಾಥ ಮುರ್ಗೆ ಜ್ಯೋತಿ ಬೆಳಗಿಸಿ, ಶರಣರು ಕಾಯಕವೇ ಕೈಲಾಸ ಎಂಬ ತತ್ವವನ್ನು ಪ್ರತಿಪಾದಿಸುತ್ತಾ, ಎಲ್ಲರೂ ಕಷ್ಟಪಟ್ಟು ದುಡಿಯುವ ಮನೋಸಂಕಲ್ಪಕ್ಕೆ ರೂಪು ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT