ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ನಿರುತ್ಸಾಹ: ಮತಗಟ್ಟೆ ಖಾಲಿ...ಖಾಲಿ...

ಎಪಿಎಂಸಿ ಚುನಾವಣೆ: ಚನ್ನಪಟ್ಟಣದಲ್ಲಿ ಕನಿಷ್ಠ, ರಾಮನಗರದಲ್ಲಿ ಗರಿಷ್ಠ ಮತದಾನ
Last Updated 18 ಜನವರಿ 2017, 6:13 IST
ಅಕ್ಷರ ಗಾತ್ರ

ರಾಮನಗರ: ‌‌ಜಿಲ್ಲೆಯ ಮೂರು ಎಪಿಎಂಸಿಗಳ ಒಟ್ಟು 29 ಸ್ಥಾನಗಳಿಗೆ ಮಂಗಳವಾರ ನಡೆದ ಮತದಾನಕ್ಕೆ ರೈತ ಸಮುದಾಯದಿಂದ ನಿರುತ್ಸಾಹ ವ್ಯಕ್ತವಾಯಿತು. ಒಟ್ಟಾರೆ ಶೇ 37.14 ರಷ್ಟು ಮತದಾನವಾಗಿದೆ ಎಂದು ಅಂದಾಜಿಸಲಾಗಿದ್ದು, ಅರ್ಧಕ್ಕೂ ಹೆಚ್ಚು ಮತದಾರರು ಮತಗಟ್ಟೆಯಿಂದ ದೂರವೇ ಉಳಿದರು.

ರಾಮನಗರ ತಾಲ್ಲೂಕಿನಾದ್ಯಂತ ಶೇ 42.49 ಮತದಾನವಾಯಿತು. ಒಟ್ಟು 12,251 ಮತದಾರರಿದ್ದು, ಇವರ ಪೈಕಿ 5205 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದರು. ಮತ ಹಾಕುವಲ್ಲಿ ಪುರುಷರೇ ಮುಂದೆ ಇದ್ದು, ಶೇ 44.08 ಜನರು ವೋಟು ಒತ್ತಿದರು. ರಾಮನಗರ ಎಪಿಎಂಸಿ ಮತಗಟ್ಟೆಯಲ್ಲಿ ಗರಿಷ್ಠ ಅಂದರೆ ಶೇ 87.73ರಷ್ಟು ಮತದಾನವಾಯಿತು. ಇಲ್ಲಿ ಒಟ್ಟು 440 ಮತದಾರರ ಪೈಕಿ 386 ಮಂದಿ ಮತ ಹಾಕಿದರು.

ದೊಡ್ಡಮಣ್ಣುಗುಡ್ಡೆ ಮತಗಟ್ಟೆಯಲ್ಲಿ ಅತ್ಯಂತ ಕನಿಷ್ಠ ಅಂದರೆ ಶೇ 20.27ರಷ್ಟು ಮತದಾನವಾಯಿತು. ಇಲ್ಲಿ ಒಟ್ಟು 666 ಮತದಾರರು ಇದ್ದು, ಅವರ ಪೈಕಿ ಕೇವಲ 135 ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದರು. 

ಬೆಳಿಗ್ಗೆ 8ಕ್ಕೆ ಮತದಾನ ಪ್ರಕ್ರಿಯೆಯು ಆರಂಭಗೊಂಡಿತು. ಆದಾಗ್ಯೂ ಆರಂಭದಲ್ಲಿ ಮತದಾರರು ಮತಗಟ್ಟೆಗಳತ್ತ ಹೆಚ್ಚು ಸುಳಿಯಲಿಲ್ಲ.

ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಮತಗಟ್ಟೆಯಲ್ಲಿ ವರ್ತಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗಾಗಿ ನಡೆದ ಮತದಾನದಲ್ಲಿ ಒಟ್ಟು 440 ಮತದಾರರ ಪೈಕಿ ಬೆಳಿಗ್ಗೆ 11ರ ಸುಮಾರಿಗೆ 176 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಹನುಮಂತನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ, ಬಿಳಗುಂಬದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲೂ ಮಧ್ಯಾಹ್ನದವರೆಗೆ ಮತದಾರರು ವಿರಳವಾಗಿದ್ದರು. ಸಂಜೆ ಹೊತ್ತಿಗೆ ಹೆಚ್ಚಿನ ಮಂದಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.

ರಾಮನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 8 ಕ್ಷೇತ್ರಗಳಿದ್ದು, ಇದರಲ್ಲಿ 2 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆಗಿರಲಿಲ್ಲ. ಉಳಿದ 6 ಕ್ಷೇತ್ರಗಳ ಪೈಕಿ ಬಿಡದಿ, ಕೈಲಾಂಚ ಹಾಗೂ ಬಾನಂದೂರು ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಹೀಗಾಗಿ ಮಂಗಳವಾರ ತಾಲ್ಲೂಕಿನ ಕೂಟಗಲ್‌, ಬಿಳಗುಂಬ ಹಾಗೂ ವರ್ತಕರ ಕ್ಷೇತ್ರಗಳಿಗೆ ಮಾತ್ರ ಮತದಾನ ಪ್ರಕ್ರಿಯೆ ನಡೆಯಿತು.

ಪ್ರತಿ ಮತಗಟ್ಟೆಯ ಹೊರಗೆ ವಿವಿಧ ಪಕ್ಷಗಳ ಬೆಂಬಲಿಗರು ಮತದಾರರಿಗೆ ಕ್ರಮ ಸಂಖ್ಯೆಯ ಚೀಟಿ ಬರೆದುಕೊಟ್ಟು ಅಲ್ಲಿಯೂ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.

ಅಭ್ಯರ್ಥಿಗಳು ಎದುರು ಬಂದವರಿಗೆ ಕೈಮುಗಿದು ಮತಯಾಚನೆ ಮಾಡುತ್ತಿದ್ದ ದೃಶ್ಯವೂ ಕಂಡು ಬಂದಿತು. ರಾಮನಗರ ತಾಲ್ಲೂಕಿನಾದ್ಯಂತ 24 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

ಉಪ ವಿಭಾಗಾಧಿಕಾರಿ ರಾಜೇಂದ್ರಪ್ರಸಾದ್‌, ತಹಶೀಲ್ದಾರ್‌ ರಘುಮೂರ್ತಿ ಮತಗಟ್ಟೆಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಕಣದಲ್ಲಿದ್ದವರು: ರಾಮನಗರ ತಾಲ್ಲೂಕಿನ ಮೂರು ಕ್ಷೇತ್ರಗಳಿಂದ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಕೂಟಗಲ್ ಕ್ಷೇತ್ರದಿಂದ  ಎಂ.ಜಗದೀಶ್, ಪುಟ್ಟರಾಮಯ್ಯ, ಮಹದೇವಯ್ಯ ಹಾಗೂ ಬಿಳಗುಂಬ ಕ್ಷೇತ್ರದಿಂದ ವೆಂಕಟರಂಗಯ್ಯ, ವೆಂಕಟಾಚಾರ್, ಪುಟ್ಟಸ್ವಾಮಯ್ಯ ಸ್ಪರ್ಧೆಯಲ್ಲಿದ್ದಾರೆ. ವರ್ತಕರ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಿದ್ದು ಶಿವಕುಮಾರ್, ಕರಡೀಗೌಡ, ಅಕ್ಕುಲ್ಲಾ ಷರೀಫ್, ಸಯ್ಯದ್‌ ಮುತಾಹಿರ್ ಅವರು ಸ್ಪರ್ಧಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ವಾಹನದ ವ್ಯವಸ್ಥೆ!
ವಯಸ್ಸಾದ ವೃದ್ಧರು, ಅಂಗವಿಕಲರೂ ಮಂಗಳವಾರ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.ಓಡಾಡಲು ಆಗದವರಿಗೆ ಕೆಲ ಅಭ್ಯರ್ಥಿಗಳ ಕಡೆಯವರು ವಾಹನದ ವ್ಯವಸ್ಥೆಯನ್ನೂ ಮಾಡಿದ್ದರು. ಮನೆಗಳ ಬಳಿಗೆ ಹೋಗಿ ಕರೆತಂದು, ವಾಪಸ್‌ ಮನೆಗೆ ಬಿಟ್ಟರು. ಆಟೊಗಳು ಸಾಮಾನ್ಯವಾಗಿ ಸಂಚರಿಸಿದರೆ, ಕೆಲವು ದೊಡ್ಡ ಕಾರುಗಳೂ   ಮತದಾರರನ್ನು ಕೊಂಡೊಯ್ದವು.

ಮತಪೆಟ್ಟಿಗೆಯಲ್ಲಿ ಭದ್ರ
ಮತದಾನ ಪ್ರಕ್ರಿಯೆ ಮುಕ್ತಾಯದ ಬಳಿಕ ಚುನಾವಣಾ ಸಿಬ್ಬಂದಿಯು ಮತಪೆಟ್ಟಿಗೆಗಳೊಂದಿಗೆ ವಾಪಸ್‌ ಆಗಿ ಅವುಗಳನ್ನು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ವಹಿಸಿದ್ದರು. ಬಳಿಕ ಅವುಗಳನ್ನು ಭದ್ರತಾ ಕೊಠಡಿಯಲ್ಲಿ ಇಡಲಾಯಿತು. ಇವುಗಳ ಕಾವಲಿಗಾಗಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಬುಧವಾರ ಅಗತ್ಯ ಬಿದ್ದಲ್ಲಿ ಮರು ಮತದಾನವು ನಡೆಯಲಿದೆ. ಗುರುವಾರ ಬೆಳಿಗ್ಗೆ 8ರಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯವು ಆರಂಭಗೊಳ್ಳಲಿದೆ. ಮಧ್ಯಾಹ್ನ 12ರ ಸುಮಾರಿಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT