ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾನದ ಕೊಠಡಿಗೆ ನುಗ್ಗಿದ ಚಿರತೆ ಸೆರೆ

ಬಾಗಿಲು ಹಾಕಿ ಸಮಯಪ್ರಜ್ಞೆ ಮೆರೆದ ರೈತ ಕುಟುಂಬ, ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲು ಚಿಂತನೆ
Last Updated 18 ಜನವರಿ 2017, 6:20 IST
ಅಕ್ಷರ ಗಾತ್ರ

ಮಾಗಡಿ: ಕಾಡಿನಿಂದ ಆಹಾರ ಹುಡುಕಿ ಕೊಂಡು ನಾಡಿಗೆ ಬಂದ  5 ವರ್ಷದ ಗಂಡು ಚಿರತೆಯೊಂದು ರೈತನ ಸ್ನಾನದ ಕೊಠಡಿಯಲ್ಲಿ ಮಲಗಿದ್ದ  ಎರಡು ನಾಯಿಗಳಲ್ಲಿ  ಒಂದನ್ನು ತಿಂದು ಹಾಕಿದೆ. ರೈತನ ಸಕಾಲಿಕ ಎಚ್ಚರಿಕೆಯಿಂದ ಈ ಪ್ರಾಣಿ ಅರಣ್ಯ ಅಧಿಕಾರಿಗಳ ವಶವಾದ ಘಟನೆ ತಾಲ್ಲೂಕಿನ ಸಾವನದುರ್ಗ ಅರಣ್ಯದಂಚಿನ ಗುಡ್ಡಹಳ್ಳಿಯಲ್ಲಿ ನಡೆದಿದೆ.

ಮಂಗಳವಾರ ರಾತ್ರಿ 2.30ಕ್ಕೆ ನಾಯಿಯನ್ನು ತಿನ್ನಲು ಸಾವನದರ್ಗದ ಅರಣ್ಯದಿಂದ ಕಾಡಿನಂಚಿನಲ್ಲಿ ಇರುವ ಗುಡ್ಡಹಳ್ಳಿಗೆ ಬಂದ ಚಿರತೆಯೊಂದು ರೈತ ರಂಗಪ್ಪನ ಮಕ್ಕಳಾದ ಶಿವಣ್ಣ, ರಮೇಶ್‌ ಅವರ ಮನೆಯ ಸ್ನಾನದ ಕೊಠಡಿಗೆ ನುಗ್ಗಿತ್ತು. ಈ ಮನೆಯಲ್ಲಿ ಅಣ್ಣ ತಮ್ಮಂದಿರ ಕುಟುಂಬ ವಾಸವಾಗಿದೆ.

ಸ್ನಾನದ ಕೊಠಡಿಯ ಒಳಗೆ ಮಲಗಿದ್ದ ಎರಡು ನಾಯಿಗಳ ಮೇಲೆ ಚಿರತೆ ದಾಳಿ ಮಾಡಿದೆ. ಒಂದನ್ನು ಕೊಂದು ತಿಂದಿದೆ. ಸ್ನಾನದ ಕೊಠಡಿಯೊಳಗೆ ಇದ್ದ ಇನ್ನೊಂದು ನಾಯಿ ಜೀವ ಭಯದಿಂದ ಬೊಗಳಿದೆ. ಎಚ್ಚೆತ್ತ  ರೈತ ಮತ್ತು ಆತನ ಮಕ್ಕಳು ಸ್ನಾನದ ಕೊಠಡಿಯ ಬಾಗಿಲು ಮುಚ್ಚಿ ಚಿಲಕ ಹಾಕಿದ್ದಾರೆ.

ವಿಷಯ ತಿಳಿದು ಮುಂಜಾನೆ 5 ಗಂಟೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬೇಟಿ ನೀಡಿದ್ದ ವಲಯ ಅರಣ್ಯ ಅಧಿಕಾರಿ  ದಾಳೇಶ್‌, ಬನ್ನೇರು ಘಟ್ಟದ ವನ್ಯಜೀವಿ ಸಂರಕ್ಷಕ ತಜ್ಞ ವೈದ್ಯರಾದ ಡಾ.ಸುಜಯ್‌, ಡಾ.ಅನುಪಮಾ ಅವರನ್ನು ಸ್ಥಳಕ್ಕೆ ಕರೆಸಿದರು. ಮಂಗಳೂರು ಹೆಂಚಿನ ಮನೆಯ ಮೇಲೆ ಹತ್ತಿದ ಡಾ.ಸುಜಯ್‌ ಮತ್ತು ಹಿರಿಯ ವನಪಾಲಕ ದೊಡ್ಡಯ್ಯ, ಮಲಗಿದ್ದ ಚಿರತೆಗೆ ಎರಡು ಸುತ್ತು ಅರಿವಳಿಕೆ ಚುಚ್ಚುಮದ್ದನ್ನು ಬಂದೂಕಿನ ಮೂಲಕ ಶೂಟ್‌ ಮಾಡಿದರು.

10 ನಿಮಿಷದ ನಂತರ ಚಿರತೆ ಪ್ರಜ್ಞೆ ತಪ್ಪಿತು. ಮಂಗಳವಾರ ಬೆಳಿಗ್ಗೆ 9.20ರ ವೇಳೆಗೆ ಅರಣ್ಯ ಮತ್ತು ಪೊಲೀಸ್‌ ಇಲಾಖೆ  ಸಿಬ್ಬಂದಿ ಚಿರತೆಯನ್ನು ಎತ್ತಿಕೊಂಡು ಟೆಂಪೊದಲ್ಲಿದ್ದ ಬೋನಿನೊಳಗೆ ಸೇರಿಸಿದರು. 

ಪ್ರಜ್ಞೆ ಮರಳುವಂತೆ ಮತ್ತೊಂದು ಚುಚ್ಚುಮದ್ದು ನೀಡಿ ಬನ್ನೇರು ಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ವಲಯ ಅರಣ್ಯ ಅಧಿಕಾರಿ ದಾಳೇಶ್‌ ತಿಳಿಸಿದರು. ಸಬ್‌ ಇನ್‌ಸ್ಪೆಕ್ಟರ್‌  ಮಂಜುನಾಥ,ಡಿ.ಆರ್‌. ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ಬಂದೋಬಸ್ತ್‌ ಏರ್ಪಡಿಸಿದ್ದರು. ಚಿರತೆಯನ್ನು ನೋಡಲು ಗುಡ್ಡಹಳ್ಳಿಯ ಜನತೆಯೊಂದಿಗೆ ಪುಟಾಣಿಗಳು ಕಾದುನಿಂತಿದ್ದರು.ರೈತರಾದ ಪುರುಷೋತ್ತಮ್‌, ಗಂಗಣ್ಣ, ತಿಮ್ಮೇಗೌಡ, ಲೋಕೇಶ್‌ ಮತ್ತಿತರರು ಇದ್ದರು.

ಬೆಳೆ ನಾಶ ಆರೋಪ

10 ವರ್ಷಗಳಿಂದ ರೈತರಿಗೆ ವನ್ಯಜೀವಿಗಳಿಂದ ಇನ್ನಿಲ್ಲದ ತೊಂದರೆಯಾಗುತ್ತಿದೆ. ಬೆಳೆದ ಬೆಳೆಯನ್ನೆಲ್ಲಾ ಕಾಡಾನೆ, ಕರಡಿ, ನವಿಲು ನಾಶ ಮಾಡುತ್ತಿವೆ
ಎಂದು ಪ್ರಗತಿಪರ ರೈತ ಕುಂಬಳಕಾಯಿ ಗಂಗಣ್ಣ ಆರೋಪಿಸಿದರು.
ಕರಡಿ, ಚಿರತೆ, ಸೀಳುನಾಯಿಗಳು ಕುರಿ, ಮೇಕೆ, ಕೋಳಿ, ನಾಯಿಗಳನ್ನು ಕೊಂದು ತಿನ್ನುತ್ತಿವೆ. ಸರ್ಕಾರ ರೈತರ ನೆರವಿಗೆ ಮುಂದಾಗಿಲ್ಲ ಎಂದು ರೈತರು ಈ ಸಂದರ್ಭದಲ್ಲಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT