ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ರಹಿತ ವ್ಯವಹಾರಕ್ಕೆ ಸಿದ್ಧತೆ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯಲ್ಲಿ ಮಾಹಿತಿ
Last Updated 18 ಜನವರಿ 2017, 6:34 IST
ಅಕ್ಷರ ಗಾತ್ರ

ಬೆಂಗಳೂರು: ‘ನಗದು ರಹಿತ ವ್ಯವಹಾರ ನಡೆಸಲು ಪಂಚಾಯ್ತಿಗಳಿಂದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಿ. ಪ್ರಸಾದ್ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ  ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ನಡೆಯಲಿರುವ ಡಿಜಿಟಲ್ ಮೇಳದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿಗಳು ಭಾಗವಹಿಸಬೇಕು. ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯರು ತಮ್ಮ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡುಬೇಕು’ ಎಂದು ಹೇಳಿದರು.

ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಜಿಲ್ಲಾ ವ್ಯವಸ್ಥಾಪಕ ಅಧಿಕಾರಿ ಹಾಗೂ ಕೆನರಾ ಬ್ಯಾಂಕ್ ತಾಂತ್ರಿಕ ಅಧಿಕಾರಿ ನಗದು ರಹಿತ ವಹಿವಾಟು ನಡೆಸಲು ಇರುವ ವಿವಿಧ ವಿಧಾನಗಳ ಕುರಿತು ಹಾಗೂ ಭೀಮ್ ಆ್ಯಪ್ ಬಳಸುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಸುಳ್ಳು ಮಾಹಿತಿ; ಶಿಸ್ತು ಕ್ರಮ: ‘ಜಿಲ್ಲೆಯಲ್ಲಿ 83 ಕೊಳಗಳಲ್ಲಿ  ಅಕ್ರಮವಾಗಿ ಆಫ್ರಿಕನ್‌ ಕ್ಯಾಟ್ ಫಿಶ್ ಸಾಕುತ್ತಿದ್ದರು. ಪರಿಶೀಲನೆ ನಡೆಸಿ ಅವುಗಳನ್ನು ತೆರವುಗೊಳಿಸಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ‘ಸಭೆಗೆ ಸುಳ್ಳು ಮಾಹಿತಿ ನೀಡಿ ಅಗೌರವ ತರಬಾರದು.  ಸರ್ಕಾರಿ ಜಾಗದಲ್ಲೇ ಕೊಳಗಳನ್ನು ನಿರ್ಮಿಸಿ, ಇನ್ನೂ ಕ್ಯಾಟ್‌ಫಿಶ್‌ಗಳನ್ನು ಸಾಕುತ್ತಿದ್ದಾರೆ. ಕೂಡಲೇ ಅವುಗಳನ್ನು ತೆರವುಗೊಳಿಸಲಿಲ್ಲ ಎಂದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಶಿಥಿಲ ಶಾಲಾ ಕಟ್ಟಡಗಳಿಗೆ ಖಾಸಗಿ ನೆರವು: ‘ದೇವನಹಳ್ಳಿ ತಾಲ್ಲೂಕಿನ ಅರದೇಶನ ಗ್ರಾಮದ ಶಾಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ವಿಮಾನ ನಿಲ್ದಾಣ ಹಾಗೂ ಇಂಡಿಯನ್ ಆಯಿಲ್‌ ಸಂಸ್ಥೆಗಳು ಪುನರ್‌ನಿರ್ಮಾಣ ಮಾಡಿಕೊಡಲು ಮುಂದೆ ಬಂದಿವೆ’ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು  ತಿಳಿಸಿದರು.

‘ಈಗಾಗಲೇ ಜೇಷ್ಠತಾ ಪಟ್ಟಿ ತಯಾರಿಸಲಾಗಿದ್ದು, ಬಡ್ತಿ ಪ್ರಕ್ರಿಯೆ ಚಾಲನೆಗೊಂಡಿದೆ. ಜಿಲ್ಲೆಯಲ್ಲಿನ ಸರ್ಕಾರಿ ಪ್ರೌಢಶಾಲೆ 38 ಶಿಕ್ಷಕರಿಗೆ ಬಡ್ತಿ ನೀಡಲಾಗಿದೆ’ ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಹೊಸದಾಗಿ 50 ಡಿ ಗ್ರೂಪ್ ನೌಕರರ ನೇಮಕಾತಿಗಾಗಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿದ ಸದಸ್ಯರು ‘ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸದ್ಯ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರಿಗೆ 6 ತಿಂಗಳಿಂದ ವೇತನ ನೀಡಿಲ್ಲ ಹಾಗೂ ಪಿ.ಎಫ್‌ ಹಣ ಕಟ್ಟಿಲ್ಲ. ಇದಕ್ಕೆ ಕಾರಣವಾದ ಟೆಂಡರ್‌ ಪಡೆದ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ’ ಎಂದು ಒತ್ತಾಯಿಸಿದರು.

‘ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಸ್ಥಳಗಳಲ್ಲಿನ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಪ್ರತಿ ತಾಲ್ಲೂಕಿನಲ್ಲಿ ಡಯಾಲಿಸಿಸ್ ಸೆಂಟರ್ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಹಾಸ್ಟೆಲ್ ಪರಿವರ್ತನೆ: ‘ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ  ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವಾಗಿ ಪರಿವರ್ತಿಸಲು ಸರ್ಕಾರ ಆದೇಶಿಸಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು.
‘ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 50 ವಿದ್ಯಾರ್ಥಿಗಳ ಸಾಮರ್ಥ್ಯದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಸದ್ಯ 24 ವಿದ್ಯಾರ್ಥಿಗಳಿದ್ದಾರೆ. ಅವರನ್ನು ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಕ್ಕೆ ವರ್ಗಾಯಿಸಿ, ಅದನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವಾಗಿ ಪರಿವರ್ತಿಸಲಾಗುವುದು’ ಎಂದರು.

ಅದಕ್ಕೆ ಪ್ರತಿಕ್ರಿಯಿದ ಅಧ್ಯಕ್ಷರು ‘ಅಲ್ಲಿರುವ 24 ವಿದ್ಯಾರ್ಥಿಗಳಿಗೆ  ಪರ್ಯಾಯ ವ್ಯವಸ್ಥೆ ಆದ ನಂತರ ವಿದ್ಯಾರ್ಥಿಗಳ ವರ್ಗಾವಣೆ ಮಾಡಬೇಕು. ಯಾವುದೇ ಪೂರ್ವ ತಯಾರಿಯಿಲ್ಲದೆ ಬೇಕಾಬಿಟ್ಟಿ ಕೆಲಸ ಮಾಡಬಾರದು’ ಎಂದು ತಾಕೀತು ಮಾಡಿದರು.

ರೇಷ್ಮೆ ಬೆಳೆಗಾರರನ್ನು ಉಳಿಸಿಕೊಳ್ಳಿ: ‘ಜಿಲ್ಲೆಯಲ್ಲಿ ಒಟ್ಟು 6,442 ರೇಷ್ಮೆ ಬೆಳೆಗಾರರಿದ್ದು, ನೆಲಮಂಗಲ ತಾಲ್ಲೂಕಿನಲ್ಲಿ 39 ಮಂದಿ ಮಾತ್ರ ರೇಷ್ಮೆ ಬೆಳೆಗಾರರಿದ್ದಾರೆ. ರೇಷ್ಮೆ ಬೆಳೆಗಾರರನ್ನು ಉಳಿಸಿಕೊಳ್ಳಲು ಇಲಾಖೆ ಶ್ರಮ ವಹಿಸಬೇಕು’ ಎಂದು ಅಧ್ಯಕ್ಷ ವಿ. ಪ್ರಸಾದ್‌ ತಿಳಿಸಿದರು.

‘ರೇಷ್ಮೆ ಯೋಜನೆಗಳನ್ನು  ರೈತರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಸರಿಯಾಗಿ ಮಾಡುತ್ತಿಲ್ಲ. ತಾಲ್ಲೂಕುಗಳ ರೇಷ್ಮೆ ಇಲಾಖೆಯಲ್ಲಿ ಅಧಿಕಾರಿಗಳ ಹುದ್ದೆಗಳು ಖಾಲಿಯಿದ್ದು ಇದುವರೆಗೂ ಭರ್ತಿಯಾಗಿಲ್ಲ.  ಹೀಗಿದ್ದಾಗ ರೈತರಿಗೆ ಮಾಹಿತಿ ತಲುಪುವುದಾದರು ಹೇಗೆ’ ಎಂದು ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು.

ವಿ.ಪ್ರಸಾದ್‌ ಮಾತನಾಡಿ, ‘ತಾಲ್ಲೂಕು ಅಧಿಕಾರಿಗಳನ್ನು ಶೀಘ್ರವಾಗಿ ನೇಮಕ ಮಾಡುವಂತೆ ರೇಷ್ಮೆ ಇಲಾಖೆ ಉಪನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದರು.

ಶೀಘ್ರ ಬರ ಪರಿಹಾರ

‘ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ದೇವನಹಳ್ಳಿ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಜಂಟಿ ಸಮೀಕ್ಷೆಯಲ್ಲಿ ಬೆಳೆ ಹಾನಿ ವಿವರ ಹಾಗೂ ರೈತರ ಬ್ಯಾಂಕ್‌ ವಿವರಗಳನ್ನು ಕಂದಾಯ ಇಲಾಖೆ ಅಧಿಕಾರಿಗಳ ಸಮನ್ವಯದಲ್ಲಿ ಸಂಗ್ರಹಿಸಲಾಗುತ್ತಿದ್ದು, ಶೀಘ್ರ ಬೆಳೆ ಹಾನಿ ಪರಿಹಾರ ಮೊತ್ತವನ್ನು ನೀಡುತ್ತೇವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT